ಹೊರ್ಮುಜ್‌ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಪಡೆಗಳಿಂದ ದಾಳಿ: ಆತಂಕದ ನಡುವೆಯೂ ಜಲಸಂಧಿ ದಾಟಿದ ನಮ್ಮ ದೇಶದ 'ದೇಶ್ ಗರಿಮಾ' ನೌಕೆ
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧೋನ್ಮಾದದ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಭಾರತೀಯ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆಯೂ ‘ದೇಶ್ ಗರಿಮಾ’ ಎಂಬ ದೇಶದ ತೈಲ ಟ್ಯಾಂಕರ್ ಯಾವುದೇ ಅಡಚಣೆ ಇಲ್ಲದೆ ಸುರಕ್ಷಿತವಾಗಿ ಜಲಸಂಧಿ ದಾಟಿ ಭಾರತದತ್ತ ಹೊರಟಿದೆ. ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ.
ಹೊರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ) -
ನವದೆಹಲಿ, ಏ. 20: ಪಶ್ಚಿಮ ಏಷ್ಯಾದಲ್ಲಿ (West Asia) ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಆಯಕಟ್ಟಿನ ಪ್ರದೇಶವಾದ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಂಚರಿಸುತ್ತಿದ್ದ ಭಾರತೀಯ ಹಡಗುಗಳ (Indian vessels) ಮೇಲೆ ಇರಾನ್ (Iran) ಪಡೆಗಳು ಗುಂಡಿನ ದಾಳಿ ನಡೆಸಿವೆ. ಏಪ್ರಿಲ್ 18ರಂದು ನಡೆದ ಈ ಆತಂಕಕಾರಿ ಘಟನೆಯ ನಡುವೆಯೂ, 31 ಭಾರತೀಯ ಸಿಬ್ಬಂದಿಯನ್ನು ಹೊತ್ತ 'ದೇಶ್ ಗರಿಮಾ (Desh Garima)' ಎಂಬ ಕಚ್ಚಾ ತೈಲ ಟ್ಯಾಂಕರ್ ಯಾವುದೇ ತೊಂದರೆಯಿಲ್ಲದೆ ಜಲಸಂಧಿಯನ್ನು ದಾಟುವಲ್ಲಿ ಯಶಸ್ವಿಯಾಗಿದೆ. ಈ ನೌಕೆಯು ಏಪ್ರಿಲ್ 22ರಂದು ಮುಂಬೈ ತಲುಪುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Ministry of Petroleum and Natural Gas) ತಿಳಿಸಿದೆ.
ಇರಾನ್ ಪಡೆಗಳು ಸನ್ಮಾರ್ ಹೆರಾಲ್ಡ್ ಮತ್ತು ಜಗ್ ಅರ್ನವ್ ಎಂಬ ಎರಡು ಭಾರತೀಯ ನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು. ಈ ದಾಳಿಯಿಂದಾಗಿ ಎರಡೂ ಹಡಗುಗಳು ಪರ್ಷಿಯನ್ ಕೊಲ್ಲಿಗೆ ಹಿಂತಿರುಗಬೇಕಾಯಿತು. ಈ ಸಂದರ್ಭದ ಆಡಿಯೊ ರೆಕಾರ್ಡಿಂಗ್ ಬಿಡುಗಡೆಯಾಗಿದ್ದು, ಅದರಲ್ಲಿ ಸನ್ಮಾರ್ ಹೆರಾಲ್ಡ್‌ನ ಕ್ಯಾಪ್ಟನ್, "ನೀವೇ ನಮಗೆ ಅನುಮತಿ ನೀಡಿದ್ದೀರಿ, ಈಗ ಏಕೆ ಗುಂಡು ಹಾರಿಸುತ್ತಿದ್ದೀರಿ?" ಎಂದು ಇರಾನ್ ನೌಕಾಪಡೆಯನ್ನು (ಸೆಪಾ ನೇವಿ) ಪ್ರಶ್ನಿಸುತ್ತಾ ಜೀವ ರಕ್ಷಣೆಗಾಗಿ ಮೊರೆಯಿಟ್ಟಿರುವುದು ಕೇಳಿಬಂದಿದೆ. ಅದೃಷ್ಟವಶಾತ್, ಎರಡೂ ನೌಕೆಗಳಲ್ಲಿದ್ದ ಎಲ್ಲ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರ ಖಚಿತಪಡಿಸಿದೆ.
ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ
ಭಾರತದ ರಾಜತಾಂತ್ರಿಕ ಪ್ರತಿರೋಧ
ಈ ಗಂಭೀರ ಘಟನೆಯನ್ನು ಖಂಡಿಸಿರುವ ಭಾರತ ಸರ್ಕಾರ, ಕೂಡಲೇ ದೆಹಲಿಯಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರನ್ನು ಕರೆಸಿಕೊಂಡು (ಸಮನ್ಸ್) ಪ್ರತಿಭಟನೆ ದಾಖಲಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಸಮುದ್ರ ಮಾರ್ಗದಲ್ಲಿ ಭಾರತೀಯ ವ್ಯಾಪಾರಿ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಇರಾನ್ ಅಡ್ಡಿಪಡಿಸುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಬರುವ ಹಡಗುಗಳಿಗೆ ತಕ್ಷಣವೇ ದಾರಿ ಮಾಡಿಕೊಡುವಂತೆ ಅವರು ಆಗ್ರಿಹಿಸಿದ್ದಾರೆ.
ಜಾಗತಿಕ ಪರಿಣಾಮ
ಫೆಬ್ರವರಿ 28ರಂದು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದಾಗಿನಿಂದ ಹೊರ್ಮುಜ್ ಜಲಸಂಧಿಯು ಸಂಘರ್ಷದ ಕೇಂದ್ರಬಿಂದುವಾಗಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಶೇಕಡಾ 20ರಷ್ಟು ಭಾಗ ಈ ಕಿರಿದಾದ ಮಾರ್ಗದ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ನಿರ್ಬಂಧಿಸಿರುವುದು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಒತ್ತಡ ಉಂಟು ಮಾಡಿದೆ. ಈ ಎಲ್ಲ ಉದ್ವಿಗ್ನತೆಯ ನಡುವೆಯೂ ಭಾರತದ ಬಂದರು ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.