ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡಿದರೆ ತಿರುಗೇಟು ನಿಶ್ಚಿತ: ಇಸ್ರೇಲ್‌ಗೆ ಇರಾನ್ ಎಚ್ಚರಿಕೆ
ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚುತ್ತಿದ್ದು, ಇಸ್ರೇಲ್ ತನ್ನ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ ಸುಮ್ಮನಿರಲ್ಲ. ತಾನು ಕೂಡ ಇಸ್ರೇಲ್ ಹಾಗೂ ಅಮೆರಿಕದ ನೆಲೆಗಳಿಗೆ ಸಂಬಂಧಿಸಿದ ವಿದ್ಯುತ್ ಮೂಲಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ಹೊರ್ಮುಜ್ ಜಲಸಂಧಿ ಮತ್ತು ಪ್ರಾದೇಶಿಕ ಭದ್ರತೆ ಹಿನ್ನೆಲೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಇರಾನ್ ದಾಳಿಯಿಂದ ನಾಶವಾದ ಇಸ್ರೇಲ್ ನಗರ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 23: ಮಧ್ಯಪ್ರಾಚ್ಯ ( Middle East) ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಒಂದು ವೇಳೆ ಇಸ್ರೇಲ್ (Israel) ತನ್ನ ದೇಶದ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ತಾನು ಕೂಡ ಇಸ್ರೇಲ್‌ನ ವಿದ್ಯುತ್ ಸ್ಥಾವರಗಳ ಮೇಲೆ ಪ್ರತಿ ದಾಳಿ ನಡೆಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iran's Islamic Revolutionary Guard Corps) ಸೋಮವಾರ ಎಚ್ಚರಿಕೆ ನೀಡಿದೆ.
ಪ್ರತೀಕಾರದ ಎಚ್ಚರಿಕೆ
ಅಲ್ ಜಜೀರಾ ವರದಿಯ ಪ್ರಕಾರ, ಇರಾನ್‌ನ ವಿದ್ಯುತ್ ವಲಯದ ಮೇಲೆ ಯಾವುದೇ ದಾಳಿ ನಡೆದರೆ ಅದು ಕೇವಲ ಇಸ್ರೇಲ್ ಮಾತ್ರವಲ್ಲದೆ, ಅಮೆರಿಕದ ಸೇನಾ ನೆಲೆಗಳಿಗೆ ವಿದ್ಯುತ್ ಪೂರೈಸುವ ಪ್ರಾದೇಶಿಕ ದೇಶಗಳ ವಿದ್ಯುತ್ ಸೌಲಭ್ಯಗಳ ಮೇಲೆಯೂ ದಾಳಿ ನಡೆಸಲಾಗುವುದು ಎಂದು IRGC ಹೇಳಿಕೆಯಲ್ಲಿ ತಿಳಿಸಿದೆ. "ನಮ್ಮ ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದಲ್ಲಿ, ನಾವು ಇಸ್ರೇಲ್‌ನ ವಿದ್ಯುತ್ ಸ್ಥಾವರಗಳನ್ನು ಮತ್ತು ಅಮೆರಿಕದ ನೆಲೆಗಳಿಗೆ ಶಕ್ತಿ ನೀಡುವ ಮೂಲಗಳನ್ನು ಗುರಿಯಾಗಿಸಿಕೊಳ್ಳುತ್ತೇವೆ" ಎಂದು ಇರಾನ್ ಸ್ಪಷ್ಟಪಡಿಸಿದೆ.
ನಿರ್ದಿಷ್ಟ ಗುರಿಗಳು
"ನೀವು ನಮ್ಮ ಆಸ್ಪತ್ರೆ, ಪರಿಹಾರ ಕೇಂದ್ರ ಅಥವಾ ಶಾಲೆಗಳ ಮೇಲೆ ದಾಳಿ ಮಾಡಿದಾಗ ನಾವು ಸುಮ್ಮನಿದ್ದೆವು. ಆದರೆ ಈಗ ನೀವು ನಮ್ಮ ವಿದ್ಯುತ್ ವ್ಯವಸ್ಥೆಗೆ ಕೈ ಹಾಕಿದರೆ, ನಾವು ನಿಮ್ಮ ವಿದ್ಯುತ್ ವ್ಯವಸ್ಥೆಯನ್ನೇ ಗುರಿಯಾಗಿಸುತ್ತೇವೆ" ಎಂದು ಇರಾನ್ ಸೇನೆ ಗುಡುಗಿದೆ. ಅರಬ್ ದೇಶಗಳಲ್ಲಿ ಕುಡಿಯುವ ನೀರಿಗೆ ಪ್ರಮುಖವಾಗಿರುವ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳ (Desalination plants) ಮೇಲೆ ದಾಳಿ ಮಾಡುವ ಉದ್ದೇಶ ತನಗಿಲ್ಲ ಎಂದು ಇರಾನ್ ಇದೇ ವೇಳೆ ಸ್ಪಷ್ಟಪಡಿಸಿದೆ. ಅಲ್ಲದೆ ಇರಾನ್ ಇಂತಹ ಘಟಕಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಸುಳ್ಳು ಎಂದು ಇರಾನ್ ತಳ್ಳಿಹಾಕಿದೆ.
ಯುದ್ಧದ ನಡುವೆಯೂ ಭಾರೀ ಇಳಿಕೆ ಕಂಡು ಬಂದ ಚಿನ್ನ; ದರ ಪಟ್ಟಿ ಇಲ್ಲಿದೆ ನೋಡಿ
ಟ್ರಂಪ್ ಅವರ ಅಂತಿಮ ಗಡುವು
ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ಹೊರ್ಮುಜ್ ಜಲಸಂಧಿಯನ್ನು (Strait of Hormuz) 48 ಗಂಟೆಗಳ ಒಳಗಾಗಿ ಇರಾನ್ ಪೂರ್ಣ ಪ್ರಮಾಣದಲ್ಲಿ ತೆರೆಯದಿದ್ದರೆ, ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ಅಮೆರಿಕ ದಾಳಿ ಮಾಡಬಹುದು ಎಂದು ಟ್ರಂಪ್ ಶನಿವಾರವಷ್ಟೇ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇರಾನ್‌ನಿಂದ ಈ ಪ್ರತಿಕ್ರಿಯೆ ಬಂದಿದೆ.
ಹೆಚ್ಚುತ್ತಿರುವ ಆಕ್ರಮಣಕಾರಿ ಧೋರಣೆ
ಇಸ್ರೇಲ್ ಮೂಲದ 'ಕಾನ್ ನ್ಯೂಸ್' ವರದಿಯ ಪ್ರಕಾರ, ಇರಾನ್ ಈಗ 'ಪ್ರಾದೇಶಿಕ ರಕ್ಷಣೆ'ಯಿಂದ 'ನೇರ ಆಕ್ರಮಣಕಾರಿ' ತಂತ್ರಕ್ಕೆ ಬದಲಾಗಿದೆ. ಇದು ಇಸ್ರೇಲ್‌ನ ಡಿಮೋನಾ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ಮತ್ತು ಸುಮಾರು 4,000 ಕಿ.ಮೀ. ದೂರದಲ್ಲಿರುವ ಡಿಯಾಗೋ ಗಾರ್ಸಿಯಾದಲ್ಲಿನ ಅಮೆರಿಕ ನೆಲೆಯ ಮೇಲೆ ದಾಳಿ ನಡೆಸುವ ಬೆದರಿಕೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ಹೌತಿ ರೆಬೆಲ್ಸ್‌ಗಳ ಸಹಾಯದೊಂದಿಗೆ ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಹೊರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸುವ ಆಲೋಚನೆಯಲ್ಲಿ ಇರಾನ್ ಇದೆ ಎಂದು ವರದಿಗಳು ತಿಳಿಸಿವೆ.