ಟೆಹರಾನ್, ಮಾ. 24: ಪಶ್ಚಿಮ ಏಷ್ಯಾದಲ್ಲಿ ಕೋಲಾಹಲ ಎಬ್ಬಿಸಿರುವ ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಕದನ (US-Israel-Iran War) ತಾರ್ಕಿಕ ಅಂತ್ಯದತ್ತ ಸಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಇಸ್ರೇಲ್ ಜತೆಗೂಡಿ ದಾಳಿ ನಡೆಸುತ್ತಿರುವ ಅಮೆರಿಕ ಇದೀಗ ಶಾಂತಿ ಮಂತ್ರ ಜಪಿಸಲು ಮುಂದಾಗಿದೆ. ಹೊರ್ಮುಜ್ ಜಲಸಂಧಿ ಮೇಲಿನ ನಿರ್ಬಂಧ ತೆರವುಗೊಳಿಸಲು ಮಾರ್ಚ್ 24ರವರೆಗೆ ಕಡುವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒಂದು ದಿನ ಮೊದಲೇ ಇರಾನ್ ಮೇಲಿನ ದಾಳಿಯನ್ನು 5 ದಿನ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕದನ ವಿರಾಮ ಒಪ್ಪಂದ ನಡೆಯುವ ಸೂಚನೆ ಸಿಕ್ಕಿದೆ. ಆದರೆ ಇರಾನ್ ಟ್ರಂಪ್ ಅವರ ಹೇಳಿಕೆಯನ್ನು ಟೀಕಿಸಿದ್ದು, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಅಮೆರಿಕದ ಈ ನಡೆ ಅದರ ದೌರ್ಬಲ್ಯವನ್ನು ಸಾರಿ ಹೇಳಿದೆ ಎಂದು ವ್ಯಂಗ್ಯವಾಡಿದೆ. ಅಮೆರಿಕ ನಷ್ಟ ಪರಿಹಾರ ಒದಗಿಸುವ ಯುದ್ಧ ನಿಲ್ಲುವುದಿಲ್ಲ ಎಂದು ತಿಳಿಸಿದೆ.
ಇರಾನ್‌ನ ಹಿರಿಯ ಸಲಹೆಗಾರರೊಬ್ಬರು, ನಷ್ಟ ಪರಿಹಾರ ಮತ್ತು ಇನ್ನುಮುಂದೆ ಅಮೆರಿಕದ ಹಸ್ತಕ್ಷೇಪ ಇರುವುದಿಲ್ಲ ಎನ್ನುವ ಖಾತರಿ ಸಿಗುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾಗಿ ಸಿಎನ್‌ಎನ್ ವರದಿ ಮಾಡಿದೆ.
ಅಮೆರಿಕದ ವಿರುದ್ಧ ಇರಾನ್ ಎಚ್ಚರಿಕೆ:
ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಹಿರಿಯ ಮಿಲಿಟರಿ ಸಲಹೆಗಾರ ಮೊಹ್ಸೆನ್ ರೆಝಾಯಿ ಈ ಬಗ್ಗೆ ಮಾತನಾಡಿ, ಯುದ್ಧವನ್ನು ಕೊನೆಗೊಳಿಸಲು ಕೆಲವೊಂದು ಷರತ್ತು ಮುಂದಿಟ್ಟಿದ್ದಾರೆ. "ನಮ್ಮ ಎಲ್ಲ ನಷ್ಟಗಳಿಗೆ ಪರಿಹಾರ ಪಡೆಯುವವರೆಗೆ, ಎಲ್ಲ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವವರೆಗೆ ಮತ್ತು ಅಮೆರಿಕ ನಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂತಾರಾಷ್ಟ್ರೀಯ ಖಾತರಿ ಪಡೆಯುವವರೆಗೆ ಯುದ್ಧ ಮುಂದುವರಿಯುತ್ತದೆ" ಎಂದು ರೆಝಾಯಿ ಹೇಳಿದ್ದಾರೆ. ಆ ಮೂಲಕ ಅಮೆರಿಕಕ್ಕೆ ಸೂಕ್ತ ತಿರುಗೇಟು ನೀಡಿದೆ.
ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡಿದರೆ ತಿರುಗೇಟು ನಿಶ್ಚಿತ: ಇಸ್ರೇಲ್‌ಗೆ ಇರಾನ್ ಎಚ್ಚರಿಕೆ
ಕಠಿಣ ಸಂದೇಶ
ಇಷ್ಟಕ್ಕೆ ಸುಮ್ಮನಾಗದ ಅವರು ವಿರೋಧಿಗಳಿಗೆ ಕಠಿಣ ಸಂದೇಶ ನೀಡಿದರು. "ಈ ಬಾರಿ ಕಣ್ಣಿಗೆ ಕಣ್ಣಾಗಿರುವುದಿಲ್ಲ, ಬದಲಾಗಿ ಕಣ್ಣಿಗೆ ತಲೆಯಾಗಲಿದೆ. ನೀವು ಕೊಲ್ಲಿಯನ್ನು ತೊರೆಯುವ ತನಕ ಸುಮ್ಮನಿರುವುದಿಲ್ಲ" ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಮೆರಿಕ-ಇರಾನ್ ನಡುವಿನ ಮಾತುಕತೆ ಫಲಪ್ರದ: ಕದನವಿರಾಮದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್‌ಗೆ ಭಯ ಕಾಡುತ್ತಿದೆ
ಹೊರ್ಮುಜ್ ಜಲಸಂಧಿಯನ್ನು 48 ಗಂಟೆಗಳ ಒಳಗೆ ಹಡಗು ಸಂಚಾರಕ್ಕೆ ತೆರೆಯದಿದ್ದರೆ ಇರಾನ್ ವಿದ್ಯುತ್ ಸ್ಥಾವರಗಳು, ಇಂಧನ ಸೌಕರ್ಯಗಳ ಮೇಲೆ ಭಾರಿ ದಾಳಿ ಮಾಡಲಾಗುವುದು ಎಂದು ಅಮೆರಿಕ ಈ ಹಿಂದೆ ಹೇಳಿತ್ತು. ಸೋಮವಾರ ಈ ಸಂಬಂಧ ಪ್ರತಿಕ್ರಿಯಿಸಿದ ಟ್ರಂಪ್, ʼʼಇರಾನ್ ಜತೆಗಿನ ಮಾತುಕತೆ ಯಶಸ್ವಿಯಾಗಿದೆ. ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ 5 ದಿನ ಬಿಡುವು ನೀಡಲಾಗಿದೆʼʼ ಎಂದು ತಿಪ್ಪೆ ಸಾರಿಸಲು ಮುಂದಾಗಿದ್ದರು. ಇದನ್ನು ಅಪಹಾಸ್ಯ ಮಾಡಿದ ಇರಾನ್, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ನಮಗೆ ಬೆದರಿ ಟ್ರಂಪ್ ಹಿಂದೆ ಸರಿದಿದ್ದಾರೆ. ಅಮೆರಿಕದೊಂದಿಗೆ ಯಾವ ರಾಜತಾಂತ್ರಿಕ ಮಾತುಕತೆ ನಡೆದಿಲ್ಲ. ಟ್ರಂಪ್ ಕಾಲಹರಣದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.