ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗು ಮೇಲೆ ಇರಾನ್‌ನಿಂದ ಗುಂಡಿನ ದಾಳಿ

Strait of Hormuz: ಹೊರ್ಮುಜ್ ಜಲಸಂಧಿಯಲ್ಲಿ ಎರಡು ಇರಾನಿನ ಗನ್ ಬೋಟ್‌ಗಳು ಟ್ಯಾಂಕರ್‌ ಮೇಲೆ ಗುಂಡಿನ ದಾಳಿ ನಡೆಸಿವೆ. ಹಡಗು ಸಿಬ್ಬಂದಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಹೊರ್ಮುಜ್‌ ಜಲಸಂಧಿ ಮತ್ತೆ ಗೊಂದಲದ ಗೂಡಾಗಿದೆ.

ಹೊರ್ಮುಜ್‌ ಜಲಸಂಧಿಯಲ್ಲಿ ಇರಾನ್‌ನಿಂದ ಗುಂಡಿನ ದಾಳಿ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Apr 18, 2026 5:50 PM

ಟೆಹರಾನ್‌, ಏ. 18: ಇರಾನ್‌ ಸುಪರ್ದಿಯಲ್ಲಿರುವ ಹೊರ್ಮುಜ್‌ ಜಲಸಂಧಿಯನ್ನು (Strait of Hormuz) ವಾಣಿಜ್ಯ ಹಡಗುಗಳಿಗೆ ತೆರವುಗೊಳಿಸುವುದಾಗಿ ಶುಕ್ರವಾರ ಟೆಹರಾನ್‌ ಘೋಷಿಸಿದ ಬೆನ್ನಲ್ಲೇ ಜಗತ್ತು ನಿಟ್ಟುಸಿರು ಬಿಟ್ಟಿದೆ. ಆದರೆ ಇದೀಗ ಒಂದೇ ದಿನದಲ್ಲಿ ಪರಿಸ್ಥಿತಿ ಮತ್ತೆ ಬದಲಾಗಿದೆ. ಇರಾನ್‌ ಮತ್ತೆ ತಕರಾರು ತೆಗೆದಿದ್ದು, ನಿರ್ಬಂಧ ಹೇರಿದೆ. ಅಲ್ಲದೆ ಶನಿವಾರ (ಏಪ್ರಿಲ್‌ 18) ಹೊರ್ಮುಜ್ ಜಲಸಂಧಿಯ ಮೂಲಕ ಹಾದಿ ಹೋಗಲು ಯತ್ನಿಸಿ ವಾಣಿಜ್ಯ ಹಡಗಿನ ಮೇಲೆ 2 ಇರಾನಿನ ಗನ್ ಬೋಟ್‌ಗಳು ಗುಂಡಿನ ದಾಳಿ ನಡೆಸಿವೆ. ಹಡಗು ಸಿಬ್ಬಂದಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಹೊರ್ಮುಜ್‌ ಜಲಸಂಧಿ ಮತ್ತೆ ಗೊಂದಲದ ಗೂಡಾಗಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಗನ್‌ಬೋಟ್‌ಗಳು ಬಳಿಗೆ ಬಂದವು ಮತ್ತು ಯಾವುದೇ ಎಚ್ಚರಿಕೆ ಇಲ್ಲದೆ ಟ್ಯಾಂಕರ್ ಮೇಲೆ ಗುಂಡು ಹಾರಿಸಿದವು ಎಂದು ಕ್ಯಾಪ್ಟನ್ ವರದಿ ಮಾಡಿದ್ದಾರೆ ಎಂದು ಇಂಗ್ಲೆಂಡ್‌ ಸಮುದ್ರ ವ್ಯಾಪಾರ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಹೊರ್ಮುಜ್‌ ಜಲಸಂಧಿಯಲ್ಲಿ ಗುಂಡಿನ ದಾಳಿ:



ಒಮಾನ್‌ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಗನ್ ಬೋಟ್‌ಗಳು ಟ್ಯಾಂಕರ್ ಮೇಲೆ ದಾಳಿ ನಡೆಸಿದವು ಎಂದು ವರದಿ ತಿಳಿಸಿದೆ. ಅದಾಗ್ಯೂ, ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದು, ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅಮೆರಿಕ ದಿಗ್ಬಂಧನ ಮುರಿಯಲಾಗದೆ ಮಾರ್ಗ ಬದಲಿಸಿದ ಚೀನಾ ಹಡಗು

ಮತ್ತೆ ನಿರ್ಬಂಧ

ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅಮೆರಿಕ ಹೇಳಿದ ನಂತರ ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯ ಮೇಲೆ ನಿರ್ಬಂಧ ಹೇರಿದೆ. "ಸಶಸ್ತ್ರ ಪಡೆಗಳ ಕಟ್ಟುನಿಟ್ಟಿನ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಹೊರ್ಮುಜ್ ಜಲಸಂಧಿಯ ನಿಯಂತ್ರಣವು ಅದರ ಹಿಂದಿನ ಸ್ಥಿತಿಗೆ ಮರಳಿದೆ" ಎಂದು ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ಶನಿವಾರ (ಏಪ್ರಿಲ್‌ 18) ಹೇಳಿದೆ. ಇರಾನಿನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಜಲಸಂಧಿಯ ಮೂಲಕ ಸಾಗಣೆಯನ್ನು ನಿರ್ಬಂಧಿಸುವುದನ್ನು ಮುಂದುವರಿಸುವುದಾಗಿ ಎಚ್ಚರಿಸಿದೆ.

7 ವಾರಗಳ ಕಾಲ ನಡೆದ ಯುದ್ಧದ ಸಂದರ್ಭದಲ್ಲಿ ಇರಾನ್ ಅನುಮತಿ ನೀಡಿದ ಹಡಗು ಹೊರತಪಡಿಸಿ ಉಳಿದ ಹಡಗುಗಳನ್ನು ತಡೆದಿತ್ತು. ಆ ಮೂಲ ಜಗತ್ತಿನಾದ್ಯಂತ ಇಂಧನ ಪೂರೈಕೆಯಲ್ಲಿ ಏರುಪೇರಾಗಿದೆ.

ಜಲಸಂಧಿ ಮುಕ್ತ ಎಂದು ಶುಕ್ರವಾರ ಘೋಷಿಸಿದ್ದ ಇರಾನ್‌

ಶುಕ್ರವಾರ ಇರಾನ್‌ ಮಹತ್ವದ ಘೋಷಣೆ ಹೊರಡಿಸುವ ಮೂಲಕ ಹೊರ್ಮುಕ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ತೆರವುಗೊಳಿಸುವುದಾಗಿ ಜಗತ್ತಿಗೆ ಸಿಸುದ್ದಿ ನೀಡಿತ್ತು. ಅಲ್ಲಿನ ವಿದೇಶಾಂಗ ಸಚಿವ ಅಬ್ಬಾಸ್‌ ಅರಘ್ವಿ ಈ ವಿಷಯವನ್ನು ತಿಳಿಸಿ, ʼʼಯಾವುದೇ ಹಡಗನ್ನು ನಾವು ತಡೆಯುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದರು. ಇಸ್ರೇಲ್‌-ಲೆಬನಾನ್‌ ನಡುವೆ 10 ದಿನಗಳ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆ ಕದನ ವಿರಾಮ ಜಾರಿಯಲ್ಲಿರುವವರೆಗೆ ಪೆಟ್ರೋಲಿಯಂ ಹಾಗೂ ಇನ್ನಿತರ ತೈಲೋತ್ಪನ್ನಗಳನ್ನು ಸಾಗಿಸುವ ಜಗತ್ತಿನ ಎಲ್ಲ ವಾಣಿಜ್ಯ ಹಡಗುಗಳಿಗೆ ಹೊರ್ಮುಜ್‌ ಜಲಸಂಧಿ ಮುಕ್ತವಾಗಿರುತ್ತದೆ ಎಂದು ಇರಾನ್‌ ಹೇಳಿತ್ತು. ಆದರೆ ಇದೀಗ ಮತ್ತೆ ನಿರ್ಬಂಧ ಮುಂದುವರಿಸಿದೆ.

ಭಾರತದ ಹಡಗುಗಳು ಹೊರ್ಮುಜ್‌ ಟೋಲ್‌ ಪಾವತಿಸಬೇಕಾಗಿಲ್ಲ: ಮಿತ್ರರಾಷ್ಟ್ರಕ್ಕೆ ಇರಾನ್‌ ಅಭಯ

ಹೊರ್ಮುಜ್‌ ಜಲಸಂಧಿಯ ಯಾಕಾಗಿ ಮುಖ್ಯ?

ಪರ್ಷಿಯನ್ ಕೊಲ್ಲಿಯನ್ನು ಒಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ವಿಶ್ವದ ತೈಲದ ಸುಮಾರು ಶೇಕಡಾ 25ರಷ್ಟು ಸಾಗಿಸುವ ಪ್ರಮುಖ ಮಾರ್ಗ. ಭಾರತದ 80 ಪ್ರತಿಶತವು ಇದರ ಮೂಲಕ ಹಾದುಹೋಗುತ್ತದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.