ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಆರೋಗ್ಯವಾಗಿದ್ದಾರಾ? ಬಿಡುಗಡೆಯಾದ ಹೊಸ ವಿಡಿಯೊದಲ್ಲಿ ಏನಿದೆ?
ಇರಾನಿನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ವದಂತಿಗಳ ನಡುವೆ ಇದೀಗ ಖಮೇನಿ ಅವರ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಲಾಗಿದೆ. ಈ ವಿಡಿಯೊದ ಸ್ಥಳ, ದಿನಾಂಕದ ಬಗ್ಗೆ ಉಲ್ಲೇಖ ಇಲ್ಲದೇ ಇರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಂಗ್ರಹ ಚಿತ್ರ -
ಟೆಹ್ರಾನ್: ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಮಧ್ಯೆ ಇಸ್ರೇಲ್ ಮಾಧ್ಯಮವೊಂದು ಇರಾನ್‌ನ ಸುಪ್ರೀಂ ನಾಯಕ (Irans Supreme Leader) ಮೊಜ್ತಬಾ ಖಮೇನಿ (Mojtaba Khamenei) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ವರದಿಯೊಂದು ಪ್ರಸಾರ ಮಾಡಿದ ಬೆನ್ನಲ್ಲೇ ಮೊಜ್ತಬಾ ಖಮೇನಿ ಅವರ ವಿಡಿಯೊವೊಂದನ್ನು ಇರಾನ್ (Iran war) ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೊದಲ್ಲಿ (Khamenei video) ಸ್ಥಳ, ದಿನದ ಬಗ್ಗೆ ಉಲ್ಲೇಖ ಇಲ್ಲದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚಾಗಿದೆ.
ಇಸ್ರೇಲ್ ಮಾಧ್ಯಮವೊಂದು ಇರಾನ್‌ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ವರದಿಯನ್ನು ಶುಕ್ರವಾರ ಪ್ರಸಾರ ಮಾಡಿತ್ತು. ಇದರ ಬಳಿಕ ಇರಾನ್‌ನ ಸುದ್ದಿ ಸಂಸ್ಥೆಯೊಂದು ಅವರು ಆರೋಗ್ಯವಾಗಿದ್ದರೆ ಎನ್ನುವ ದಿನಾಂಕ, ಸ್ಥಳ ಉಲ್ಲೇಖವಿಲ್ಲದ ವಿಡಿಯೊವನ್ನು ಶನಿವಾರ ಬಿಡುಗಡೆ ಮಾಡಿದೆ.ಇರಾನ್ ಸರ್ಕಾರದ ಇಸ್ಲಾಮಿಕ್ ಅಭಿವೃದ್ಧಿ ಸಂಸ್ಥೆಯಿಂದ ಪ್ರಾಯೋಜಿಸಲ್ಪಡುವ ಮೆಹರ್ ಸುದ್ದಿ ಸಂಸ್ಥೆ ಮೊದಲ ಬಾರಿಗೆ ಪ್ರಕಟಿಸಿದ ಖಮೇನಿ ಅವರ ವಿಡಿಯೋದಲ್ಲಿ ಅವರು ಕೆಲವು ನಾಯಕರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಆಡಳಿತದ ಆಪ್ತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ದಿ ಜೆರುಸಲೆಮ್ ಪೋಸ್ಟ್ ಕೂಡ ಇರಾನ್ ಸರ್ವೋಚ್ಚ ನಾಯಕನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ವರದಿ ಮಾಡಿತ್ತು. ಈ ಪೋಸ್ಟ್ ನಲ್ಲಿ ಶೀಘ್ರದಲ್ಲೇ ನಾವು ಇರಾನ್‌ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಸಾವಿನ ಸುದ್ದಿ ಕೇಳಿದರೂ ಆಶ್ಚರ್ಯವಾಗುವುದಿಲ್ಲಎಂದು ಹೇಳಿತ್ತು.
Iran’s Mehr RELEASES VIDEO of Supreme Leader Mojtaba Khamenei for ‘FIRST TIME’ pic.twitter.com/v3Rp81VfLH
— RT (@RT_com) August 8, 2026
ಕಳೆದ ಫೆಬ್ರವರಿ 28 ರಂದು ಯುಎಸ್ ಮತ್ತು ಇಸ್ರೇಲ್ ಮಿಲಿಟರಿ ದಾಳಿ ನಡೆಸಿ ಮೊಜ್ತಬಾ ಖಮೇನಿ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರನ್ನು ಹತ್ಯೆ ಮಾಡಿತ್ತು. ಇದರ ಬಳಿಕ ಮೊಜ್ತಬಾ ಖಮೇನಿ ಅವರನ್ನು ಇರಾನ್ ನ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಇದರ ಬಳಿಕ ಅವರು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿದ್ದರೆ ಎನ್ನುವ ವಿಡಿಯೊಗಳು ಕೂಡ ಬಿಡುಗಡೆ ಮಾಡಲಾಗಿಲ್ಲ. ಕೇವಲ ಲಿಖಿತ ಹೇಳಿಕೆಗಳ ಮೂಲಕ ಸಂವಹನ ನಡೆಸುತ್ತಿದ್ದರು.
ಮೂಲಗಳ ಪ್ರಕಾರ ಯುಎಸ್ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಜೀವಕ್ಕೆ ಅಪಾಯ ಇರುವುದರಿಂದ ಅವರು ರಹಸ್ಯ ಸ್ಥಳದಲ್ಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲೂ ಕೂಡ ಅವರು ಭಾಗಿಯಾಗಿರಲಿಲ್ಲ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಕೂಡ ಖಮೇನಿಯವರೊಂದಿಗೆ ನೇರವಾಗಿ ಸಂವಹನ ನಡೆಸುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕುತೂಹಲ ಮತ್ತು ಆತಂಕ ಎಲ್ಲರಲ್ಲೂ ಹೆಚ್ಚಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಸೌದಿ ಸುದ್ದಿವಾಹಿನಿಯೊಂದು ನೀಡಿರುವ ಮಾಹಿತಿ ಪ್ರಕಾರ ಖಮೇನಿ ಅವರು ಇರಾನ್‌ನಲ್ಲಿಲ್ಲ ಎಂದು ಹೇಳಿತ್ತು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ನ ಉನ್ನತ ಮಿಲಿಟರಿ ನಾಯಕತ್ವವನ್ನು ತೆಗೆದುಹಾಕಲಾಗಿದೆ. ಖಮೇನಿ ಅವರು ಅಸಮರ್ಥರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳನ್ನು ಇರಾನಿನ ರಾಜ್ಯ ಅಧಿಕಾರಿಗಳು ತಿರಸ್ಕರಿಸುತ್ತಲೇ ಬಂದಿದ್ದಾರೆ.