Israel Hamas: ಒತ್ತೆಯಾಳುಗಳನ್ನು ಬಿಡದಿದ್ದರೆ ಮತ್ತಷ್ಟು ದಾಳಿ ; ಹಮಾಸ್‌ಗೆ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಕೆ
ಕದನ ವಿರಾಮ ಘೋಷಣೆಯಾದ ಬಳಿಕವೂ ಇಸ್ರೇಲ್ ತನ್ನ ವಾಯುದಾಳಿಯನ್ನು ಮುಂದುವರಿಸಿದೆ. ಗುರುವಾರ ಗಾಜಾದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹಮಾಸ್ ಉಗ್ರರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ ಗಾಜಾದಲ್ಲಿ ಹೆಚ್ಚಿನ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ಇಸ್ರೇಲ್ ರಕ್ಷಣಾ ಸಚಿವ ಸೇನೆ ಆದೇಶಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಟೆಲ್ ಅವಿವ್: ಕದನ ವಿರಾಮ ಘೋಷಣೆಯಾದ ಬಳಿಕವೂ ಇಸ್ರೇಲ್ ತನ್ನ ವಾಯುದಾಳಿಯನ್ನು ಮುಂದುವರಿಸಿದೆ. ಗುರುವಾರ ಗಾಜಾದಲ್ಲಿ (Gaza Strip) ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದೀಗ ಹಮಾಸ್ ಉಗ್ರರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ ಗಾಜಾದಲ್ಲಿ ಹೆಚ್ಚಿನ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಶುಕ್ರವಾರ ಸೇನೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ, ಪ್ಯಾಲೆಸ್ತೀನಿಯನ್ನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಆದೇಶಗಳನ್ನು ನೀಡುವುದರ ಜೊತೆಗೆ ಹೆಚ್ಚುವರಿ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇಸ್ರೇಲಿ ರಕ್ಷಣಾ ಪಡೆಗಳಿಗೆ (IDF) ಆದೇಶಿಸಿದ್ದೇನೆ ಎಂದು ಕ್ಯಾಟ್ಜ್ ಹೇಳಿದ್ದಾರೆ.
ಹಮಾಸ್ ಭಯೋತ್ಪಾದಕ ಸಂಘಟನೆಯು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ ಇಸ್ರೇಲ್ ಸೇನೆ ತನ್ನ ಬಲ ಪ್ರಯೋಗವನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಗಾಜಾಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವು ಮನೆಗಳು ಹಾಗೂ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಹಮಾಸ್ ನಾಯಕರೂ ಹತ್ಯೆಗೀಡಾಗಿದ್ದಾರೆ. ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮೂರು ದಿನಗಳ ಅಂತರದಲ್ಲಿ ಇಸ್ರೇಲ್ ನಡೆಸಿದ 2ನೇ ವಾಯುದಾಳಿ ಇದಾಗಿದೆ. ಭೀಕರ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಗಾಜಾದಲ್ಲಿ 400ಕ್ಕೂ ಅಧಿಕ ಮಂದಿಯನ್ನ ಹತ್ಯೆ ಮಾಡಿತ್ತು. ಗಾಜಾ ಪಟ್ಟಿಯಲ್ಲಿದ್ದ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದ.
ಈ ಸುದ್ದಿಯನ್ನೂ ಓದಿ: Israel-Gaza War: ಕದನ ವಿರಾಮ ಉಲ್ಲಂಘನೆ... ಇಸ್ರೇಲ್-ಗಾಜಾ ನಡುವೆ ಯುದ್ಧೋನ್ಮಾದ; ಏರ್‌ಸ್ಟ್ರೈಕ್‌ನಲ್ಲಿ 200 ಜನ ಬಲಿ
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಹೆಚ್ಚುತ್ತಿದ್ದರೂ, ಹಮಾಸ್ ವಿರುದ್ಧ ಇಸ್ರೇಲ್‌ನ ಮಿಲಿಟರಿ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರಾಕರಿಸಿದ ನಂತರ ಇಸ್ರೇಲ್ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.
2023ರ ಅಕ್ಟೋಬರ್ 7 ರಂದು ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾಗಿತ್ತು. ಸಾವಿರಾರು ಜನರು ಪ್ರಾಣ ಕಳೆದು ಕೊಂಡಿದ್ದರೆ, ಲಕ್ಷಾಂತರ ಜನರು ಮನೆ ಕಳೆದು ಕೊಂಡು ಬೀದಿಪಾಲಾಗಿದ್ದರು. ಹಲವಾರು ರಾಷ್ಟ್ರಗಳ ಪ್ರಯತ್ನದ ಬಳಿಕವೂ ಕದನ ವಿರಾಮ ಕಗ್ಗಂಟಾಗಿಯೇ ಉಳಿದಿತ್ತು. ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಿಸುವಂತೆ ಮಾಡಿತ್ತು. ಮೊದಲ ಹಂತದಲ್ಲಿ ಹಮಾಸ್ ತನ್ನ ಸೆರೆಯಲ್ಲಿಟ್ಟಿದ್ದ 33 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 737 ಪ್ಯಾಲೀಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡಿತ್ತು.