ಭಾರತ-ಅಮೆರಿಕ ಶೀತಲ ಸಮರದಿಂದ ಇಂಡೊ-ಇಸ್ರೇಲ್ ಸ್ನೇಹಕ್ಕೆ ಧಕ್ಕೆ ಇಲ್ಲ; ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ಸ್ಪಷ್ಟನೆ
Eden Bar Tal: ಕೆಲವು ಮುಸ್ಲಿಂ ಮೂಲಭೂತವಾದಿ ದೇಶಗಳ ಕುಮ್ಮಕ್ಕಿನಿಂದ ಪ್ಯಾಲೆಸ್ಟಿನ್ ಮತ್ತು ಗಾಜಾ ಪಟ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಹಮಾಸ್, ಹೆಜ್ಬುಲ್ಲಾದಂತಹ ಉಗ್ರರನ್ನು ಸಂಪೂರ್ಣ ನಾಶ ಮಾಡದೆ ವಿರಮಿಸುವುದಿಲ್ಲ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ತಿಳಿಸಿದರು. ಭಾರತದಿಂದ ತೆರಳಿರುವ ಪತ್ರಕರ್ತರ ಜತೆ ಜೆರುಸಲೆಂನಲ್ಲಿ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

-

- ರಮೇಶ್ ಕುಮಾರ್ ನಾಯಕ್
ಜೆರುಸಲೆಮ್ (ಇಸ್ರೇಲ್): ʼʼಕೆಲವು ಮುಸ್ಲಿಂ ಮೂಲಭೂತವಾದಿ ದೇಶಗಳ ಕುಮ್ಮಕ್ಕಿನಿಂದ ಪ್ಯಾಲೆಸ್ಟಿನ್ ಮತ್ತು ಗಾಜಾ ಪಟ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಹಮಾಸ್, ಹೆಜ್ಬುಲ್ಲಾದಂತಹ ಉಗ್ರರನ್ನು ಸಂಪೂರ್ಣ ನಾಶ ಮಾಡದೆ ವಿರಮಿಸುವುದಿಲ್ಲʼʼ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ (Eden Bar Tal) ಸ್ಪಷ್ಟವಾಗಿ ಹೇಳಿದರು.
ಭಾರತದಿಂದ ತೆರಳಿರುವ ಪತ್ರಕರ್ತರ ಜತೆ ಭಾನುವಾರ (ಸೆಪ್ಟೆಂಬರ್ 7) ಜೆರುಸಲೆಂನಲ್ಲಿ ನಡೆಸಿದ ಸಂವಾದದಲ್ಲಿ ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಅಧಿಕ ಸುಂಕದ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ಇದು, ಇಸ್ರೇಲ್ ಮತ್ತು ಭಾರತದ ಬಾಂಧವ್ಯ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʼʼಭಾರತ ಹಾಗೂ ಇಸ್ರೇಲ್ ನಡುವೆ ಗಟ್ಟಿಯಾದ ಸ್ನೇಹವಿದೆ. ಯಾವ ಜಾಗತಿಕ ಬೆಳವಣಿಗೆಯೂ ಇಸ್ರೇಲ್ ಮತ್ತು ಭಾರತದ ಸ್ನೇಹದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಕೂಡ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಇಸ್ರೇಲ್ ಬೆಳವಣಿಗೆಗಳಿಗೆ ಸದಾ ಸ್ಪಂದಿಸುತ್ತಾರೆʼʼ ಎಂದು ಹೇಳಿದರು.
ಮೂಲಭೂತವಾದಿಗಳಿಗೆ ಬುದ್ಧಿ ಕಲಿಸುತ್ತೇವೆ
ʼʼಉಗ್ರರ ನಿರ್ಮೂಲನೆಗೆ ರಾಜತಾಂತ್ರಿಕ ಪ್ರಯತ್ನ ಸೇರಿದಂತೆ ಎಲ್ಲ ಆಯ್ಕೆಗಳನ್ನು ಬಳಸಲಾಗುವುದು. ನಾವು ಗಾಜಾ ಮೇಲೆ ನಿಯಂತ್ರಣ ಸಾಧಿಸುತ್ತಿದ್ದೇವೆ. ಇಸ್ರೇಲ್ ವಿರುದ್ಧ ಹೆಜ್ಬುಲ್ಲಾ ಉಗ್ರರನ್ನು ಛೂಬಿಡುತ್ತಿರುವ ಇರಾನ್‌ಗೆ ತಕ್ಕ ಪಾಠ ಕಲಿಸುತ್ತೇವೆ. ಅಣ್ವಸ್ತ್ರಗಳ ಆಟ ಆಡಲು ನಾವು ಇರಾನ್‌ಗೆ ಬಿಡುವುದಿಲ್ಲʼʼ ಎಂದು ಎಚ್ಚರಿಕೆ ನೀಡಿದರು.
ʼʼಗಾಜಾದಲ್ಲಿರುವ ಹಮಾಸ್ ಉಗ್ರರು ಸಂಪೂರ್ಣವಾಗಿ ಮಾರಕಾಸ್ತ್ರ ಒಪ್ಪಿಸಿ, ಶರಣಾಗುವವರೆಗೆ ನಾವು ಬಿಡುವುದಿಲ್ಲ. ಗಾಜಾದ ಬಹುತೇಕ ಪ್ರದೇಶಗಳು ಈಗ ನಮ್ಮ ವಶಕ್ಕೆ ಬಂದಿವೆʼʼ ಎಂದರು.
ಭಾರತ ಸೂಪರ್ ಪವರ್ ದೇಶ
ʼʼಭಾರತ ಸೂಪರ್ ಪವರ್ ದೇಶವಾಗಿ ಬೆಳೆಯುತ್ತಿದೆ. ಇಂಥ ಬಲಿಷ್ಠ ದೇಶಗಳ ಜತೆ ಇಸ್ರೇಲ್ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. ಭಾರತದ ಜತೆ ಕೆಲವು ಪ್ರಗತಿಪರ ಮುಸ್ಲಿಂ ದೇಶಗಳ ಜತೆಗೆ ಮೈತ್ರಿ ಹೊಂದುವ ಮೂಲಕ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ದೇಶಗಳನ್ನು ಏಕಾಂಗಿಯಾಗಿಸಲಾಗುವುದುʼʼ ಎಂದವರು ವಿವರಿಸಿದರು.
ದಾಳಿಯಲ್ಲಿ ಸತ್ತ ಪತ್ರಕರ್ತರಿಗೆ ಉಗ್ರರ ನಂಟು
ʼʼಪ್ಯಾಲೆಸ್ಟಿನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದಾಗಿ ಪತ್ರಕರ್ತರಿಗೆ ಉಗ್ರ ಸಂಘಟನೆಗಳ ನಂಟಿತ್ತು. ಅವರು ಪರ್ತಕರ್ತರ ಸೋಗಿನಲ್ಲಿದ್ದ ಉಗ್ರರು ಎಂದು ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು. ಹಮಾಸ್ ಟಾಪ್ ಕಮಾಂಡರ್‌ಗಳನ್ನೆಲ್ಲ ನಾವು ಕೊಂದಿದ್ದೇವೆ. ಈ ಬೇಟೆ ಮುಂದುವರಿಯಲಿದೆʼʼ ಎಂದವರು ಹೇಳಿದರು.
ಇಸ್ರೇಲ್ ಬೆಂಗಳೂರು ವಿಭಾಗದ ಕ್ವೌನ್ಸಲ್ ಜನರಲ್ ಒರಿಲ್ ವೆಟ್ಜಮನ್ ಸಂವಾದದಲ್ಲಿ ಭಾಗವಹಿಸಿದ್ದರು. ಭಾರತೀಯ ಪತ್ರಕರ್ತರ ನಿಯೋಗದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಇಸ್ರೇಲ್ ವಿದೇಶಾಂಗ ಸಚಿವಾಲಯದ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕೆಯುಡಬ್ಲ್ಯುಜೆ ಹೊರತಂದಿರುವ ಪತ್ರಕರ್ತ ಸಂಚಿಕೆ ಮತ್ತು 'ಅಮೃತಬೀಜ' ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ವಿಶ್ವವಾಣಿ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸುವರ್ಣ ನ್ಯೂಸ್ ಪಾಲಿಟಿಕಲ್ ಹೆಡ್ ಪ್ರಶಾಂತ್ ನಾತು, ವಿಜಯ ಕರ್ನಾಟಕ ಸುದ್ದಿ ಸಂಪಾದಕ ರಾಜೀವ್ ಮತ್ತಿತರರು ಜತೆಗಿದ್ದರು.