Syrians Arrest: ಗಾಜಾ ಸಂತ್ರಸ್ತರ ಪರವಾಗಿ ಹಣ ಸಂಗ್ರಹ: ಮೂವರು ಸಿರಿಯನ್ನರ ಬಂಧನ
ಗಾಜಾ ಸಂತ್ರಸ್ತರ ಪರವಾಗಿ ಎಂದು ಹೇಳಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದ ಮೂವರು ಸಿರಿಯನ್ನರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ದುಬೈ ಮೂಲಕ ಡಮಾಸ್ಕಸ್‌ಗೆ ಹೋಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದರು. ಇವರು ಗಾಜಾ ಸಂತ್ರಸ್ತರ ಪರವಾಗಿ ಸಂಗ್ರಹಿಸಿದ ಹಣವನ್ನು ಆರೋಪಿಗಳು ಐಷಾರಾಮಿ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

-

ನವದೆಹಲಿ: ಗಾಜಾ ಸಂತ್ರಸ್ತರ (Gaza victims) ಪರವಾಗಿ ಹಣ ಸಂಗ್ರಹಿಸಿದ್ದ ಮೂವರು ಸಿರಿಯನ್ನರನ್ನು (Syrians Arrest) ದೆಹಲಿಯಲ್ಲಿ(Delhi) ಬಂಧಿಸಲಾಗಿದೆ. ಸೆಪ್ಟೆಂಬರ್ 3ರಂದು ಗಾಜಾ ಸಂತ್ರಸ್ತರ ಹೆಸರಿನಲ್ಲಿ ಭಾರತದಲ್ಲಿ ಹಣ ಸಂಗ್ರಹಿಸುತ್ತಿದ್ದ ಆರೋಪದ ಮೇರೆಗೆ ಮೂವರು ಸಿರಿಯನ್ ಪ್ರಜೆಗಳಾದ (Syrian nationals) ಜಕಾರಿಯಾ ಹೈತಮ್ ಅಲಜರ್, ಅಹ್ಮದ್ ಓಹದ್ ಅಲ್ಹಬಾಶ್ ಮತ್ತು ಯೂಸುಫ್ ಖಾಲಿದ್ ಅಲ್ಜಹರ್ ಎಂಬವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಅಹಮದಾಬಾದ್ ಅಪರಾಧ ವಿಭಾಗದ (Ahmedabad Crime Branch) ಪೊಲೀಸರು ಬಂಧಿಸಿದರು. ದೆಹಲಿಯಿಂದ ದುಬೈ ಮೂಲಕ ಡಮಾಸ್ಕಸ್‌ಗೆ ಹೋಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅವರನ್ನು ತಡೆದು ಬಂಧಿಸಲಾಗಿದೆ.
ಕಳೆದ ತಿಂಗಳು ಗಾಜಾದಲ್ಲಿರುವ ಜನರಿಗೆ ಸಹಾಯ ಮಾಡಲು ಮಸೀದಿಗಳಿಂದ ಹಣ ಸಂಗ್ರಹಿಸಿದ್ದ ಸಿರಿಯನ್ ವ್ಯಕ್ತಿಯೊಬ್ಬನನ್ನು ಲ್ಲಿಸ್ ಬ್ರಿಡ್ಜ್ ಪ್ರದೇಶದ ಹೊಟೇಲ್‌ನಲ್ಲಿ ಬಂಧಿಸಲಾಗಿತ್ತು. ಇದಾದ ಬಳಿಕ ಶನಿವಾರ ಬಂಧಿಸಲಾಗಿರುವ ಮೂವರು ಕೂಡ ಇದೇ ಹೊಟೇಲ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್, ಗಾಜಾ ಸಂತ್ರಸ್ತರ ಪರವಾಗಿ ಸಂಗ್ರಹಿಸಿದ ಹಣವನ್ನು ಆರೋಪಿಗಳು ಐಷಾರಾಮಿ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದರು. ನಿಖರ ಸುಳಿವಿನ ಆಧಾರದಲ್ಲಿ ನಾವು ಡಮಾಸ್ಕಸ್ ನಿವಾಸಿ ಅಲ್-ಅಜರ್ ನನ್ನು ಬಂಧಿಸಿದ್ದೆವು. ಆತನ ಬಳಿ 3,600 ಡಾಲರ್ ಮತ್ತು 25,000 ರೂ. ನಗದು ಪತ್ತೆಯಾಗಿದೆ. ಬಂಧನದ ಅನಂತರ ಇತರ ಮೂವರು ಭೂಗತರಾಗಿದ್ದರು ಎಂದು ಹೇಳಿದ್ದಾರೆ.
ಬಂಧಿತ ಸಿರಿಯನ್ನರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಜುಲೈ 22ರಂದು ಕೋಲ್ಕತಾದಲ್ಲಿದ್ದರು. ಆಗಸ್ಟ್ 2ರಂದು ಅಹಮದಾಬಾದ್ ತಲುಪಿರುವ ಅವರು ಸ್ಥಳೀಯ ಮಸೀದಿಗಳಿಗೆ ಹೋಗಿ ಹಣ ಪಡೆಯಲು ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ವಿಡಿಯೊಗಳನ್ನು ತೋರಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Shiva Rajkumar: ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಗರಂ ಆದ ಶಿವಣ್ಣ- ವಿಡಿಯೊ ವೈರಲ್
ಅವರು ಗಾಜಾಗೆ ಹಣವನ್ನು ಕಳುಹಿಸುತ್ತಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮಾಹಿತಿ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯು ಅಹಮದಾಬಾದ್ ಪೊಲೀಸರ ಅಪರಾಧ ವಿಭಾಗದ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿರುವುದಾಗಿ ಶರದ್ ಸಿಂಘಾಲ್ ತಿಳಿಸಿದ್ದಾರೆ.