ಟೆಹರಾನ್, ಮಾ.7: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ (Ali Khamenei) ಕೆಲವೊಮ್ಮೆ ಬಳಸುತ್ತಿದ್ದ ಭೂಗತ ಮಿಲಿಟರಿ ಬಂಕರ್ ಮೇಲೆ ವೈಮಾನಿಕ ದಾಳಿ ನಡೆಸಿರುವ ವಿಡಿಯೊವನ್ನು ಇಸ್ರೇಲಿ ರಕ್ಷಣಾ ಪಡೆಗಳು (IDF) ಹಂಚಿಕೊಂಡಿವೆ. ಟೆಹರಾನ್‌ನಲ್ಲಿ (Tehran) 50 ಇಸ್ರೇಲಿ (Israel) ಯುದ್ಧ ವಿಮಾನಗಳು, ಭೂಗತ ಮಿಲಿಟರಿ ಬಂಕರ್ ಅನ್ನು ಧ್ವಂಸಗೊಳಿಸಿವೆ ಎಂದು ಐಡಿಎಫ್ ಹೇಳಿದೆ.
ಟೆಹರಾನ್‍ನಲ್ಲಿರುವ ಅಲಿ ಖಮೇನಿ ಅವರ ಭೂಗತ ಮಿಲಿಟರಿ ಬಂಕರ್ ಅನ್ನು 50 ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳು ಕೆಡವಿದವು ಎಂದು ಐಡಿಎಫ್ ಏರಿಯಲ್ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ನಾಯಕನು ಯುದ್ಧ ಕಾರ್ಯಾಚರಣೆಗಳನ್ನು ನಿರ್ದೇಶಿಸಬಹುದಾದ ಸುರಕ್ಷಿತ ತುರ್ತು ಸೌಲಭ್ಯವಾಗಿ ನಿರ್ಮಿಸಲಾಗಿದ್ದ ಭೂಗತ ಬಂಕರ್ ಅನ್ನು ರೋರ್ ಆಫ್ ದಿ ಹ್ಯಾರಿಯರ್ ಕಾರ್ಯಾಚರಣೆಯ ಸಮಯದಲ್ಲಿ ಬಳಸುವ ಮೊದಲೇ ನಾಶಪಡಿಸಲಾಗಿದೆ ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿದೆ ವಿಡಿಯೊ:
ಇಸ್ರೇಲ್ ಶುಕ್ರವಾರ (ಮಾ.6) ಇರಾನ್ ಮತ್ತು ಲೆಬನಾನ್ ಮೇಲೆ ದಾಳಿಗಳನ್ನು ನಡೆಸಿತು. ಏಳನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧವು ಜಾಗತಿಕ ಶಕ್ತಿಗಳನ್ನು ಸೆಳೆದುಕೊಂಡಿದೆ. ವಿಶ್ವದ ಇಂಧನ ಮತ್ತು ಸಾರಿಗೆ ಕ್ಷೇತ್ರಗಳನ್ನು ಅಸ್ತವ್ಯಸ್ತಗೊಳಿಸಿದೆ. ಶುಕ್ರವಾರ (ಮಾ.6) ಮುಂಜಾನೆ ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿ ಆಕಾಶದಲ್ಲಿ ಜೋರಾದ ಸ್ಫೋಟಗಳ ಶಬ್ಧಗಳು ಪ್ರತಿಧ್ವನಿಸಿದವು.
ಲೆಬನಾನ್‌ನ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಗುರುವಾರ (ಮಾ. 5) ರಾತ್ರಿಯಿಡೀ ಮತ್ತು ಶುಕ್ರವಾರ (ಮಾ. 6) ಇಸ್ರೇಲಿ ವಾಯುಪಡೆ ಬಾಂಬ್ ದಾಳಿ ನಡೆಸಿತು. ಹಿಜ್ಬೊಲ್ಲಾದ ಪ್ರಬಲ ಪ್ರದೇಶವಾದ ಈ ಜನನಿಬಿಡ ಉಪನಗರಗಳ ನಿವಾಸಿಗಳನ್ನು ಹೊರಹೋಗುವಂತೆ ವೈಮಾನಿಕ ದಾಳಿಗೆ ಮುಂಚಿತವಾಗಿ ಇಸ್ರೇಲ್ ತಿಳಿಸಿತ್ತು. ಈ ಹಿಂದೆ ನಾಗರಿಕರು ದಕ್ಷಿಣ ಮತ್ತು ಪೂರ್ವ ಲೆಬನಾನ್‌ನ ಪ್ರದೇಶಗಳನ್ನು ತೊರೆಯಬೇಕೆಂದು ಹೇಳಲಾಗಿತ್ತು.
ಇರಾನ್ ಶಾಲೆಯ 160 ಬಾಲಕಿಯರ ಸಾವಿಗೆ ಅಮೆರಿಕವೇ ಕಾರಣ? ವಿಶ್ವದ ದೊಡ್ಡಣ್ಣ ಈ ಬಗ್ಗೆ ಹೇಳಿದ್ದೇನು?
ಅಬುಧಾಬಿ, ದುಬೈನಲ್ಲಿ ಭಾರಿ ಸ್ಫೋಟ
ಇರಾನ್‌ನ ಅಣು ಕಾರ್ಯಕ್ರಮ ಮತ್ತು ಮಧ್ಯಪ್ರಾಚ್ಯದಲ್ಲಿ ಅದರ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಅಮೆರಿಕಾ ಮತ್ತು ಇಸ್ರೇಲ್ ಫೆಬ್ರವರಿ 28ರಂದು ದಾಳಿ ಆರಂಭಿಸಿತ್ತು. ಇರಾನ್ ಸುಪ್ರೀಮ್ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರನ್ನು ಹತ್ಯೆ ಮಾಡಲಾಯಿತು. ಇರಾನ್‌ನ ಅಣು ಸೌಲಭ್ಯಗಳು, ಮಿಲಿಟರಿ ಬೇಸ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಧ್ವಂಸ ಮಾಡಲಾಯಿತು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮತ್ತು ಅಮೆರಿಕಾ ಬೆಂಬಲಿತ ಗಲ್ಫ್ ದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದೆ.
ಯುಎಇಯ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನಿನ ಡ್ರೋನ್ ಸ್ಫೋಟಗೊಂಡಿದ್ದು, ದುಬೈಗೆ ತೆರಳುತ್ತಿದ್ದ ಹಲವಾರು ವಿಮಾನಗಳನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಇರಾನ್ ಕ್ಷಿಪಣಿ ಎಚ್ಚರಿಕೆಯ ನಂತರ ಇಸ್ರೇಲ್ ರಾಜಧಾನಿ ಜೆರುಸಲೆಮ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಪ್ರತಿದಾಳಿಯಾಗಿ ಇಸ್ರೇಲಿ ಪಡೆಗಳು ಶನಿವಾರ ಟೆಹರಾನ್ ಮೇಲೆ ದಾಳಿ ಮಾಡಿದ್ದು, ರಾಜಧಾನಿಯ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಇತರ ಭಾಗಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.