ರೋಮ್, ಸೆ.21: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಶಾಲೆಗಳಲ್ಲಿ ಮುಖ ಮುಚ್ಚುವ ವಸ್ತ್ರಗಳ (ಉದಾಹರಣೆಗೆ ಬುರ್ಖಾ, ಹಿಜಾಬ್ ಅಥವಾ ಮಾಸ್ಕ್) ಮೇಲಿನ ನಿಯಂತ್ರಣ ಮತ್ತು ಒಂದೇ ತರಗತಿಯಲ್ಲಿ ಇರಬಹುದಾದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಗರಿಷ್ಠ ಮಿತಿ ಹೇರುವ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ. ತಮ್ಮ ಬ್ರದರ್ಸ್ ಆಫ್ ಇಟಲಿ ಪಕ್ಷದ ಯುವ ಘಟಕದ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಜಾರ್ಜಿಯಾ ಮೆಲೋನಿ, ಈ ಹೊಸ ನಿಯಮಾವಳಿಗಳನ್ನು ಶೀಘ್ರದಲ್ಲೇ ಕ್ಯಾಬಿನೆಟ್ (ಸಂಪುಟ) ಸಭೆಯ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತಾವಿತ ಹೊಸ ನಿಯಮಗಳ ಪ್ರಕಾರ, ಶಾಲೆಗಳಲ್ಲಿ ಬುರ್ಖಾ ಮತ್ತು ನಿಖಾಬ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು. ಇದರೊಂದಿಗೆ, ಇಟಲಿಯ ಶಿಕ್ಷಣ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಲು ತೀವ್ರ ತೊಂದರೆಗಳನ್ನು ಎದುರಿಸುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಸಹ ಕಡ್ಡಾಯವಾಗಿ ಇಟಾಲಿಯನ್ ಭಾಷೆಯನ್ನು ಕಲಿಯಬೇಕು ಎಂಬ ನಿಯಮವನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
ಪ್ರತಿ ತರಗತಿಗೆ ಗರಿಷ್ಠ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಾನೂನುಬದ್ಧವಾಗಿ ಸ್ಥಾಪಿಸಲು ಶೀಘ್ರದಲ್ಲೇ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಲಾಗುವುದು ಎಂದು ಮೆಲೋನಿ ಹೇಳಿದರು.
"ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಳು"; ಟ್ರಂಪ್ ಹೇಳಿಕೆಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ
ವಿದೇಶಿ ಮೂಲದ ವಿದ್ಯಾರ್ಥಿಗಳು ಇಟಲಿಯ ಸಂಸ್ಕೃತಿ ಮತ್ತು ಇಟಾಲಿಯನ್ ಭಾಷೆಯನ್ನು ಸುಲಭವಾಗಿ ಕಲಿಯುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ತರಗತಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದಾಗ, ವಿದೇಶಿ ಮಕ್ಕಳು ಅಲ್ಲಿನ ಭಾಷೆ ಹಾಗೂ ಸಮಾಜದೊಂದಿಗೆ ವೇಗವಾಗಿ ಬೆರೆಯಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೆಲೋನಿ ಪ್ರತಿಪಾದಿಸಿದ್ದಾರೆ.
ಇಟಲಿಯ ಶಿಕ್ಷಣ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಲು ತೀವ್ರ ತೊಂದರೆಗಳನ್ನು ಎದುರಿಸುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಸಹ ಕಡ್ಡಾಯವಾಗಿ ಇಟಾಲಿಯನ್ ಭಾಷೆಯನ್ನು ಕಲಿಯಬೇಕೆಂಬ ಪ್ರಸ್ತಾವನೆಯೂ ಇದರಲ್ಲಿದೆ.
ಯುರೋಪ್‌ನ ಯಾವ್ಯಾವ ದೇಶಗಳಲ್ಲಿ ಏನು ಕಾನೂನಿದೆ?
ಇನ್ನು ಫ್ರಾನ್ಸ್ ಸರ್ಕಾರಿ ಸಂಸ್ಥೆಗಳಲ್ಲಿ ಧಾರ್ಮಿಕ ಚಿಹ್ನೆಗಳ ಮೇಲೆ ಕೆಲವು ಕಠಿಣ ನಿಯಮಗಳನ್ನು ಹೊಂದಿದೆ. ಫ್ರೆಂಚ್ ಶಾಲಾ ವಿದ್ಯಾರ್ಥಿಗಳು ಎದ್ದು ಕಾಣುವ ಧಾರ್ಮಿಕ ಚಿಹ್ನೆಗಳು ಮತ್ತು ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. 2011 ರಿಂದ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಿರ್ಬಂಧಗಳು ಮುಸ್ಲಿಂ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತವೆ ಎಂದು ವಿಮರ್ಶಕರು ವಾದಿಸುತ್ತಿರುವುದರಿಂದ, ಇದು ರಾಜಕೀಯವಾಗಿ ವಿವಾದಾತ್ಮಕವಾಗಿಯೇ ಉಳಿದಿದೆ.
ಇತ್ತೀಚೆಗೆ ಆಸ್ಟ್ರಿಯಾ ಕೂಡ ಶಾಲೆಗಳಲ್ಲಿ ಮುಖ ಮುಚ್ಚುವುದನ್ನು ನಿರ್ಬಂಧಿಸಲು ಕ್ರಮ ಕೈಗೊಂಡಿದೆ. 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶಿರಸ್ತ್ರಾಣಗಳನ್ನು ನಿಷೇಧಿಸುವ ಕಾನೂನು ಜಾರಿಯಲ್ಲಿದೆ. ಈ ಕ್ರಮವು ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
''ನನ್ನ ಜನಪ್ರಿಯತೆ ಬಗ್ಗೆ ನೀವು ಚಿಂತಿಸಬೇಡಿ'': ಡೊನಾಲ್ಡ್ ಟ್ರಂಪ್‌ಗೆ ಜಾರ್ಜಿಯಾ ಮೆಲೋನಿ ತಿರುಗೇಟು
ನೆದರ್ಲ್ಯಾಂಡ್ಸ್, 2019 ರಿಂದ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಸರ್ಕಾರಿ ಕಟ್ಟಡಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಬುರ್ಖಾಗಳು ಮತ್ತು ನಿಖಾಬ್‌ಗಳು ಸೇರಿದಂತೆ ಮುಖಗವಸುಗಳನ್ನು ನಿಷೇಧಿಸಲಾಗಿದೆ.
ಡೆನ್ಮಾರ್ಕ್ 2018ರಲ್ಲಿ ಈ ನಿಷೇಧವನ್ನು ಜಾರಿಗೆ ತಂದಿತು. ನಿಖಾಬ್ ಮತ್ತು ಬುರ್ಖಾದಂತಹ ಉಡುಪುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ನಿಷೇಧಿಸಿತು. ಸ್ವಿಟ್ಜರ್ಲೆಂಡ್ ಕೂಡ ರಾಷ್ಟ್ರವ್ಯಾಪಿ ಈ ನಿರ್ಬಂಧವನ್ನು ಅಳವಡಿಸಿಕೊಂಡಿದೆ. ಬೆಲ್ಜಿಯಂನಲ್ಲಿ 2011 ರಿಂದ ಈ ನಿಯಮ ಜಾರಿಯಲ್ಲಿದೆ.
ಇಟಲಿ ಈ ಹಿಂದೆಯೂ ಇದೇ ರೀತಿಯ ನಿರ್ಬಂಧಗಳ ಬಗ್ಗೆ ಚರ್ಚಿಸಿದೆ. 2025 ರಲ್ಲಿ, ಶಾಲೆಗಳು, ವಿಶ್ವವಿದ್ಯಾಲಯಗಳು, ಅಂಗಡಿಗಳು ಮತ್ತು ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಿಖಾಬ್‌ಗಳನ್ನು ನಿಷೇಧಿಸುವ ಕಾನೂನನ್ನು ಪರಿಚಯಿಸಲಾಯಿತು.