"ನನ್ನ ಪ್ರೀತಿಯ ಸ್ನೇಹಿತ" ಪ್ರಧಾನಿ ಮೋದಿಯ 76ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಇಟಲಿ ಪಿಎಂ ಜಾರ್ಜಿಯಾ ಮೆಲೋನಿ
Meloni wishes Modi: “ನನ್ನ ಸ್ನೇಹಿತ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಅವರಿಗೆ ನಾನು ಆರೋಗ್ಯ, ಶಕ್ತಿ ಮತ್ತು ಯಶಸ್ಸನ್ನು ಬಯಸುತ್ತೇನೆ” ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಎಕ್ಸ್ ಜಾಲತಾಣದಲ್ಲಿ ಭಾರತದ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ. ವ್ಲಾಡಿಮಿರ್ ಪುಟಿನ್, ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಕೂಡ ಶುಭಹಾರೈಸಿದ್ದಾರೆ.
ಜಾರ್ಜಿಯಾ ಮೆಲೋನಿ, ಪ್ರಧಾನಿ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಸೆ.17: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬಕ್ಕೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಶುಭ ಹಾರೈಸಿದರು. “ನನ್ನ ಸ್ನೇಹಿತ ನರೇಂದ್ರ ಮೋದಿ (PM Narendra Modi) ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಅವರಿಗೆ ನಾನು ಆರೋಗ್ಯ, ಶಕ್ತಿ ಮತ್ತು ಯಶಸ್ಸನ್ನು ಬಯಸುತ್ತೇನೆ” ಎಂದು ಮೆಲೋನಿ ಎಕ್ಸ್ ಜಾಲತಾಣದಲ್ಲಿ ಬರೆದಿದ್ದಾರೆ. ಇಟಲಿ ಮತ್ತು ಭಾರತ ತಮ್ಮ ಆಳವಾದ ಸ್ನೇಹ ಬಂಧವನ್ನು ಬಲಪಡಿಸುವುದನ್ನು ಮುಂದುವರೆಸಿವೆ. ನಮ್ಮ ರಾಷ್ಟ್ರಗಳಿಗೆ ಸಹಕಾರ ಮತ್ತು ಸಮೃದ್ಧಿಯ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸುತ್ತಿವೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೋದಿಯನ್ನು ಶ್ಲಾಘಿಸಿದ್ದಾರೆ. “ನೀವು ನಿಮ್ಮ ದೇಶಬಾಂಧವರಿಂದ ಆಳವಾದ ಗೌರವವನ್ನು ಮತ್ತು ಜಾಗತಿಕ ವೇದಿಕೆಯಲ್ಲಿ ಮಹತ್ತರವಾದ ಪ್ರಭಾವವನ್ನು ಅರ್ಹವಾಗಿಯೇ ಅನುಭವಿಸುತ್ತಿದ್ದೀರಿ. ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಸವಲತ್ತು ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ಎಷ್ಟು ಕೊಂಡಾಡಿದರೂ ಸಾಲದು” ಎಂದು ಹೇಳಿದ್ದಾರೆ.
ಭಾರತದ ಅಮೆರಿಕದ ರಾಯಭಾರ ಕಚೇರಿಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇವೆ. ನಿಮಗೆ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇಲ್ಲಿದೆ ಇಟಲಿ ಪಿಎಂ ಮೆಲೋನಿ ಪೋಸ್ಟ್:
Buon compleanno al mio amico @narendramodi, a cui auguro salute, energia e successo.
— Giorgia Meloni (@GiorgiaMeloni) September 17, 2026
Italia e India continuano a rafforzare il loro profondo legame di amicizia, costruendo insieme un futuro di cooperazione e prosperità per le nostre Nazioni.
ಜಿ7 ಶೃಂಗಸಭೆಯಲ್ಲಿ ಮತ್ತೆ ಸದ್ದು ಮಾಡಿದ ‘ಮೆಲೋಡಿ’ ಜೋಡಿ; "ಇನ್ಸ್ಟಾಗ್ರಾಂ ಫೇವರೆಟ್ ಕಪಲ್" ಎಂದ ಮೆಲೋನಿ!
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಅವರ ನಾಯಕತ್ವವು ಭಾರತವನ್ನು ವಿಶ್ವ ಶಕ್ತಿಯಾಗಿ ಪರಿವರ್ತಿಸಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಮತ್ತು ಭಾರತದ ನಡುವಿನ ಸ್ನೇಹ ಹಿಂದೆಂದೂ ಇಷ್ಟು ಬಲಿಷ್ಠವಾಗಿಲ್ಲ. ಒಟ್ಟಾಗಿ ನಾವು ಅದನ್ನು, ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ನೆತನ್ಯಾಹು ಹೇಳಿದರು.
ಇನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಕೂಡ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬಕ್ಕೆ ಬಿಜೆಪಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಪ್ರಮುಖ ನಾಯಕರು ಶುಭ ಹಾರೈಸಿದರು.