ರೋಮ್, ಜೂ. 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Italian Prime Minister Giorgia Meloni) ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಫ್ರಾನ್ಸ್ ನಲ್ಲಿ ನಡೆದ ಜಿ7 ಶೃಂಗಸಭೆಯ (G7 Summit) ವೇಳೆ ಮೆಲೋನಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಲಿ ಪದೇ ಪದೆ ಮನವಿ ಮಾಡಿದ್ದರು ಎಂದು ಟ್ರಂಪ್ ಪುನರುಚ್ಚರಿಸಿದ್ದು, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮೆಲೋನಿ, "ನನ್ನ ಜನಪ್ರಿಯತೆ ನಿಮ್ಮ ಚಿಂತೆಯ ವಿಷಯವಲ್ಲ, ನಿಮ್ಮ ಜನಪ್ರಿಯತೆಯ ಬಗ್ಗೆ ನೀವು ಗಮನಹರಿಸಿ" ಎಂದು ತಿರುಗೇಟು ನೀಡಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಜಿ7 ಶೃಂಗಸಭೆಯಲ್ಲಿ ಮೆಲೋನಿ ಹಲವು ಬಾರಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಲು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಇಟಲಿಯಲ್ಲಿ ಮೆಲೋನಿ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದು ಆರೋಪಿಸಿದ ಅವರು, ಇರಾನ್ ಅಣ್ವಸ್ತ್ರ ಅಭಿವೃದ್ಧಿಯನ್ನು ತಡೆಯುವ ಅಮೆರಿಕದ ಪ್ರಯತ್ನಗಳಿಗೆ ಮೆಲೋನಿ ಬೆಂಬಲ ನೀಡದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಟ್ರಂಪ್-ಮೆಲೋನಿ ಮುಸುಕಿನ ಗುದ್ದಾಟ:
ಅಮೆರಿಕ ಸೇನೆಗೆ ಇಟಲಿಯ ವಿಮಾನ ನಿಲ್ದಾಣಗಳು ಮತ್ತು ರನ್‌ವೇಗಳನ್ನು ಬಳಸಲು ಅವಕಾಶ ನೀಡದಿರುವುದನ್ನೂ ಟ್ರಂಪ್ ಟೀಕಿಸಿದ್ದಾರೆ. ಅಮೆರಿಕ ಇಟಲಿ ಸೇರಿ ನ್ಯಾಟೋ ಮಿತ್ರ ರಾಷ್ಟ್ರಗಳ ರಕ್ಷಣೆಗೆ ಅಪಾರ ಹಣ ವೆಚ್ಚ ಮಾಡುತ್ತಿದ್ದರೂ ಅಗತ್ಯ ಸಹಕಾರ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಪ್ರಧಾನಿ ಮೋದಿ ನಿಲುವಿಗೆ ಶಶಿ ತರೂರ್ ಬೆಂಬಲ
ಇದಕ್ಕೆ ಪ್ರತಿಕ್ರಿಯಿಸಿದ ಮೆಲೋನಿ, ಟ್ರಂಪ್ ಅವರ ಆರೋಪಗಳನ್ನು "ಅರ್ಥಹೀನ" ಎಂದು ತಳ್ಳಿ ಹಾಕಿದ್ದಾರೆ. "ನನ್ನ ಜನಪ್ರಿಯತೆ ನಿಮ್ಮ ಸ್ನೇಹದಿಂದ ನಿರ್ಧಾರವಾಗುವುದಿಲ್ಲ. ಅದು ಇಟಲಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಾನು ಎಷ್ಟು ಪರಿಣಾಮಕಾರಿಯಾಗಿ ರಕ್ಷಿಸುತ್ತೇನೆ ಎಂಬುದರ ಮೇಲೆ ಅವಲಂಬಿತವಾಗಿದೆ" ಎಂದು ಹೇಳಿದ್ದಾರೆ.
ಅಮೆರಿಕದ ಸೇನಾ ನೆಲೆಗಳ ಬಳಕೆ ಕುರಿತಂತೆ ಇಟಲಿ ಮತ್ತು ಅಮೆರಿಕ ನಡುವಿನ ಒಪ್ಪಂದಗಳನ್ನು ತಮ್ಮ ಸರ್ಕಾರ ಯಾವಾಗಲೂ ಗೌರವಿಸಿದೆ ಎಂದು ಮೆಲೋನಿ ಸ್ಪಷ್ಟಪಡಿಸಿದ್ದಾರೆ. "ಇಟಲಿ ಒಂದು ಸಾರ್ವಭೌಮ ರಾಷ್ಟ್ರ. ನನ್ನ ಜನಪ್ರಿಯತೆ ನಿಮ್ಮ ಚಿಂತೆಯ ವಿಷಯವಲ್ಲ. ನಿಮ್ಮ ಜನಪ್ರಿಯತೆಯ ಬಗ್ಗೆ ನೀವು ಗಮನಹರಿಸಿ" ಎಂದು ಟ್ರಂಪ್‌ಗೆ ನೇರ ಸಂದೇಶ ರವಾನಿಸಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್, ಜಿ7 ಶೃಂಗಸಭೆಯಲ್ಲಿ ಮೆಲೋನಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂದು ಹೇಳಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಮೆಲೋನಿ, "ಟ್ರಂಪ್ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು. ಅಮೆರಿಕ ಅಧ್ಯಕ್ಷರು ತಮ್ಮ ಮಿತ್ರ ರಾಷ್ಟ್ರಗಳ ವಿರುದ್ಧ ಈ ರೀತಿಯಾಗಿ ವರ್ತಿಸುವುದು ಅಚ್ಚರಿ ತಂದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.