Canada Election 2025: ಕೆನಡಾದಲ್ಲಿ ಲಿಬರಲ್ ಪಕ್ಷಕ್ಕೆ ಜಯ; ಪ್ರಧಾನಿ ಮೋದಿ ಅಭಿನಂದನೆ
Mark Carney: ಕೆನಡಾ ಫೆಡರಲ್ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ ಪಕ್ಷ ಗೆಲುವಿನತ್ತ ಮುಖ ಮಾಡಿದ್ದು, ಭಾರತದ ಪ್ರದಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿರವುದಾಗಿ ತಿಳಿಸಿದ್ದಾರೆ.

ಮಾರ್ಕ್ ಕಾರ್ನಿ ಮತ್ತು ನರೇಂದ್ರ ಮೋದಿ.

ಹೊಸದಿಲ್ಲಿ: ಕೆನಡಾ ಫೆಡರಲ್ ಚುನಾವಣೆಯಲ್ಲಿ (Canada Election 2025) ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ (Mark Carney) ನೇತೃತ್ವದ ಲಿಬರಲ್ ಪಕ್ಷ (Liberal Party) ಗೆಲುವಿನತ್ತ ಮುಖ ಮಾಡಿದೆ. ಸುಮಾರು 165 ಚುನಾವಣಾ ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದೆ. ಇದುವರೆಗೆ ಚುನಾವಣೆ ಎದುರಿಸಿದ ಅನುಭವ ಇಲ್ಲದಿದ್ದರೂ ಮಾರ್ಕ್ ಕಾರ್ನಿ ಲಿಬರಲ್ ಪಕ್ಷವನ್ನು ಸತತ 4ನೇ ಬಾರಿಗೆ ಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದಾರೆ. ಜಸ್ಟಿನ್ ಟ್ರುಡೋ ಅವರ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಈ ವರ್ಷದ ಮಾರ್ಚ್‌ನಲ್ಲಿ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದರು. ಇದೀಗ ಅವರು ಪಕ್ಷವನ್ನು ಜಯದತ್ತ ಕೊಂಡೊಯ್ದಿದ್ದು, ಭಾರತದ ಪ್ರದಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿರವುದಾಗಿ ತಿಳಿಸಿದ್ದಾರೆ.
"ಕೆನಡಾದ ಪ್ರಧಾನಿಯಾಗಿ ಆಯ್ಕೆಯಾದ ಮಾರ್ಕ್ ಕಾರ್ನಿ ಮತ್ತು ಗೆಲುವು ಸಾಧಿಸಿದ ಲಿಬರಲ್ ಪಕ್ಷಕ್ಕೆ ಅಭಿನಂದನೆಗಳು. ಭಾರತ ಮತ್ತು ಕೆನಡಾ ಪ್ರಜಾಪ್ರಭುತ್ವ ಮೌಲ್ಯ ಮತ್ತು ಜನರ ನಡುವಿನ ಪರಸ್ಪರ ಸಹಕಾರ ಹೆಚ್ಚಿಸಲು ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಉಭಯ ರಾಷ್ಟ್ರಗಳ ಸಂಬಂಧವನ್ನು ವೃದ್ಧಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಮಾರ್ಕ್ ಕಾರ್ನಿ ಅವರ ನಡೆಯಿಂದ ಹದಗೆಟ್ಟ ಭಾರತ-ಕೆನಡಾ ಸಂಬಂಧ ವೃದ್ಧಿಯಾಗುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್:
Congratulations @MarkJCarney on your election as the Prime Minister of Canada and to the Liberal Party on their victory. India and Canada are bound by shared democratic values, a steadfast commitment to the rule of law, and vibrant people-to-people ties. I look forward to working…
— Narendra Modi (@narendramodi) April 29, 2025
2023ರಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ಸಂಬಂಧ ಸುಧಾರಣೆಯ ಲಕ್ಷಣಗಳು ಕಾಣುತ್ತಿವೆ. ಲಿಬರಲ್ ಪಕ್ಷದ ಗೆಲುವು ಅಂತಾರಾಷ್ಟ್ರೀಯ ಸಂಬಂಧವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅಧಿಕಾರಾವಧಿಯಲ್ಲಿ ದಿಲ್ಲಿ ಮತ್ತು ಒಟ್ಟಾವಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿಸಾಕಷ್ಟು ಬಿರುಕು ಮೂಡಿತ್ತು. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಕಾರ್ನಿ ತಮ್ಮ ಚುನಾವಣಾ ಪ್ರಚಾರದಲ್ಲಿ ಭಾರತದೊಂದಿಗೆ ಕೆನಡಾ ಸಂಬಂಧವನ್ನು ಪುನರ್ನಿರ್ಮಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದರು.
ಇದನ್ನೂ ಓದಿ: Canada Election: ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿತ ಪಕ್ಷ NDPಗೆ ಹೀನಾಯ ಸೋಲು; ʻರಾಷ್ಟ್ರೀಯ ಪಕ್ಷʼ ಸ್ಥಾನಮಾನಕ್ಕೂ ಕುತ್ತು
ಸ್ಥಗಿತಗೊಂಡಿದ್ದ ವ್ಯಾಪಾರ-ವಹಿವಾಟು
2024ರ ಅಕ್ಟೋಬರ್‌ನಲ್ಲಿ ಕೆನಡಾ 6 ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದಾಗ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ನಿಜರ್ ಹತ್ಯೆಯಲ್ಲಿ ಭಾರತದ ಅಧಿಕಾರಿಗಳ ಪಾತ್ರವನ್ನು ಭಾರತ ನಿರಾಕರಿಸಿದ್ದು, ಈ ಆರೋಪ ಆಧಾರರಹಿತವೆಂದು ಖಂಡಿಸಿತು. ಇದರ ಪರಿಣಾಮ ಎರಡೂ ರಾಷ್ಟ್ರಗಳು ಉನ್ನತ ರಾಯಭಾರಿಗಳನ್ನು ದೇಶದಿಂದ ಹೊರಹಾಕಿ ವ್ಯಾಪಾರ ಮಾತುಕತೆ, ಅಧಿಕೃತ ಭೇಟಿಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ ಇದೀಗ ಕಾರ್ನಿಯ ವಿಜಯ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಹೊಸ ಬೆಳವಣಿಗೆಯಾಗುವ ಭರವಸೆ ಮೂಡಿಸಿದೆ.
ಇದೀಗ ಕೆನಡಾ ಮತ್ತು ಭಾರತದ ನಡುವೆ ಸಂಬಂಧ ಹದಗೆಟ್ಟ ಬಳಿಕ ಸ್ಥಗಿತಗೊಂಡಿರುವ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಈ ಒಪ್ಪಂದಡಿಯಲ್ಲಿ 2023ರಲ್ಲಿ ವ್ಯಾಪಾರ ಚಟುವಟಿಕೆ 13.49 ಬಿಲಿಯನ್ ಕೆನಡಿಯನ್ ಡಾಲರ್ ಆಗಿತ್ತು. ಈ ಒಪ್ಪಂದಡಿಯಲ್ಲಿ ಎರಡೂ ದೇಶಗಳು ಎಐ, ಫಿನ್‌ಟೆಕ್, ಹಸಿರು ಶಕ್ತಿ ಮತ್ತು ಉನ್ನತ ಶಿಕ್ಷಣದಲ್ಲಿ ಸಹಕಾರವನ್ನು ವಿಸ್ತರಿಸುವ ಯೋಜನೆ ಮಾಡಿಕೊಂಡಿದ್ದವು. ಕಾರ್ನಿ ಅವರ ನಾಯಕತ್ವದಲ್ಲಿ ಇದು ಮತ್ತೆ ಪ್ರಾರಂಭವಾದರೆ ಎರಡು ರಾಷ್ಟ್ರಗಳು ಚೀನಾ ಮತ್ತು ಅಮೆರಿಕ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎನ್ನಲಾಗುತ್ತದೆ.