''ಮೊಜ್ತಾಬಾ ಖಮೇನಿ ಜೀವಂತವಾಗಿದ್ದಾರೆ”: ಇರಾನ್ ಸುಪ್ರೀಂ ಲೀಡರ್ ಬಗ್ಗೆ ಅಮೆರಿಕ ಹೇಳಿದ್ದೇನು?
Mojtaba Khamenei Is Alive: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆ. ದೇಶದ ಆಡಳಿತ ಮತ್ತು ರಾಜಕೀಯ ವ್ಯವಹಾರಗಳಲ್ಲಿ ದಿನೇ ದಿನೆ ಹೆಚ್ಚು ಸಕ್ರಿಯರಾಗುತ್ತಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಜೂ. 3: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಜೀವಂತವಾಗಿದ್ದಾರೆ. ದೇಶದ ಆಡಳಿತ ಮತ್ತು ರಾಜಕೀಯ ವ್ಯವಹಾರಗಳಲ್ಲಿ ದಿನೇ ದಿನೆ ಹೆಚ್ಚು ಸಕ್ರಿಯರಾಗುತ್ತಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ. ಫೆಬ್ರವರಿ 28ರಂದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿತ್ತು. ದಾಳಿಯಲ್ಲಿ ಮೊಜ್ತಬಾ ಖಮೇನಿ ಗಾಯಗೊಂಡಿದ್ದರೆ, ಅವರ ತಂದೆ ಅಯತೊಲ್ಲಾ ಖಮೇನಿ ಮೃತಪಟ್ಟಿದ್ದರು.
ಅಮೆರಿಕ ಸೆನೆಟ್‌ನ ವಿದೇಶಾಂಗ ಸಂಬಂಧಗಳ ಸಮಿತಿಯ ಮುಂದೆ ಮಾತನಾಡಿದ ರೂಬಿಯೊ, ಮೊಜ್ತಬಾ ಖಮೇನಿ ದೇಶದ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಅಮೆರಿಕ–ಇರಾನ್ ಮಾತುಕತೆಗಳು ಸ್ಥಗಿತಗೊಂಡಿರುವ ನಡುವೆಯೇ ರೂಬಿಯೊ ಈ ಹೇಳಿಕೆ ನೀಡಿದ್ದಾರೆ. ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಮಿತಿಗೊಳಿಸಿದರೆ ಒಪ್ಪಂದದ ಸಾಧ್ಯತೆ ಇದೆ ಎಂಬ ಆಶಾವಾದವನ್ನೂ ಅವರು ವ್ಯಕ್ತಪಡಿಸಿದರು.
2026ರ ಏಪ್ರಿಲ್ 8ರಂದು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿದ್ದ ದುರ್ಬಲ ಕದನ ವಿರಾಮ ಒಪ್ಪಂದವೂ ಈಗ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಅದರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ರೂಬಿಯೊ ಇರಾನ್‌ನೊಂದಿಗೆ ಒಪ್ಪಂದ ಸಾಧ್ಯವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೊಜ್ತಬಾ ಖಮೇನಿ ಸಂವಹನಕ್ಕೆ ಕೋರಿಯರ್ ನೆಟ್‌ವರ್ಕ್ ಬಳಕೆ
ಆದರೆ ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಲು ಅಥವಾ ತೆರವುಗೊಳಿಸಲು, ಟೆಹರಾನ್ ತನ್ನ ಅಣು ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಮಿತಿಗೊಳಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು. ರೂಬಿಯೊ ಅವರ ಪ್ರಕಾರ, ನಿರ್ಬಂಧಗಳ ಸಡಿಲಿಕೆ ಇರಾನ್‌ನ ಅಣು ಚಟುವಟಿಕೆಗಳ ಮೇಲೆ ಮಹತ್ವದ ನಿಯಂತ್ರಣಗಳನ್ನು ಒಪ್ಪಿಕೊಳ್ಳುವ ಷರತ್ತಿನ ಮೇಲೆ ಅವಲಂಬಿತವಾಗಿದೆ.
ರೂಬಿಯೊ ಹೇಳಿದ್ದೇನು?
ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಮತ್ತು ಅನಿಲ ಹಡಗುಗಳ ಸಂಚಾರವನ್ನು ಮತ್ತೆ ತೆರೆಯಲು ಇರಾನ್ ಒಪ್ಪಿಕೊಳ್ಳಬೇಕು ಎಂದು ರೂಬಿಯೊ ಹೇಳಿದ್ದಾರೆ. ಅಲ್ಲದೆ, ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದನ್ನು ಹಾಗೂ ಗುಂಡಿನ ದಾಳಿ ಮಾಡುವುದನ್ನು ಇರಾನ್ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇರಾನ್ ಈ ಷರತ್ತುಗಳಿಗೆ ಒಪ್ಪಿಗೆ ಕೊಟ್ಟ ನಂತರ, ಜಲಸಂಧಿಯಲ್ಲಿ ಇರಾನ್ ಅಳವಡಿಸಿರುವ ಸಮುದ್ರ ಸ್ಫೋಟಕಗಳನ್ನು (ಮೈನ್‌ಗಳನ್ನು) ತೆರವುಗೊಳಿಸಲು ಅಮೆರಿಕ ಸಹಕಾರ ನೀಡಲಿದೆ ಎಂದು ರೂಬಿಯೊ ತಿಳಿಸಿದ್ದಾರೆ.
ಹಡಗುಗಳ ಸಂಚಾರಕ್ಕೆ ಜಲಸಂಧಿ ಈಗ ಮುಕ್ತವಾಗಿವೆ, ಟೋಲ್ ವಿಧಿಸುವುದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಘೋಷಿಸಬೇಕು. ಇರಾನ್ ಸಮುದ್ರದಲ್ಲಿ ಹಾಕಿರುವ ಗಣಿಗಳನ್ನು ತೆಗೆದುಹಾಕಲು ನಾವು ಸಹಾಯ ಮಾಡುತ್ತೇವೆ. ಹಡಗುಗಳ ಮೇಲೆ ಗುಂಡು ಹಾರಿಸಬಾರದು. ಈ ಒಪ್ಪಂದಗಳಿಗೆ ಬದ್ಧರಾಗಿರಬೇಕು ಎಂದು ಅಮೆರಿಕ ಹೇಳಿದೆ.