Canada Murder Case: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಇರಿದು ಕೊಲೆ- ಶಂಕಿತ ಅರೆಸ್ಟ್
Murder Case: ಕೆನಡಾದ ರಾಕ್‌ಲ್ಯಾಂಡ್ ನಲ್ಲಿ ಭಾರತೀಯ ಪ್ರಜೆಯೋರ್ವನ ಕೊಲೆ ಮಾಡಿದ್ದು, ಒಟ್ಟಾವಾ ಬಳಿಯ ರಾಕ್‌ಲ್ಯಾಂಡ್‌ನಲ್ಲಿ ಚಾಕುವಿನಿಂದ ಇರಿದು ಭಾರತೀಯನನ್ನು ಕೊಲೆ ಮಾಡಿರುವ ದುರಂತ ಘಟನೆ ನಡೆದಿದೆ. ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರಜೆಯೊಬ್ಬರು ಚಾಕು ಇರಿತದಿಂದ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಅಂದರೆ ಇಂದು ಬೆಳಿಗ್ಗೆ ತಿಳಿಸಿದೆ.


ಒಟ್ಟಾವಾ: ವಿದೇಶಗಳಲ್ಲಿ ಭಾರತೀಯ ಮೂಲದ ನಿವಾಸಿ(Indian national)ಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ವಿಶೇಷವಾಗಿ, ಕೆನಡಾ(Canada Murder Case)ದಲ್ಲಿ ಹಲವು ಬಾರಿ ಭಾರತಿಯರನ್ನು ಗುರಿಯಾಗಿಸಿ ದಾಳಿಗಳು ನಡೆದಿದ್ದರೂ, ಅಲ್ಲಿನ ಸರ್ಕಾರ ಈ ದಾಳಿಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಮಾರ್ಚ್ 25ರಂದು ಭಾರತೀಯ ಮೂಲದ ಮಹಿಳೆ ಮೇಲೆ ಜನನಿಬಿಡ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹಲ್ಲೆ ಮಾಡಲಾಗಿತ್ತು. ಇದರ ವಿಡಿಯೋಗಳು ವೈರಲ್ ಅಗಿ, ಘಟನೆಯು ಸಾಕಷ್ಟು ಟೀಕೆಗೊಳಗಾಗಿತ್ತು. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಆ ಮಹಿಳೆ ದೂರಿದ್ದಳು.
ಈಗ ಅಂತಹುದೇ ಮತ್ತೊಂದು ಘಟನೆ ಕೆನಡಾದ ರಾಕ್‌ಲ್ಯಾಂಡ್‌ನಲ್ಲಿ ನಡೆದಿದ್ದು, ಇಲ್ಲಿ ಮಾತ್ರ ಸಂತ್ರಸ್ತ ಜೀವವನ್ನೇ ಕಳೆದುಕೊಂಡಿದ್ದಾನೆ. ಒಟ್ಟಾವಾ(Ottawa) ಬಳಿಯ ರಾಕ್‌ಲ್ಯಾಂಡ್‌ನಲ್ಲಿ ಭಾರತೀಯ ಪ್ರಜೆಯೊಬ್ಬರು ಚಾಕು ಇರಿತದಿಂದ ಸಾವನ್ನಪ್ಪಿದ್ದಾರೆ ಎಂದು ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಬೆಳಿಗ್ಗೆ ತಿಳಿಸಿದೆ.
ಈ ದಾಳಿಯು ನಮಗೆ ತೀವ್ರ ದುಃಖವನ್ನು ಉಂಟು ಮಾಡಿದೆ. ಘಟನೆಯ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ, ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಸಂಬಂಧಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಸ್ಥಳೀಯ ಸಮುದಾಯ ಸಂಘಗಳ ಮೂಲಕ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ರಾಯಭಾರ ಕಚೇರಿ X ಪೋಸ್ಟ್‌ನಲ್ಲಿ ತಿಳಿಸಿದೆ.
ಕೆನಡಾದ ಸುದ್ದಿ ಪ್ರಸಾರಕ ಸಿಬಿಸಿ ನ್ಯೂಸ್ ಪ್ರಕಾರ, ಕ್ಲಾರೆನ್ಸ್-ರಾಕ್‌ಲ್ಯಾಂಡ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದು ಭಾರತೀಯ ರಾಯಭಾರ ಕಚೇರಿಯು ತನ್ನ X ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಘಟನೆಯೇ ಅಥವಾ ಪ್ರತ್ಯೇಕ ಘಟನೆಯೇ ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಘಟನೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೂ ಮುನ್ನ ಲಾಲೋಂಡೆ ಸ್ಟ್ರೀಟ್ ಬಳಿ, ಒಟ್ಟಾವಾ ಡೌನ್‌ಟೌನ್‌ನಿಂದ ಸುಮಾರು 40 ಕಿಲೋಮೀಟರ್ ಪೂರ್ವಕ್ಕೆ ಸಂಭವಿಸಿದೆ ಎಂದು ಒಂಟಾರಿಯೊ ಪ್ರಾಂತೀಯ ಪೊಲೀಸರು ರೇಡಿಯೋ-ಕೆನಡಾಗೆ ತಿಳಿಸಿದ್ದಾರೆ.
ದಾಳಿಯ ಹಿಂದಿನ ಕಾರಣವೇನು ಅಥವಾ ಬಂಧಿಸಲ್ಪಟ್ಟ ವ್ಯಕ್ತಿಯ ಮೇಲೆ ಯಾವ ಯಾವ ಆರೋಪಗಳನ್ನು ಹೊರಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎಂದು ಸಿಬಿಸಿ ನ್ಯೂಸ್ ವರದಿ ತಿಳಿಸಿದೆ. ಮುಂಬರುವ ಹೇಳಿಕೆಯಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಪೊಲೀಸರು ರೇಡಿಯೋ-ಕೆನಡಾಗೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ರಾಕ್‌ಲ್ಯಾಂಡ್ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಒಂಟಾರಿಯೊ ಪ್ರಾಂತೀಯ ಪೊಲೀಸರು ಹೇಳಿದ್ದಾರೆ.
ಹಿಂದೂ ದೇವಸ್ಥಾನದ ಮೇಲೂ ದಾಳಿ:
ಕೆನಡಾದ ಒಂಟಾರಿಯೋದಲ್ಲಿರುವ ಶ್ರೀ ಕೃಷ್ಣ ಬೃಂದಾವನ ದೇವಸ್ಥಾನವನ್ನು ಇಬ್ಬರು ವ್ಯಕ್ತಿಗಳು ಧ್ವಂಸಗೊಳಿಸಿದ ಘಟನೆ ಕಳೆದ ಭಾನುವಾರ ನಡೆದಿದೆ. ಪೊಲೀಸರು ಇದರ ಕುರಿತು ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರ ಫೋಟೋ ಬಿಡುಗಡೆ ಮಾಡಿದ್ದಾರೆ. ಅವರು ಪಬ್‌ನಿಂದ ಹೊರಬಂದು ದೇವಸ್ಥಾನದ ಬೋರ್ಡ್ ಧ್ವಂಸಗೊಳಿಸುತ್ತಿರುವ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಂಕಿತರ ಪತ್ತೆಗೆ ಬಲೆ ಬೀಸಿದ್ದಾರೆ.