ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita William Detail Story: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಏನು ಸೇವಿಸುತ್ತಾರೆ? ವಿಸರ್ಜನೆ ಕ್ರಿಯೆ ಹೇಗೆ?

Sunita William Detail Story: ನಾಸಾ(NASA) ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಅನ್‌ಡಾಕ್ ಮಾಡಲಿದ್ದು, ಇದು ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಅಸಾಧಾರಣ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂತಿರುಗುತ್ತಿದ್ದಾರೆ.

ಗಗನಯಾತ್ರಿಗಳ ದಿನಚರಿ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Profile Rakshita Karkera Mar 18, 2025 4:55 PM
  • ಹರೀಶ್ ಕೇರ

ನವದೆಹಲಿ: "ಕಲ್ಪನಾ ಚಾವ್ಲಾಗೆ ಒದಗಿದ ಗತಿಯೇ ಸುನಿತಾ ವಿಲಿಯಮ್ಸ್‌(Sunita William) ಗೆ ಆದೀತಾ?, ಸುನಿತಾ ಬದುಕಿ ಬರುವುದೇ ಅನುಮಾನ? ಇಂತಹ ಪ್ರಶ್ನಾರ್ಥಕ ಚಿಹ್ನೆ ಸಹಿತ ಹತ್ತು ಹಲವು ಹೆಡ್ಲೈನ್ಸ್‌ ಹರಿದಾಡುತ್ತಿರುವುದು ಇಂದು ನಿನ್ನೆಯಿಂದಲ್ಲ ಬರೋಬ್ಬರಿ ಎಂಟು ಒಂಬತ್ತು ತಿಂಗಳಿಂದ. ವಿಜ್ಞಾನ- ತಂತ್ರಜ್ಞಾನದ ವಿಚಾರದಲ್ಲಿ ನಮ್ಮನ್ನು ಅರ್ಧಸತ್ಯಗಳೇ ಹೆಚ್ಚಾಗಿ ತಲುಪುತ್ತಿರುತ್ತವೆ. ಸತ್ಯ ಶೂ ಧರಿಸುವ ವೇಳೆಗೆ ಸುಳ್ಳು ಅರ್ಧ ಜಗತ್ತನ್ನು ಸುತ್ತಿ ಬಂದಿರುತ್ತದೆ. ಸುನಿತಾ ವಿಲಿಯಮ್ಸ್‌ ಅನಾರೋಗ್ಯಕ್ಕೊಳಗಾಗಿದ್ದಾರೆ, ಖಿನ್ನತೆಗೊಳಗಾಗಿದ್ದಾರೆ ಎಂದೆಲ್ಲ ಸುದ್ದಿಗಳಂತೂ ದಿನ ಬೆಳಗೆದ್ದರೆ ಕಣ್ಣಿಗೆ ಬೀಳುತ್ತಿರುತ್ತವೆ. ಆದರೆ ಅದು ನಿಜವಲ್ಲ. ಕೆಲವರು ಬಾಹ್ಯಾಕಾಶ ಎಂಬುದೇ ಸಾವಿನ ಮನೆ, ಸುನಿತಾ ತಿರುಗಿ ಬರುವುದೇ ಇಲ್ಲ ಎಂಬಂತೆ ಚಿತ್ರಿಸುತ್ತಿದ್ದಾರೆ. ಅದೂ ನಿಜವಲ್ಲ. ನಾಸಾ(NASA) ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಅನ್‌ಡಾಕ್ ಮಾಡಲಿದ್ದು, ಇದು ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಅಸಾಧಾರಣ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂತಿರುಗುತ್ತಿದ್ದಾರೆ.

ವಾಸ್ತವವಾಗಿ, ಈಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸುನಿತಾ ಅಲ್ಲದೆ ಇನ್ನೂ ಆರು ಜನರಿದ್ದರು. ವರ್ಷದುದ್ದಕ್ಕೂ ಅಲ್ಲಿ ಕನಿಷ್ಠ ನಾಲ್ಕು ಮಂದಿ, ಗರಿಷ್ಠ 13 ಮಂದಿ ಇದ್ದೇ ಇರುತ್ತಾರೆ. ಒಬ್ಬರೋ ಇಬ್ಬರೋ ಮರಳಿ ಬಂದಾಗ ಅವರ ಜಾಗವನ್ನು ಬೇರೊಬ್ಬರು ಭೂಮಿಯಿಂದ ಹೋಗಿ ತುಂಬುತ್ತಾರೆ. ವಾಸ್ತವವಾಗಿ ಅಲ್ಲಿ ವೈಜ್ಞಾನಿಕ ಅಧ್ಯಯನ- ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸುನಿತಾ ಕೂಡ ಅಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಮಾನವನ ಆರೋಗ್ಯ ಸಂಬಂಧಿತ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸುದೀರ್ಘ ಬಾಹ್ಯಾಕಾಶ ಯಾನ ಮುಗಿಸಿ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸುನಿತಾ ಭೂಮಿಗೆ ಕಾಲಿಡಲಿದ್ದಾರೆ.

ಸುನಿತಾಗೆ ಈಗ 59 ವರ್ಷ. ʼಬಾಹ್ಯಾಕಾಶವೇ ನನ್ನ ಮನೆʼ ಅನ್ನುವ ಅವರು, 2006ರಿಂದ ಐಎಸ್‌ಎಸ್‌ಗೆ ಹೋಗಿ ಬರುತ್ತಿದ್ದಾರೆ. ನಾಸಾಗೆ ಸೇರುವ ಮೊದಲು ಅಮೆರಿಕದ ನೌಕಾದಳದಲ್ಲಿದ್ದ ಯೋಧೆ. ಆಕೆ ಇದುವರೆಗೂ ಸ್ಪೇಸ್‌ನಲ್ಲಿ ಕಳೆದ ಕಾಲ 428 ದಿನ. ಅತಿ ಹೆಚ್ಚು ಸ್ಪೇಸ್‌ವಾಕ್‌ ಮಾಡಿದ (50 ಗಂಟೆ 40 ನಿಮಿಷ) ಮಹಿಳೆ ಎಂಬ ದಾಖಲೆ. 2007ರಲ್ಲಿ ಬೋಸ್ಟನ್‌ ಮ್ಯಾರಥಾನ್‌ ನಡೆದಾಗ, ಅದು ಭೂಮಿಯ ಮೇಲೆ ನಡೆದಷ್ಟೂ ದೂರ ಐಎಸ್‌ಎಸ್‌ನಲ್ಲಿ ತಾನೂ ಓಡಿ ಸ್ಪೇಸ್‌ ಮ್ಯಾರಥಾನ್‌ ಮಾಡಿದ ಏಕೈಕ ವ್ಯಕ್ತಿ ಎಂಬ ದಾಖಲೆ ಬರೆದಳು. ಇವೆಲ್ಲ ಆಕೆ ಎಷ್ಟು ಟಫ್‌ ಎಂಬುದನ್ನು ನಮಗೆ ಗೊತ್ತು ಮಾಡಿಸುತ್ತವೆ.

ಹಿಂದೂ ಧರ್ಮ, ಭಗವದ್ಗೀತೆ ಬಗ್ಗೆ ಅಪಾರ ನಂಬಿಕೆ

ಸುನಿತಾ ಭಾರತ ಮೂಲದವರಾದರೂ ಅಮೆರಿಕದ ಪ್ರಜೆ, ಆದ್ದರಿಂದ ಆಕೆಯ ಸಾಧನೆ ನಮಗೆ ಹೆಮ್ಮೆಯನ್ನೇನೂ ತರಬೇಕಿಲ್ಲ ಎನ್ನುವವರುಂಟು. ಆದರೆ ಆಕೆ ಬಾಹ್ಯಾಕಾಶದಲ್ಲಿ ಮನುಷ್ಯನ ವಾಸದ ಸಾಧನೆಯ ಸೀಮೆಯನ್ನು ವಿಸ್ತರಿಸಿದವಳು ಅನ್ನುವುದೇ ಹೆಮ್ಮೆಗೆ ಸಾಕು. ಸುನಿತಾ ಆಚರಿಸುವುದು ಹಿಂದೂಧರ್ಮವನ್ನು. 2006ರಲ್ಲಿ ಆಕೆ ಭಗವದ್ಗೀತೆಯ ಪ್ರತಿಯನ್ನು ಐಎಸ್‌ಎಸ್‌ಗೆ ಒಯ್ದರು. 2012ರಲ್ಲಿ ಹೋದಾಗ ʼಓಂʼ ಚಿಹ್ನೆ ಮತ್ತು ಉಪನಿಷತ್‌ಗಳ ಪ್ರತಿಯನ್ನು ತೆಗೆದುಕೊಂಡು ಹೋದರು. 2007ರಲ್ಲಿ ಭಾರತಕ್ಕೆ ಬಂದುಹೋದಾಗ ಸಬರಮತಿ ಆಶ್ರಮಕ್ಕೆ ಭೇಟಿ ಮತ್ತು ಆಕೆಯ ಪೂರ್ವಜರ ಗ್ರಾಮವಾದ ಜುಲಾಸನ್‌ಗೆ ಭೇಟಿ ನೀಡಿದರು. ಸುನಿತಾರ ಹೃದಯದಲ್ಲಿಒಬ್ಬ ಇಂಡಿಯನ್‌ ಸದಾ ಇರುವಂತಿದೆ.

ಐಎಸ್‌ಎಸ್‌ನಲ್ಲಿ ಸುನಿತಾಗೆ ಅಪಾಯಗಳಿಲ್ಲವೆ?

ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಡ್ರೈವ್‌ ಮಾಡುವುದಕ್ಕಿಂತ ಐಎಸ್‌ಎಸ್‌ನಲ್ಲಿ ಬದುಕುವುದೇ ಕಡಿಮೆ ರಿಸ್ಕ್‌ನ ಸಂಗತಿ. ಅಲ್ಲಿ ಅಪಘಾತಗಳ ಭಯವಿಲ್ಲ, ಮ್ಯಾನ್‌ಹೋಲ್‌ ಬಿದ್ದು ಸಾಯಬೇಕಿಲ್ಲ. ಯಾರೋ ಕೊಲೆ ಮಾಡುವುದಿಲ್ಲ. ಪ್ರತಿಕ್ಷಣವೂ ಆರೋಗ್ಯವನ್ನು ಮಾನಿಟರ್‌ ಮಾಡಲಾಗುತ್ತದೆ. ಭೂಮಿಯಿಂದ ಅಲ್ಲಿಂದ ಆಹಾರ ಹಾಗೂ ನೀರಿನ ನಿರಂತರ ಪೂರೈಕೆ ಇರುತ್ತದೆ. ಆದರೆ ಐಎಸ್‌ಎಸ್‌ನಲ್ಲೂ ಅನಿರೀಕ್ಷಿತ ಅಪಾಯಗಳಿವೆ. ಉದಾಹರಣೆಗೆ, ತಾಣದಿಂದ ಹೊರಗೆ ಹೋಗಿ ನಡೆಯುವುದನ್ನು ಸ್ಪೇಸ್‌ವಾಕ್‌ ಎನ್ನುತ್ತಾರೆ. ಐಎಸ್‌ಎಸ್‌ನ ಹೊರಗಿನ ಯಾವುದಾದರೂ ಭಾಗ ಹಾಳಾದರೆ ಇವರೇ ರಿಪೇರಿ ಮಾಡಬೇಕು. ಈ ಸ್ಪೇಸ್‌ವಾಕ್‌ ಬಹಳ ರಿಸ್ಕೀ ಕೆಲಸ.

ಈ ನಿಲ್ದಾಣವೇನು ನಿಂತಲ್ಲೇ ನಿಂತಿರುವುದಿಲ್ಲ. ಅದು ಭೂಮಿಯಿಂದ 370-460 ಕಿಲೋಮೀಟರ್‌ಗಳ ನಡುವೆ ಉಯ್ಯಾಲೆಯಾಡುತ್ತಿರುತ್ತದೆ. ಒಂದು ಫುಟ್‌ಬಾಲ್‌ ಗ್ರೌಂಡ್‌ನಷ್ಟು ಉದ್ದವಾಗಿದ್ದು, 110 ಆನೆಗಳ ಭಾರವನ್ನು ಹೊಂದಿರುವ ಇದು ಗಂಟೆಗೆ 28,000 ಕಿಲೋಮೀಟರ್‌ ವೇಗದಲ್ಲಿ ಭೂಮಿಗೆ ಸುತ್ತು ಹಾಕುತ್ತಿರುತ್ತದೆ. 90 ನಿಮಿಷಕ್ಕೊಮ್ಮೆ ಭೂಮಿಗೆ ಒಂದು ಸುತ್ತು ಬರುತ್ತದೆ. ಅಂದರೆ ದಿನದಲ್ಲಿ ಸುಮಾರು 16 ಸುತ್ತು. ಇಷ್ಟು ವೇಗದಲ್ಲಿ ಸುತ್ತು ಹಾಕುತ್ತಿರುವ ಈ ಐಎಸ್‌ಎಸ್‌ಗೆ ಹೊರಗಡೆಯಿಂದ ಅಂಟಿಕೊಂಡೇ ಗಗನಯಾತ್ರಿ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಆತ ಐಎಸ್‌ಎಸ್‌ನಿಂದ ಸಂಪರ್ಕ ಕಡಿದುಕೊಂಡರೆ, ನಿರಂತರವಾಗಿ ಅಲ್ಲೇ ನಿಂತು ಸುತ್ತು ಹಾಕುವ ಅಂತರಪಿಶಾಚಿಯಾಗಬೇಕಾಗುತ್ತದೆ. ಅದಕ್ಕೂ ಮೊದಲೇ ನಿರ್ವಾತ, ವಿಕಿರಣ ಹಾಗೂ ಉಷ್ಣತೆಗಳು ಆತನನ್ನು ಕೊಲ್ಲುತ್ತವೆ. ಹೀಗಾಗಿಯೇ ಸ್ಪೇಸ್‌ವಾಕ್‌ ಮಾಡುವವರು ಅದಕ್ಕಾಗಿಯೇ ವಿನ್ಯಾಸಗೊಳಿಸಲಾದ ಸ್ಪೇಸ್‌ಸೂಟ್‌ ಹಾಗೂ ಆಕ್ಸಿಜನ್‌ ಅಂಡೆ ಕಟ್ಟಿಕೊಂಡು ಓಡಾಡುವುದು.

ISS ದುರಂತಗಳು ನಡೆದೇ ಇಲ್ಲವೇ?

ಐಎಸ್‌ಎಸ್‌ನಲ್ಲಿ ಅಪಘಾತಗಳೇ ಆಗಿಲ್ಲ ಎಂದಲ್ಲ. ಹಲವಾರು ಆಗಿವೆ. ಆದರೆ ಎಲ್ಲವೂ ಸಣ್ಣ ಪ್ರಮಾಣದವು ಮತ್ತು ತಕ್ಷಣವೇ ಸರಿಪಡಿಸಲಾಗಿದೆ. ಸ್ಪೇಸ್‌ವಾಕ್‌ಗೆಂದು ಹೊರಗೆ ಹೋದ ಒಬ್ಬ ಗಗನಯಾತ್ರಿಯ ಸ್ಪೇಸ್‌ಸೂಟ್‌ನ ಹೆಲ್ಮೆಟ್‌ನೊಳಗೆ ಕೂಲೆಂಟ್‌ನಿಂದ ಜಿನುಗಿದ ನೀರು ತುಂಬಿಕೊಂಡು ಆತ ಸಾಯುವ ಪರಿಸ್ಥಿತಿ ಬಂದಿತ್ತು. ಒಂದು ಸಿಬ್ಬಂದಿಯೇ ಇಲ್ಲದೇ ಹೋದಾಗ ಇಡೀ ನಿಲ್ದಾಣದ ಕೋನವೇ ತುಸು ಜರುಗಿದ್ದೂ ಉಂಟು. ಸಣ್ಣಪುಟ್ಟ ಆಕ್ಸಿಜನ್‌ ಲೀಕೇಜ್‌ಗಳು, ಪ್ರೆಶರ್‌ ಇಳಿತಗಳು ಆಗುತ್ತಲೇ ಇರುತ್ತವೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಭವಿಸಬಹುದಾದ ಅಪಾಯಕ್ಕಿಂತ ಗಗನನೌಕೆಗಳು ಭೂಮಿಯಿಂದ ಉಡಾವಣೆಯಾಗುವಾಗ ಅಥವಾ ಇಳಿಯುವಾಗ ಸಂಭವಿಸಬಹುದಾದ ತೊಂದರೆಗಳೇ ಅತ್ಯಂತ ಮಾರಕ. ಇದಕ್ಕೆ ದೃಷ್ಟಾಂತ ಕಲ್ಪನಾ ಚಾವ್ಲಾ ಇದ್ದ ಕೊಲಂಬಸ್‌ ನೌಕೆಯ ದುರಂತ.

ISS ನಿರ್ಮಾಣದಲ್ಲಿ 15 ದೇಶಗಳ ಯೋಗದಾನ

ಐಎಸ್‌ಎಸ್‌ ಬಹಳ ಸಂಕೀರ್ಣವಾದ ಒಂದು ತಾಣ. ಇದು ಒಂದೇ ದೇಶದ ಒಡೆತನದ್ದಲ್ಲ. ಇದರ ನಿರ್ಮಾಣದಲ್ಲಿ 15 ದೇಶಗಳ ಯೋಗದಾನವಿದೆ. 1998ರಲ್ಲಿ ಶುರುವಾಗಿ 2011ರ ವರೆಗೆ ಇದರ ಕಟ್ಟುವಿಕೆ ನಡೆಯತ್ತಲೇ ಇತ್ತು. ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ರಷ್ಯಾದ ರಾಸ್ಕಾಸ್ಮಾಸ್‌ ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದವು. ಭೂಮಿಯ ಮೇಲೆ ಒಂದೊಂದು ಭಾಗವನ್ನೂ ಸೂಕ್ಷ್ಮವಾಗಿ ನಿರ್ಮಿಸಿ, ಅದನ್ನು ಯಾವುದೇ ದೋಷವಿಲ್ಲದಂತೆ ಪರೀಕ್ಷಿಸಿ, ಅವುಗಳನ್ನು ಗಗನನೌಕೆಗಳ ಮೂಲಕ ಐಎಎಸ್‌ಎಸ್‌ನತ್ತ ಉಡಾಯಿಸಿ, ಅಲ್ಲಿ ಅವುಗಳನ್ನು ನಿಲ್ದಾಣಕ್ಕೆ ಜೋಡಿಸಿದ ಕೆಲಸ ಮನುಷ್ಯನ ಬುದ್ಧಿಮತ್ತೆ- ಇಂಜಿನಿಯರಿಂಗ್-‌ ತಂತ್ರಜ್ಞಾನ ತಲುಪಬಹುದಾದ ಅಸೀಮಿತ ಸಾಧ್ಯತೆಗಳಿಗೆ ದೃಷ್ಟಾಂತ. ಇನ್ನೂ ಅದು ವಿಕಾಸಗೊಳ್ಳುತ್ತಲೇ ಇದೆ.

2000ರಿಂದೀಚೆಗೆ ಅಲ್ಲಿ ಒಬ್ಬರಲ್ಲ ಒಬ್ಬರು ಗಗನಯಾತ್ರಿ ಸದಾ ಇದ್ದೇ ಇರುತ್ತಾರೆ. ಮರಳಿದವರ ಜಾಗವನ್ನು ಬೇರೊಬ್ಬರು ತುಂಬುತ್ತಾರೆ. ಈ ನಿಲ್ದಾಣದ ನಿರ್ವಹಣೆಗೆ ವರ್ಷಕ್ಕೆ 300 ಕೋಟಿ ಡಾಲರ್‌ ವೆಚ್ಚವಾಗುತ್ತದೆ. ಇದು ಮಾನವನ ಬಾಹ್ಯಾಕಾಶ ಯಾನ ಸಾಹಸದ ಒಟ್ಟಾರೆ ಬಜೆಟ್‌ನ ಸರಿಸುಮಾರು ಮೂರನೇ ಒಂದು ಭಾಗ. ಇಲ್ಲಿ ರಷ್ಯಾ, ಅಮೆರಿಕ, ಯುರೋಪುಗಳ ಯಾತ್ರಿಗಳಿಗೆ ಅವರವರದೇ ಭಾಗವಿದೆ. ಇಲ್ಲಿಯವರೆಗೂ ಅಮೆರಿಕದ ಜೊತೆ ರಷ್ಯಾ ಹೊಂದಿಕೊಂಡು ಹೋಗಿದೆ. ಆದರೆ ಈಗ, ತಾನು 2028ರ ಬಳಿಕ ಈ ನಿಲ್ದಾಣದಿಂದ ಕಳಚಿಕೊಳ್ಳುತ್ತೇನೆ, ಬೇರೆಯದೇ ತಾಣವನ್ನು ಕಟ್ಟುತ್ತೇನೆ ಎಂದು ರಷ್ಯಾ ಹೇಳಿದೆ. ಹಾಗಾದರೆ ಐಎಸ್‌ಎಸ್‌ನ ಭವಿಷ್ಯ ಏನು ಎಂಬುದು ಕತ್ತಲಲ್ಲಿದೆ.

ಗಗನಯಾತ್ರಿಗಳು ಅಲ್ಲೇನು ಮಾಡ್ತಾರೆ?

ವಿವಿಧ ವಿಜ್ಞಾನ ಪ್ರಯೋಗಗಳನ್ನು ನಡೆಸುವುದು ಮತ್ತು ISS ಅನ್ನು ನಿರ್ವಹಿಸುವುದು, ಹಾಳಾದರೆ ದುರಸ್ತಿ ಮಾಡುವುದು ಗಗನಯಾತ್ರಿಗಳ ಕೆಲಸ. ದೀರ್ಘಕಾಲಿಕವಾಗಿ ಮಾನವ ಬಾಹ್ಯಾಕಾಶದಲ್ಲಿದ್ದರೆ ಆತನ ಆರೋಗ್ಯಕ್ಕೆ ಏನಾಗುತ್ತದೆ ಎಂಬುದು ಇಲ್ಲಿ ಸಂಶೋಧನೆಯ ಒಂದು ಪ್ರಮುಖ ವಿಷಯ. ಇದು ಚಂದ್ರ ಅಥವಾ ಮಂಗಳನಂತಹ ಸೌರವ್ಯೂಹದ ಇತರ ಗ್ರಹ- ಉಪಗ್ರಹಗಳನ್ನು ಅನ್ವೇಷಿಸಲು ಪ್ರಯಾಣ ಮಾಡುವಾಗ ಅಗತ್ಯ. ಯಾಕೆಂದರೆ ಯಾವುದೇ ಗ್ರಹದ ಅಂಚು ತಲುಪಲು ಸುದೀರ್ಘ ಕಾಲಾವಧಿ ಬೇಕು. ಬೆಳಕಿನ ವೇಗದಲ್ಲಿ ಹೋದರೂ ಸೌರವ್ಯೂಹದ ಅಂಚನ್ನು ತಲುಪಲು ಮನುಷ್ಯನಿಗೆ ನೂರಾರು ವರ್ಷಗಳು ಬೇಕು.

ಇದರ ಜೊತೆಗೆ ಕೆಲವು ಸಸ್ಯಗಳನ್ನು ಬೆಳೆಯಲಾಗುತ್ತದೆ. ಜೊತೆಗೆ ವ್ಯಾಯಾಮ ಮತ್ತು ವೈಯಕ್ತಿಕ ಆರೈಕೆಗೆ ಕನಿಷ್ಠ ಎರಡು ಗಂಟೆಗಳ ವಿನಿಯೋಗ. ಸಾಂದರ್ಭಿಕವಾಗಿ ಬಾಹ್ಯಾಕಾಶ ನಡಿಗೆ ಅಥವಾ ಸ್ಪೇಸ್‌ವಾಕ್.‌ ಕೆಲವೊಮ್ಮೆ ಅಲ್ಲಿಂದಲೇ ಮೀಡಿಯಾ/ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ. ಈಗ ಸೋಶಿಯಲ್‌ ಮೀಡಿಯಾ ರೀಚ್‌ ಕೂಡ ಅಲ್ಲಿದೆ. ಬಾಹ್ಯಾಕಾಶದಿಂದ ಟ್ವೀಟ್ ಮಾಡಿದ ಮೊದಲ ಗಗನಯಾತ್ರಿ ಮೈಕ್ ಮಾಸ್ಸಿಮಿನೊ, 2009ರಲ್ಲಿ. ಐಎಸ್‌ಎಸ್‌ನಲ್ಲಿನ ಮಲಗುವ ಕೋಣೆಗಳು ಸಾಮಾನ್ಯವಾಗಿ ಸಣ್ಣ ಬಂಕ್ ಹಾಸಿಗೆಗಳು. ಗಗನಯಾತ್ರಿಗಳು ತಮ್ಮನ್ನು ಗೋಡೆಗೆ ಕಟ್ಟಿಕೊಂಡು ಮಲಗುತ್ತಾರೆ ಅಥವಾ ವಾಲಿಕೊಂಡೇ ನಿದ್ರೆ ಮಾಡುತ್ತಾರೆ. ಮುಕ್ತವಾಗಿ ತೇಲಿಕೊಂಡೂ ಇರಬಹುದು.

ಗಗನಯಾತ್ರಿಗಳ ಆರೋಗ್ಯದ ಮೇಲಾಗುವ ಪರಿಣಾಮ ಏನು?

ಸದ್ಯ ಸುನಿತಾ ಅವರ 8 ದಿನಗಳ ವಾಸದ ಅವಧಿ 9ತಿಂಗಳಿಗೆ ವಿಸ್ತರಣೆಗೊಂಡಿತ್ತು. ಇದು ಅವರ ಈ ಹಿಂದಿನ ಕಾಲಾವಧಿಗಳಿಗೆ ಹೋಲಿಸಿದರೆ ಅಂಥ ದೀರ್ಘವಾದದ್ದೇನೂ ಅಲ್ಲ. ಅದರೆ ಬಾಹ್ಯಾಕಾಶದ ಸುದೀರ್ಘ ವಾಸದಿಂದ ದೇಹ- ಮನಸ್ಸುಗಳ ಮೇಲೆ ಕೆಲವು ಪರಿಣಾಮಗಳು ಉಂಟಾಗುತ್ತವೆ ಎಂಬುದು ನಿಜ. ಮೈಕ್ರೋಗ್ರಾವಿಟಿಯ ಪರಿಣಾಮದಿಂದಾಗಿ ಸ್ನಾಯು ಮತ್ತು ಮೂಳೆ ಸಾಂದ್ರತೆಗಳು ಕುಸಿಯುತ್ತದೆ, ದೇಹದ ದ್ರವಾಂಶ ಮೇಲ್ಮುಖವಾಗಿ ಪ್ರವಹಿಸಿ ಮುಖ ಉಬ್ಬಿಕೊಂಡಂತೆ ಆಗಬಹುದು. ಬಾಹ್ಯಾಕಾಶದಲ್ಲಿನ ಚಟುವಟಿಕೆಗಳು ಹೆಚ್ಚಿನ ಕ್ಯಾಲೊರಿ ಸುಡುತ್ತವೆ. ಇದನ್ನು ಸರಿಪಡಿಸಲು ನಿತ್ಯ 4000 ಕ್ಯಾಲೊರಿ ಒಳಸೇವಿಸಬೇಕು. ಅಲ್ಲಿನ ಒಂಟಿತನ ಮಾನಸಿಕವಾಗಿ ಪರಿಣಾಮ ಬೀರಬಹುದು. ಆದರೆ ಸುನೀತಾ "ಎಲ್ಲವೂ ಸರಿಯಾಗಿದೆ" ಎಂದಿದ್ದಾರೆ. ಇದನ್ನೂ ಮೀರಿ ಊಹೆಗಳಿಗೆ ಕಾರಣಗಳಿಲ್ಲ.

ಗಗನಯಾತ್ರಿಗಳು ಏನನ್ನು ಸೇವನೆ ಮಾಡುತ್ತಾರೆ? ವಿಸರ್ಜನೆ ಹೇಗೆ?

ಬಹಳ ಸ್ವಾರಸ್ಯಕರವಾದ ಒಂದು ವಿಷಯಕ್ಕೆ ಬರದೇ ನಾವು ಇದನ್ನು ಮುಗಿಸುವಂತಿಲ್ಲ. ಅದು ಈ ಬಾಹ್ಯಾಕಾಶ ನಿಲ್ದಾಣದಲ್ಲಿರುವವರು ಏನನ್ನು ಸೇವಿಸುತ್ತಾರೆ ಮತ್ತು ಹೇಗೆ ವಿಸರ್ಜಿಸುತ್ತಾರೆ ಎಂಬುದು. ನಿಗದಿತವಾಗಿ ಭೂಮಿಯಿಂದ ಪ್ಯಾಕೇಜ್ಡ್‌ ಆಹಾರವನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಇವುಗಳನ್ನು ಪ್ಲಾಸ್ಟಿಕ್, ಕ್ಯಾನ್‌, ಜಿಪ್ ಲಾಕ್ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಇಲ್ಲವಾದರೆ ಆಹಾರ ಹಾಗೇ ತೇಲುತ್ತದೆ. ಎಲ್ಲವೂ ಒಣಗಿಸಿದ, ಫ್ರೀಜ್ ಮಾಡಿದ ಆಹಾರಗಳು. ದಿನಕ್ಕೆ ಮೂರು ಬಾರಿ ಆಹಾರ. ಮಸಾಲೆಗಳನ್ನು ದ್ರವ ರೂಪದಲ್ಲಿ ಪ್ಯಾಕ್ ಮಾಡಲಾಗುತ್ತದೆ. ನೀರು ಕೂಡ ಪೊಟ್ಟಣದಲ್ಲಿ ಹೋಗುತ್ತದೆ. ನೀರು ಕುಡಿಯುವಾಗ ಅದು ವಾತಾವರಣಕ್ಕೆ ಚೆಲ್ಲದಂತೆ ಜಾಗರೂಕರಾಗಿರುತ್ತಾರೆ. ಚೆಲ್ಲಿದರೆ ಅದು ಹಾಗೇ ತೇಲುತ್ತ ಕಿರಿಕಿರಿ ಸೃಷ್ಟಿಸುತ್ತದೆ. ವಿಸರ್ಜನೆಗಳ ಸಂಗತಿಯೂ ಇದೇ! ಇವರು ಓಪನ್‌ ಆಗಿ ಮಲ- ಮೂತ್ರ ವಿಸರ್ಜಿಸುವಂತೆಯೇ ಇಲ್ಲ. ತಮ್ಮ ದೇಹದ ಆ ಭಾಗಗಳಿಗೆ ಹೀರುಗೊಳವೆಗಳನ್ನು ಕಟ್ಟಿಕೊಂಡೇ ಅವರು ಕೆಲಸ ಮುಗಿಸಬೇಕು. ಅಂದಹಾಗೆ ಇವರ ಮೂತ್ರ ಮತ್ತೆ ರಿಸೈಕಲ್‌ ಆಗಿ ಕುಡಿಯುವ ನೀರು ಎನಿಸಿಕೊಂಡು ಮತ್ತೆ ಇವರ ಜಠರಕ್ಕೇ ಮರಳುತ್ತದೆ! ಹೀಗೇ ಈ ನೀರು ರಿಸೈಕಲ್‌ ಆಗುತ್ತಲೇ ಇರುತ್ತದೆ. ಆದರೆ ಇತರ ಘನ ತ್ಯಾಜ್ಯವನ್ನು ಮಾತ್ರ ಪ್ಯಾಕ್‌ ಮಾಡಿ ಭೂಮಿಗೆ ಕಳಿಸಲಾಗುತ್ತದೆ.