ಭಾರತ ತೈಲ ಖರೀದಿ ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಅಮೆರಿಕ ವ್ಯಾಪಾರ ಒಪ್ಪಂದದ ನಂತರ ರಷ್ಯಾ ಮೊದಲ ಪ್ರತಿಕ್ರಿಯೆ
India-US Trade Deal: ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಅದರ ಭಾಗವಾಗಿ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾ ಈ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದಿದೆ.
ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ) -
ಮಾಸ್ಕೋ, ಫೆ. 3: ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ (India-US Trade Deal) ಅಂತಿಮಗೊಂಡಿದೆ. ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ʼʼಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆʼʼ ಎಂದು ಟ್ರಂಪ್ ಹೇಳಿದ್ದಾರೆ. ಇದೀಗ ರಷ್ಯಾ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ತೈಲ ಖರೀದಿ ನಿಲ್ಲಿಸುವ ಬಗ್ಗೆ ದೆಹಲಿಯಿಂದ ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ ಎಂದು ತಿಳಿಸಿದೆ.
ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕದಿಂದ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮೋದಿ ಬದ್ಧರಾಗಿದ್ದಾರೆ ಎಂಬ ಟ್ರಂಪ್ ಘೋಷಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಅದಾಗ್ಯೂ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಷ್ಯಾ ಹೇಳಿದ್ದೇನು?
ಭಾರತ ತೈಲ ಖರೀದಿಯನ್ನು ನಿಲ್ಲಿಸಲಿದೆ ಎನ್ನುವ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಷ್ಯಾ ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದಿದೆ. "ಇಲ್ಲಿಯವರೆಗೆ, ಈ ವಿಷಯದ ಬಗ್ಗೆ ದೆಹಲಿಯಿಂದ ಯಾವುದೇ ಹೇಳಿಕೆ ಬಂದಿಲ್ಲ" ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ರಷ್ಯಾ ಭಾರತದೊಂದಿಗಿನ ಸಂಬಂಧವನ್ನು ಗೌರವಿಸುತ್ತದೆ ಮತ್ತು ಅದರ ಕಾರ್ಯತಂತ್ರದ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ ಎಂದು ಪೆಸ್ಕೋವ್ ಹೇಳಿದ್ದಾರೆ. "ನಾವು ದ್ವಿಪಕ್ಷೀಯ ಅಮೆರಿಕ-ಭಾರತೀಯ ಸಂಬಂಧಗಳನ್ನು ಗೌರವಿಸುತ್ತೇವೆ. ಜತೆಗೆ ರಷ್ಯಾ ಮತ್ತು ಭಾರತದ ನಡುವಿನ ಮುಂದುವರಿದ ಕಾರ್ಯತಂತ್ರದ ಪಾಲುದಾರಿಕೆಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತೇವೆ. ಇದು ನಮಗೆ ಅತ್ಯಂತ ಮುಖ್ಯವಾದ ಒಪ್ಪಂದ ಮತ್ತು ದೆಹಲಿಯೊಂದಿಗೆ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಮುಂದಾಗಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಸುಂಕ, ಬೆದರಿಕೆ, ಒಪ್ಪಂದ; ಅಮೆರಿಕ-ಭಾರತ ವ್ಯಾಪಾರ ಡೀಲ್ ಸಾಗಿ ಬಂದ ಉದ್ವಿಗ್ನತೆಯ ಹಾದಿ
ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್ ಸುದ್ದಿಗಾರರೊಂದಿಗೆ ಮಾತನಾಡಿ, ʼʼಪರಿಸ್ಥಿತಿಯನ್ನು ಸೂಕ್ಷಮವಾಗಿ ಗಮನಿಸುತ್ತಿದ್ದೇವೆ. ರಷ್ಯಾದ ಇಂಧನಕ್ಕೆ ಉತ್ತಮ ಬೇಡಿಕೆ ಇದೆʼʼ ಎಂದು ಅವರು ಹೇಳಿದ್ದಾರೆ. 2022ರಲ್ಲಿ ರಷ್ಯಾ- ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ಸಮುದ್ರ ಮಾರ್ಗದ ಮೂಲಕ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಪಾಶ್ಚಿಮಾತ್ಯ ರಾಷ್ಟ್ರಗಳ ಮುಖ್ಯವಾಗಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುತ್ತಾ ಎನ್ನುವುದೇ ಕುತೂಹಲ ಮೂಡಿಸಿದ್ದು, ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ.
ಕದನ ವಿರಾಮದಂತೆ ಅಮೆರಿಕ- ಭಾರತ ವ್ಯಾಪಾರ ಒಪ್ಪಂದದ ಘೋಷಣೆ: ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ
ಸುಂಕ ಶೇ. 18ಕ್ಕೆ ಇಳಿಸಿದ ಟ್ರಂಪ್
ʼʼಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕವು ಪ್ರತಿಸುಂಕವನ್ನು ಪ್ರಸ್ತುತ ಶೇ. 25ರಿಂದ ಶೇ. 18ಕ್ಕೆ ಇಳಿಸಲಿದೆʼʼ ಎಂದು ಟ್ರಂಪ್ ಘೋಷಿಸಿದ್ದಾರೆ. ಟ್ರಂಟ್ ಅಮೆರಿಕ ಅಧ್ಯಕ್ಷರಾಗಿ ಅಧಿಕೃ ಸ್ವೀಕರಿಸಿದ ಬಳಿಕ ಭಾರತದಿಂದ ಆಮದಾಗುವ ಸರಕುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ. ಈ ಪೈಕಿ ಶೇ. 25ರಷ್ಟು ಸುಂಕವನ್ನು ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿದೆ. ಇದೀಗ ಶೇ. 50ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ.