Myanmar Earthquake: ಮ್ಯಾನ್ಮರ್, ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ; ಸಾವಿನ ಸಂಖ್ಯೆ 144ಕ್ಕೆ ಏರಿಕೆ
ಮ್ಯಾನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ (Myanmar Earthquake) ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ಸಾಗಿಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.


ನೈಪಿಡಾವ್ : ಮ್ಯಾನ್ಮರ್, ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 144ಕ್ಕೆ ಏರಿಕೆ ಆಗಿದ್ದು, 732 ಕ್ಕೂ ಹೆಚ್ಚಿನ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಭೂಕಂಪದ ತೀವೃತೆ 7.7 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಮ್ಯಾನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ (Myanmar Earthquake) ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ಸಾಗಿಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಇನ್ನು ಅವಶೇಷದಡಿಯಲ್ಲಿ ಸಿಲುಕಿರುವ ಸಾವಿರಾರು ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮ್ಯಾನ್ಮಾರ್‌ನ ಆಡಳಿತಾರೂಢ ಸೇನೆಯು ಹಲವಾರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಭೂಕಂಪದ ಕೇಂದ್ರ ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ಸುಮಾರು 17.2 ಕಿ.ಮೀ ದೂರದಲ್ಲಿದೆ, ಇದು ಸುಮಾರು 1.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇನ್ನು ದುರ್ಘಟನೆಯಿಂದ ಸಂಭವಿಸಿದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿರುವ ಭೀತಿ ಎದುರಾಗಿದೆ. ಇನ್ನು ಬ್ಯಾಂಕಾಕ್‌ನಲ್ಲಿ ಮೂವರು ಮೃತಪಟ್ಟಿರುವ ವರದಿಯಾಗಿದೆ.
ಮ್ಯಾನ್ಮಾರ್‌ನಲ್ಲಿ ನಡೆದ ಘಟನೆಗೆ ಭಾರತ ಸರ್ಕಾರ ಕೂಡ ಸಂತಾಪ ಸೂಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. "ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮಯನ್ಮಾರ್‌ನಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ದೆಹಲಿ, ಉತ್ತರ ಪ್ರದೇಶ, ಈಶಾನ್ಯ ರಾಜ್ಯ ಸೇರಿದಂತೆ ಹಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಚೀನಾ ಹಾಗೂ ಬಾಂಗ್ಲಾದೇಶದಲ್ಲಿಯೂ ಕೂಡ ಕಂಪನದ ಅನುಭವಾಗಿದೆ .
ಮ್ಯಾನ್ಮಾರ್, ಬ್ಯಾಂಕಾಕ್‌ನಲ್ಲಿ ಕನ್ನಡಿಗರ ಸ್ಥಿತಿ ಹೇಗಿದೆ?
ಇನ್ನು ಕರ್ನಾಟಕದಿಂದಲೂ ಅನೇಕ ಮಂದಿ ಕೆಲಸ ಹಾಗೂ ಪ್ರವಾಸದ ನಿಮಿತ್ತ ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಹೀಗಾಗಿ ಅಲ್ಲಿಗೆ ತೆರಳಿದವರು ಸುರಕ್ಷಿತವಾಗಿದ್ದರೋ ಇಲ್ಲವೋ ಎಂಬ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಆದರೆ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕೆಲಸದ ನಿಮಿತ್ತ ಬ್ಯಾಂಕಾಕ್‌ಗೆ ತೆರಳಿದ್ದ 42 ಮಂದಿ ಕನ್ನಡಿಗರು ಸದ್ಯ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: Myanmar, Bangkok Earthquake: ಭೂಕಂಪ; ಮ್ಯಾನ್ಮಾರ್, ಬ್ಯಾಂಕಾಕ್‌ನಲ್ಲಿ ಕನ್ನಡಿಗರ ಸ್ಥಿತಿ ಹೇಗಿದೆ?
ಬ್ಯಾಂಕಾಕ್‌ನ ಅನಂತರಾ ಮತ್ತು ಅವನಿ ಹೊಟೆಲ್ನಲ್ಲಿ ಕನ್ನಡಿಗರು ವಾಸ್ತವ್ಯವಿದ್ದರು. ಆದರೆ, ಭೂಕಂಪನಕ್ಕೆ ಅವನಿ ಹೊಟೆಲ್ ಸ್ವಲ್ಪ ಬಿರುಕು ಬಿಟ್ಟಿದೆ. ಹೀಗಾಗಿ ಕನ್ನಡಿಗರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಕನ್ನಡಿಗರು 42 ಜನ ಹಾಗೂ ಬೇರೆ ರಾಜ್ಯದ 600 ಕ್ಕೂ ಹೆಚ್ಚು ಜನ ಈ ಹೊಟೇಲ್ಗಳಲ್ಲಿ ವಾಸ್ತವ್ಯ ಹೂಡಿದ್ದರು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಯಾರಿಗೂ ತೊಂದರೆ ಇಲ್ಲ. ನಾಳೆ ನಾವು ಬೆಂಗಳೂರಿಗೆ ಬರುತ್ತವೆ ಎಂದು ಅಲ್ಲಿನ ಕನ್ನಡಿಗರು ತಿಳಿಸಿದ್ದಾರೆ.
ಇನ್ನು ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯರಿಗಾಗಿ ಸಹಾಯ ಹಸ್ತ ಚಾಚಿದೆ. ತುರ್ತು ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಅಲ್ಲಿರುವ ಭಾರತೀಯರಿಗೆ ಭೂಕಂಪದಿಂದ ಏನಾದರೂ ಸಮಸ್ಯೆಯಾಗಿದ್ದರೆ ಕೂಡಲೇ ಸಂಪರ್ಕಿಸುವಂತೆ ಕೋರಲಾಗಿದೆ. ಮತ್ತೊಂದೆಡೆ, ಕರ್ನಾಟಕ ರಾಜ್ಯ ಸರ್ಕಾರ ಕೂಡ ಅಲ್ಲಿರುವ ಧೂತವಾಸ ಕಚೇರಿಯನ್ನು ಸಂಪರ್ಕಿಸಿ ಅಲ್ಲಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದಿದೆ. ಕನ್ನಡಿಗರಿಗಾಗಲೀ, ಭಾರತೀಯರಿಗಾಗಲೀ ತೊಂದರೆಯಾಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅಲ್ಲಿನ ಧೂತಾವಾಸ ಕಚೇರಿಯು ತಿಳಿಸಿದೆ.