ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan-Afghanistan War: ತಾಲಿಬಾನ್‌ ಜತೆ ಶಾಂತಿ ಮಾತುಕತೆ ನಡುವೆಯೇ ಪಾಕಿಸ್ತಾನ-ಅಫ್ಘಾನ್‌ ಗಡಿಯಲ್ಲಿ ಘರ್ಷಣೆ; 5 ಪಾಕ್ ಸೈನಿಕರು ಬಲಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಗಡಿಯಲ್ಲಿ ಸೈನಿಕರ ಮಧ್ಯೆ ಘರ್ಷಣೆ ಜೋರಾಗಿದೆ. ಈ ಮಧ್ಯೆ ಅಫ್ಘಾನ್ ಗಡಿಯ ಬಳಿ ನಡೆದ ಘರ್ಷಣೆಯಲ್ಲಿ ಕನಿಷ್ಠ 5 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಮಿಲಿಟರಿ ಮಾಧ್ಯಮ ವಿಭಾಗದ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಅಫ್ಘಾನಿಸ್ತಾನದಿಂದ ಗಡಿಯನ್ನು ದಾಟಲು ಪ್ರಯತ್ನಿಸಿದ ಉಗ್ರರನ್ನು ತಡೆಯುವ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 25 ಉಗ್ರರು ಸಾವನ್ನಪ್ಪಿದ್ದಾರೆ. ಈ ಘಟನೆ ಕರ್ರಮ್ ಮತ್ತು ಉತ್ತರ ವಾಜಿರಿಸ್ತಾನ್ ಜಿಲ್ಲೆಗಳಲ್ಲಿ ನಡೆದಿದೆ.

ಸಾಂಧರ್ಬಿಕ ಚಿತ್ರ

ಅಫ್ಘಾನಿಸ್ತಾನ: ವರ್ಷಾಂತ್ಯದಲ್ಲಿನ ಭೀಕರ ಯುದ್ಧದ ನಂತರ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಇಸ್ತಾಂಬುಲ್‌(Istanbul)ನಲ್ಲಿ ಪಾಕಿಸ್ತಾನ (Pakistan)-ಅಫ್ಘಾನಿಸ್ತಾನ (Afghanistan) ಶಾಂತಿ ಮಾತುಕತೆ ನಡೆಸುತ್ತಿದ್ದ ವೇಳೆಯೇ ಉಭಯ ದೇಶಗಳ ನಡುವಿನ ಗಡಿಯಲ್ಲಿ ಹೊಸ ಘರ್ಷಣೆ ಉಂಟಾಗಿದ್ದು, ಇದರಲ್ಲಿ ಐವರು ಪಾಕ್ ಸೈನಿಕರು ಬಲಿಯಾಗಿದ್ದಾರೆ ಎಂದು ಭಾನುವಾರ ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನಿ ಮಿಲಿಟರಿ ಮಾಧ್ಯಮ ವಿಭಾಗದ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಅಫ್ಘಾನಿಸ್ತಾನದಿಂದ ಗಡಿಯನ್ನು ದಾಟಲು ಪ್ರಯತ್ನಿಸಿದ ಉಗ್ರರನ್ನು ತಡೆಯುವ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 25 ಉಗ್ರರು ಸಾವನ್ನಪ್ಪಿದ್ದಾರೆ. ಈ ಘಟನೆ ಕರ್ರಮ್ ಮತ್ತು ಉತ್ತರ ವಾಜಿರಿಸ್ತಾನ್ ಜಿಲ್ಲೆಗಳಲ್ಲಿ ನಡೆದಿದೆ.

ಈ ಒಳನುಸುಳುವಿಕೆಗಳು ಅಫ್ಘಾನಿಸ್ತಾನ ತನ್ನ ಭೂ ಪ್ರದೇಶದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿಯ ಬದ್ಧತೆಯ ಬಗ್ಗೆ ಅನುಮಾನ ಹುಟ್ಟಿಸುವಂತಿದೆ ಎಂದು ಪಾಕ್ ಸೇನೆ ಹೇಳಿದೆ.

ಪ್ರತಿಕ್ರಿಯೆ ನೀಡದ ತಾಲಿಬಾನ್‌

ಅಫ್ಘಾನಿಸ್ತಾನದ ತಾಲಿಬಾನ್(Taliban) ಸರ್ಕಾರದ ವಕ್ತಾರರು ಮತ್ತು ರಕ್ಷಣಾ ಸಚಿವಾಲಯ ಈ ಘಟನೆ ಕುರಿತು ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ತಾಲಿಬಾನ್ ಉಗ್ರರಿಗೆ ಆಶ್ರಯ ನೀಡುತ್ತಿರುವ ಆರೋಪವನ್ನು ನಿರಾಕರಿಸಿದ್ದು, ಪಾಕಿಸ್ತಾನದ ಕಾರ್ಯಾಚರಣೆಗಳನ್ನು ಅಫ್ಘಾನ್ ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿದೆ.

ಈ ಸುದ್ದಿಯನ್ನು ಓದಿ: Viral Video: ಹುಲಿಯ ಡೆಡ್ಲಿ ಅಟ್ಯಾಕ್‌! ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು; ಇಲ್ಲಿದೆ ಮೈಜುಮ್ಮೆನ್ನಿಸುವ ವಿಡಿಯೊ

ಹಿಂದೆಯೂ ನಡೆದಿತ್ತು ಘರ್ಷಣೆ

ಈ ತಿಂಗಳ ಆರಂಭದಲ್ಲೂ ಇಂತಹ ಘರ್ಷಣೆಗಳು ಸಂಭವಿಸಿದ್ದವು. ಆಗ ಪಾಕಿಸ್ತಾನವು ಅಫ್ಘಾನಿಸ್ತಾನ ತನ್ನ ಭೂ ಪ್ರದೇಶದಲ್ಲಿ ಸಕ್ರಿವಾಗಿರುವ ಉಗ್ರರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿತ್ತು. ಬಳಿಕ ಉಂಟಾದ ಘರ್ಷಣೆಯಲ್ಲಿ ಗುಂಡಿನ ಚಕಮಕಿ ನಡೆದು, ಪಾಕ್‌ನಿಂದ ವೈಮಾನಿಕ ದಾಳಿ ಸಹ ನಡೆದಿತ್ತು. ಇದರಲ್ಲಿ ಅನೇಕ ಸಾವುಗಳು ಸಂಭವಿಸಿ, ಪ್ರಮುಖ ಗಡಿಯನ್ನು ಬಂದ್ ಮಾಡಲಾಗಿತ್ತು. ನಂತರ ಎರಡೂ ದೇಶಗಳು ಕತಾರ್‌ನ ದೋಹಾದಲ್ಲಿ ನಡೆದ ಮಾತುಕತೆಯಲ್ಲಿ ತಾತ್ಕಾಲಿಕ ಶಾಂತಿ ಒಪ್ಪಂದ ಮಾಡಿಕೊಂಡಿದ್ದವು.

ಒಪ್ಪಂದ ವಿಫಲವಾದರೆ ಯುದ್ಧ ರಕ್ಷಣಾ ಸಚಿವರ ಎಚ್ಚರಿಕೆ

ಪ್ರಸ್ತುತ ಶಾಂತಿ ಒಪ್ಪಂದ ಜಾರಿಯಲ್ಲಿದ್ದು, ಅಫ್ಘಾನಿಸ್ತಾನವೂ ಶಾಂತಿಯತ್ತ ಆಸಕ್ತಿ ತೋರಿಸುತ್ತಿದೆ. ಆದರೆ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳಲ್ಲಿ ದೀರ್ಘಕಾಲೀನ ಒಪ್ಪಂದ ಸಾಧಿಸಲಾಗದಿದ್ದರೆ ಮತ್ತೆ ಯುದ್ಧದ ಸ್ಥಿತಿ ನಿರ್ಮಾಣವಾಗಬಹುದು ಎಂದು ಪಾಕ್‌ನ ರಕ್ಷಣಾ ಸಚಿವ ಖ್ವಾಜಾ ಅಸಿಫ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಈ ದಾಳಿಕೋರರನ್ನು ಫಿತ್ನಾ ಅಲ್ ಖ್ವಾರಿಜ್ ಎಂದು ಪಾಕ್ ಸೇನೆ ಉಲ್ಲೇಖಿಸಿದೆ. ಇದು ಉಗ್ರಗಾಮಿ ಸಿದ್ಧಾಂತಗಳಿಂದ ಪ್ರೇರಿತವಾದ ಮತ್ತು ವಿದೇಶಿ ಬೆಂಬಲ ಹೊಂದಿರುವ ಸಂಘಟನೆಗಳನ್ನು ಸೂಚಿಸಲು ಬಳಸುವ ಪದ.

ದೀರ್ಘಕಾಲದ ಶಾಂತಿಗೆ ಮುಂದುವರಿದ ಪ್ರಯತ್ನ

ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳ ಉದ್ದೇಶ ದೋಹಾ ಒಪ್ಪಂದದ ಅನುಷ್ಠಾನವನ್ನು ಬಲಪಡಿಸುವುದು ಮತ್ತು ಗಡಿ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವುದು. ಪ್ರಸ್ತುತ ಎರಡೂ ದೇಶಗಳು ತಾತ್ಕಾಲಿಕ ಕದನ ವಿರಾಮವನ್ನು ಪಾಲಿಸುತ್ತಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಪಾಕಿಸ್ತಾನ ಮತ್ತು ತಾಲಿಬಾನ್‌ಗಳ ನಡುವೆ ಮುಂದಿನ ಮಾತುಕತೆಗಳು ಈ ಪ್ರದೇಶದ ಭದ್ರತೆ ಮತ್ತು ಉಗ್ರತೆಯ ವಿರುದ್ಧದ ಹೋರಾಟದ ದಿಕ್ಕನ್ನು ನಿರ್ಧರಿಸಲಿವೆ.