ಆಪರೇಷನ್ ಸಿಂದೂರ್ ವೇಳೆ ಬಂಕರ್‌ನಲ್ಲಿ ಅಡಗಿ ಕುಳಿತಿದ್ರಾ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ?
ಆಪರೇಷನ್ ಸಿಂದೂರ್ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬಿದ್ದರೂ ಮತ್ತೆ ಮತ್ತೆ ಹೊಸಹೊಸ ವಿಷಯಗಳು ಪಾಕಿಸ್ತಾನದಿಂದ ಕೇಳಿ ಬರುತ್ತಲೇ ಇದೆ. ಇದೀಗ ಪಾಕಿಸ್ತಾನ ಅಧ್ಯಕ್ಷರು ಈ ಸಂದರ್ಭದಲ್ಲಿ ಬಂಕರ್ ಗೆ ಹೋಗುವ ಪ್ರಸ್ತಾಪವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ಆಸಿಫ್ ಅಲಿ ಜರ್ದಾರಿ (ಸಂಗ್ರಹ ಚಿತ್ರ) -
ಇಸ್ಲಾಮಾಬಾದ್: ಕಾಶ್ಮೀರದ (Kashmir) ಪಹಲ್ಗಾಮ್ (Pahalgam terror attack) ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (terror attack) ಪ್ರತಿಯಾಗಿ ಭಾರತೀಯ ಸೇನೆ (Indian army) ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ತಾವು ಬಂಕರ್ ಗೆ ಹೋಗುವ ಬಗ್ಗೆ ಪ್ರಸ್ತಾಪವಾಗಿತ್ತು ಎಂದು ಪಾಕಿಸ್ತಾನ (pakistan) ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (Pakistan President Asif Ali Zardari) ತಿಳಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಸೇನೆ ನಡೆಸಿದ ನಿಖರವಾದ ಮಿಲಿಟರಿ ದಾಳಿಗಳ ಪರಿಣಾಮವಾಗಿ ತಮ್ಮನ್ನು ಬಂಕರ್‌ಗಳಿಗೆ ಸ್ಥಳಾಂತರಗೊಳ್ಳುವಂತೆ ಒತ್ತಡ ಹೇರಲಾಗಿತ್ತು ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಿತ್ತು. ಇದು ಪಾಕಿಸ್ತಾನದ ನಾಯಕರಿಗೆ ಆತಂಕಕಾರಿಯಾಗಿದ್ದರಿಂದ ಅವರಿಗೆ ಈ ಸಂದರ್ಭದಲ್ಲಿ ಬಂಕರ್‌ನಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿತ್ತು ಎಂದು ಆಸಿಫ್ ಅಲಿ ಜರ್ದಾರಿ ತಿಳಿಸಿದ್ದಾರೆ.
ಉತ್ತರಾಧಿಕಾರಿ ನೇಮಿಸುವ ಹಕ್ಕು ಕೇವಲ ದಲೈಲಾಮಾರಿಗೆ ಮಾತ್ರ ಇದೆ: ಕೇಂದ್ರ ಸಚಿವ ಕಿರಣ್ ರಿಜಿಜು
ಭಾರತ ನಡೆಸಿದ ನಿಖರವಾದ ಮಿಲಿಟರಿ ದಾಳಿಗಳು ಪಾಕಿಸ್ತಾನದಲ್ಲಿ ಹೈ ಅಲರ್ಟ್ ಘೋಷಣೆ ಮಾಡುವಂತೆ ಮಾಡಿತು. ಕದನ ವಿರಾಮಕ್ಕೂ ಮೊದಲು ತೀವ್ರವಾದ ಗಡಿಯಾಚೆಗಿನ ಶೆಲ್ ದಾಳಿ ನಡೆದಿದ್ದು ಇದು ಆತಂಕಕಾರಿಯಾಗಿತ್ತು. ಹೀಗಾಗಿ ಯುದ್ಧ ಪ್ರಾರಂಭವಾಗಿದೆ ಎಂದು ತಮ್ಮ ಮಿಲಿಟರಿ ಕಾರ್ಯದರ್ಶಿ ಎಚ್ಚರಿಸಿದರು. ಅವರು ನನ್ನ ಬಳಿ ಬಂದು ಸರ್ ಯುದ್ಧ ಪ್ರಾರಂಭವಾಗಿದೆ. ಬಂಕರ್‌ಗಳಿಗೆ ಹೋಗೋಣ ಎಂದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ಹೇಳಿದರು.
ಅನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ದಾಳಿಯು ನಿಖರ ಮತ್ತು ಸೀಮಿತವಾಗಿತ್ತು ಎಂದು ಅಧಿಕಾರಿಗಳು ಬಣ್ಣಿಸಿದ್ದರು. ಆದರೆ ಇದು ಬಳಿಕ ತೀವ್ರ ಉಲ್ಬಣಗೊಂಡಿತ್ತು. ಪಾಕಿಸ್ತಾನವು ಗಡಿಯಾಚೆಗಿನ ಶೆಲ್ ದಾಳಿಯನ್ನು ತೀವ್ರಗೊಳಿಸಿತು ಮತ್ತು ಭಾರತವು ನಿಯಂತ್ರಣ ರೇಖೆಯ ಉದ್ದಕ್ಕೂ ಪ್ರತಿಕ್ರಿಯಿಸಿತು. ಇದರಿಂದ ಎರಡು ದೇಶಗಳ ನಡುವೆ ಮಿಲಿಟರಿ ಘರ್ಷಣೆಯ ಭಯ ಉಂಟಾಗಿತ್ತು. ಹೀಗಾಗಿ ತಮಗೆ ಮೊದಲೇ ಬಂಕರ್‌ಗೆ ತೆರಳಲು ಸೂಚಿಸಲಾಗಿತ್ತು. ಆದರೆ ತಾವು ನಿರಾಕರಿಸಿದ್ದಾಗಿ ಜರ್ದಾರಿ ಹೇಳಿದರು.
ಕಾರವಾರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ!
ಇದರ ಬಳಿಕ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಕದನ ವಿರಾಮವನ್ನು ಪ್ರಸ್ತಾಪಿಸಲು ಭಾರತೀಯ ನಾಯಕರನ್ನು ಸಂಪರ್ಕಿಸಿದ ಬಳಿಕ ಯುದ್ಧ ವಾತಾವರಣ ಕಡಿಮೆ ಆಯಿತು. ಈ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡಿತ್ತು ಎಂದು ಅವರು ಹೇಳಿದರು.