ಇಸ್ಲಾಮಾಬಾದ್, ಡಿ. 20: ತೋಷಖಾನಾ-2 ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಅವರ ಮಾಜಿ ಪತ್ನಿ ಬುಶ್ರಾ ಬೀಬಿ (Bushra Bibi)ಗೆ ಪಾಕಿಸ್ತಾನದ ನ್ಯಾಯಾಲಯ (Pakistan Court) ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಈ ಪ್ರಕರಣವು 2021ರಲ್ಲಿ ಸೌದಿ ಸರ್ಕಾರದಿಂದ ಮಾಜಿ ದಂಪತಿ ಪಡೆದ ಉಡುಗೊರೆಗಳಲ್ಲಿನ ವಂಚನೆಯ ಕುರಿತಾಗಿದೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ಇದೀಗ ಈ ತೀರ್ಪು ಪ್ರಕಟಿಸಿದರು.
ಇಮ್ರಾನ್ ಖಾನ್ ಮತ್ತು ಬುಶ್ರಾ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಅವರೆಲ್ಲರಿಗೂ ತಲಾ 16.4 ಮಿಲಿಯನ್ ದಂಡವನ್ನೂ ವಿಧಿಸಿದೆ.
ಈ ಪ್ರಕರಣವನ್ನು 2024ರಲ್ಲಿ ದಾಖಲಿಸಲಾಗಿತ್ತು. ದುಬಾರಿ ಕೈಗಡಿಯಾರಗಳು, ವಜ್ರ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಮಾಜಿ ದಂಪತಿಯು ರಾಜ್ಯ ಉಡುಗೊರೆ ಭಂಡಾರವಾದ ತೋಷಖಾನಾದಲ್ಲಿ ಠೇವಣಿ ಇಡದೆ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ.
ಎಲಾನ್ ಮಸ್ಕ್‌ಗೆ ಪತ್ರ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್
2024ರ ಅಕ್ಟೋಬರ್‌ನಲ್ಲಿ ಈ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಬುಶ್ರಾ ಅವರಿಗೆ ಜಾಮೀನು ನೀಡಿತ್ತು. ಒಂದು ತಿಂಗಳ ನಂತರ, ಖಾನ್ ಅವರಿಗೆ ಅದೇ ಪ್ರಕರಣದಲ್ಲಿ ಜಾಮೀನು ನೀಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರ ಮೇಲೆ ಆರೋಪ ಹೊರಿಸಲಾಯಿತು. ಈ ಮಧ್ಯೆ ಅಡಿಯಾಲಾ ಜೈಲಿನಲ್ಲಿ ಪ್ರಾಸಿಕ್ಯೂಷನ್ ಪ್ರಕ್ರಿಯೆ ನಡೆಯಿತು. ಈ ವರ್ಷದ ಆರಂಭದಲ್ಲಿ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಖಾನ್ ಮತ್ತು ಅವರ ಪತ್ನಿ ಇಬ್ಬರೂ ಈಗಾಗಲೇ ಜೈಲಿನಲ್ಲಿದ್ದಾರೆ. ಇಬ್ಬರೂ ತಮ್ಮ ಶಿಕ್ಷೆಯ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಉಂಟಾಗಿತ್ತು ವದಂತಿ
ಇತ್ತೀಚೆಗಷ್ಟೇ, ಇಮ್ರಾನ್ ಖಾನ್ ಎಲ್ಲಿದ್ದಾರೆ? ಎಂಬ ಪ್ರಶ್ನೆ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಭೇಟಿ ಮಾಡಲು ಹಲವು ವಾರಗಳಿಂದ ಅವಕಾಶ ನೀಡಲಾಗಿಲ್ಲ ಎಂದು ಅವರ ಕುಟುಂಬ ಹೇಳಿಕೊಂಡಿತ್ತು. ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂದು ಸುದ್ದಿ ಕೂಡ ಹಬ್ಬಿತ್ತು. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಜೈಲಾಧಿಕಾರಿಗಳು ಮಾಜಿ ಪ್ರಧಾನಿ ಆರೋಗ್ಯವಾಗಿದ್ದಾರೆ, ಇವೆಲ್ಲಾ ವದಂತಿ ಎಂದು ಹೇಳಿದ್ದರು. ಆದರೂ ಕೂಡ ಕುಟುಂಬಕ್ಕೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿತ್ತು.
ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರಲ್ಲಿ ಒಬ್ಬರಾದ ಅಲೀಮಾ ಖಾನಮ್, ತಮ್ಮ ಕುಟುಂಬಕ್ಕೆ ಅವರನ್ನು ಭೇಟಿಯಾಗಲು ಪದೇ ಪದೆ ನಿರಾಕರಿಸಲಾಗುತ್ತಿದೆ ಎಂದು ಹೇಳಿದ್ದರು. ಕಳೆದ 6-7 ತಿಂಗಳಿಂದ ಅವರು ಬಹಳಷ್ಟು ತೊಂದರೆ ನೀಡಿದ್ದಾರೆ. ಕೆಲವೊಮ್ಮೆ ಅವರನ್ನು ತನಗೆ ಭೇಟಿ ಮಾಡಲು ಅವಕಾಶ ನೀಡುತ್ತಾರೆ, ಕೆಲವೊಮ್ಮೆ ಅವರು ನನ್ನ ಸಹೋದರಿಯರಲ್ಲಿ ಒಬ್ಬರನ್ನು ಭೇಟಿ ಮಾಡಲು ಅವಕಾಶ ನೀಡುತ್ತಾರೆ, ಕೆಲವೊಮ್ಮೆ ಅವರು ಯಾರನ್ನೂ ಭೇಟಿಯಾಗಲು ಬಿಡುವುದಿಲ್ಲ. ಹಲವು ಬಾರಿ ನಾವು ಗಂಟೆಗಟ್ಟಲೆ ಹೊರಗೆ ಕಾದಿದ್ದೇವೆ ಎಂದು ಇಮ್ರಾನ್ ಖಾನ್ ಅವರ ಸಹೋದರಿ ಹೇಳಿದ್ದರು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.