ಇಮ್ರಾನ್ ಖಾನ್ ಎಲ್ಲಿದ್ದಾರೆ? ಪಾಕ್ ಮಾಜಿ ಪ್ರಧಾನಿ ಸಾವಿನ ವದಂತಿ ಬಗ್ಗೆ ಜೈಲಧಿಕಾರಿಗಳು ಹೇಳಿದ್ದೇನು?
Imran Khan: ಇಮ್ರಾನ್ ಖಾನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ಸಾವಿನ ವದಂತಿಗಳ ನಡುವೆ, ಪಾಕಿಸ್ತಾನದ ಜೈಲು ಆಡಳಿತವು ಸ್ಪಷ್ಟನೆ ನೀಡಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸುರಕ್ಷಿತವಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಮ್ರಾನ್ ಖಾನ್ (ಸಂಗ್ರಹ ಚಿತ್ರ) -
ಇಸ್ಲಾಮಾಬಾದ್: ಪಾಕ್‍ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಜೈಲಿನಲ್ಲಿ ನಿಧನರಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ ಬೆನ್ನಲ್ಲೇ ಭಾರಿ ಉದ್ವಿಗ್ನತೆ ಉಂಟಾಗಿತ್ತು. ಇದೀಗ ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ ಮತ್ತು ಜೈಲಿನೊಳಗೆ ಇದ್ದಾರೆ ಎಂದು ಪಾಕಿಸ್ತಾನದ ಅಡಿಯಾಲ ಜೈಲು (Pakistan Adiala Jail) ಆಡಳಿತ ಹೇಳಿದೆ. ಇಮ್ರಾನ್ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಆಧಾರ ರಹಿತ ಮತ್ತು ಅವರಿಗೆ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲು ಆಡಳಿತ ಹೇಳಿದೆ.
ಅಡಿಯಾಲ ಜೈಲಿನಿಂದ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಪಾಕಿಸ್ತಾನದ ಮಾಜಿ ನಾಯಕ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಪ್ರಕರಣಗಳ ಜಾಲದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 14 ವರ್ಷ ಜೈಲು ಶಿಕ್ಷೆ
2022ರಲ್ಲಿ ಅವಿಶ್ವಾಸ ಮತದಲ್ಲಿ ಸೋತ ನಂತರ ಅಧಿಕಾರದಿಂದ ಪದಚ್ಯುತಗೊಂಡ ಮಾಜಿ ಪ್ರಧಾನಿಯನ್ನು ಅಮಾನವೀಯ ಪರಿಸ್ಥಿತಿಗಳಲ್ಲಿ ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂದು ಇಮ್ರಾನ್ ಅವರ ಸಹೋದರಿಯರು ಮತ್ತು ಅವರ ಪುತ್ರರು ಹೇಳಿಕೊಂಡಿದ್ದಾರೆ. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಇಮ್ರಾನ್ ಸಹೋದರಿಯರಾದ ನೊರೀನ್ ಖಾನ್ (ನಿಯಾಜಿ), ಅಲೀಮಾ ಖಾನ್ ಮತ್ತು ಉಜ್ಮಾ ಖಾನ್, ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ವಾರಕ್ಕೆ ಎರಡು ಬಾರಿ ಇಮ್ರಾನ್ ಅವರ ಕುಟುಂಬಕ್ಕೆ ಭೇಟಿ ಹಕ್ಕನ್ನು ನೀಡಿದೆ.
ಬುಧವಾರದಂದು ಪಿಟಿಐ ಕಾರ್ಯಕರ್ತರು ಮತ್ತು ಇಮ್ರಾನ್ ಸಹೋದರಿಯರು ಅಡಿಯಾಲ ಜೈಲಿನ ಚೆಕ್‌ಪೋಸ್ಟ್ ಬಳಿ ಧರಣಿ ನಡೆಸಿದ ನಂತರ ಗೊಂದಲ ಭುಗಿಲೆದ್ದಿತು. ಸಾವಿರಾರು ಪಿಟಿಐ ಕಾರ್ಯಕರ್ತರು ಸ್ಥಳಕ್ಕೆ ಬಂದು ಹಿಂಸಾತ್ಮಕವಾಗಿ ಪ್ರತಿಭಟಿಸಿದರು. ಪ್ರತಿಭಟನಾಕಾರರು ಅಡಿಯಾಲ ಜೈಲಿಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದೂ ಹೇಳಲಾಗಿದೆ.
ಜೈಲಿನೊಳಗೆ ಹತ್ಯೆಗೀಡಾದ್ರಾ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್? ವದಂತಿಯ ನಿಜವೇ?
ಪ್ರತಿಭಟನೆ ಹೆಚ್ಚಾದ ಬಳಿಕ, ಜೈಲು ಅಧಿಕಾರಿಗಳು ಮತ್ತು ಪೊಲೀಸರು, ಇಮ್ರಾನ್ ಖಾನ್ ಅವರೊಂದಿಗೆ ಸಭೆ ಏರ್ಪಡಿಸುವುದಾಗಿ ಅಲೀಮಾ ಖಾನ್ ಅವರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು ಎಂದು ವರದಿ ತಿಳಿಸಿದೆ. ಇಮ್ರಾನ್ ಸಹೋದರಿಯರಿಗೆ ಇಂದು ಅಥವಾ ಮುಂದಿನ ಮಂಗಳವಾರ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಮಧ್ಯೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಇಮ್ರಾನ್ ಹಿಂದೆ ಜೈಲಿನಲ್ಲಿದ್ದಾಗ ಅನುಭವಿಸಿದ್ದಕ್ಕಿಂತ ಹೆಚ್ಚಿನ ಸೌಕರ್ಯವನ್ನು ಈಗ ಜೈಲಿನಲ್ಲಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಆರೋಪದಡಿ ಇಮ್ರಾನ್ ಖಾನ್ ಜೈಲು ಸೇರಿ ಎರಡು ವರ್ಷ ಕಳೆದಿದೆ. ಅವರು ಜೈಲಿನಲ್ಲೇ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಬ್ಬಿತ್ತು. ಇದು ಪಾಕಿಸ್ತಾನದಲ್ಲಿ ಉದ್ವಿಗ್ನತೆ ಉಂಟಾಗಲು ಕಾರಣವಾಯಿತು. ಅಲ್ಲದೆ ಮಾಜಿ ಪ್ರಧಾನಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು ಎಂಬ ವಿಚಾರವು ಕೂಡ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಅವರ ಸೋದರಿಯರು ಜೈಲಿನ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇವೆಲ್ಲಾ ಊಹಾಪೋಹಗಳು, ನಿಜವಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.