ಢಾಕಾ, ಡಿ. 17: ಉಗ್ರಗಾಮಿಗಳ ಬೆದರಿಕೆಗಳು ಮತ್ತು ಬಾಂಗ್ಲಾದೇಶದ (Bangladesh) ನಾಯಕರ ಪ್ರಚೋದನಕಾರಿ ಹೇಳಿಕೆಗಳ ನಂತರ ಹೆಚ್ಚುತ್ತಿರುವ ಭದ್ರತಾ ಅಪಾಯದ ನಡುವೆ ಭಾರತವು ಬುಧವಾರ ಢಾಕಾದಲ್ಲಿರುವ (Dhaka) ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು (IVAC) ತಾತ್ಕಾಲಿಕವಾಗಿ ಮುಚ್ಚಿದೆ. ಬಾಂಗ್ಲಾದೇಶದ ಢಾಕಾದ ಜಮುನಾ ಫ್ಯೂಚರ್ ಪಾರ್ಕ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು (Visa Application Centre) ಭಾರತೀಯ ವೀಸಾ ಸೇವೆಗಳಿಗೆ ಪ್ರಮುಖ ಕಚೇರಿ ಎನಿಸಿಕೊಂಡಿದೆ. ಭದ್ರತಾ ಅಪಾಯ ಇರುವುದರಿಂದ ಅಪರಾಹ್ನ 2 ಗಂಟೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಬುಧವಾರ ಅಪಾಯಿಂಟ್‌ಮೆಂಟ್‌ಗಳನ್ನು ಹೊಂದಿದ್ದ ಎಲ್ಲ ಅರ್ಜಿದಾರರನ್ನು ಮುಂದಿನ ದಿನಾಂಕಕ್ಕೆ ಮರು ನಿಗದಿಪಡಿಸಲಾಗುವುದು ಎಂದು IVAC ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯವು (MEA) ಭಾರತದಲ್ಲಿನ ಬಾಂಗ್ಲಾದೇಶದ ಹೈಕಮಿಷನರ್ ಎಂ. ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿ, ಬಾಂಗ್ಲಾದೇಶದಲ್ಲಿ ಭದ್ರತಾ ವಾತಾವರಣ ಹದಗೆಡುತ್ತಿರುವ ಬಗ್ಗೆ ಭಾರತ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿತು.
ಶೇಖ್ ಹಸೀನಾ ಭಾರತದಲ್ಲಿರುವುದು ವೈಯಕ್ತಿಕ ನಿರ್ಧಾರ: ಎಸ್. ಜೈಶಂಕರ್
ತಾತ್ಕಾಲಿಕ ಸರ್ಕಾರವು ತನ್ನ ರಾಜತಾಂತ್ರಿಕ ಬಾಧ್ಯತೆಗಳಿಗೆ ಅನುಗುಣವಾಗಿ ಬಾಂಗ್ಲಾದೇಶದಲ್ಲಿನ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಢಾಕಾದ ಭಾರತೀಯ ಹೈ ಕಮಿಷನ್‌ಗೆ ಬಂದ ಭದ್ರತಾ ಬೆದರಿಕೆಗಳ ಕುರಿತು ಭಾರತ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದೆ ಎಂದು MEA ಹೆಚ್ಚಿಸಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಕುರಿತು ಹರಡುತ್ತಿರುವ ಕಟ್ಟು ಕತೆಯನ್ನು ಭಾರತ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಮಧ್ಯಂತರ ಸರ್ಕಾರವು ಈ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಅರ್ಥಪೂರ್ಣ ಸಾಕ್ಷ್ಯಗಳನ್ನು ಹಂಚಿಕೊಂಡಿಲ್ಲ ಎಂದು ಅದು ಹೇಳಿದೆ.
ಬಾಂಗ್ಲಾದೇಶದ ರಾಜಕೀಯ ನಾಯಕರೊಬ್ಬರು ಭಾರತದ ವಿರುದ್ಧ ಪ್ರಚೋದನಕಾರಿ ಬೆದರಿಕೆ ಹಾಕಿದ ಒಂದು ದಿನದ ನಂತರ ರಾಯಭಾರಿಯನ್ನು ಕರೆಸಲಾಗಿದೆ. ಸೋಮವಾರ ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಿದರೆ, ಅವರ ದೇಶವು ಭಾರತದ ಈಶಾನ್ಯ ರಾಜ್ಯಗಳಾದ ಸೆವೆನ್ ಸಿಸ್ಟರ್ಸ್ ಅನ್ನು ಪ್ರತ್ಯೇಕಿಸಲು ಮತ್ತು ಪ್ರತ್ಯೇಕತಾವಾದಿಗಳಿಗೆ ಆಶ್ರಯ ನೀಡಲು ಪ್ರಯತ್ನಿಸುತ್ತದೆ ಎಂದು ಎಚ್ಚರಿಸಿದರು. ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಿದರೆ, ಪ್ರತಿರೋಧದ ಬೆಂಕಿ ಗಡಿಗಳನ್ನು ಮೀರಿ ಹರಡುತ್ತದೆ ಎಂದು ಅಬ್ದುಲ್ಲಾ ರ‍್ಯಾಲಿಯಲ್ಲಿ ಹೇಳಿದರು.
ಶೇಖ್ ಹಸೀನಾ ಗಡಿಪಾರಿಗೆ ಮುಂದಾಗಿದ್ದ ಬಾಂಗ್ಲಾ
ಭಾರತದಿಂದ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡಲು ಅಂತಾರಾಷ್ಟ್ರೀಯ ಅಪರಾಧಗಳ ವಿರುದ್ಧ ಒಟ್ಟಾಗಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಲು 196 ಸದಸ್ಯ ರಾಷ್ಟ್ರಗಳ ಪೊಲೀಸ್ ಪಡೆಗಳಿಗೆ ಬೆಂಬಲ ನೀಡುವ ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆ (ಇಂಟರ್ ಪೋಲ್)ಯ ನೆರವು ಪಡೆಯಲು ಬಾಂಗ್ಲಾದೇಶ ಮುಂದಾಗಿತ್ತು. ಈ ಕುರಿತು ಐಸಿಟಿಯ ಪ್ರಾಸಿಕ್ಯೂಟರ್ ಬಾಂಗ್ಲಾದೇಶದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.