ಶೇಖ್ ಹಸೀನಾ ಭಾರತದಲ್ಲಿರುವುದು ವೈಯಕ್ತಿಕ ನಿರ್ಧಾರ: ವಿದೇಶಾಂಗ ಸಚಿವ ಎಸ್. ಜೈಶಂಕರ್
Sheikh Hasina staying in India: ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಭಾರತದಲ್ಲಿರುವುದು ಸಂಪೂರ್ಣವಾಗಿ ಅವರ ವೈಯಕ್ತಿಕ ನಿರ್ಧಾರ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪರಿಸ್ಥಿತಿ ಮತ್ತು ಭಾರತ–ಬಾಂಗ್ಲಾದೇಶ ಸಂಬಂಧಗಳ ಕುರಿತು ಅವರು ನೀಡಿದ ಹೇಳಿಕೆ ಗಮನಾರ್ಹವಾಗಿವೆ.
ಶೇಖ್ ಹಸೀನಾ (ಸಂಗ್ರಹ ಚಿತ್ರ) -
ನವದೆಹಲಿ ಡಿ. 6: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಭಾರತದಲ್ಲಿ ವಾಸ್ತವ್ಯ ಹೂಡಿದ್ದು, ಅವರು ಪರಿಸ್ಥಿತಿಗಳ ಪ್ರಭಾವದಿಂದ ನಮ್ಮ ದೇಶಕ್ಕೆ ಬಂದಿರಬಹುದು. ಅದು ಅವರ ವೈಯಕ್ತಿಕ ನಿರ್ಧಾರ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (External Affairs S. Jaishankar) ಹೇಳಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ನಂತರ ನೂರಾರು ಮಂದಿ ಪ್ರಾಣ ಕಳೆದುಕೊಂಡು, ಸಾವಿರಾರು ಮಂದಿ ಗಾಯಗೊಂಡರು. ಪ್ರತಿಭಟನೆ ವಿರುದ್ಧ ಹಸೀನಾ ನೇತೃತ್ವದ ಸರ್ಕಾರ ಉಗ್ರವಾಗಿ ದಮನ ಕೈಗೊಂಡಿತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರಿಗೆ ಢಾಕಾದ ವಿಶೇಷ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತು. ಅವರು ಕಳೆದ ವರ್ಷವೇ ಭಾರತಕ್ಕೆ ಪಲಾಯನ ಮಾಡಿದ್ದರು.
ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದ ಮನವಿಯನ್ನು ನಿರಾಕರಿಸಲು ಭಾರತಕ್ಕೆ ಇದೆಯೇ ಅವಕಾಶ?
ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ ಬಯಸುವಷ್ಟು ಕಾಲ ಭಾರತದಲ್ಲಿ ಉಳಿಯಬಹುದೇ ಎಂಬ ಪ್ರಶ್ನೆಗೆ, ಅದು ಒಂದು ವಿಭಿನ್ನ ವಿಚಾರ, ಅಲ್ಲವೇ? ಅವರು ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಇಲ್ಲಿಗೆ ಬಂದಿದ್ದಾರೆ. ಆ ಪರಿಸ್ಥಿತಿಯು ಅವರ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಕೂಡ ಅವರು (ಶೇಖ್ ಹಸೀನಾ) ತಮ್ಮ ಮನಸ್ಸನ್ನು ನಿರ್ಧರಿಸಬೇಕಾದ ವಿಷಯ ಎಂದು ಹೇಳಿದರು.
ಭಾರತ-ಬಾಂಗ್ಲಾದೇಶ ಸಂಬಂಧ
ನವದೆಹಲಿ ಮತ್ತು ಢಾಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಜೈಶಂಕರ್, ನೆರೆಯ ದೇಶದಲ್ಲಿ ವಿಶ್ವಾಸಾರ್ಹ ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಗತ್ಯದ ಬಗ್ಗೆ ಭಾರತದ ನಿಲುವನ್ನು ಒತ್ತಿ ಹೇಳಿದರು.
ಬಾಂಗ್ಲಾದೇಶದ ಹಿಂದಿನ ರಾಜಕೀಯ ಸಮಸ್ಯೆಗಳನ್ನು ಉಲ್ಲೇಖಿಸಿದ ಜೈಶಂಕರ್, ಬಾಂಗ್ಲಾದೇಶದ ಜನರು, ವಿಶೇಷವಾಗಿ ಈಗ ಅಧಿಕಾರದಲ್ಲಿರುವವರು, ಈ ಹಿಂದೆ ಚುನಾವಣೆಗಳನ್ನು ಹೇಗೆ ನಡೆಸಲಾಗುತ್ತಿತ್ತು ಎಂಬುದರ ಬಗ್ಗೆ ಸಮಸ್ಯೆಯನ್ನು ಹೊಂದಿದ್ದರು ಎಂದು ನಾವು ಕೇಳಿದ್ದೇವೆ. ಹಾಗಾದರೆ, ಸಮಸ್ಯೆ ಚುನಾವಣೆಯದ್ದೇ ಆಗಿದ್ದರೆ, ಮೊದಲ ಕೆಲಸ ನ್ಯಾಯಸಮ್ಮತವಾದ ಚುನಾವಣೆ ನಡೆಸುವುದಾಗಿರುತ್ತದೆ ಎಂದು ಹೇಳಿದರು.
ಶೇಖ್ ಹಸೀನಾ ಗಡಿಪಾರಿಗೆ ಬಾಂಗ್ಲಾ ಒತ್ತಾಯ; ಭಾರತ ಹೇಳಿದ್ದೇನು?
ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಬಗ್ಗೆ ಜೈಶಂಕರ್ ಆಶಾವಾದ ವ್ಯಕ್ತಪಡಿಸಿದರು. ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ ಹೊಂದಿರುವ ಪ್ರಜಾಸತ್ತಾತ್ಮಕ ಆದ್ಯತೆಯನ್ನು ಒತ್ತಿ ಹೇಳಿದರು. ನಾವು ಬಾಂಗ್ಲಾದೇಶಕ್ಕೆ ಶುಭ ಹಾರೈಸುತ್ತೇವೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಯಾವುದೇ ಪ್ರಜಾಸತ್ತಾತ್ಮಕ ದೇಶವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಜನರ ಇಚ್ಛೆಯನ್ನು ಖಚಿತಪಡಿಸಿಕೊಳ್ಳುವುದನ್ನು ನೋಡಲು ಬಯಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಹೊರಬರುವ ಯಾವುದೇ ವಿಷಯವು ಸಂಬಂಧದ ಬಗ್ಗೆ ಸಮತೋಲಿತ ಮತ್ತು ಪ್ರಬುದ್ಧ ದೃಷ್ಟಿಕೋನವನ್ನು ಹೊಂದಿರುತ್ತದೆ. ಸ್ಥಿತಿಗತಿ ಸುಧಾರಿಸುತ್ತದೆ ಎಂಬ ಬಗ್ಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.