ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ; ಸಾವಿಗೆ ಕಾರಣವಾಗಿದ್ದೇನು?

Mountaineer Nirmal Purja Dies: ಖ್ಯಾತ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಸಹ-ಮಾಲೀಕರಾಗಿದ್ದ ಸಾಹಸಯಾತ್ರೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪರ್ವತಾರೋಹಣ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ, ಅವರಿದ್ದ ತಂಡದ ಮೇಲೆ ಹಿಮಕುಸಿತ ಸಂಭವಿಸಿದೆ.

ನಿರ್ಮಲ್ ಪುರ್ಜಾ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್, ಆ. 1: ಖ್ಯಾತ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ (Nirmal Purja) ಪಾಕಿಸ್ತಾನದ (Pakistan) ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಸಹ-ಮಾಲೀಕರಾಗಿದ್ದ ಸಾಹಸಯಾತ್ರೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ನಿರ್ಮಲ್ ಪುರ್ಜಾ 2026ರ ಜುಲೈ 30ರಂದು ಪಾಕಿಸ್ತಾನದ ಬ್ರಾಡ್ ಪೀಕ್ ಪರ್ವತಾರೋಹಣ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಮೃತಪಟ್ಟಿದ್ದಾರೆ, ಇವರಿದ್ದ ತಂಡದ ಮೇಲೆ ಹಿಮಕುಸಿತ ಸಂಭವಿಸಿತು. ಆ ಘಟನೆ ನಡೆದ ಬಳಿಕ ಪರ್ವತಾರೋಹಿಗಳೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನದ ಪರ್ವತಾರೋಹಣ ಅಧಿಕಾರಿಗಳು ತಿಳಿಸಿದ್ದಾರೆ.

ಪುರ್ಜಾ ಅವರ ಒಡೆತನದ ಎಲೈಟ್ ಎಕ್ಸ್‌ಪೆಡ್ ಕಂಪನಿಯು ಪರ್ವತಾರೋಹಿಗಳಾದ ಮಿಂಗ್ಮಾ ಡೇವಿಡ್ ಶೆರ್ಪಾ ಮತ್ತು ತೇಜನ್ (ಟಿಜೆ) ಗುರುಂಗ್ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದೆ.

ಮೌಂಟ್ ಎವರೆಸ್ಟ್ ಶಿಖರದಲ್ಲಿ ಭಾರತೀಯ ಪರ್ವತಾರೋಹಿ ಸಾವು

“ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದ ನಂತರ ನಿರ್ಮಲ್ ನಿಮ್ಸ್‌ದೈ ಪುರ್ಜಾ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ನಾವು ತೀವ್ರ ದುಃಖದಿಂದ ದೃಢಪಡಿಸುತ್ತಿದ್ದೇವೆ. ದಂಡಯಾತ್ರೆಯ ಇತರ ಸದಸ್ಯರು ಕೂಡ ಬದುಕುಳಿಯಲಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಪರ್ವತಾರೋಹಣ ಕ್ಷೇತ್ರವು ತನ್ನ ಶ್ರೇಷ್ಠ ಪರ್ವತಾರೋಹಿಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಧೈರ್ಯ, ವಿನಯ ಮತ್ತು ಮಾನವನ ಸಾಮರ್ಥ್ಯವು ನಾವು ಊಹಿಸುವುದಕ್ಕಿಂತಲೂ ಅಪಾರ ಎಂಬ ಅಚಲ ನಂಬಿಕೆಯ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ನಾಯಕನನ್ನು ಜಗತ್ತು ಕಳೆದುಕೊಂಡಿದೆ. ಅವರ ಅಸಾಧಾರಣ ಸಾಧನೆಗಳಿಗಿಂತಲೂ ಹೆಚ್ಚಾಗಿ, ದೊಡ್ಡ ಕನಸು ಕಾಣಲು ಧೈರ್ಯವಿದ್ದರೆ, ಸ್ವತಃ ತಮ್ಮ ಮೇಲೆ ನಂಬಿಕೆ ಇಟ್ಟರೆ ಮತ್ತು ಯಾವುದೇ ಮಿತಿಗಳನ್ನು ಒಪ್ಪಿಕೊಳ್ಳದೆ ಮುನ್ನಡೆದರೆ ಏನು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸುವುದೇ ಅವರ ಉದ್ದೇಶವಾಗಿತ್ತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿರ್ಮಲ್ ಪುರ್ಜಾ ಯಾರು?

ನಿಮ್ಸ್ ದಾಯ್ ಎಂದೇ ಕರೆಯಲ್ಪಡುವ 43 ವರ್ಷದ ನೇಪಾಳ ಮೂಲದ ಪುರ್ಜಾ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 1983ರ ಜುಲೈ 25 ರಂದು ಗಂಡಕಿ ಪ್ರಾಂತ್ಯದ ಮಯಾಗ್ಡಿ ಜಿಲ್ಲೆಯಲ್ಲಿ ಜನಿಸಿದ ಅವರು ಚಿತ್ವಾನ್‌ನಲ್ಲಿ ಬೆಳೆದರು. ಅವರು 2003ರಲ್ಲಿ ತಮ್ಮ ಮಿಲಿಟರಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

13 ದಿನಗಳಲ್ಲಿ 3 ಬಾರಿ ಎವರೆಸ್ಟ್ ಏರಿ ಸಾಧನೆಗೈದ ಯುವತಿ: ವಿಶ್ವದಾಖಲೆಯ ದಿನ ನೆನೆದು ಭಾವುಕ!

ಗೂರ್ಖಾಗಳೊಂದಿಗೆ ಆರು ವರ್ಷಗಳು ಮತ್ತು ಇಂಗ್ಲೆಂಡ್‌ನ ವಿಶೇಷ ಪಡೆಗಳೊಂದಿಗೆ 10 ವರ್ಷಗಳು ಸೇರಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2019ರಲ್ಲಿ ಕೇವಲ 189 ದಿನಗಳಲ್ಲಿ ವಿಶ್ವದ 14 ಅತಿ ಎತ್ತರದ ಶಿಖರಗಳನ್ನು ಏರುವ ಮೂಲಕ ದಾಖಲೆ ನಿರ್ಮಿಸಿ ಜಾಗತಿಕ ಸುದ್ದಿ ಮಾಧ್ಯಮಗಳಲ್ಲಿ ಸ್ಥಾನ ಪಡೆದರು.

ಅವರ ಸಾಧನೆಯನ್ನು ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘14 ಪೀಕ್ಸ್: ನಥಿಂಗ್ ಈಸ್ ಇಂಪಾಸಿಬಲ್’ನಲ್ಲಿ ವಿವರಿಸಲಾಗಿದೆ. ನಂತರ ಈ ದಾಖಲೆಯನ್ನು 2023ರಲ್ಲಿ ಮುರಿಯಲಾಯಿತು. 2021ರಲ್ಲಿ, ಕೆ2 ಶಿಖರದ ಮೊದಲ ಯಶಸ್ವಿ ಚಳಿಗಾಲದ ಆರೋಹಣವನ್ನು ಪೂರ್ಣಗೊಳಿಸಿದ 10 ನೇಪಾಳಿ ಪರ್ವತಾರೋಹಿಗಳಲ್ಲಿ ಪುರ್ಜಾ ಕೂಡ ಒಬ್ಬರು.

ನೇಪಾಳ ಪರ್ವತಾರೋಹಣ ಸಂಘದ ಮಾಜಿ ಅಧ್ಯಕ್ಷ ಆಂಗ್ ತ್ಸೆರಿಂಗ್ ಶೆರ್ಪಾ ಕೂಡ ಪುರ್ಜಾ ಅವರನ್ನು ವಿಶ್ವದ ಅತ್ಯುತ್ತಮ ಪರ್ವತಾರೋಹಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.