ಮಾಸ್ಕೋ: ನಾಲ್ಕು ವರ್ಷಗಳ ಬಳಿಕ ರಷ್ಯಾವು (Russia) ಉಕ್ರೇನ್ (Ukraine) ಅಧ್ಯಕ್ಷರನ್ನು ಶಾಂತಿ ಮಾತುಕತೆಗಾಗಿ (peace talks) ಆಹ್ವಾನಿಸಿದೆ. 2022ರ ಫೆಬ್ರವರಿ 24ರಂದು ಪ್ರಾರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೂ ಒಂದು ಮುಕ್ತಾಯ ಹಂತ ತಲುಪುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelenskyy) ಅವರನ್ನು ಗುರುವಾರ ರಷ್ಯಾವು ಶಾಂತಿ ಮಾತುಕತೆಗಾಗಿ ಮಾಸ್ಕೋಗೆ (moscow) ಬರಲು ಆಹ್ವಾನಿಸಿರುವುದಾಗಿ ಹೇಳಿದೆ. ಈ ಮೂಲಕ ಸುಮಾರು ನಾಲ್ಕು ವರ್ಷಗಳ ಯುದ್ಧ ಕೊನೆಗೊಳಿಸಲು ಅಮೆರಿಕ ನೇತೃತ್ವದ ಪ್ರಯತ್ನಗಳು ಫಲದಾಯಕವಾಗುತ್ತಿರುವಂತೆ ಕಾಣುತ್ತಿದೆ.
ರಷ್ಯಾದ ಬೃಹತ್ ಸೇನೆಯ ಮುಂದೆ ಮಂಡಿಯೂರದೆ ದೃಢವಾಗಿ ನಿಂತ ಉಕ್ರೇನ್ ಹೋರಾಟ ನಿರ್ಣಾಯಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ಯುದ್ಧ ಕೊನೆಗೊಳಿಸಲು ಅಮೆರಿಕ ತೀವ್ರ ಪ್ರಯತ್ನ ನಡೆಸುತ್ತಿದೆ. ಇದೀಗ ಉಕ್ರೇನ್ ಅನ್ನು ರಷ್ಯಾ ಶಾಂತಿ ಮಾತುಕತೆಗೆ ಆಹ್ವಾನಿಸಿದೆ.
Arijit Singh: ರಾಜಕೀಯಕ್ಕೆ ಅರಿಜಿತ್ ಸಿಂಗ್ ಎಂಟ್ರಿ? ಗಾಯನ ನಿವೃತ್ತಿ ಬೆನ್ನಲ್ಲೇ ದೊಡ್ಡ ನಿರ್ಧಾರ!
ಮಾಸ್ಕೋ ಮತ್ತು ಕೈವ್ ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎನ್ನುವ ವದಂತಿಯ ಬಳಿಕ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಮಾಸ್ಕೋಗೆ ಬರುವಂತೆ ಅಹ್ವಾನ ನೀಡಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷವೂ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ರಷ್ಯಾ ಶಾಂತಿ ಮಾತುಕತೆಗೆ ಬರಲು ಆಹ್ವಾನಿಸಿತ್ತು. ಆದರೆ ಇದನ್ನು ಅವರು ತಿರಸ್ಕರಿಸಿದ್ದರು. ತಮ್ಮ ದೇಶದ ಮೇಲೆ ನಿರಂತರ ಕ್ಷಿಪಣಿ ದಾಳಿಯಾಗುತ್ತಿರುವಾಗ ರಷ್ಯಾದ ರಾಜಧಾನಿಗೆ ಹೋಗಲು ಸಾಧ್ಯವಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಕೈವ್‌ಗೆ ಬರಲಿ ಎಂದು ಅವರು ಹೇಳಿದ್ದರು. ಈ ಬಾರಿಯ ಆಹ್ವಾನಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ ಎಂದು ಕಾದು ನೋಡಬೇಕು.
ಅಬುಧಾಬಿಯಲ್ಲಿ ಕಳೆದ ವಾರಾಂತ್ಯದಲ್ಲಿ ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆಸಿ ಶಾಂತಿ ಒಪ್ಪಂದಕ್ಕೆ ಪ್ರಸ್ತಾಪಿಸಲಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ನಿಲುವಿನಲ್ಲಿ ವ್ಯತ್ಯಾಸ ಇರುವುದರಿಂದ ಯಾವುದೇ ಅಂತಿಮ ನಿರ್ಣಯಕ್ಕೆ ಬರುವುದು ಸಾಧ್ಯವಾಗಲಿಲ್ಲ.
ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬಳಿಕ ಎರಡು ರಾಷ್ಟ್ರಗಳ ನಡುವಿನ ಮಾತುಕತೆಗಳು ವೇಗ ಪಡೆದಿದ್ದು ಝೆಲೆನ್ಸ್ಕಿ ಮತ್ತು ರಷ್ಯಾದ ಅಧ್ಯಕ್ಷರು ಶಾಂತಿ ಒಪ್ಪಂದ ನಡೆಸಲು ಸಿದ್ಧವಾಗಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಈ ನಡುವೆಯೇ ರಷ್ಯಾ ಮತ್ತು ಉಕ್ರೇನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಅಬುಧಾಬಿಯಲ್ಲಿ ಭಾನುವಾರ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತುಂಬಾ ಒಳ್ಳೆಯ ಬೆಳವಣಿಗೆ ನಡೆಯುತ್ತಿದೆ. ಯಾವುದೇ ಒಪ್ಪಂದದಲ್ಲಿ ಯಾರಿಗೆ ಯಾವ ಪ್ರದೇಶ ಸಿಗುತ್ತದೆ, ಯುದ್ಧಾನಂತರದ ವಿಚಾರಕ್ಕೆ ಸಂಬಂಧಿಸಿ ಹಲವಾರು ಭಿನ್ನಾಭಿಪ್ರಾಯಗಳು ಇದ್ದು, ಇವು ಶಾಂತಿ ಮಾತುಕತೆಗಳಿಗೆ ಅಡ್ಡಿಯಾಗುತ್ತಿವೆ. ಪುಟಿನ್ ಒಂದು ವಾರದವರೆಗೆ ಕೈವ್ ಮೇಲೆ ದಾಳಿ ಮಾಡದಿರಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್; ಭಾರತದಲ್ಲೂ ನೂರಾರು ಉದ್ಯೋಗಿಗಳ ಮೇಲೆ ಪರಿಣಾಮ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮಾತನಾಡಿ, ಯಾವ ಪ್ರದೇಶವನ್ನು ಯಾರಿಗೆ ನೀಡಲಾಗುತ್ತದೆ ಎಂಬುದರ ಕುರಿತು ಎರಡೂ ಕಡೆಯವರಲ್ಲೂ ಭಿನ್ನಾಭಿಪ್ರಾಯವಿದೆ. ಇದು ಒಂದೇ ಈಗ ಉಳಿದಿರುವ ಸಮಸ್ಯೆಯಾಗಿದೆ ಎಂದರು.