Sudan Gurung: ನೇಪಾಳದ ಜೆನ್ ಝಿ ಹೋರಾಟಕ್ಕೆ ನೇತೃತ್ವ ವಹಿಸಿದ ಸುಡಾನ್ ಗುರುಂಗ್ ಯಾರು? ಆತನ ಹಿನ್ನೆಲೆ ಏನು?
ಭೂಕಂಪದ ಬಳಿಕ ಪುನರ್ವಸತಿ ಮತ್ತು ತುರ್ತು ಪ್ರತಿಕ್ರಿಯೆಗಳಿಗೆ ಸಹಾಯ ಮಾಡುವ ಹಮಿ ನೇಪಾಳದ ಅಧ್ಯಕ್ಷ ಸುಡಾನ್ ಗುರುಂಗ್ (Sudan Gurung) ಜೆನ್ ಝಿ ಹೋರಾಟಕ್ಕೆ ನೇತೃತ್ವ ವಹಿಸಿದ್ದು, ಇವರು ಸುಮಾರು ಒಂದು ದಶಕದಿಂದ ತಮ್ಮ ಎನ್‌ಜಿಒ ಮೂಲಕ ಅಸಹಾಯಕರಿಗಾಗಿ ದುಡಿಯುತ್ತಿದ್ದಾರೆ.

-

ಕಠ್ಮಂಡು: ಜೆನ್ ಝಿಗಳಿಂದ (Gen Z Protest) ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವುದು ಹಮಿ ನೇಪಾಳದ ಅಧ್ಯಕ್ಷ ಸುಡಾನ್ ಗುರುಂಗ್ (Sudan Gurung). ಜೆನ್ ಝಿ ಮತ್ತು ಯುವಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಳಿಕ ನೇಪಾಳ ಪ್ರಧಾನಿ (Nepal Prime Minister) ಕೆ.ಪಿ. ಶರ್ಮಾ ಒಲಿ (KP Sharma Oli) ಮಂಗಳವಾರ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಈ ಪ್ರತಿಭಟನೆಗೆ ನೇಪಾಳದಾದ್ಯಂತ ಜನರನ್ನು ಒಗ್ಗೂಡಿಸಿದ್ದು ಯುವಕರ ನೇತೃತ್ವದ ಎನ್‌ಜಿಒ ಹಾಮಿ ನೇಪಾಳದ 38 ವರ್ಷದ ಅಧ್ಯಕ್ಷ ಸುಡಾನ್ ಗುರುಂಗ್.
ಯಾರು ಈತ?
ಭೂಕಂಪದ ಬಳಿಕ ಪುನರ್ವಸತಿ ಮತ್ತು ತುರ್ತು ಪ್ರತಿಕ್ರಿಯೆಗಳಿಗೆ ಸಹಾಯ ಮಾಡುವ ಹಮಿ ನೇಪಾಳದ ಅಧ್ಯಕ್ಷರ ಸುಡಾನ್ ಗುರುಂಗ್ ಒಬ್ಬ ಸಮರ್ಪಣಾ ಮನೋಭಾವದವರು. ಇವರು ಸುಮಾರು ಒಂದು ದಶಕದಿಂದ ತಮ್ಮ ಎನ್‌ಜಿಒ ಮೂಲಕ ಅಸಹಾಯಕರಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದಾರೆ.
ಗುರುಂಗ್ ಪ್ರವಾಹ, ಭೂಕುಸಿತ ಮತ್ತು ಭೂಕಂಪಗಳಿಂದ ಪೀಡಿತ ಸಮುದಾಯಗಳಿಗೆ ಅಂತಾರಾಷ್ಟ್ರೀಯ ನಿಧಿ ಮತ್ತು ದೇಣಿಗೆಗಳನ್ನು ಸಂಗ್ರಹಿಸುತ್ತಾರೆ. ಈ ಮೊದಲು ಕಾರ್ಯಕ್ರಮ ನಿರ್ವಾಹಕರಾಗಿದ್ದ ಇವರು ವಿವಿಧ ಪಾರ್ಟಿ, ಕ್ಲಬ್ ಕಾರ್ಯಕ್ರಮ ಆಯೋಜಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2015ರ ಭೂಕಂಪನದಲ್ಲಿ ತಮ್ಮ ಮಗುವನ್ನು ಕಳೆದುಕೊಂಡ ಬಳಿಕ ಅವರು ದೇಶದಲ್ಲಿ ಪರಿಣಾಮಕಾರಿ ತುರ್ತು ಪ್ರತಿಕ್ರಿಯೆ ತಂಡದ ಕೊರತೆಯಿದೆ ಎಂದು ಅರಿತುಕೊಂಡು ಬಳಿಕ ಹಮಿ ನೇಪಾಳ 2020 ಅನ್ನು ರೂಪಿಸಿದರು. ಇದು ಲಾಭರಹಿತ ಸಂಸ್ಥೆಯಾಗಿದ್ದು, 1,600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ: ISIS terrorists arrested: ಇಬ್ಬರು ಶಂಕಿತ ISIS ಭಯೋತ್ಪಾದಕರ ಬಂಧನ; ದೇಶಾದ್ಯಂತ ಚುರುಕಿನ ಕಾರ್ಯಾಚರಣೆ
ಪ್ರತಿಭಟನೆಗಳಲ್ಲಿ ಸುಡಾನ್ ಗುರುಂಗ್ ಪಾತ್ರ
ಗುರುಂಗ್ ಮತ್ತು ಹಮಿ ನೇಪಾಳದ ಸದಸ್ಯರು ಈ ಹಿಂದೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳಿಗೆ ಕರೆ ನೀಡಿದ್ದವು. ಬಳಿಕ ಒಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ಇಳಿದರು. ಸೆಪ್ಟೆಂಬರ್ 4ರಂದು ಸರ್ಕಾರ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ ಅನಂತರ ಈ ಪ್ರತಿಭಟನೆಗಳು ತೀವ್ರಗೊಂಡವು. ಹೀಗಾಗಿ ಒಲಿ ಸರ್ಕಾರ ಸೋಮವಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಿತು.