ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸರ್ವೋಚ್ಚ ನಾಯಕನೋ? ಅಧ್ಯಕ್ಷರೋ? ಇರಾನ್ ಆಡಳಿತ ಯಾರ ಕೈಯಲ್ಲಿ?

ಇಸ್ಲಾಮಿಕ್ ಗಣರಾಜ್ಯವಾಗಿ ಗುರುತಿಸಿಕೊಂಡಿರುವ ಇರಾನ್ ದೇಶದ ಆಡಳಿತ ನಿಜವಾಗಿಯೂ ಯಾರ ಕೈಯಲ್ಲಿರುತ್ತದೆ. ದೇಶದಲ್ಲಿ ಸರ್ವೋಚ್ಚ ನಾಯಕನ ಅಧಿಕಾರವೇನು, ರಾಷ್ಟ್ರಾಧ್ಯಕ್ಷರ ಅಧಿಕಾರ ಎಷ್ಟಿದೆ ? ಒಟ್ಟಾರೆಯಾಗಿ ದೇಶದ ಆಡಳಿತ ವ್ಯವಸ್ಥೆ ಹೇಗಿದೆ? 1979ರ ಅನಂತರ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಏನು ? ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಗ್ರಹ ಚಿತ್ರ

ಟೆಹ್ರಾನ್: ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ಇರಾನ್ (Iran) ನ ಸರ್ವೋಚ್ಚ ನಾಯಕ (supreme leader) ಅಯತೊಲ್ಲಾ ಅಲಿ ಖಮೇನಿಯನ್ನು (Ayatollah Ali Khamenei) ಹತ್ಯೆಗೈದ ಬಳಿಕ ಇರಾನ್ ಆಡಳಿತ ವ್ಯವಸ್ಥೆಯ ಕುರಿತು ಸಾಕಷ್ಟು ಕುತೂಹಲ ಉಂಟಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಭಿನ್ನವಾಗಿರುವ ಇಲ್ಲಿನ ರಾಜಕೀಯ ಇತಿಹಾಸದಲ್ಲಿ 1979 ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ರಾಜಪ್ರಭುತ್ವ ವ್ಯವಸ್ಥೆಯು ಕೊನೆಗೊಂಡು ಇರಾನ್ ಇಸ್ಲಾಮಿಕ್ ಗಣರಾಜ್ಯವಾಗಿ (Islamic Republic) ಗುರುತಿಸಲ್ಪಟ್ಟ ವರ್ಷವಿದು. ಇಲ್ಲಿನ ಆಡಳಿತ ಧಾರ್ಮಿಕ ನಾಯಕರ ಕೈಯಲ್ಲಿದ್ದು, ಇದಕ್ಕಾಗಿ ಇಲ್ಲಿ ಚುನಾವಣೆ ನಡೆಯುತ್ತದೆ. ದೇಶವು ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷನನ್ನು ಹೊಂದಿದ್ದು, ಇವರಿಬ್ಬರ ನಡುವೆ ಅಧಿಕಾರ ಹಂಚಿಕೆಯಾಗಿರುವುದಿಲ್ಲ.

ಆ ವರ್ಷ ಏನಾಗಿತ್ತು?

1979ರಲ್ಲಿ ಟೆಹ್ರಾನ್‌ನ ಬೀದಿಗಳು ಜನರಿಂದ ತುಂಬಿತ್ತು. 1953ರ ದಂಗೆಯ ಅನಂತರ ಯುಎಸ್ ಮತ್ತು ಯುಕೆಯಿಂದ ಬೆಂಬಲಿತವಾಗಿದ್ದ ಶಾ ಮೊಹಮ್ಮದ್ ರೆಜಾ ಪಹ್ಲವಿ ಅವರನ್ನು ಅಧಿಕಾರದಿಂದ ಇಳಿಸಿ ಧರ್ಮಗುರು ರುಹೊಲ್ಲಾ ಖೊಮೇನಿ ಅವರನ್ನು ಅಧಿಕಾರಕ್ಕೆ ತರಲಾಯಿತು. ಇದರ ಬಳಿಕ ರಾಜಪ್ರಭುತ್ವ ಕೊನೆಯಾಗಿ ಗಣರಾಜ್ಯವಾಗಿ ಇರಾನ್ ಗುರುತಿಸಿಕೊಂಡಿತ್ತು. ಇರಾನ್ ಕೇವಲ ಗಣರಾಜ್ಯವಲ್ಲ. ಅದನ್ನು 'ಇಸ್ಲಾಮಿಕ್ ಗಣರಾಜ್ಯ' ಎಂದು ಕರೆಯಲಾಗುತ್ತದೆ. ಈ ಮೂಲಕ ಅದು ಎರಡು ವಿಚಾರಗಳನ್ನು ಒಂದು ಮಾಡಿದೆ. ಅಂದರೆ ಪ್ರಜಾಪ್ರಭುತ್ವ ಮಾದರಿಯ ಚುನಾವಣೆಯೊಂದಿಗೆ ಧಾರ್ಮಿಕ ಆಡಳಿತಕ್ಕೂ ಆದ್ಯತೆ ಕೊಡುತ್ತದೆ.

ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವು ಬಹುತೇಕ ಸ್ಥಗಿತ: ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಸಂಕಷ್ಟ

ಇಸ್ಲಾಮಿಕ್ ಗಣರಾಜ್ಯದ ವೈಶಿಷ್ಟ್ಯ

ಇದರ ವಿಶೇಷತೆ ಎಂದರೆ ಇಲ್ಲಿ ನಾಗರಿಕರು ನಾಯಕರು ಮತ್ತು ಶಾಸಕರನ್ನು ಆಯ್ಕೆ ಮಾಡುತ್ತಾರೆ. ಅವರು ಅಧ್ಯಕ್ಷರು ಅಥವಾ ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡುತ್ತಾರೆ. ಸಂಸತ್ತಿನ ಮೂಲಕ ಕಾನೂನುಗಳನ್ನು ರಚಿಸಲಾಗುತ್ತದೆ. ಇದರ ಮೇಲೆ ಶಿಯಾ ಇಸ್ಲಾಮಿಕ್ ಸಿದ್ಧಾಂತದಂತೆ ಧಾರ್ಮಿಕ ನಾಯಕರು ಇದ್ದಾರೆ. 1979ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಂಗೀಕರಿಸಲ್ಪಟ್ಟ ದೇಶದ ಸಂವಿಧಾನವು ಸಾರ್ವಭೌಮತ್ವವು ಅಧಿಕಾರವನ್ನು ಧಾರ್ಮಿಕ ನಾಯಕರಿಗೆ ನೀಡಿರುವುದಾಗಿ ಘೋಷಿಸುತ್ತದೆ.

ರಾಜಕೀಯ ಅಧಿಕಾರವು ಇಸ್ಲಾಮಿಕ್ ಕಾನೂನು ಮತ್ತು ಮೌಲ್ಯಗಳೊಂದಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಲು ಹಿರಿಯ ಇಸ್ಲಾಮಿಕ್ ವಿದ್ವಾಂಸರನ್ನು ಒಳಗೊಂಡ ತಂಡವಿದೆ. ಇವರೇ ದೇಶದ ಆಡಳಿತವನ್ನು ಮುನ್ನಡೆಸುತ್ತಾರೆ. ಈ ವಿಧಾನವನ್ನು 'ನ್ಯಾಯಾಧೀಶರ ರಕ್ಷಕತ್ವ' (ವೆಲಾಯತ್-ಇ ಫಕಿಹ್) ಎಂದು ಕರೆಯಲಾಗುತ್ತದೆ. ಇದರಲ್ಲಿ ಸರ್ವೋಚ್ಚ ನಾಯಕನಿರುತ್ತಾನೆ.

ಸರ್ವೋಚ್ಚ ನಾಯಕನ ಅಧಿಕಾರ

ವೆಲಾಯತ್-ಎ-ಫಕಿಹ್ ಕಲ್ಪನೆಯು 1979ಕ್ಕಿಂತಲೂ ಮೊದಲೇ ಇತ್ತು. ಶಿಯಾ ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ ಇದು ಅನೇಕ ಶತಮಾನಗಳಿಂದಲೂ ಅಸ್ತಿತ್ವದಲ್ಲಿರುವ ಬಗ್ಗೆ ಉಲ್ಲೇಖವಿದೆ. ಹಿರಿಯ ಇಸ್ಲಾಮಿಕ್ ವಿದ್ವಾಂಸರು ಧಾರ್ಮಿಕ ದತ್ತಿಗಳನ್ನು ಮೇಲ್ವಿಚಾರಣೆ, ಅನಾಥರ ಹಿತಾಸಕ್ತಿಗಳನ್ನು ರಕ್ಷಿಸುವುದು, ಕಾನೂನು ಪ್ರಶ್ನೆಗಳಲ್ಲಿ ಸಮುದಾಯಕ್ಕೆ ಮಾರ್ಗದರ್ಶನ ನೀಡುವುದು ಮೊದಲಾದ ವಿಷಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಈ ಕಲ್ಪನೆಯನ್ನು 1960 ಮತ್ತು 70 ರ ದಶಕಗಳಲ್ಲಿ ವಿಸ್ತರಿಸಿದವರು ರುಹೊಲ್ಲಾ ಖೊಮೇನಿ. ಅವರು ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರು ಸಮಾಜವನ್ನು ಆಧ್ಯಾತ್ಮಿಕವಾಗಿ ಮಾರ್ಗದರ್ಶನ ಮಾಡಬಾರದು, ವಾಸ್ತವವಾಗಿ ರಾಜ್ಯವನ್ನು ಆಳಬೇಕು ಎಂದು ವಾದಿಸಿದ್ದರು. ಇದರ ಪರಿಣಾಮ 1979ರಲ್ಲಿ ಇರಾನ್ ನಲ್ಲಿ ನಡೆದ ಕ್ರಾಂತಿ ಸರ್ವೋಚ್ಚ ನಾಯಕನ ಹುದ್ದೆಯನ್ನು ಸೃಷ್ಟಿಸಿತ್ತು.

ಅಧ್ಯಕ್ಷ ಮತ್ತು ಸರ್ವೋಚ್ಚ ನಾಯಕ

ಇರಾನ್‌ನ ಅಧ್ಯಕ್ಷರನ್ನು ಸಾರ್ವಜನಿಕರು ಆಯ್ಕೆ ಮಾಡುತ್ತಾರೆ. ಇವರು ದೇಶದ ಆಡಳಿತವನ್ನು ಮುನ್ನಡೆಸುತ್ತಾರೆ. ಈಗ ಆ ಹುದ್ದೆಯನ್ನು ಮಸೌದ್ ಪೆಜೆಶ್ಕಿಯಾನ್ ವಹಿಸಿಕೊಂಡಿದ್ದಾರೆ. ಅವರು ಸಂಪುಟವನ್ನು, ಆರ್ಥಿಕತೆಯನ್ನು ನಿರ್ವಹಿಸುತ್ತಾರೆ ಮತ್ತು ರಾಜತಾಂತ್ರಿಕ ವಿಷಯಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ.

ಖಮೇನಿ ಹತ್ಯೆಯ ಬಗ್ಗೆ ಭಾರತದ ನಿಲುವನ್ನು ಟೀಕಿಸಿದ ಸೋನಿಯಾ ಗಾಂಧಿ; ಕಾಂಗ್ರೆಸ್‌ ನಾಯಕಿ ಕಾಶ್ಮೀರವನ್ನು ಉಲ್ಲೇಖಿಸಿದ್ದೇಕೆ?

ಅಧ್ಯಕ್ಷನಿಗಿಂತಲೂ ಮೇಲೆ ಸರ್ವೋಚ್ಚ ನಾಯಕನಿರುತ್ತಾನೆ. ರುಹೊಲ್ಲಾ ಖೊಮೇನಿ ಬಳಿಕ ಅಯತೊಲ್ಲಾ ಅಲಿ ಖಮೇನಿ ಇರಾನ್ ನ ಸರ್ವೋಚ್ಚ ನಾಯಕನಾಗಿ ಅಧಿಕಾರದಲ್ಲಿದ್ದರು. ಸರ್ವೋಚ್ಚ ನಾಯಕನನ್ನು ನೇರ ಸಾರ್ವಜನಿಕ ಮತದ ಮೂಲಕ ಆಯ್ಕೆ ಮಾಡಲಾಗುವುದಿಲ್ಲ. ಅವರನ್ನು ತಜ್ಞರ ಸಭೆ ಎಂದು ಕರೆಯಲ್ಪಡುವ ಚುನಾಯಿತ ಧಾರ್ಮಿಕ ನಾಯಕರ ಮಂಡಳಿಯಿಂದ ಆಯ್ಕೆ ಮಾಡಲಾಗುತ್ತದೆ. ಇವರ ಅಧಿಕಾರ ವ್ಯಾಪ್ತಿ ವಿಶಾಲವಾಗಿದೆ. ಇವರು ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುತ್ತಾರೆ. ದೇಶದ ನ್ಯಾಯಾಂಗ, ರಾಜ್ಯ ಮಾಧ್ಯಮ ಮತ್ತು ಕ್ರಾಂತಿಕಾರಿ ಗಾರ್ಡ್ ಸೇರಿದಂತೆ ಪ್ರಮುಖ ಮಿಲಿಟರಿ ಸಂಸ್ಥೆಗಳ ಮುಖ್ಯಸ್ಥರನ್ನು ನೇಮಿಸುತ್ತಾರೆ. ರಕ್ಷಣೆ, ವಿದೇಶಾಂಗ ನೀತಿ ಮತ್ತು ವಿಶಾಲ ರಾಷ್ಟ್ರೀಯ ನಿರ್ದೇಶನದ ವಿಷಯಗಳಲ್ಲಿ ಇವರ ಆದೇಶವೇ ಅಂತಿಮವಾಗಿರುತ್ತದೆ. ಅಧ್ಯಕ್ಷರು ನೀತಿಯನ್ನು ರೂಪಿಸಿದರೆ ಸರ್ವೋಚ್ಚ ನಾಯಕ ಅದಕ್ಕೆ ಮನ್ನಣೆ ನೀಡಿದರೆ ಮಾತ್ರ ಅದು ಕಾನೂನಾಗಿ ಪರಿವರ್ತನೆಯಾಗುತ್ತದೆ.

ಇರಾನಿನ ಈ ರಾಜಕೀಯ ವ್ಯವಸ್ಥೆಯು ಮತ್ತೆ ದೇಶದಲ್ಲಿ ರಾಜಪ್ರಭುತ್ವ ಬರುವುದನ್ನು ತಡೆಯಲು ಮತ್ತು ಇಸ್ಲಾಮಿಕ್ ತತ್ತ್ವಗಳನ್ನು ಮುನ್ನಡೆಸಲು ರೂಪಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author