ವಾಷಿಂಗ್ಟನ್, ಏ. 22: ಅಮೆರಿಕ ಮತ್ತು ಇರಾನ್ (US - Iran) ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಎರಡನೇ ಹಂತದ ಶಾಂತಿ ಮಾತುಕತೆ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ಅಮೆರಿಕದ ಪ್ರಸ್ತಾವನೆಗಳಿಗೆ ಇರಾನ್ ಸೂಕ್ತ ಪ್ರತಿಕ್ರಿಯೆ ನೀಡದ ಕಾರಣ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (US Vice President JD Vance) ತಮ್ಮ ಇಸ್ಲಾಮಾಬಾದ್ ಪ್ರವಾಸವನ್ನು ಸದ್ಯಕ್ಕೆ ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ವೈಟ್ ಹೌಸ್ ಮೂಲಗಳ ಪ್ರಕಾರ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಂಗಳವಾರ (ಏಪ್ರಿಲ್ 21) ಬೆಳಗ್ಗೆ ಇಸ್ಲಾಮಾಬಾದ್‌ಗೆ ಹೊರಡಬೇಕಿತ್ತು. ಆದರೆ ಇರಾನ್‌ನ ನಿಲುವಿನಿಂದಾಗಿ ಅವರು ಅಮೆರಿಕದಲ್ಲೇ ಉಳಿದು ಪ್ರಮುಖ ನೀತಿ ನಿರೂಪಣಾ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ, ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಕೂಡ ಇಸ್ಲಾಮಾಬಾದ್‌ಗೆ ಹೋಗುವ ಬದಲು ವಾಷಿಂಗ್ಟನ್‌ಗೆ ಮರಳುತ್ತಿರುವುದು ವಿಮಾನಯಾನದ ದತ್ತಾಂಶಗಳಿಂದ ತಿಳಿದುಬಂದಿದೆ.
“ನೀವು ನಾಶ ಮಾಡಿದ್ದಕ್ಕಿಂತ ವೇಗವಾಗಿ ಪುನರ್‌ನಿರ್ಮಾಣ ಮಾಡುತ್ತೇವೆ”: ಅಮೆರಿಕ-ಇಸ್ರೇಲ್‌ಗೆ ಇರಾನ್ ಸವಾಲು
ಇರಾನ್‌ನ ಆಕ್ಷೇಪ ಮತ್ತು ಆರೋಪ
ಇತ್ತ ಇರಾನ್, ಮಾತುಕತೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇದುವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಘೈ ಮಾತನಾಡಿ, "ಅಮೆರಿಕದ ವಿರೋಧಾಭಾಸದ ಸಂದೇಶಗಳು ಮತ್ತು ಅಸಮಂಜಸ ನಡವಳಿಕೆಯಿಂದಾಗಿ ನಾವು ಈ ನಿರ್ಧಾರ ತಳೆದಿದ್ದೇವೆ. ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನಡೆಸುತ್ತಿರುವ ನೌಕಾ ದಿಗ್ಬಂಧನವು 'ಸಮುದ್ರ ಕಡಲ್ಗಳ್ಳತನ' ಮತ್ತು 'ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಗಡುವು ಸಮೀಪಿಸುತ್ತಿದ್ದರೂ ಮುಂದುವರಿದ ಬಿಕ್ಕಟ್ಟು
ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮಾಹಿತಿ ಸಚಿವ ಅಟಾವುಲ್ಲಾ ತರಾರ್, ಇರಾನ್ ತನ್ನ ಭಾಗವಹಿಸುವಿಕೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ ಎಂದು ಖಚಿತಪಡಿಸಿದ್ದಾರೆ. ಈ ಮಧ್ಯೆ ಬುಧವಾರ (ಏಪ್ರಿಲ್ 22) ಡೊನಾಲ್ಡ್ ಟ್ರಂಪ್ ಕದನ ವಿರಾಮದ ಅವಧಿ ವಿಸ್ತರಿಸಿದ್ದಾರೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅಮೆರಿಕ ನಿರೀಕ್ಷಿಸಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ರಾಜತಾಂತ್ರಿಕ ಪರಿಹಾರದ ಹಾದಿ ಕಠಿಣವಾಗಿ ಕಂಡುಬರುತ್ತಿದೆ. ಮಾತುಕತೆ ನಡೆಯದಿದ್ದರೆ ಟ್ರಂಪ್ ಆಡಳಿತವು ಮುಂದಿನ ಯಾವ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.