Valentine’s Day Celebration: ಅದ್ದೂರಿಯಾಗಿ, ಅರ್ಥಪೂರ್ಣವಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿದ ಅಲ್ಬನಿಯ ಕನ್ನಡಿಗರು!
Valentine’s Day Celebration: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿ ಕನ್ನಡ ಸಂಘದಿಂದ ವ್ಯಾಲೆಂಟೈನ್ಸ್ ಡೇ ಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಲವು ಆಟಗಳು, ನೃತ್ಯ, ಸಂಗೀತ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


-ಬೆಂಕಿ ಬಸಣ್ಣ, ನ್ಯೂ ಯಾರ್ಕ್
ನ್ಯೂಯಾರ್ಕ್: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿ ಕನ್ನಡ ಸಂಘದಿಂದ ವ್ಯಾಲೆಂಟೈನ್ಸ್ ಡೇ ಯನ್ನು (Valentines Day Celebration) ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತದಲ್ಲಿ ʼವ್ಯಾಲೆಂಟೈನ್ಸ್ ಡೇʼ ಅಂದರೆ ʼಪ್ರೇಮಿಗಳ ದಿವಸʼ, ಅಂದು ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡುವ, ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳುವ ದಿನವೆಂಬ ತಪ್ಪು ಅಭಿಪ್ರಾಯವಿದೆ. ಆದರೆ ವ್ಯಾಲೆಂಟೈನ್ಸ್ ಡೇ ಪ್ರಾರಂಭವಾಗಿದ್ದು ಇಟಲಿ ದೇಶದ ರೋಮ್ ನಲ್ಲಿದ್ದ ಸಂತ ವ್ಯಾಲೆಂಟೈನ್ಸ್ ಅವರ ನೆನಪಿಗಾಗಿ.
ಇತಿಹಾಸದಲ್ಲಿ ʼವ್ಯಾಲೆಂಟೈನ್ʼ ಎಂಬ ಹೆಸರಿನ ಎರಡು ಅಥವಾ ಮೂರು ಜನ ಕ್ರಿಶ್ಚಿಯನ್ ಪಾದ್ರಿಗಳು ಸಿಗುತ್ತಾರೆ. ಇವರಲ್ಲಿ ಅತ್ಯಂತ ಪ್ರಸಿದ್ಧನಾದವನು ಇಟಲಿ ದೇಶದ ರೋಮ್‌ನಲ್ಲಿದ್ದ ಸಂತ ವ್ಯಾಲೆಂಟೈನ್. ಈತನು ದಂಪತಿಗಳಿಗೆ ಅದರಲ್ಲೂ ವಿಶೇಷವಾಗಿ ಸಮಾಜದಿಂದ ಬಹಿಷ್ಕಾರಗೊಂಡಿದ್ದ ಸೈನಿಕರಿಗೆ ಗುಪ್ತವಾಗಿ ಮದುವೆ ಮಾಡಿಸುತ್ತಿದ್ದನು. ಈ ವಿಷಯ ತಿಳಿದು ಕೆಂಡಮಂಡಲನಾದ ರಾಜ ಸೀಜರ್ ಕ್ಲಾಡಿಯಸ್ II ಇವನನ್ನು ಸೆರೆಮನೆಗೆ ಹಾಕಿಸಿ ನಂತರ ಫೆಬ್ರವರಿ 14, 269 AD ರಂದು ಶಿರಚ್ಛೇದನ ಮಾಡಿಸಿದನು. ಈ ಸಂತನ ಸ್ಮರಣೆಯ ಪ್ರಯುಕ್ತ ಫೆಬ್ರವರಿ 14ರಂದು ʼವ್ಯಾಲೆಂಟೈನ್ಸ್ ಡೇʼ ಆಚರಿಸಲಾಗುತ್ತದೆ.

ಅಲ್ಬನಿ ಕನ್ನಡ ಸಂಘಕ್ಕೆ ಹೊಸದಾಗಿ ಅಧ್ಯಕ್ಷರಾಗಿರುವ ಜ್ಯೋತಿ ಧರಣಿ ಮುರುಂಡಿ ಅವರು ಏನಾದರೂ ಹೊಚ್ಚ ಹೊಸ ನವೀನ ಕಾರ್ಯಕ್ರಮವನ್ನು ಪ್ರಾರಂಭಿಸಬೇಕೆಂಬ ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಾಗ ಕನ್ನಡ ಸಂಘದ ಕಾರ್ಯಕಾರಿಣಿ ಸಮಿತಿಯು ಹಿಂದೆ ಎಂದು ಮಾಡದಿರದ ʼವ್ಯಾಲೆಂಟೈನ್ಸ್ ಡೇʼ ಆಯೋಜಿಸಲು ನಿರ್ಧಾರ ಮಾಡಿತು.

ಈ ಕಾರ್ಯಕ್ರಮವನ್ನು ಕೇವಲ ಮದುವೆಯಾಗದ ಪ್ರೇಮಿಗಳಿಗೆ ಮತ್ತು ಮದುವೆಯಾದ ದಂಪತಿಗಳಿಗೆ ಮಾತ್ರ ಸೀಮಿತಗೊಳಿಸದೇ, ಇದರಲ್ಲಿ ಮಕ್ಕಳು ಮತ್ತು ಅಜ್ಜ-ಅಜ್ಜಿಯರು ಸಹ ಭಾಗವಹಿಸುವಂತೆ ಮಾಡಿ ಒಂದು ಒಳ್ಳೆಯ ಸಂಪೂರ್ಣ ಫ್ಯಾಮಿಲಿ ಫಂಕ್ಷನ್ ರೀತಿಯಲ್ಲಿ ಆಚರಿಸಲಾಯಿತು. ಕಾರಣ ʼಪ್ರೀತಿʼ ಎಂದರೆ ಹುಡುಗ ಮತ್ತು ಹುಡುಗಿಯರ ಮಧ್ಯೆ ಇರುವ ಸಂಬಂಧದ ಸೀಮಿತ ಅರ್ಥವಲ್ಲ. ಇದು ಪ್ರತಿಯೊಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವ, ಅಕ್ಕರೆ, ಕಾಳಜಿ ಮಾಡುವ ಜವಾಬ್ದಾರಿ.
ಅಲ್ಬನಿ ಕನ್ನಡ ಸಂಘದ ವ್ಯಾಲೆಂಟೈನ್ಸ್ ಡೇ ಕಾರ್ಯಕ್ರಮದಲ್ಲಿ ಮೂರ್ನಾಲ್ಕು ವರ್ಷದ ಚಿಕ್ಕ ಮಕ್ಕಳಿಂದ ಹಿಡಿದು 87 ವರ್ಷದ ಅಜ್ಜಿಯು ಸಹಿತ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಪ್ರವೀಣ್ ರಾವ್ ಅವರ 87 ವರ್ಷದ ತಾಯಿ ಮತ್ತು 85 ವರ್ಷದ ಅತ್ತೆ ಇಬ್ಬರು ಸಹಿತ ತುಂಬಾ ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಲವು ಆಟಗಳು, ನೃತ್ಯಗಳು, ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಬೆಂಕಿ ಬಸಣ್ಣ ಅವರು ʼಟ್ರಿಕಿ ಪ್ರಶ್ನೆಗಳುʼ ಎಂಬ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸುಚಿತಾ ಜಾಜು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಬೃಂದಾ, ಚೈತಾಲಿ, ಅಲ್ಪ ಗೌಡ, ಸೌಮ್ಯ, ಶ್ಯಾಮ್ ಹಾಗೂ ಇತರರು ತಮ್ಮ ಮಧುರ ಗಾಯನದಿಂದ ಎಲ್ಲರ ಮನಸೂರೆಗೊಳಿಸಿದರು. ಸುಚಿತಾ ಜಾಜು, ಉಮಾ ಬೆಂಕಿ ಮತ್ತು ದೀಪಾ ಅಭಿಷೇಕ್ ದಂಪತಿಗಳಿಗೆ ಫನ್ ಗೇಮ್ಸ್ ಆಯೋಜಿಸಿದ್ದರು. ಡಿಜೆಯಾಗಿ ದೀಪಾ ಪ್ರದೀಪ್ ಎಲ್ಲರನ್ನು ರಂಜಿಸಿದರು.
ಈ ಸುದ್ದಿಯನ್ನೂ ಓದಿ | Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!
ಡಾ. ಸೌಮ್ಯ ಮತ್ತು ಡಾ. ರಾಹುಲ್, ದೀಪ ಮತ್ತು ಅಭಿಷೇಕ್, ಚೈತಾಲಿ ಮತ್ತು ಅಜಯ್, ಬೃಂದಾ ಮತ್ತು ನಕುಲ್ ಹೀಗೆ ಅನೇಕ ಜೋಡಿಗಳ ನೃತ್ಯಗಳು ಎಲ್ಲರ ಗಮನ ಸೆಳೆದವು. ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಕನ್ನಡಿಗರು ಮಾತ್ರವಲ್ಲದೇ, ಮರಾಠಿಗರು, ತೆಲುಗಿನವರು, ಹಿಂದಿ ಭಾಷಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರೈಸಿಟಿ ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟ್ ತುಮು ದಂಪತಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಸಂಜೆಯ ತಿಂಡಿ ಹಾಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ʼಪ್ರೀತಿʼ ಯ ಸಂಕೇತವಾದ ವ್ಯಾಲೆಂಟೈನ್ಸ್ ಡೇ ಯನ್ನು ಅಲ್ಬನಿಯಲ್ಲಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.