ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IMF Lending: ಪಾಕಿಸ್ತಾನಕ್ಕೆ ಸಾಲ ನೀಡುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿರುವುದೇಕೆ?

ಭಾರತದ ವಿರೋಧದ ನಡುವೆಯೂ ಐಎಂಎಫ್ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಇದೀಗ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂ. ಎರಡನೇ ಸಾಲದ ಕಂತನ್ನು ನೀಡಲು ಅನುಮೋದನೆ ನೀಡಿದೆ. ಪಾಕಿಸ್ತಾನಕ್ಕೆ ನೀಡುವ ಹಣಕಾಸಿನ ನೆರವು ನೀಡುವ ಬಗ್ಗೆ ಈ ಹಿಂದೆ ಭಾರತ ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿತ್ತು. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳಲ್ಲಿ ಮಿಲಿಟರಿ ಪಾತ್ರದ ಕುರಿತು ಎಚ್ಚರಿಕೆಯನ್ನೂ ನೀಡಿತ್ತು.

ಪಾಕಿಸ್ತಾನಕ್ಕೆ IMF ಸಾಲ- ಭಾರತದ ಆತಂಕವೇನು?

ನವದೆಹಲಿ: ಪಾಕಿಸ್ತಾನಕ್ಕೆ (Pakistan) ಸಾಲ ನೀಡಬಾರದು ಎಂದು ಭಾರತ ಒತ್ತಾಯಿಸುತ್ತಲೇ ಇದ್ದರೂ ಇದೀಗ ಐಎಂಎಫ್ (International Monetary Fund) ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂ. ಸಾಲ ಮಂಜೂರು ಮಾಡಿದೆ. ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ಕುರಿತು ಐಎಂಎಫ್ ನಡೆಸಿದ ಮತದಾನ ಪ್ರಕ್ರಿಯೆ ವೇಳೆ ಭಾರತ ದೂರವೇ ಉಳಿದಿತ್ತು. ಯಾಕೆಂದರೆ ಪಾಕಿಸ್ತಾನ ಹಿಂದೆ ಮಾಡಿರುವ ಐಎಂಎಫ್ ಸಾಲಗಳು (IMF loans) ಮತ್ತು ಗಡಿಯಾಚೆಗೆ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ಇದಕ್ಕೆ ಮುಖ್ಯ ಕಾರಣ. ಪಾಕಿಸ್ತಾನದ ಆಡಳಿತ ಮತ್ತು ಮಿಲಿಟರಿ ಮೇಲೆ ಕೇಂದ್ರೀಕರಿಸಿ ಈಗ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಿದೆ.

ಐಎಂಎಫ್ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಇದೀಗ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂ. ಎರಡನೇ ಸಾಲದ ಕಂತನ್ನು ನೀಡಲು ಅನುಮೋದನೆ ನೀಡಿದೆ. ಪಾಕಿಸ್ತಾನವು 1.3 ಬಿಲಿಯನ್ ಡಾಲರ್ ಸಾಲಕ್ಕಾಗಿ ಐಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಅದರಲ್ಲಿ ಈಗ 1 ಬಿಲಿಯನ್ ಡಾಲರ್ ಅನ್ನು ಮಂಜೂರು ಮಾಡಿದೆ.

ಪಾಕಿಸ್ತಾನಕ್ಕೆ ನೀಡುವ ಹಣಕಾಸಿನ ನೆರವಿನ ಬಗ್ಗೆ ಈ ಹಿಂದೆ ಭಾರತ ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿತ್ತು. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳಲ್ಲಿ ಮಿಲಿಟರಿ ಪಾತ್ರದ ಕುರಿತು ಎಚ್ಚರಿಕೆಯನ್ನೂ ನೀಡಿತ್ತು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಪಾಯಗಳು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಗೆ ಅದರಿಂದ ಎದುರಾಗಬಹುದಾದ ತೊಂದರೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿತ್ತು.

ಹಿಂದೆ ಪಡೆದಿರುವ ಸಾಲವನ್ನು ಅದು ಸರಿಯಾಗಿ ಬಳಸಿಕೊಂಡಿದ್ದರೆ ಇದ್ದಕ್ಕಾಗಿ ಉತ್ತಮ ಆರ್ಥಿಕ ನೀತಿಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರೆ ಪಾಕಿಸ್ತಾನವು ಮತ್ತೊಮ್ಮೆ ವಿಸ್ತೃತ ನಿಧಿ ಸೌಲಭ್ಯಕ್ಕಾಗಿ ಐಎಂಎಫ್ ಅನ್ನು ಸಂಪರ್ಕಿಸುತ್ತಿರಲಿಲ್ಲ ಎಂದು ಹೇಳಿರುವ ಭಾರತದ ಹಣಕಾಸು ಸಚಿವಾಲಯ, ನಿಧಿಯ ಕಾರ್ಯಕ್ರಮ ವಿನ್ಯಾಸಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳು ದೇಶದ ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಹೊಂದಿಕೊಳ್ಳುತ್ತವೆಯೇ ಎಂದು ಪ್ರಶ್ನಿಸಿತ್ತು.

ಭಾರತದ ಕಳವಳ ಕೇವಲ ಪಾಕಿಸ್ತಾನದ ಆರ್ಥಿಕ ಸಮಸ್ಯೆ ಮಾತ್ರ ಆಗಿರಲಿಲ್ಲ. ಅದು ಆಡಳಿತ, ಪಾಕಿಸ್ತಾನದ ಆರ್ಥಿಕ ವಿಷಯಗಳಲ್ಲಿ ಮಿಲಿಟರಿ ಪಾತ್ರದ ಕುರಿತು ಕೇಂದ್ರೀಕರಿಸಿದವು. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳಲ್ಲಿ ಸೇನೆಯ ಆಳವಾಗಿ ಹಸ್ತಕ್ಷೇಪ ಮಾಡುತ್ತಿದೆ. ಇದು ನೀತಿ ಜಾರಿಗೆ ಮತ್ತು ದೇಶದ ಪ್ರಗತಿಗೆ ಅಪಾಯಗಳನ್ನು ಒಡ್ಡುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಮಿಲಿಟರಿ ಸಂಬಂಧಿತ ವ್ಯವಹಾರಗಳನ್ನು "ಪಾಕಿಸ್ತಾನದ ಅತಿದೊಡ್ಡ ಸಂಘಟನೆ" ಎಂದು ವಿವರಿಸಿದ 2021ರ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿರುವ ಭಾರತವು ಪಾಕಿಸ್ತಾನದ ವಿಶೇಷ ಹೂಡಿಕೆ ಸೌಲಭ್ಯ ಮಂಡಳಿಯಲ್ಲಿ ಸೇನೆಯ ಪ್ರಮುಖ ಪಾತ್ರದ ಬಗ್ಗೆ ಗಮನ ಸೆಳೆದಿದೆ.

ಗಡಿಯಾಚೆಗೆ ಭಯೋತ್ಪಾದನೆಯನ್ನು ಬೆಂಬಲಿಸಲು ಐಎಂಎಫ್ ನಿಧಿಗಳನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿರುವ ಭಾರತ, ಇದು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಪ್ರಾಯೋಜಕತ್ವ ಒದಗಿಸಲು ಸಹಾಯ ಮಾಡಿದಂತಾಗುತ್ತದೆ. ಇದರಿಂದ ಜಾಗತಿಕ ಸಮುದಾಯಕ್ಕೆ ಅಪಾಯಕಾರಿ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಹಣಕಾಸು ಸಂಸ್ಥೆಗಳು ಮತ್ತು ದಾನಿಗಳನ್ನು ಈ ಅಪಾಯಗಳಿಗೆ ಒಡ್ಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಇದನ್ನೂ ಓದಿ: IMF: ಭಾರತದ ಒತ್ತಾಯಕ್ಕೆ ಮಣೆ ಹಾಕದ ಐಎಂಎಫ್: ಪಾಕ್‌ಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು

ಇತರ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಹಣಕಾಸು ನೆರವಿನ ಸಂಭಾವ್ಯ ದುರುಪಯೋಗದ ಬಗ್ಗೆ ಭಾರತದ ಕಳವಳಗಳನ್ನು ಪ್ರತಿಧ್ವನಿಸಿದರೂ, ಐಎಂಎಫ್ ಪ್ರತಿಕ್ರಿಯೆಯು ಅದರ ಕಾರ್ಯವಿಧಾನ ಮತ್ತು ತಾಂತ್ರಿಕ ಔಪಚಾರಿಕತೆಗಳಿಂದ ಕೂಡಿರುತ್ತದೆ. ಜಾಗತಿಕ ಹಣಕಾಸು ಸಂಸ್ಥೆಗಳು ಅನುಸರಿಸುವ ಕಾರ್ಯವಿಧಾನಗಳಲ್ಲಿ ನೈತಿಕ ಮೌಲ್ಯಗಳನ್ನು ಪರಿಗಣಿಸುವುದು ತುರ್ತು ಅಗತ್ಯಗಳಲ್ಲಿ ಒಂದು ಎಂಬುದನ್ನು ಭಾರತ ಹಣಕಾಸು ಸಂಸ್ಥೆಗೆ ವಿವರಿಸಿದೆ.

ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ಐಎಂಎಫ್ ಬಾಗಿಲು ಬಡಿದಿರುವ ಪಾಕಿಸ್ತಾನದಲ್ಲಿ ಆರ್ಥಿಕ ಅಸ್ಥಿರತೆ ಎದುರಾಗುತ್ತಲೇ ಇದೆ. ಇದರಿಂದಾಗಿ ಭವಿಷ್ಯದ ಸಾಲ ನೀಡಿಕೆ ಬಗ್ಗೆ ಹೆಚ್ಚು ಯೋಚಿಸುವುದು ಉತ್ತಮ ಎಂದು ಭಾರತ ಹೇಳಿತ್ತು.