ಬೇಡ ಅಸೀಮ ಬಯಕೆ
ಬೇಡ ಅಸೀಮ ಬಯಕೆ
Vishwavani News
November 10, 2022
ಮಹಾದೇವ ಬಸರಕೋಡ
ನಮ್ಮ ಬದುಕಿನ ತುಂಬ ಬೇಕು ಬೇಕು ಎಂಬ ಮಂತ್ರವನ್ನು ಜಪಿಸುತ್ತಲಿರುತ್ತೇವೆ. ದೈನಂದಿನ ಬದುಕಿಗೆ ಅಗತ್ಯವೆನಿಸಿದ ಎಲ್ಲವೂ ಇದ್ದಾಗಲೂ ಇಲ್ಲದ ಮತ್ತಷ್ಟು ವಸ್ತುಗಳು ನಮಗೆ ಬೇಕು ಎಂಬ ವ್ಯಾಮೋಹ ನಮ್ಮನ್ನು ಸುತ್ತುವರೆಯುತ್ತಲೇ ಇರುತ್ತದೆ. ಮತ್ತಷ್ಟು ಅಧಿಕಾರ-ಅಂತಸ್ತು, ಹೆಣ್ಣು-ಹೊನ್ನು-ಮಣ್ಣು ಹೀಗೆಯೇ ಸಾಲು ಸಾಲು ಬೇಡಿಕೆಗಳ ಪಟ್ಟಿ ಹನುನಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ನಾನು-ನನ್ನದು ಎಂಬ ಮೋಹಪಾಶಕ್ಕೆ ಸಿಲುಕಿ ಒದ್ದಾಡುತ್ತೇವೆ. ನಾವು ಬಯಸಿದ್ದು ದೊರಕಿದರೂ ಅದು ಕ್ಷಣಿಕ ತೃಪ್ತಿಯನ್ನು ಮಾತ್ರ ನೀಡಿ ಮತ್ತೆ ನಮ್ಮ ಇನ್ನಷ್ಟು ಬಯಕೆ ಗಳ ಕಿಚ್ಚನ್ನು ಹೊತ್ತಿಸಿಬಿಡುತ್ತದೆ. ಇದೆಲ್ಲವೂ ನಮಗರಿವಿದ್ದರೂ ನಮ್ಮ ಬಯಕೆಗಳ ಬೇಲಿಯನ್ನು ಬೇಧಿಸಿ ಹೊರಬರುವುದು ಸಾಧ್ಯವಾಗುವುದೇ ಇಲ್ಲ. ಇದು ನಮ್ಮ ಬದುಕಿನ ನಿರಾಸೆ, ದುಃಖ, ಸಂಕಟ, ತವಕ ತಲ್ಲಣಗಳಿಗೆ ಕಾರಣವಾಗುತ್ತದೆ.
ಡಿ.ವಿ.ಗುಂಡಪ್ಪನವರ ಚೌಪದಿ ಇಂತಹ ಸಂಕ್ರಮಣ ಸ್ಥಿತಿಯಿಂದ ಹೊರಬರಲು ನಮಗೆ ಮಾರ್ಗದರ್ಶಿಯಾಗಿದೆ. ಎಷ್ಟು ನೀನುಂಡರೇಂ?
ಪುಷ್ಟಿ ಮೈಗಾಗುವುದು|
ಹೊಟ್ಟೆ ಜೀರ್ಣಿಸುವಷ್ಟೇ! ಮಿಕ್ಕುದೆಲ್ಲ ಕಸ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವದೆಷ್ಟು?|
ಮುಷ್ಟಿ ಪಿಷ್ಟವು ತಾನೇ|| ಮಂಕುತಿಮ್ಮ
ದೇಹ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಆಹಾರವನ್ನು ನಾವು ಅದೇಷ್ಟೇ ಸೇವಿಸಿದರೂ, ನಮ್ಮ ಹೊಟ್ಟೆ ಜೀರ್ಣಿಸಿಕೊಳ್ಳಲು ಸಾಧ್ಯವಾದಷ್ಟು ಮಾತ್ರವೇ ನಮ್ಮ ಮೈಗೆ ದಕ್ಕುವುದು. ದೇಹದ ಬೆಳವಣಿಗೆಯಲ್ಲಿ ಉಪಯುಕ್ತವಾಗುವುದು. ಅದನ್ನು ಬಿಟ್ಟು ಉಳಿದಿದ್ದೆಲ್ಲವೂ ವ್ಯರ್ಥವಾದುದು. ನಮ್ಮ ದೇಹಕ್ಕೆ ಯಾವುದೇ ರೀತಿಯೂ ಉಪಯೋಗವಿಲ್ಲದು.
ಅಂತೆಯೇ ಅದು ಕಸವಲ್ಲದೇ ಮತ್ತೇನೂ ಅಲ್ಲ. ನಾವು ಬದುಕಿನ ತುಂಬ ದುಡಿದು ದುಡಿದು ಅದೆಷ್ಟು ಗಳಿಸಿ ಇಟ್ಟರೂ ಅಷ್ಟೆ. ಅದೆಲ್ಲದರಿಂದಲೂ ಕೂಡ ಯಾವುದೇ ಉಪಯೋಗವಾಗಲು ಸಾಧ್ಯವೇ ಇಲ್ಲ. ಅದರಲ್ಲಿ ಬಹಳಷ್ಟು ನಮಗೆಲ್ಲ ದಕ್ಕದ ವಸ್ತು ವಾಗಿಯೇ ಉಳಿಯುವುದು. ನಮಗೆ ಬೇಕಿರುವುದು ಒಂದು ಒಂದು ಮುಷ್ಟಿ ಹಿಟ್ಟು. ನಮಗೆ ದಕ್ಕುವುದು ಕೂಡ ಅಷ್ಟು ಮಾತ್ರವೇ ಎಂದು ಧ್ವನಿಸುತ್ತದೆ ಮಂಕುತಿಮ್ಮನ ಕಗ್ಗದ ಈ ಚೌಪದಿ. ಅತಿಯಾಸೆ ಯಾವುದರಲ್ಲೂ ಒಳ್ಳೆಯದಲ್ಲ.
ಅದು ನಮ್ಮ ದುಃಖ-ದುಮ್ಮಾನಗಳಿಗೆ ಕಾರಣವಾಗುತ್ತದೆ ಎಂಬ ಮಾತನ್ನು ನಾವು ಮನಗಾಣಬೇಕು. ಕೇವಲ ವಯಕ್ತಿಕ ಅಪೇಕ್ಷೆಗಳ ತಣಿವನ್ನು ಗುರಿಯಾಗಿಸಿಕೊಂಡು ನಾನು ನನ್ನದು ಎಂಬ ಮಿತಿಯಲ್ಲಿಯೇ ಬದುಕನ್ನು ಪರಿಮಿತಗೊಳಿಸದೇ ಸ್ವಾರ್ಥದ ಸೆಳೆತವನ್ನು ಗೆಲ್ಲುವುದು ನಮ್ಮ ಬದುಕಿನ ಆದ್ಯತೆಯನ್ನಾಗಿಸಿಕೊಳ್ಳಬೇಕು. ಬದುಕಿಗೆ ಅಗತ್ಯವಿರುವಷ್ಟನ್ನು ನಮಗಾಗಿ ಕಾಪಿಟ್ಟುಕೊಂಡು ಹೆಚ್ಚಿನದನ್ನು ಸಾಧ್ಯವಾದರೆ ಹತ್ತು ಜನರೊಂದಿಗೆ ಹಂಚಿಕೊಳ್ಳುವ, ಇಲ್ಲವೇ ಅಗತ್ಯವೆನಿಸಿದರೆ ಒಂದಷ್ಟು
ಬಿಟ್ಟುಕೊಡುವ ಮನೋಭಾವ ನಮ್ಮದಾಗಬೇಕು.
ಸಿಕ್ಕ ಅವಕಾಶಗಳಲ್ಲಿ ಆಳವಾಗಿ ಬೇರೂರಿ ಬೆಳೆದು ಎಲ್ಲವನ್ನೂ ಆಕ್ರಮಿಸುವ ನಮ್ಮ ಮನಸ್ಸಿನ ಹುನ್ನಾರಗಳಿಗೆ ಕಡಿವಾಣ ಹಾಕಬೇಕು. ಇತರರು ಬೆಳೆಯಲು ಸಾಧ್ಯವಾದ ಅವಕಾಶ ಕಲ್ಪಿಸುವ, ಅದರಲ್ಲಿ ಸಂತೋಷ ಪಡುವ ಔದಾರ್ಯವನ್ನು ನಾವು
ಗಳಿಸಿಕೊಳ್ಳಬೇಕು. ಬದುಕಿನಲ್ಲಿ ಕೇವಲ ಪ್ರತಿಷ್ಠೆಯ ಬೆನ್ನೇರುವುದನ್ನು ಬಿಟ್ಟು ಅದಕ್ಕೆ ನಿಷ್ಠೆಯನ್ನು ತೋರಬೇಕು. ಪರಹಿತ ಪ್ರಣೀತವಾದ ಭಾವನೆಗಳನ್ನು ಉದ್ದೀಪನಗೊಳಿಸಿಕೊಳ್ಳಬೇಕು.
ಇಂತಹ ಸರಳ ಸತ್ಯಗಳನ್ನು ಅರ್ಥೈಯಿಸಿಕೊಳ್ಳುವುದು ನಮ್ಮ ಬದುಕಿನ ಆದ್ಯತೆಯಾಗಬೇಕು. ನಮ್ಮ ಸಲ್ಲದ ಬಯಕೆಗಳಿಗೆ ಒಂದಷ್ಟು ಕಡಿವಾಣ ಹಾಕಬೇಕು. ಅರಿವಿನ ಬೆಳಕನ್ನು ಹೊತ್ತಿಸಿಕೊಳ್ಳಬೇಕು.
ತ್ರಿಪುರಾಸುರರು, ಸುಬ್ರಹ್ಮಣ್ಯ ಸಂಹಾರ ಮಾಡಿದ ತಾರಕಾಸುರನ ಸುಪುತ್ರರು. ಅವರ ಹೆಸರು ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ. ಮುವರೂ ಈಶ್ವರನ ಪರಮ ಭಕ್ತರು, ಸತ್ಯವಂತರು, ಧರ್ಮಿಷ್ಟರು, ಮಹಾಪರಾಕ್ರಮಿಗಳು ಮತ್ತು ಉದಾರ ವಂತರು. ಇಷ್ಟೆ ಒಳ್ಳೆಯ ಗುಣಗಳಿದ್ದರೂ ಅವರು ದೇವತೆಗಳ ಪರಮ ದ್ವೇಷಿಗಳು. ಅವರು ಅತ್ಯಂತ ತೀವ್ರವಾದ ತಪಸ್ಸನ್ನು ಪಂಚಾಗ್ನಿಮಧ್ಯದಲ್ಲಿ ಆಚರಿಸಿ, ಬ್ರಹ್ಮದೇವರನ್ನು ಒಲಿಸಿಕೊಂಡು ಸಾವಿಲ್ಲದ ವರವನ್ನು ಬೇಡುತ್ತಾರೆ.
ಅದಾಗದೆಂದ ಬ್ರಹ್ಮದೇವರಲ್ಲಿ, ‘ಸಾವು ಬಂದರೆ ಅದು ಪರಶಿವನಿಂದಲೇ ಬರಬೇಕೆಂದು’ ಕೇಳಿ ಪಡೆಯುತ್ತಾರೆ. ಪರಮ ಭಕ್ತರನ್ನು ಎಂದೂ ಪರಶಿವ ವಧಿಸಲಾರನೆಂಬ ತೀವ್ರನಂಬಿಕೆ ಅವರದು. ಬ್ರಹ್ಮದೇವರ ಆeಯಂತೆ ಮಯಾಸುರ ಮೂರು ಪಟ್ಟಣಗಳನ್ನು ನಿರ್ಮಿಸಿಕೊಡುತ್ತಾನೆ - ಕಬ್ಬಿಣ , ಬೆಳ್ಳಿ ಮತ್ತು ಚಿನ್ನದಿಂದ. ಈ ಪಟ್ಟಣಗಳು ಯಾವಾಗಲೂ ವೇಗವಾಗಿ ಸಂಚರಿಸುತ್ತಿರುತ್ತವೆ. ಸಾವಿರ ವರ್ಷಕ್ಕೊಮ್ಮೆ ಸ್ವಲ್ಪವೇ ಸಮಯ ಸಂಧಿಸುತ್ತವೆ.
ಅಂತಹ ಸಮಯದಲ್ಲಿ, ಅಭಿಜಿನ್ ಮುಹೂರ್ತದಲ್ಲಿ ಒಂದೇ ಬಾಣದಲ್ಲಿ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಅವರಿಗೆ ಸಾವು ಎಂಬ ವರವಿದೆ. ವರಪಡೆದು ಕೊಬ್ಬಿದ ಇವರನ್ನು ಜಯಿಸಲು ಸಾಧ್ಯವಾಗದೆ, ದೇವತೆಗಳು ಶಿವನಲ್ಲಿ ಮೊರೆಹೋಗುತ್ತಾರೆ. ಆಗ ಪರಶಿವನು ಧರ್ಮಿಷ್ಠರಾದ ಇವರನ್ನು ವಽಸಲು ಸಾಧ್ಯವಿಲ್ಲ; ಏನಾದರೂ ಮಾಡಿ ಅವರನ್ನು ಧರ್ಮದಿಂದ ಜಾರುವಂತೆ ಮಾಡಿದರೆ, ನಾನು ವಿಚಾರಿಸಿಕೊಳ್ಳುವೆ ಎಂದು ಆಶ್ವಾಸನೆ ಕೊಡುತ್ತಾನೆ. ಆಗ ದೇವತೆಗಳು ವಿಷ್ಣುವನ್ನು ಮೊರೆಹೊಗುತ್ತಾರೆ. ವಿಷ್ಣುವು ಒಂದು ಯತಿವೇಷಧಾರಿಯಾದ ‘ಮುಂಡಿ’ ರೂಪವನ್ನು ಸೃಷ್ಟಿಸಿ, ಆತನನ್ನು ನಾರದರೊಡಗೂಡಿಸಿ ಇವರ ರಾಜ್ಯಕ್ಕೆ ಕಳುಹಿಸುತ್ತಾನೆ.
ಇವನು ‘ಧರ್ಮದ ಆಚಾರಣೆಗಳಾದ ಯಜ್ಞ, ಪಿತೃಪೂಜೆ, ದೇವತೆಗಳ ಧ್ಯಾನ ಫಲ ಕೊಡವು. ದೇವತೆಗಳೇ ಬಹಳ ತಪ್ಪುಗಳನ್ನು ಮಾಡುತ್ತಾರೆ. ಜಗನ್ನಿಯಾಮಕನಾದ ಈಶ್ವರನ ಅವಶ್ಯಕತೆ ಏನೂ ಇಲ್ಲ. ಕರ್ಮಗಳೇ ಫಲವನ್ನು ಕೊಡುವಾಗ ಈಶ್ವರನ
ಅವಶ್ಯಕತೆಯಾದರೂ ಏನು?’ ಈ ರೀತಿಯಾಗಿ ಅಧರ್ಮವನ್ನೇ ಧರ್ಮವೆಂದು ಅತ್ಯಾಕರ್ಷಕವಾಗಿ ಬೋಧಿಸುತ್ತಾ ಇವರ ರಾಜ್ಯ ದಲ್ಲಿ ತಿರುಗುತ್ತಿದ್ದ. ನಾರದರು ತ್ರಿಪುರಾಸುರರ ಬಳಿ ಹೋಗಿ ಮುಂಡಿಯ ಬೋಧನೆಯನ್ನು ಅದ್ಭುತವಾಗಿ ಹಾಡಿ -ಹೊಗಳಿ, ಮನವೊಲಿಸಿ ಇವರಿಗೆ ಶಿಷ್ಯರನ್ನಾಗಿಸಿ, ಅವರನ್ನು ಧರ್ಮಮಾರ್ಗದಿಂದ ಜಾರುವಂತೆ ಮಾಡಿ ತನ್ನ ಕೆಲಸವಾಯಿತೆಂದು ಹಿಂತಿರುಗುತ್ತಾರೆ.
ಬ್ರಹ್ಮದೇವರಿಂದ ವರಪಡೆದು ಮಯನಿರ್ಮಿತವಾದ, ಸತ್ತವರನ್ನು ಬದುಕಿಸುವ ಮಾಯಾಕೊಳದ ನೀರನ್ನು ವಿಷ್ಣು ಮತ್ತು ಬ್ರಹ್ಮ, ಆಕಳು -ಕರುಗಳಾಗಿ, ಮಯ ನೋಡುತ್ತಿದ್ದಂತೆಯೇ ಹೀರಿಬಿಡುತ್ತಾರೆ. ಹೀಗೆ ಧರ್ಮದಿಂದ ಜಾರಿ ಸಿದ್ದಪಡಿಸಿದ ತ್ರಿಪುರಾಸುರರನ್ನು ಬ್ರಹ್ಮನ ಸಾರಥ್ಯದಲ್ಲಿ ಕಾಲಸ್ವರೂಪವಾದ ರಥದಲ್ಲಿ ಕುಳಿತು, ವಿಷ್ಣುರೂಪಿಯಾದ ಅಗ್ನಿಯ ಅಲಗಿನಿಂದ
ಕೂಡಿದ ಬಾಣವನ್ನು ಪ್ರಯೋಗಿಸಿ ಮೂರುಪಟ್ಟಣಗಳು ಅಭಿಜಿನ್ ಮುಹೂರ್ತದಲ್ಲಿ ಒಂದಾಗಿ ಸೇರಿದಾಗ ಈಶ್ವರ ಭಸ್ಮ ಮಾಡುತ್ತಾನೆ.
ಇದು ಸಂಕ್ಷಿಪ್ತವಾದ ತ್ರಿಪುರಾಸುರರ ಕಥೆ. ಭಕ್ತರಾದ ತ್ರಿಪುರೇಶ್ವರರು ಈಶ್ವರನ ಸಾನ್ನಿಧ್ಯ ಹೊಂದುತ್ತಾರೆ. ತ್ರಿಪುರಾಸುರರ ಸಂಹಾರ, ತ್ರಿಮೂರ್ತಿಗಳು ಸಹಕರಿಸಿ ಸಾಧಿಸುವ ಕೆಲಸದ ಒಂದು ನಿದರ್ಶನ. ಈ ಕಥೆಯಲ್ಲಿ ತ್ರಿಮೂರ್ತಿಗಳೂ ಒಂದಾಗಿ
ಸೇರುವುದನ್ನು ಕಾಣುತ್ತೇವೆ. ಈ ಕಥೆಯ ತತ್ತ್ವಾರ್ಥವನ್ನು ಶ್ರೀರಂಗ ಮಹಾಗುರುಗಳು ಈ ರೀತಿ ವಿಶದಪಡಿಸಿದ್ದರು. ‘ತ್ರಿಪುರಗಳು ಸತ್ತ್ವ, ರಜಸ್, ತಮೋಗುಣಗಳ ಸಂಕೇತ. ಅವುಗಳು ನಿಂತಲ್ಲಿಯೇ ನಿಲ್ಲದೆ ಯಾವಾಗಲೂ ಸಂಚರಿಸುತ್ತಿರುತ್ತವೆ. ಅವುಗಳು
ಒಂದೆಡೆ ಸೇರಿದಾಗ ತ್ರಿಮೂರ್ತಿಗಳ ಸಹಕಾರದಿಂದ ನಾಶಪಡಿಸಬೇಕಾಗುತ್ತದೆ, ಆಗ ಸಾಮ್ಯ ಉಂಟಾಗುತ್ತದೆ. ಆಗಷ್ಟೇ ಸಮಾಧಿ ಸ್ಥಿತಿ ಏರ್ಪಡುವುದು.’ ಈ ಕಥೆ, ಅದ್ಭುತವಾದ ಯೋಗ ಸಮಾಧಿಯ ಸ್ಥಿತಿಗೇರುವ ಗುಟ್ಟನ್ನು ಬಿಚ್ಚಿಕೊಡುತ್ತದೆ.