International Women's Day: ಆರಾಮ, ಪೌಷ್ಠಿಕಾಂಶಯುಕ್ತ ಆಹಾರ: ಅಮ್ಮ ನಿನಗಿದು ಅತ್ಯಗತ್ಯ
ಮಗುವಿನ ಜನನದ ಬಳಿಕ ಅದರ ಪಾಲನೆಯಲ್ಲಿ ಮಗ್ನವಾಗುವ ತಾಯಿಯ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಹೆರಿಗೆಯ ನಂತರ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗೆ ಒಳಗಾಗುವುದರಿಂದ ಆಕೆಗೆ ಬೇಕಾಗಿರುವ ಆರಾಮ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಕುಟುಂಬದ ಬೆಂಬಲ ಒದಗಿಸಬೇಕು. ಈ ಕುರಿತಾದ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

-ಡಾ. ದೀಪಕ್ ಶೆಡ್ಡೆ
ಬೆಂಗಳೂರು: ತನ್ನಲ್ಲಿನ ಜೀವರಸವನ್ನು ಹಂಚಿಕೊಂಡು ಹೊಸ ಜೀವಕ್ಕೆ ಜನ್ಮ ನೀಡುವವಳು ಅಮ್ಮ. ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಆಕೆಗೆ ಹೆರಿಗೆ ಬಳಿಕವೂ ಆರೈಕೆ, ಆರಾಮದ ಅಗತ್ಯವಿದೆ ಎಂಬುದನ್ನು ಮರೆಯಬಾರದು. ಮಗುವಿನ ಜನನದ ಬಳಿಕ ಅದರ ಪಾಲನೆಯಲ್ಲಿ ಮಗ್ನವಾಗುವ ತಾಯಿ ಹೆರಿಗೆಯ ನಂತರ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗೆ ಒಳಗಾಗುತ್ತಾಳೆ. ಈ ಸಂದರ್ಭದಲ್ಲಿ ಆಕೆಗೆ ಬೇಕಾಗಿರುವುದು ಆರಾಮ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಕುಟುಂಬದ ಬೆಂಬಲ (Health Tips). ಹೀಗಾಗಿ ಪೋಸ್ಟ್‌ಪಾರ್ಟಮ್ ಅಂದರೆ ಪ್ರಸವದ ನಂತರದ ಹಂತವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.
ಮಗು ಜನನದ 6 ವಾರಗಳ ಅವಧಿಯನ್ನು ಪೋಸ್ಟ್‌ಪಾರ್ಟಮ್ ಸಮಯ ಎಂದು ಕರೆಯಲಾಗುತ್ತದೆ. ಈ ಅವಧಿ ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಹೆರಿಗೆ ಹಾಗೂ ಗರ್ಭಾವಸ್ಥೆಯ ಸಮಯದಿಂದ ಚೇತರಿಸಿಕೊಳ್ಳಲು ಅಗತ್ಯವಾಗಿದೆ. ಇನ್ನು ಹೆರಿಗೆ ಸಮಯದಲ್ಲಿ ಸಮಸ್ಯೆ ಎದುರಿಸಿದ ತಾಯಂದಿರಿಗೆ ಚೇತರಿಸಿಕೊಳ್ಳಲು ಕೊಂಚ ಅಧಿಕ ಸಮಯ ಬೇಕಾಗಬಹುದು. ಇದು ಮಹಿಳೆಯ ಆರೋಗ್ಯದ ಮೇಲೆ ನಿರ್ಧರಿಸುವಂತದ್ದು. ಕೆಲವು ಸಂದರ್ಭದಲ್ಲಿ ಮೂರು ತಿಂಗಳೇ ಬೇಕಾಗಬಹುದು.
ಸುದ್ದಿಯನ್ನೂ ಓದಿ: Health Tips: ಜೀರಿಗೆ ನೀರಿಗೆ, ನಿಂಬೆ ರಸ ಬೆರೆಸಿ ಕುಡಿದ್ರೆ ಎಷ್ಟೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?
ದೈಹಿಕ ಮತ್ತು ಮಾನಸಿಕ ಚೇತರಿಕೆ: ಕುಟುಂಬಸ್ಥರ ಜವಾಬ್ದಾರಿ ಮುಖ್ಯ
ತಾಯಿಗೆ ಹೆರಿಗೆ ಬಳಿಕ ದೈಹಿಕ ಆರಾಮದ ಜತೆಗೆ ಮಾನಸಿಕವಾಗಿ ಕೂಡ ವಿಶ್ರಾಂತಿ ಅತ್ಯಗತ್ಯ. ತಾಯಂದಿರಿಗೆ ಆರಂಭದಲ್ಲಿ ಮಗು ನಿದ್ದೆ ಮಾಡಿದಾಗ ಮಾತ್ರ ವಿಶ್ರಾಂತಿ ಎಂಬ ಸನ್ನಿವೇಶವಿರುತ್ತದೆ. ಆದರೆ ಈ ಹಂತದಲ್ಲಿ ಆಕೆಗೆ ಎಷ್ಟು ಆರಾಮ ಸಿಗುವುದೋ ಅಷ್ಟು ಬೇಗ ಚೇತರಿಸಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಕುಟುಂಬಸ್ಥರು ತಾಯಿ ಆರೋಗ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಹೆರಿಗೆ ಸಮಯದಲ್ಲಿ ಸಾಕಷ್ಟು ನೀರಿನಾಂಶ ನಷ್ಟವಾಗುವ ಹಿನ್ನಲೆ ಪ್ರಸವದ ಬಳಿಕ ತಾಯಿಗೆ ಉತ್ತಮ ಪ್ರಮಾಣದಲ್ಲಿ ನೀರು ಮತ್ತು ನೀರಿನಾಂಶವಿರುವ ಹಣ್ಣುಗಳನ್ನು ನೀಡಿ. ಇದು ತಾಯಿಯಲ್ಲಿ ಮಲಬದ್ದತೆ ಸಮಸ್ಯೆ, ಚರ್ಮ ಒಣಗುವ ಸಮಸ್ಯೆ ನೀಗಿಸಲು ನೆರವಾಗುತ್ತದೆ.
ಹಾಲುಣಿಸುವ ಬಗ್ಗೆ ಸೂಕ್ತ ಸಲಹೆ
ಮೊದಲ ಹೆರಿಗೆಯಲ್ಲಿ ತಾಯಿಗೆ ಹಾಲುಣಿಸುವ ಬಗ್ಗೆ ಸೂಕ್ತ ಸಲಹೆಗಳು ಅತ್ಯಗತ್ಯ. ಹೀಗಾಗಿ ಹಾಲುಣಿಸುವಲ್ಲಿ ಸಮಸ್ಯೆ ಉಂಟಾಗುತ್ತಿದ್ದರೆ ವೈದ್ಯರಿಂದ ಸೂಕ್ತ ಸಲಹೆ ಪಡೆಯುವುದು ಮುಖ್ಯ. ಹಾಲು ಕುಡಿಸುವಾಗ ಮಗು ಯಾವ ರೀತಿ ಮಲಗಿರಬೇಕು, ಎಷ್ಟು ಗಂಟೆಗೊಮ್ಮೆ ಹಾಲುಣಿಸಬೇಕು, ಹಾಲು ಉತ್ಪತ್ತಿಗೆ ನೆರವಾಗುವ ಆಹಾರ ಸೇವನೆ ಬಗ್ಗೆ ಸಲಹೆಗಳನ್ನು ಪಡೆಯುವುದು ಉತ್ತಮ. ಜೊತೆಗೆ ಈ ಪ್ರಕ್ರಿಯಲ್ಲಿ ಸಮಸ್ಯೆ ಕಂಡುಬಂದರೆ ಮುಕ್ತವಾಗಿ ತಜ್ಞರ ಬಳಿ ಮಾತನಾಡಿ ಪರಿಹಾರ ಕಂಡುಕೊಳ್ಳಿ.
ನ್ಯೂಟ್ರಿಶನ್ ಫುಡ್
ಹೆರಿಗೆಯ ಬಳಿಕ ತಾಯಿಗೆ ಚೇತರಿಸಿಕೊಳ್ಳಲು ಪೌಷ್ಟಿಕಾಂಶ,ಹಾಗೂ ಫೈಬರ್‌ಯುಕ್ತ ಆಹಾರ ಬಹಳ ಮುಖ್ಯ. ಹೆರಿಗೆ ಸಮಯದಲ್ಲಿ ಸಾಕಷ್ಟು ಬಳಲುವ ಮಹಿಳೆಗೆ ತನ್ನ ಶಕ್ತಿಯನ್ನು ಮರಳಿ ಪಡೆಯಲು ಉತ್ತಮ ಆಹಾರ ಬಹಳ ಮುಖ್ಯ. ಮಲಬದ್ದತೆ ಸಮಸ್ಯೆಯನ್ನು ನೀಗಿಸಲು ಫೈಬರ್ ಅಂಶದ ಆಹಾರಗಳು ಉತ್ತಮವಾಗಿ ಸಹಕರಿಸುತ್ತವೆ.
ತೂಕ ಏರಿಕೆ ಮತ್ತು ವ್ಯಾಯಾಮ
ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಗರ್ಭಾವಸ್ಥೆ ಸಮಯದಲ್ಲಿ ತೂಕ ಏರಿಕೆಯಾಗುತ್ತದೆ. ಜೊತೆಗೆ ದೈಹಿಕ ಆಕಾರದಲ್ಲೂ ಬದಲಾವಣೆ ಕಂಡುಬರುತ್ತದೆ. ಆದರೆ ಹೆರಿಗೆ ಬಳಿಕ ತಕ್ಷಣ ತೂಕ ಇಳಿಸಲು ಭಾರ ಎತ್ತುವಂತಹ ವ್ಯಾಯಾಮಗಳನ್ನು ಮಾಡುವುದು ಅಪಾಯಕಾರಿ ಆಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದು , ಅವರ ಸೂಚನೆಯಂತೆ ಪೆಲ್ವಿಕ್ ಫ್ಲೋರ್‌ಗಳನ್ನು ಬಲಗೊಳಿಸುವಂತಹ ವ್ಯಾಯಾಮಗಳನ್ನು ಪ್ರಾರಂಭಿಸಿ. ಕೆಗಲ್ಸ್ ವ್ಯಾಯಾಮಗಳು ತಾಯಿಗೆ ಸಾಕಷ್ಟು ವಿಧದಲ್ಲಿ ಆರಾಮ ನೀಡುತ್ತದೆ. ಇದು ಮೂತ್ರ ನಿಯಂತ್ರಣಕ್ಕೂ ಸಹಾಯ ಮಾಡುತ್ತವೆ. ಇನ್ನು ಪೋಸ್ಟ್‌ಪಾರ್ಟಮ್ ಬೆಲ್ಟ್ ಕೂಡ ಉತ್ತಮ ಆದರೆ ಇದನ್ನು ಕೂಡ ವೈದ್ಯರ ಸಲಹೆ ಮೇರೆಗೆ ಧರಿಸಿ. ಹಾಗೇ ಯಾವುದೇ ಔಷಧ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾದರೂ ವೈದ್ಯರ ಸಲಹೆ ಕೇಳಿ.
ತಾಯಿಗೆ ಭಾವನಾತ್ಮಕ ಬೆಂಬಲ ಅಗತ್ಯ
ಗರ್ಭಾವಸ್ಥೆ ಹಾಗೂ ಹೆರಿಗೆ ಬಳಿಕ ಕೆಲ ಸಮಯದ ವರೆಗೆ ತಾಯಿಯು ಸಾಕಷ್ಟು ಮಾನಸಿಕ ತುಮುಲಗಳಿಗೆ ಒಳಗಾಗಿರುತ್ತಾಳೆ. ಹೀಗಾಗಿ ಕುಟುಂಬಸ್ಥರಿಂದ ಭಾವನಾತ್ಮಕ ಬೆಂಬಲ ಅಗತ್ಯ. ತೂಕ ಏರಿಕೆ, ದೇಹದ ಆಕೃತಿಯಲ್ಲಿ ಬದಲಾವಣೆ, ಕೂದಲು ಉದುರುವುದು, ನಿಶ್ಶಕ್ತಿ ಕಾಡಬಹುದು. ಈ ಬಗ್ಗೆ ದೂಷಿಸದೇ ಆಕೆಗೆ ಬೆಂಬಲ ನೀಡಿ. ಆರಾಮ ನೀಡಿ, ಆಕೆ ಖುಷಿಯಾಗಿರುವಂತೆ ನೋಡಿಕೊಳ್ಳಿ. ಒತ್ತಡ ನಿವಾರಿಸುವಂತೆ ಯೋಗಾಭ್ಯಾಸ ಆರಂಭಿಸಿ. ಆಗಾಗ್ಗೆ ವೈದ್ಯರಿಂದ ತಪಾಸಣೆಗೊಳಗಾಗುವುದು ಉತ್ತಮ ನೆನಪಿರಲಿ.
ಮಹಿಳೆ ಈಗ ಮನೆ ಹಾಗೂ ಉದ್ಯೋಗ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲಳು. ಆದರೆ ಮಗು ಜನನದಂತಹ ಸಂದರ್ಭದಲ್ಲಿ ಮನೆಯವರ ಬೆಂಬಲ ಆಕೆಗೆ ಅತ್ಯಗತ್ಯ. ಇದು ಶೀಘ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಮಗು ಹೇಗೆ ಬೆಳವಣಿಗೆ ಹೊಂದುತ್ತದೆಯೋ ಅದೇ ರೀತಿ ಮಹಿಳೆ ಕೂಡ ಮಗುವಿನ ಜತೆಗೆ ಅಮ್ಮನಾಗಿ ಬೆಳವಣಿಗೆ ಹೊಂದುತ್ತಾಳೆ. ಪ್ರತಿಯೊಂದು ಮಹಿಳೆಗೂ ಈ ಘಟ್ಟ ಅತ್ಯಂತ ಸಂತೋಷಕರ ಹಾಗೇ ಸವಾಲಿನ ಸಂದರ್ಭವಾಗಿರುತ್ತದೆ.
(ಲೇಖಕ: ಕನ್ಸಲ್ಟಂಟ್ ಒಬಿಜಿ, ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು)