ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಗೆಯಲ್ಲಿ ಆಯಾಸವೇ? ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

Summer health tips: ಬೇಸಗೆಯಲ್ಲಿ ಆಯಾಸ ಕಾಡುವುದು ಮಾಮೂಲಿ. ಬರೀ ನೀರನ್ನೇ ಕುಡಿಯುತ್ತ ಹೋದರೆ ಹೊಟ್ಟೆ ತುಂಬಿದಂತಾಗಿ, ಏನನ್ನೂ ತಿನ್ನಲಾಗದೆ ಪೌಷ್ಟಿಕಾಂಶಗಳ ಕೊರತೆಯಾಗಿ ನಿಶ್ಶಕ್ತಿ ಕಾಡಬಹುದು. ಬೇಸಗೆಯುದ್ದಕ್ಕೂ ಬರೀ ನೀರನ್ನೇ ಕುಡಿಯುತ್ತಾ ಕಳೆಯುವುದು ಸಾಧ್ಯವಿಲ್ಲವಲ್ಲ. ಹಾಗಾದರೆ ದೇಹಕ್ಕೆ ದೊರೆಯುವ ನೀರಿನಂಶವನ್ನು ಹೆಚ್ಚಿಸಲು ಏನು ಮಾಡಬೇಕು?

ನೀರನ್ನು ಕುಡಿಯುವ ಬದಲು ಇವುಗಳನ್ನು ತಿನ್ನಿ

ಸಾಂದರ್ಭಿಕ ಚಿತ್ರ -

Priyanka P
Priyanka P Apr 6, 2026 7:00 AM

ಬೆಂಗಳೂರು, ಏ. 6: ಬೇಸಗೆಯಲ್ಲಿ ಆಯಾಸ ಕಾಡುವುದು ಮಾಮೂಲಿ, ಯಾಕೆಂದು ನಮಗೆ ತಿಳಿಯದಿದ್ದರೂ. ಇದಕ್ಕೆ ಮುಖ್ಯ ಕಾರಣವೆಂದರೆ ದೇಹಕ್ಕೆ ಸಾಕಾಗುವಷ್ಟು ನೀರು ಮತ್ತು ಎಲೆಕ್ಟ್ರೋಲೈಟ್‌ಗಳು ದೊರೆಯದೆ ಇರುವುದು. ಕೆಲವೊಮ್ಮೆ ಹೀಗೂ ಆಗಬಹುದು. ಬರೀ ನೀರನ್ನೇ ಕುಡಿಯುತ್ತಾ ಹೊಟ್ಟೆ ತುಂಬಿದಂತಾಗಿ, ಏನನ್ನೂ ತಿನ್ನಲಾಗದೆ ಪೌಷ್ಟಿಕಾಂಶಗಳ ಕೊರತೆಯಾಗಿ ನಿಶ್ಶಕ್ತಿ ಕಾಡಬಹುದು. ದಿನಕ್ಕೆಷ್ಟು ನೀರು ಕುಡಿಯುತ್ತೀರಿ ಎನ್ನುವಷ್ಟೇ ಮುಖ್ಯವಾಗಿದ್ದು, ಆ ನೀರಿನಂಶವನ್ನು ಯಾವ ಸ್ವರೂಪದಲ್ಲಿ ನೀಡುತ್ತೀರಿ ಎನ್ನುವುದು (Summer health tips). ಬೇಸಿಗೆಯುದ್ದಕ್ಕೂ ಬರೀ ನೀರನ್ನೇ ಕುಡಿಯುತ್ತಾ ಕಳೆಯುವುದು ಸಾಧ್ಯವಿಲ್ಲವಲ್ಲ. ಹಾಗಾದರೆ ದೇಹಕ್ಕೆ ದೊರೆಯುವ ನೀರಿನಂಶವನ್ನು ಹೆಚ್ಚಿಸಲು ಏನು ಮಾಡಬೇಕು?

ತೀವ್ರ ಬಿಸಿಲಿನ ದಿನಗಳಲ್ಲಿ ಬೆವರಿನ ರೂಪದಲ್ಲಿ ನಾವು ನೀರಿನಂಶವನ್ನು ಮಾತ್ರವೇ ಕಳೆದುಕೊಳ್ಳುವುದಲ್ಲ, ಜೊತೆಗೆ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂನಂಥ ಲವಣಾಂಶಗಳನ್ನೂ ಕಳೆದುಕೊಳ್ಳುತ್ತೇವೆ. ಇದೇ ಮುಂದುವರಿದರೆ ಸುಸ್ತು, ಆಯಾಸ, ತಲೆ ಸುತ್ತುವುದು, ಮಾಂಸಖಂಡಗಳಲ್ಲಿ ಸೆಳೆತ ಇತ್ಯಾದಿ ಲಕ್ಷಣಗಳು ಕಾಣಬಹುದು. ಹಾಗಾಗಿ ದೇಹದಲ್ಲಿ ನೀರಿನಂಶ ಮಾತ್ರವಲ್ಲ, ಎಲೆಕ್ಟ್ರೋಲೈಟ್‌ ಪ್ರಮಾಣದತ್ತಲೂ ಗಮನ ಹರಿಸಬೇಕು. ಹಾಗಾದರೆ ಎಲೆಕ್ಟ್ರೋಲೈಟ್‌ ಸಮತೋಲನಕ್ಕೆ ಉಪಾಯಗಳೇನು?

ಇದಕ್ಕಾಗಿ ನೀರಿನಂಶ ಹೆಚ್ಚಿರುವಂಥ ಆಹಾರಗಳು ಒಳ್ಳೆಯ ಪರಿಹಾರವನ್ನು ನೀಡಬಲ್ಲವು. ಬೇಸಿಗೆಯ ಹಣ್ಣು-ತರಕಾರಿಗಳಲ್ಲಿ ಪ್ರಕೃತಿಯೇ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶವನ್ನು, ಅಗತ್ಯ ಸತ್ವಗಳನ್ನು ತುಂಬಿ ನಮಗೆ ನೀಡುತ್ತದೆ. ನಾವದನ್ನು ಬಳಸಿಕೊಳ್ಳಬೇಕಷ್ಟೇ. ಈ ಆಹಾರಗಳ ಮೂಲಕ ನೀಡುವಂಥ ನೀರು ಮತ್ತು ಸತ್ವಗಳನ್ನು ಉಪಯೋಗಿಸಿಕೊಳ್ಳುವಲ್ಲಿ ನಮ್ಮ ದೇಹವೂ ಚುರುಕಾಗಿಯೇ ಇರುತ್ತದೆ. ಅಂದರೆ ನೀರನ್ನು ಕುಡಿಯುವುದಷ್ಟೇ ಅಲ್ಲ, ತಿನ್ನುವುದೂ ಅಗತ್ಯ! ಎಂಥಾ ಆಹಾರಗಳು ಅವು?

ರಸಭರಿತ ಕಬ್ಬಿನ ಹಾಲು: ಏನೇನಿವೆ ಇದರ ಲಾಭಗಳು?

ಸೌತೆಕಾಯಿ: ಶೇ. 96ರಷ್ಟು ನೀರಿನಂಶವನ್ನು ಹೊಂದಿರುವ ಈ ತರಕಾರಿಯನ್ನು ಸಲಾಡ್‌, ಕೋಸಂಬರಿ, ರಾಯ್ತ ಮುಂತಾದ ಹಲವು ಬಗೆಗಳಲ್ಲಿ ಬಳಸಬಹುದು. ಯಾವುದೂ ಬೇಡದಿದ್ದರೆ ಒಂದಿಷ್ಟು ಜಲ್‌ಜೀರಾದಂಥ ಲವಣಾಂಶಭರಿತ ಮಸಾಲೆಗಳೊಂದಿಗೆ ಸೇರಿಸಿ ತಿನ್ನಬಹುದು.

ಕಲ್ಲಂಗಡಿ: ಶೇ. 92ರಷ್ಟು ನೀರಿನಂಶವನ್ನು ಹೊಂದಿರುವ ಹಣ್ಣಿದು. ಪೊಟಾಶಿಯಂ, ಮೆಗ್ನೀಶಿಯಂ, ಲೈಕೋಪೇನ್‌ ಇತ್ಯಾದಿ ಸತ್ವಗಳು ಇದರಲ್ಲಿ ಅಡಕವಾಗಿವೆ.

ಕರಬೂಜ: ಶೇ. 90ಕ್ಕಿಂತಲೂ ಹೆಚ್ಚಿನ ಭಾಗ ನೀರನ್ನೇ ಹೊಂದಿರುವ ಈ ಹಣ್ಣು ತಿನ್ನುವುದಕ್ಕೂ ರುಚಿಯೆ. ವಿಟಮಿನ್‌ ಎ ಮತ್ತು ಸಿ ಅಂಶಗಳು ಇದರಲ್ಲಿ ಹೇರಳವಾಗಿವೆ.

ಸ್ಟ್ರಾಬೆರಿ: ಶೇ. 91ರಷ್ಟು ನೀರಿನಂಶ ಹೊಂದಿರುವ ಈ ಪುಟ್ಟ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿದ್ದು, ಬೇಸಿಗೆಯ ಸೋಂಕುಗಳನ್ನು ದೂರ ಇರಿಸುತ್ತದೆ. ಬಹುತೇಕ ಬೆರ್ರಿಗಳಲ್ಲಿ ಶೇ. 85ಕ್ಕಿಂತ ಹೆಚ್ಚಿನ ಭಾಗ ನೀರಿದ್ದು, ಉಪಯುಕ್ತ ಉರಿಯೂತಶಾಮಕಗಳನ್ನು ಇವು ನೀಡುತ್ತವೆ.

ಕಿತ್ತಳೆ, ಅನಾಸನ್‌: ಶೇ. 87ರಷ್ಟು ನೀರಿನಂಶ ಹೊಂದಿರುವ ಈ ಹಣ್ಣುಗಳಲ್ಲಿ ವಿಟಮಿನ್‌ ಸಿ ವಿಫುಲವಾಗಿದೆ. ದೇಹಕ್ಕೆ ಹಲವು ರೀತಿಯ ಎಲೆಕ್ಟ್ರೋಲೈಟ್‌ಗಳನ್ನು ಇವು ಒದಗಿಸಬಲ್ಲವು.

ದ್ರಾಕ್ಷಿ: ಶೇ. 82ರಷ್ಟು ನೀರಿನಂಶವಿರುವ ಈ ಪುಟ್ಟ ಹಣ್ಣುಗಳಲ್ಲಿ ಸಿ ಜೀವಸತ್ವ ಸಮೃದ್ಧವಾಗಿದೆ.

ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ? ಇಲ್ಲಿದೆ ಸಲಹೆಗಳು

ಎಪ್ರಿಕಾಟ್‌, ಪೇರ್‌, ಸೇಬು: ಅಂದಾಜು ಶೇ. 85ರಷ್ಟು ನೀರಿನಂಶ ಹೊಂದಿರುವ ಈ ಹಣ್ಣುಗಳಲ್ಲಿ ವಿಟಮಿನ್‌ ಸಿ, ಎ ಅಂಶಗಳು ಭರಿತವಾಗಿವೆ.

ಟೊಮೆಟೊ: ಇದರಲ್ಲಿ ಶೇ. 95ಕ್ಕಿಂತ ಹೆಚ್ಚಿನ ಭಾಗ ನೀರೇ ಇರುವುದು. ಪೊಟಾಶಿಯಂ, ಲೈಕೋಪೇನ್‌ನಂಥ ಪೋಷಕಾಂಶಗಳು ಇದರಲ್ಲಿ ಸಮೃದ್ಧವಾಗಿವೆ.

ಹಸಿರು ಸೊಪ್ಪುಗಳು: ಪಾಲಕ್‌, ಲೆಟೂಸ್‌, ಬ್ರೊಕೊಲಿ, ಎಲೆಕೋಸು ಮುಂತಾದ ಹಸಿರು ಸೊಪ್ಪು ಅಥವಾ ಸೊಪ್ಪಿನಂಥ ತರಕಾರಿಗಳಲ್ಲೂ ಶೇ. 90ಕ್ಕಿಂತ ಹೆಚ್ಚಿನ ಭಾಗ ನೀರೇ ಇರುವುದು. ಇವುಗಳು ಕಬ್ಬಿಣಾಂಶ, ಫೋಲೇಟ್‌ ಮುಂತಾದ ಸತ್ವಗಳನ್ನು ದೇಹಕ್ಕೆ ಒದಗಿಸುತ್ತವೆ.

ಇವಿಷ್ಟೇ ಅಲ್ಲ, ಎಳನೀರು, ಕಬ್ಬಿನ ರಸ, ಮಜ್ಜಿಗೆ ಮುಂತಾದ ಆರೋಗ್ಯಕರ ಪೇಯಗಳು ದೇಹದ ಆಯಾಸವನ್ನು ಕಡಿಮೆ ಮಾಡಿ, ಅಗತ್ಯ ಎಲೆಕ್ಟ್ರೋಲೈಟ್‌ಗಳನ್ನೂ ಒದಗಿಸಬಲ್ಲವು. ಹಾಗಾಗಿ ಬೇಸಿಗೆಯಲ್ಲಿ ಬೆವರು ಒರೆಸಿಕೊಳ್ಳುತ್ತಾ ಸುಸ್ತಾಗುವ ಬದಲು, ಇಂಥ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ.