Health Tips: ಹೆಚ್ಚುತ್ತಿರುವ ಜಿಬಿಎಸ್- ಆಹಾರದ ಸ್ವಚ್ಛತೆಗೆ ಆದ್ಯತೆ ನೀಡಿ
ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗುಯಿಲಿನ್ ಬಾರ್ ಸಿಂಡ್ರೋಮ್ (ಜಿಬಿಎಸ್) ಎಂಬ ಅಪರೂಪದ ನರರೋಗವೊಂದು ಆತಂಕ ಸೃಷ್ಟಿಸಿದೆ. ಜಿಬಿಎಸ್ ಎಂದೇ ಕರೆಯಲಾಗುವ ಈ ರೋಗವು ಮೂಲದಲ್ಲಿ ಬ್ಯಾಕ್ಟೀರಿಯ ಸೋಂಕಿನಿಂದ ಪ್ರಚೋದನೆ ಗೊಳ್ಳುವಂಥದ್ದು. ಆಹಾರದಿಂದ ಈ ಸೋಂಕು ಬರುವುದನ್ನು ತಡೆಯುವುದೇ ಸದ್ಯಕ್ಕಿರುವ ಮಾರ್ಗ. ಹಾಗಾಗಿ ಆಹಾರದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ಶುದ್ಧ ಕುಡಿಯುವ ನೀರನ್ನೇ ಬಳಸಿ. ಸಾಧ್ಯವಾದಷ್ಟೂ ಕುದಿಸಿದ ನೀರನ್ನೇ ಕುಡಿಯಿರಿ.
ಪುಣೆ: ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗುಯಿಲಿನ್ ಬಾರ್ ಸಿಂಡ್ರೋಮ್ (ಜಿಬಿಎಸ್) (Guillain-Barré syndrome) ಎಂಬ ಅಪರೂಪದ ನರರೋಗವೊಂದು ಆತಂಕ ಸೃಷ್ಟಿಸಿದೆ. ಈಗಾಗಲೇ 130 ಮಂದಿ ಈ ರೋಗ ಪೀಡಿತರಾಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ರೋಗವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮತ್ತೊಂದು ಸಾಂಕ್ರಾಮಿ ಕಕ್ಕೆ ದಾರಿಯಾದೀತೆ ಎಂಬ ಆತಂಕ ಸೃಷ್ಟಿಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ಮಹತ್ವದ್ದೆನಿಸಿದೆ.
ಜಿಬಿಎಸ್ ಎಂದೇ ಕರೆಯಲಾಗುವ ಈ ರೋಗವು ಮೂಲದಲ್ಲಿ ಬ್ಯಾಕ್ಟೀರಿಯ ಸೋಂಕಿನಿಂದ ಪ್ರಚೋದನೆ ಗೊಳ್ಳುವಂಥದ್ದು. ಆದರೆ ಸೋಂಕಿನ ನಂತರ ದಲ್ಲಿ ನಮ್ಮ ದೇಹದ ವಿರುದ್ಧ ನಮ್ಮದೇ ಪ್ರತಿಕಾಯಗಳು ದಾಳಿ ನಡೆಸುವ, ಅಥವಾ ಆಟೋಇಮ್ಯೂನ್ ರೋಗವೆಂದು ಹೇಳಲಾಗುವ ಸಮಸ್ಯೆಗೆ ಕಾರಣವಾಗಿ, ಬಾಹ್ಯ ನರಮಂಡಲ ಅಥವಾ ಪೆರಿಫೆರಲ್ ನರ್ವಸ್ ಸಿಸ್ಟಮ್ ನಿಷ್ಕ್ರಿಯಗೊಳ್ಳುವ ಹಂತಕ್ಕೆ ಹೋಗುತ್ತದೆ. ಮಹಾರಾಷ್ಟ್ರದ ಪುಣೆಯ ಸುತ್ತಲಿನ ಭಾಗಗಳಲ್ಲಿ ಈ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಕೆಲವು ಸೋಂಕುಗಳು ವರದಿಯಾಗಿವೆ.
ಲಕ್ಷಣಗಳೇನು?: ಮೊದಲಿಗೆ ಯಾವುದೇ ರೀತಿಯ ಬ್ಯಾಕ್ಟೀರಿಯ ಅಥವಾ ವೈರಸ್ ಸೋಂಕು ಕಾಣಿಸಿಕೊಳ್ಳಬಹುದು. ಸೋಂಕಿನ ಲಕ್ಷಣಗಳು ತಗ್ಗಿದ ನಂತರ ಕಾಲು-ಕೈಗಳಲ್ಲಿ ನಿಶಕ್ತಿ ಉಂಟಾಗಬಹುದು; ಸ್ಪರ್ಶ ಜ್ಞಾನ ಹೋಗಬಹುದು ಅಥವಾ ಚುಚ್ಚಿದ ಅನುಭವ ಕಾಣಬಹುದು; ಮುಖದ ಸ್ನಾಯುಗಳಲ್ಲೂ ಇದು ಕಾಣಬಹುದು. ಇದರಿಂದ ರೋಗಿಗೆ ದೇಹದ ಮೇಲಿನ ನಿಯಂತ್ರಣ ತಪ್ಪುತ್ತಾ ಹೋಗುತ್ತದೆ, ನುಂಗಲು, ಮಾತಾಡಲೂ ಸಾಧ್ಯವಾಗುವುದಿಲ್ಲ. ಒಮ್ಮೆ ಲಕ್ಷಣಗಳು ಕಂಡರೆ ಕೆಲವೊಮ್ಮೆ ಒಂದೆರಡೇ ದಿನಗಳಲ್ಲಿ ಅಥವಾ ನಾಲ್ಕಾರು ದಿನಗಳಲ್ಲಿ ರೋಗಿ ಪೂರ್ಣ ಹಾಸಿಗೆ ಹಿಡಿಯುವಂತಾಗುತ್ತದೆ. ಕಡೆಗೆ ಉಸಿರಾಡುವ ಚೈತನ್ಯವೂ ಇಲದೆ, ಕೃತಕ ಉಸಿರಾಟದ ಮೊರೆ ಹೋಗಬೇಕಾಗುತ್ತದೆ.
ಕಾರಣವೇನು?: ಕಲುಷಿತ ನೀರು ಮತ್ತು ಆಹಾರ ಇದಕ್ಕೆ ಪ್ರಧಾನ ಕಾರಣವಾಗಬಲ್ಲವು. ಈ ಮೂಲಕ ಕ್ಯಾಂಪೈಲೊಬ್ಯಾಕ್ಟರ್ ಜೆಜುನಿ ಎಂಬ ಬ್ಯಾಕ್ಟೀರಿಯ ಹೊಟ್ಟೆಯನ್ನು ಪ್ರವೇಶಿಸಿ, ದೇಹದ ನರಮಂಡಲಗಳ ಮೇಲೆ ವಿಪರೀತ ಪರಿಣಾಮಗಳನ್ನು ಉಂಟುಮಾಡಬಲ್ಲದು. ಹಾಗಾಗಿ ಡಯರಿಯಾ, ವಾಂತಿಯಂಥ ವಿಷಾಹಾರದ ಅಥವಾ ಹೊಟ್ಟೆ ಸೋಂಕಿನ ಲಕ್ಷಣಗಳು ಕಂಡರೆ ತಕ್ಷಣವೇ ವೈದ್ಯರಲ್ಲಿ ಧಾವಿಸಬೇಕಾದ್ದು ಅಗತ್ಯ. ಇದಲ್ಲದೆ, ವೈರಸ್‌ಗಳ ಮೂಲಕ ಗಾಳಿಯಲ್ಲೂ ನಮ್ಮ ದೇಹ ಪ್ರವೇಶಿಸಿ, ಶ್ವಾಸಕೋಶದ ಸೋಂಕಿನ ಮೂಲಕ ಜಿಬಿಎಸ್‌ಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಸೋಂಕುಗಳನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ಹೋಗಿ
ತಡೆಯಬಹುದೇ?: ಆಹಾರದಿಂದ ಈ ಸೋಂಕು ಬರುವುದನ್ನು ತಡೆಯುವುದೇ ಸದ್ಯಕ್ಕಿರುವ ಮಾರ್ಗ. ಆಹಾರದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ಶುದ್ಧ ಕುಡಿಯುವ ನೀರನ್ನೇ ಬಳಸಿ. ಸಾಧ್ಯವಾದಷ್ಟೂ ಕುದಿಸಿದ ನೀರನ್ನೇ ಕುಡಿಯಿರಿ. ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಿ. ಆಹಾರವನ್ನು ಸರಿಯಾಗಿ ಬೇಯಿಸಿದ ನಂತರವೇ ತಿನ್ನಿ. ಮಾಂಸಾಹಾರವನ್ನಂತೂ ಚೆನ್ನಾಗಿ ಬೇಯಿಸದೆ ಸೇವಿಸಲೇಬೇಡಿ. ರೋಗನಿರೋಧಕತೆಯನ್ನು ಹೆಚ್ಚಿಸುವಂಥ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
ಹೊರಗಿನಿಂದ ತಂದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ, ಮನೆಯಲ್ಲೇ ರುಚಿ-ಶುಚಿಯಾಗಿ ಆಹಾರ ತಯಾರಿಸಿಕೊಳ್ಳಿ. ಪನೀರ್, ಚೀಸ್‌ನಂಥ ಡೇರಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಎಚ್ಚರವಹಿಸಿ. ಸರಿಯಾಗಿ ಪ್ಯಾಶ್ಚರೀಕರಣಕ್ಕೆ ಒಳಗಾಗದ ಯಾವುದೇ ಡೇರಿ ಉತ್ಪನ್ನಗಳು ಜಿಬಿಎಸ್ ಅಪಾಯವನ್ನು ಹೆಚ್ಚಿಸಬಹುದು. ಪೌಲ್ಟ್ರಿ ಉತ್ಪನ್ನಗಳನ್ನು ಚೆನ್ನಾಗಿ ಬೇಯಿಸಿದ ಮೇಲೆಯೇ ತಿನ್ನಿ. ಯಾವುದೇ ಉಳಿಕೆ ಆಹಾರಗಳು ಸೋಂಕಿನ ಸಾಧ್ಯತೆಯನ್ನು ತರಬಲ್ಲವು. ಹಾಗಾಗಿ ಅವುಗಳನ್ನು ಚೆನ್ನಾಗಿ ಉಗಿಹಾಯುವಂತೆ ಬಿಸಿ ಮಾಡಿ, ತಕ್ಷಣವೇ ಸೇವಿಸಿ.
ಇದನ್ನು ಓದಿ: Health Tips: ಹುರುಳಿ ಕಾಳು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳೇನು?
ಉಳಿದ ಆಹಾರವನ್ನು ರೆಫ್ರಿಜಿರೇಟ್ ಮಾಡುವ ಉದ್ದೇಶವಿದ್ದರೆ, ಆಹಾರ ಅತ್ಯಂತ ತಾಜಾ ಇರುವಾಗಲೇ ಅದನ್ನು ಶೀತಲೀಕರಣಗೊಳಿಸಿ. ಫ್ರಿಜ್‌ನಿಂದ ತೆಗೆದ ಮೇಲೆ ಚೆನ್ನಾಗಿ ಬಿಸಿ ಮಾಡಿ, ತಕ್ಷಣ ಸೇವಿಸಿ. ವಾತಾವರಣದ ಉಷ್ಣತೆಯಲ್ಲಿ ಬ್ಯಾಕ್ಟೀರಿಯ ಬೆಳೆಯುವ ಪ್ರಮಾಣ ಹೆಚ್ಚು. ಅದರಲ್ಲೂ, ಉಳಿಕೆ ಅನ್ನವನ್ನು ಮರುಬಳಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಿ. ಇಂಥ ಯಾವುದೇ ಆಹಾರವನ್ನು ಕಡ್ಡಾಯವಾಗಿ ಕುದಿಯುವಷ್ಟು ಬಿಸಿ ಮಾಡಿ ಸೇವಿಸಿ.