Health Tips: ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಈ ಆಹಾರ ಕ್ರಮ ಪಾಲಿಸಿ
ಉತ್ತಮ ನಿದ್ರೆಗಾಗಿ ನೀವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಇವು ನಿದ್ರಾಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ. -

ನವದೆಹಲಿ: ಪ್ರಸ್ತುತ ಆಧುನಿಕ ಒತ್ತಡದ ಜೀವನ ಶೈಲಿಯಲ್ಲಿ ಮನುಷ್ಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿದ್ರಾಹೀನತೆಯು ಕೂಡ ಒಂದು. ಮನುಷ್ಯನಿಗೆ ಆರೋಗ್ಯಕರ ಆಹಾರ ಸೇವನೆ (Health Tips) ಹೇಗೆ ಅಗತ್ಯವೋ ಹಾಗೇ ಆರೋಗ್ಯಕರ ನಿದ್ರೆಯೂ ಅಷ್ಟೇ ಮುಖ್ಯ. ಒಳ್ಳೆಯ ಆರೋಗ್ಯಕರ ನಿದ್ರೆಯಿಂದ ನಮ್ಮ ದೇಹಕ್ಕೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಇತ್ತೀಚೆಗಿನ ಅಧ್ಯಯನ ಪ್ರಕಾರ ರಾತ್ರಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಶಾಂತಯುತ ನಿದ್ರೆ ನಿಮ್ಮದಾಗುತ್ತದೆ ಎಂದು ಆಹಾರ ತಜ್ಞರೊಬ್ಬರು ಬಹಿರಂಗ ಪಡಿಸಿದ್ದಾರೆ.
ಉತ್ತಮ ನಿದ್ರೆಗಾಗಿ ನೀವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ರೂಢಿ ಮಾಡಿಕೊಳ್ಳಿ. ಇವು ನಿದ್ರಾಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕೆಲವೊಂದು ಆರೋಗ್ಯಯುತ ಆಹಾರ ಸೇವನೆಯು ಸುಲಭವಾಗಿ ನಿದ್ರಿಸಲು ಮತ್ತು ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವು ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಿ ರಾತ್ರಿಯಲ್ಲಿ ಎಚ್ಚರಗೊಳ್ಳುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳು ನರಮಂಡಲ ಮತ್ತು ಸ್ನಾಯುಗಳನ್ನು ವಿಶ್ರಾಂತಿ ಪಡಿಸಿ ನಿದ್ರಾಹೀನತೆಯನ್ನು ತಡೆಯಲಿದೆ.
ಯಾವೆಲ್ಲ ಆಹಾರ ಸೇವಿಸಬೇಕು?
ಓಟ್ಸ್ ಉತ್ತಮ ನಿದ್ದೆಗೆ ಸಹಕಾರಿಯಾಗಲಿದೆ
ಓಟ್ಸ್ ಸೇವನೆಯಿಂದ ದೇಹವು ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇವು ಕಾರ್ಬೋಹೈಡ್ರೇಟ್‌ಗಳು ಮತ್ತು ಮೆಲಟೋನಿನ್‌ನ ನೈಸರ್ಗಿಕ ಮೂಲವಾಗಿರುವ ಓಟ್ಸ್‌ನಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಸ್ಥಿರತೆಯನ್ನು ಬೆಂಬಲಿಸುತ್ತದೆ. ಓಟ್ಸ್‌ನಲ್ಲಿ ವಿವಿಧ ರೀತಿಯ ವಿಟಮಿನ್‌ಗಳು, ಖನಿಜಾಂಶಗಳು ಇದ್ದು ದೇಹಕ್ಕೆ ಬಹಳ ಉತ್ತಮ. ಇದು ಕೇವಲ ಉಪಾಹಾರಕ್ಕೆ ಮಾತ್ರವಲ್ಲದೆ ರಾತ್ರಿ ಮಲಗುವ ಮೊದಲು ಇದನ್ನು ಸೇವನೆ ಮಾಡಬಹುದು. ಇದು ನಿದ್ರೆಗೆ ಬಹಳಷ್ಟು ಸಹಕಾರಿಯಾಗಲಿದೆ.
ಬಾಳೆ ಹಣ್ಣಿನ ಸೇವನೆ
ರಾತ್ರಿ ಉತ್ತಮ ನಿದ್ದೆಗಾಗಿ ಬಾಳೆ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ ನಾವು ಸೇವಿಸಿದ ಆಹಾರ ನಮ್ಮ ದೇಹದ ಜೀರ್ಣಾಂಗದಲ್ಲಿ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಬಾಳೆ ಹಣ್ಣು ಸಹಾಯ ಮಾಡುತ್ತದೆ. ಹಾಗಾಗಿ ಒಳ್ಳೆಯ ನಿದ್ರೆ ನಿಮ್ಮದಾಗಿಸಿಕೊಳ್ಳಲು ಪ್ರತಿ ರಾತ್ರಿ ಊಟ ಆದ ಮೇಲೆ ಒಂದು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡರೆ ಉತ್ತಮ.
ವಾಲ್ ನಟ್ಸ್
ವಾಲ್ ನಟ್ಸ್ ತಿನ್ನುವುದರಿಂದ ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನ ಸಿಗಲಿದ್ದು, ವಾಲ್ ನಟ್ಸ್ ಸೇವನೆಯಿಂದ ನಿಮ್ಮ ದೇಹಕ್ಕೆ ನಿದ್ರೆ ತಂದುಕೊಡುತ್ತದೆ. ಕೆಲವೊಂದು ಪೌಷ್ಟಿಕ ಸತ್ವಗಳನ್ನು ನಿಮ್ಮ ದೇಹ ತಯಾರು ಮಾಡಲು ಅನುವು ಮಾಡಿಕೊಡುತ್ತದೆ.
ಕಿವಿ ಹಣ್ಣು
ಕಿವಿ ಉತ್ತಮ ಗುಣಮಟ್ಟದ ನಿದ್ರೆಯನ್ನು ಖಚಿತಪಡಿಸಲಿದೆ. ಇದರಲ್ಲಿ ಹೆಚ್ಚಿನ ಸಿರೊಟೋನಿನ್ ಅಂಶವಿದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಅಧ್ಯಯನಗಳ ಪ್ರಕಾರ, ಮಲಗುವ ಮುನ್ನ ಕಿವಿ ಹಣ್ಣು ಸೇವನೆಯು ಶಾಂತಯುತ ನಿದ್ರೆಯನ್ನು ಸುಧಾರಿಸುತ್ತದೆ. ಇದು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ, ಮನಸ್ಥಿತಿ ಮತ್ತು ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.
ಡೈರಿ ಉತ್ಪನ್ನಗಳು
ಮಲಗುವ ಮುನ್ನು ಬೆಚ್ಚಗಿನ ಹಾಲನ್ನು ಕುಡಿಯುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಹಾಲು, ಕಾಟೇಜ್ ಚೀಸ್ ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಮಲಗುವ ಮುನ್ನ ಸೇವಿಸಿದರೆ ನಿದ್ರೆ ಸರಿಯಾಗಿ ಬರಲಿದೆ. ಇವು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಸರಿಯಾದ ನಿದ್ದೆಗೆ ಸಹಕಾರಿಯಾಗಲಿದೆ.
ಇದನ್ನು ಓದಿ: Health Tips: ಕಡಿಮೆ ನೀರು ಕುಡಿಯುವ ಅಭ್ಯಾಸ ಇದೆಯೇ? ಈ ಎಲ್ಲಾ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು
ಇವುಗಳನ್ನು ತಪ್ಪಿಸಿ
*ಆಲ್ಕೋಹಾಲ್ ಸೇವನೆ ತಪ್ಪಿಸಿ, ಇವು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
*ಮಧ್ಯಾಹ್ನ 2 ಗಂಟೆಯ ನಂತರ ಕೆಫೀನ್ ಸೇವಿಸುವುದನ್ನು ತಪ್ಪಿಸಿ. ಉತ್ತಮ ನಿದ್ರೆಗೆ ಕೆಫೀನ್ ಇರುವ ಯಾವುದೇ ರೀತಿಯ ಆಹಾರ ಅಥವಾ ಪಾನೀಯಗಳನ್ನು ಸೇವಿಸಬೇಡಿ.
*ತುಂಬಾ ಮಸಾಲೆಯುಕ್ತ ಮತ್ತು ತುಂಬಾ ಸಕ್ಕರೆ ಸೇರಿಸಿದ ಆಹಾರವನ್ನು ಸೇವಿಸಬೇಡಿ.
*ಟಿವಿ ಮತ್ತು ಮೊಬೈಲ್ ನೋಡುವುದನ್ನು ತಪ್ಪಿಸಿ.