ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toothpaste: ಹಲ್ಲುಜ್ಜುವಾಗ ಬಳಸುವ ಟೂತ್‌ಪೇಸ್ಟ್‌ ಪ್ರಮಾಣ ಎಷ್ಟಿರಬೇಕು?

ಹಲ್ಲುಜ್ಜುವಾಗ ಎಲ್ಲರೂ ಉಪಯೋಗಿಸುವ ಟೂತ್‌ಪೇಸ್ಟ್‌ ಬಳಸಬೇಕಾದ ಪ್ರಮಾಣ ಎಷ್ಟು?ಈ ಪ್ರಶ್ನೆ ಹಲವರನ್ನು ಕಾಡಿರುತ್ತದೆ. ಜಾಹೀರಾತುಗಳಲ್ಲಿ ತೋರಿಸುವಷ್ಟು ಟೂತ್‌ಪೇಸ್ಟ್‌ ಪ್ರಮಾಣವು ಸಾಮಾನ್ಯರಿಗೆ ನಾಲ್ಕು ದಿನಕ್ಕೆ ಸಾಕಾಗುತ್ತದೆ. ಜೊತೆಗೆ ಅಷ್ಟೊಂದು ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ಸುರಿದುಕೊಂಡರೆ ಬಾಯೆಲ್ಲ ಉರಿಯೆದ್ದ ಅನುಭವ ಆಗುತ್ತದೆ. ಹಾಗಾಗಿ ಅಷ್ಟು ಬೇಡ ದಿದ್ದರೂ ಈಗ ನಾವು ಬಳಸುತ್ತಿರುವ ಪ್ರಮಾಣ ಸಾಕೇ? ದಿನಕ್ಕೆರಡು ಬಾರಿ ಹಲ್ಲುಜ್ಜುವುದನ್ನು ಗಮನದಲ್ಲಿ ಇರಿಸಿಕೊಂಡರೆ, ಬಳಸುವ ಟೂತ್‌ಪೇಸ್ಟ್‌ ಪ್ರಮಾಣ ಎಷ್ಟಿರಬೇಕು? ಹೆಚ್ಚಾದರೇನು, ಕಡಿಮೆಯಾದರೇನು?

ಹಲ್ಲುಜ್ಜುವಾಗ ಟೂತ್‌ಪೇಸ್ಟ್ ಎಷ್ಟು ಬಳಸಬೇಕು?

Tooth Brush

Profile Pushpa Kumari Apr 10, 2025 6:00 AM

ನವದೆಹಲಿ: ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಏನು ಎಂದು ಕೇಳಿದರೆ, ʻಹಲ್ಲುಜ್ಜುವುದುʼ ಎನ್ನುವ ಉತ್ತರ ಸಹಜವಾಗಿ ಬರಬಹುದು. ಈ ಕೆಲಸ ಇಷ್ಟವೋ ಕಷ್ಟವೋ, ಅಂತೂ ಮಾಡಲೇಬೇಕಾದ್ದು. ಹಲ್ಲುಜ್ಜುವಾಗ ಎಲ್ಲರೂ ಉಪಯೋಗಿಸುವ ಟೂತ್‌ಪೇಸ್ಟ್‌ (Toothpaste) ಬಳಸಬೇಕಾದ ಪ್ರಮಾಣ ಎಷ್ಟು? ಈ ಪ್ರಶ್ನೆ ಹಲವರನ್ನು ಕಾಡಿರುತ್ತದೆ. ಜಾಹೀರಾತುಗಳಲ್ಲಿ ತೋರಿಸುವಷ್ಟು ಟೂತ್‌ಪೇಸ್ಟ್‌ ಪ್ರಮಾಣವು ಸಾಮಾನ್ಯರಿಗೆ ನಾಲ್ಕು ದಿನಕ್ಕೆ ಸಾಕಾಗುತ್ತದೆ. ಜತೆಗೆ ಅಷ್ಟೊಂದು ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ಸುರಿದುಕೊಂಡರೆ ಬಾಯೆಲ್ಲ ಉರಿಯೆದ್ದ ಅನುಭವ ಆಗುತ್ತದೆ. ಹಾಗಾಗಿ ಅಷ್ಟು ಬೇಡದಿದ್ದರೂ ಈಗ ನಾವು ಬಳಸುತ್ತಿರುವ ಪ್ರಮಾಣ ಸಾಕೇ? ದಿನಕ್ಕೆರಡು ಬಾರಿ ಹಲ್ಲುಜ್ಜುವುದನ್ನು ಗಮನದಲ್ಲಿ ಇರಿಸಿ ಕೊಂಡರೆ, ಬಳಸುವ ಟೂತ್‌ಪೇಸ್ಟ್‌ ಪ್ರಮಾಣ ಎಷ್ಟಿರಬೇಕು? ಹೆಚ್ಚಾದರೇನು, ಕಡಿಮೆಯಾದರೇನು?

ಅತಿಯಾದರೇನು?

ಈಗಿನ ಬಹಳಷ್ಟು ಟೂತ್‌ಪೇಸ್ಟ್‌ಗಳು ಫ್ಲೂರೈಡ್‌ ಸಹಿತವಾದವು. ಹಲ್ಲುಗಳ ರಕ್ಷಣೆಗೆ ಈ ಅಂಶ ಅಗತ್ಯ. ಹಾಗೆಂದು ಅದೇ ಅತಿಯಾಗಬಾರದಲ್ಲ. ಕೆಲವು ಅಪರೂಪದ ಪ್ರಕರಣಗಳಲ್ಲಿ ಫ್ಲೂರೈಡ್‌ ಬಳಕೆ ಅತಿಯಾಗಿ ಹೊಟ್ಟೆ ತೊಳೆಸುವುದು, ವಾಂತಿಯಂಥ ಅಡ್ಡ ಪರಿಣಾಮಗಳು ಕಂಡಿದ್ದಿದೆ. ಹಾಗಾಗಿ ಟೂತ್‌ಪೇಸ್ಟ್‌ ಪ್ರಮಾಣ ಜಾಹೀರಾತಿನಷ್ಟು ಅಗತ್ಯವಿಲ್ಲ.

ಎನಾಮಲ್‌ ಸವೆತ

ಹಲ್ಲಿನ ರಕ್ಷಾ ಕವಚ ಎನಿಸಿದ ಎನಾಮಲ್‌ ಕಾಪಾಡಿಕೊಳ್ಳಲು ಫ್ಲೂರೈಡ್‌ ಬೇಕೆನ್ನುವುದು ನಿಜ. ಆದರೆ ಅದನ್ನೇ ಅತಿಯಾಗಿ ಉಪಯೋಗಿಸಿದರೆ, ಆಗಾಗ ಬಷ್‌ ಮಾಡುತ್ತಿದ್ದರೆ, ಗಟ್ಟಿಯಾದ ಬ್ರಿಸಲ್‌ಗಳಿರುವ ಬ್ರಷ್‌ ಉಪಯೋಗಿಸಿದರೆ ದಂತಗಳ ರಕ್ಷಾ ಕವಚಕ್ಕೆ ಹಾನಿಯಾಗುತ್ತದೆ.

ಮಕ್ಕಳಿಗೆ ತೊಂದರೆ

ಹಲ್ಲುಜ್ಜುವ ಅಭ್ಯಾಸವನ್ನು ಇನ್ನೂ ರೂಢಿಸಿಕೊಳ್ಳುತ್ತಿರುವ ಪುಟಾಣಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸಿದರೆ ಸಮಸ್ಯೆ ನಿಶ್ಚಿತ. ಕಾರಣ ಟೂತ್‌ಪೇಸ್ಟ್‌ ನುಂಗುವಂಥ ಆಕಸ್ಮಿಕಗಳು ಅವರಲ್ಲಿ ಸಾಮಾನ್ಯ. ಇಂಥವು ಆಗಾಗ ಆಗುತ್ತಿದ್ದರೆ ದೇಹಕ್ಕೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ಫ್ಲೂರೈಡ್‌ ಸೇರಿಕೊಳ್ಳುತ್ತದೆ. ಪರಿಣಾಮವಾಗಿ, ಹಲ್ಲುಗಳ ಫ್ಲೂರೋಸಿಸ್‌ ಅಥವಾ ಡೆಂಟಲ್‌ ಫ್ಲೂರೋಸಿಸ್‌ ಉಂಟಾಗಬಹುದು. ಅಂದರೆ ಹಲ್ಲುಗಳು ಬಣ್ಣಗೆಟ್ಟು, ಅವುಗಳ ಮೇಲೆ ಬಿಳಿಯ ಕಲೆಗಳು ಬಂದಂತೆ ಕಾಣುತ್ತದೆ. ಹಾಗಾದರೆ ಬಳಸಬೇಕಾದ ಪ್ರಮಾಣ ಎಷ್ಟು?

ಪ್ರಮಾಣವೆಷ್ಟು?

ಇದು ಮಕ್ಕಳಿಗೆ ಮತ್ತು ವಯಸ್ಕರಿಗೆ ಭಿನ್ನವಾಗಿದೆ. ದಿನಕ್ಕೆರಡು ಬಾರಿ ಬಳಸುವ ಲೆಕ್ಕದಲ್ಲಿ ವಯಸ್ಕರಿಗೆ ದೊಡ್ಡ ಕಡಲೆಬೀಜದ ಪ್ರಮಾಣ ಸೂಕ್ತ. ಇದರಿಂದ ಹಲ್ಲುಗಳನ್ನು ಸಶಕ್ತಗೊಳಿಸಿ, ದಂತಕುಳಿಗಳಾಗದಂತೆ ಕಾಪಾಡಿಕೊಳ್ಳಬಹುದು. ಅತಿಯಾಗುವ ಅಪಾಯವೂ ಇದರಲ್ಲಿ ಇಲ್ಲ. ಮಕ್ಕಳಲ್ಲೂ ಈ ಪ್ರಮಾಣ ವ್ಯತ್ಯಾಸವಿದೆ. ಮೂರು ವರ್ಷದ ಒಳಗಿನ ಚಿಣ್ಣರು ಹಲ್ಲುಜ್ಜುವ ಕ್ರಮವನ್ನು ಇನ್ನೂ ರೂಢಿಸಿಕೊಳ್ಳುತ್ತಿರುತ್ತಾರೆ. ಜತೆಗೆ ಪುಟ್ಟ ಬಾಯಿಯ ಭರ್ತಿ ಹಲ್ಲುಗಳೂ ಇರುವುದಿಲ್ಲ. ಹಾಗಾಗಿ ಅವರಿಗೆ ದೊಡ್ಡ ಅಕ್ಕಿಕಾಳಿನ ಗಾತ್ರದ ಟೂತ್‌ಪೇಸ್ಟ್‌ ಸಾಕಾಗುತ್ತದೆ. 3 ವರ್ಷದ ಮೇಲಿನ ಮಕ್ಕಳಿಗೆ ಸಣ್ಣ ಕಡಲೆಬೀಜದಷ್ಟು ಗಾತ್ರದ ಟೂತ್‌ಪೇಸ್ಟ್‌ ಸಾಕು. ಇದರಿಂದ ಫ್ಲೂರೋಸಿಸ್‌ ಅಪಾಯವಿಲ್ಲದೆಯೇ ಹಲ್ಲುಗಳ ಸುರಕ್ಷತೆ ಯನ್ನು ಕಾಪಾಡಿಕೊಳ್ಳಬಹುದು.

ಇದನ್ನು ಓದಿ: Tooth Brush: ನಿಮ್ಮ ಟೂತ್‌ಬ್ರಷ್‌ಗಳು ಸ್ವಚ್ಛವಾಗಿವೆಯೇ?

ಸರಿಯಾದ ಕ್ರಮವೇನು?

ಚಿಕ್ಕ ಮಕ್ಕಳಿಗೆ ಕಡಿಮೆ ಫ್ಲೂರೈಡ್‌ ಸಾಂದ್ರತೆ ಇರುವಂಥ ಟೂತ್‌ಪೇಸ್ಟ್‌ಗಳು ಲಭ್ಯವಿದೆ. ಅವುಗಳನ್ನೇ ಬಳಸಿ. ಆಗ ಮಕ್ಕಳು ಆಕಸ್ಮಿಕವಾಗಿ ನುಂಗಿದರೂ ಅಪಾಯವಿರುವುದಿಲ್ಲ. ಮೂರು-ನಾಲ್ಕು ವರ್ಷದ ಒಳಗಿನ ಮಕ್ಕಳು ಹಲ್ಲುಜ್ಜುವಾಗ ಅವರೇನು ಮಾಡುತ್ತಿದ್ದಾರೆ ಎನ್ನುವುದನ್ನು ಮನೆಯ ಹಿರಿಯರು ಗಮನಿಸಿ. ಎಷ್ಟೋ ಬಾರಿ ಅವರು ಪೇಸ್ಟ್‌ ನೊರೆಯನ್ನು ಸರಿಯಾಗಿ ಉಗಿಯುವುದು ಅಥವಾ ಬಾಯಿ ಮುಕ್ಕಳಿಸುವುದನ್ನು ಸರಿಯಾಗಿ ಮಾಡುವುದಿಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ.

ದಿನಕ್ಕೆರಡು ಬಾರಿ ಹಲ್ಲುಜ್ಜಬೇಕು ಮತ್ತು ಅಷ್ಟು ಸಾಕು. ತಟ್ಟಿದ್ದಕ್ಕೆ ಮುಟ್ಟಿದ್ದಕ್ಕೆ ಹಲ್ಲುಜ್ಜಬೇಡಿ. ಹಾಗೆಯೇ ಶಕ್ತಿ ಹಾಕುವುದು, ಒರಟಾದ ಬ್ರಷ್‌ನಿಂದ ಉಜ್ಜುವುದು ಮಾಡಬೇಡಿ. ಇದರಿಂದ ಹಲ್ಲುಗಳ ಎನಾಮಲ್‌ ಹಾಳಾಗುತ್ತದೆ. ಬದಲಿಗೆ ಮೃದುವಾದ ಬ್ರಷ್‌ನಿಂದ ಬಾಯಿಯ ಮೂಲೆಮೂಲೆಗಳನ್ನು ತಲುಪುವಂತೆ ಲಘುವಾಗಿ ಉಜ್ಜಿ.