Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?
Health Tips: ಬೇಸಿಗೆಯ ದಿನಗಳಲ್ಲೇ ನೀರು, ಆಹಾರದ ಸೊಂಕುಗಳು ಸಾಮಾನ್ಯ. ಮಕ್ಕಳಿಗೆ ಅನಾರೋಗ್ಯ ಕಾಡುವಾಗ ಅದನ್ನು ಗುಣ ಪಡಿಸುವುದಕ್ಕೆ ವೈದ್ಯರು ಮತ್ತು ಔಷಧಿಯ ನೆರವು ದೊರೆಯುವುದು ನಿಜವಾದರೂ ಅನಾರೋಗ್ಯದ ನಂತರ ಹೇಗೆ? ಅಂದರೆ ಹೊಟ್ಟೆನೋವು, ಜ್ವರ, ಕೆಮ್ಮು ಮುಂತಾವು ಗುಣವಾದ ನಂತರ ಕಾಡುವ ಸುಸ್ತು, ನಿಶ್ಶಕ್ತಿ ಕಳೆಯುವುದಕ್ಕೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು. ಅನಾರೋಗ್ಯದ ದಿನಗಳಲ್ಲಿ ಮತ್ತು ನಂತರದ ಚೇತರಿಕೆಯಲ್ಲಿ ಮಕ್ಕಳ ಆರೈಕೆಗೆ ಏನೆಲ್ಲಾ ಮಾಡಬಹುದು?


ನವದೆಹಲಿ: ಮಕ್ಕಳ ಪರೀಕ್ಷೆಗಳೆಲ್ಲ ಮುಗಿದು ರಜಾ-ಮಜಾ ಆರಂಭವಾಗಿದೆ. ಬೇಸಿಗೆ ಶಿಬಿರಗಳ ಭರಾಟೆ ಒಂದೆಡೆಗಾದರೆ, ಪ್ರಯಾಣಗಳ ಮಜಾ ಇನ್ನೊಂದೆಡೆ. ಎಲ್ಲೆಲ್ಲೋ ಪ್ರಯಾಣಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಮಯವೆಂದರೆ ಮಕ್ಕಳ ಬೇಸಿಗೆಯ ರಜಾ ದಿನಗಳು. ಆದರೆ ಇಂಥ ಬೇಸಿಗೆಯ ದಿನಗಳಲ್ಲೇ ನೀರು, ಆಹಾರದ ಸೊಂಕುಗಳು ಸಾಮಾನ್ಯ. ಮಕ್ಕಳಿಗೆ ಅನಾರೋಗ್ಯ ಕಾಡುವಾಗ (Health Tips) ಅದನ್ನು ಗುಣಪಡಿಸುವುದಕ್ಕೆ ವೈದ್ಯರು ಮತ್ತು ಔಷಧಿಯ ನೆರವು ದೊರೆಯುವುದು ನಿಜವಾದರೂ ಅನಾರೋಗ್ಯದ ನಂತರ ಹೇಗೆ? ಅಂದರೆ ಹೊಟ್ಟೆನೋವು, ಜ್ವರ, ಕೆಮ್ಮು ಮುಂತಾವು ಗುಣವಾದ ನಂತರ ಕಾಡುವ ಸುಸ್ತು, ನಿಶ್ಶಕ್ತಿ ಕಳೆಯುವುದಕ್ಕೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು. ಅನಾರೋಗ್ಯದ ದಿನಗಳಲ್ಲಿ ಮತ್ತು ನಂತರದ ಚೇತರಿಕೆಯಲ್ಲಿ ಮಕ್ಕಳ ಆರೈಕೆಗೆ ಏನೆಲ್ಲಾ ಮಾಡಬಹುದು?
ಆಡುವ ಮಕ್ಕಳ ಜೀವ ಅಂಗಳದಲ್ಲಿ ಎಂಬ ಮಾತಿದೆ. ಅನಾರೋಗ್ಯ ತೀವ್ರವಾಗಿ ಏಳುವುದಕ್ಕಾಗದು ಎನ್ನುವವರೆಗೆ ಮಕ್ಕಳು ಸಾಮಾನ್ಯ ಮಲಗುವುದಿಲ್ಲ. ಆದರೆ ಒಮ್ಮೆ ಮಲಗುವ ಹಂತಕ್ಕೆ ಬಂದರೆ, ತಡಮಾಡದೆ ವೈದ್ಯರ ನೆರವು ಪಡೆಯಿರಿ. ಅನಾರೋಗ್ಯ ಪೀಡಿತ ಮಕ್ಕಳು ದಿನಕ್ಕೆ ೧೨-೧೪ ತಾಸುಗಳ ನಿದ್ದೆ ಮಾಡಿದರೆಂದರೆ ಬೇಗ ಚೇತರಿಸಿಕೊಳ್ಳುತ್ತಾರೆ. ಇಂಥ ಹೊತ್ತಿನಲ್ಲಿ ಸ್ಕ್ರೀನ್ ಟೈಮ್ ತಪ್ಪಿಸಿದರೆ ನಿದ್ದೆಗೆ ತೊಂದರೆಯಾಗುವುದನ್ನೂ ತಪ್ಪಿಸಬಹುದು. ಬದಲಿಗೆ ಪಾಡ್‌ಕಾಸ್ಟ್‌ಗಳನ್ನು ಕೇಳಬಹುದು; ಪುಸ್ತಕ ಓದಬಹುದು. ಜ್ವರ ತಗ್ಗಿದ ಹೊತ್ತಿಗೆ ಮನೆಯೊಳಗೇ ಬೇರೇನಾದರೂ ಚಟುವಟಿಕೆಗಳನ್ನು ಮಾಡ ಬಹುದು. ಮಕ್ಕಳನ್ನು ಕಾಡುವ ಅನಾರೋಗ್ಯಕ್ಕೆ ಔಷಧಿ ಇದಲ್ಲ. ಆದರೆ ಚೇತರಿಕೆಯನ್ನು ಶೀಘ್ರ ಮತ್ತು ಸುಗಮ ಮಾಡಲು ಈ ಕ್ರಮಗಳು ಉಪಯುಕ್ತ. ಇನ್ನೂ ಯಾವ ಕ್ರಮಗಳು ಅವರ ಚೇತರಿಕೆ ಹಾದಿಯನ್ನು ಸುಗಮಗೊಳಿಸುತ್ತವೆ?
ಪೇಯಗಳು: ಅನಾರೋಗ್ಯದ ದಿನಗಳಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಒದಗಿಸುವುದು ಮಹತ್ವದ್ದು. ಇದರಿಂದ ದೇಹ ಬಳಲದಂತೆ, ನಿಶ್ಶಕ್ತಿ ಕಾಡದಂತೆ ಮಾಡಬಹುದು. ಇದಕ್ಕೆ ಕೇವಲ ನೀರನ್ನೇ ನೆಚ್ಚಿಕೊಳ್ಳಬೇಕೆಂದಿಲ್ಲ. ಎಳನೀರು, ಒಆರೆಸ್, ಎಲೆಕ್ಟ್ರೊಲೈಟ್‌ಗಳು, ತರಕಾರಿಗಳ ಸೂಪು, ಬೇಳೆಯ ಕಟ್ಟುಗಳು, ಕಾಳು ಮತ್ತು ತರಕಾರಿ- ಈ ಎರಡನ್ನೂ ಸೇರಿಸಿ ಬೇಯಿಸಿದ ಕಟ್ಟು ಮುಂತಾದ ಯಾವುದನ್ನೂ ನೀಡಬಹುದು. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಅಗತ್ಯವಾದ ಪೋಷಣೆಯೂ ದೊರೆಯುತ್ತದೆ.
ಹಣ್ಣು-ತರಕಾರಿಗಳು: ಅವರ ಅನಾರೋಗ್ಯ ಗುಣವಾಗುವುದಕ್ಕೆ ಪೂರಕವಾದ ಹಣ್ಣು-ತರಕಾರಿಗಳು ಯಾವುದು ಎಂಬ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆಯಿರಿ. ಉದಾ, ಹೊಟ್ಟೆನೋವು, ಡಯರಿಯಾದಂಥ ಸಮಸ್ಯೆಯಲ್ಲಿ ದಾಳಿಂಬೆ, ಮಜ್ಜಿಗೆಯಂಥವು ಬೇಗ ಗುಣವಾಗಲು ನೆರವಾಗುತ್ತವೆ. ವಾಂತಿ ಕಾಡಿಸುತ್ತಿದ್ದಾಗ ಶುದ್ಧ ಬೂದುಗುಂಬಳ ಕಾಯಿಯ ರಸಕ್ಕೆ ಚಿಟಿಕೆ ಉಪ್ಪು, ಕೊಂಚ ಸಕ್ಕರೆ ಹಾಕಿ ಕುಡಿಯಲು ನೀಡಿದರೆ ಹಿತವಾಗುತ್ತದೆ. ಇಂಥವು ಅನಾರೋಗ್ಯದಿಂದ ಶೀಘ್ರ ಚೇತರಿಕೆಗೆ ಸಹಕಾರಿ. ಈ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರಲ್ಲಿ ಕೇಳಿದರೆ ಸೂಕ್ತ.
ಇದನ್ನು ಓದಿ: Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ
ರುಚಿಯೂ ಮುಖ್ಯ: ಅನಾರೋಗ್ಯದಲ್ಲಿ ತಿನ್ನುವುದೇ ಬೇಡ ಎನ್ನುವ ಮಕ್ಕಳಿಗೆ ತಿನ್ನಿಸುವುದೇ ಸಾಹಸವಾಗಬಹುದು. ಹಾಗಾಗಿ ಮಕ್ಕಳ ಬಾಯಿ ರುಚಿಗೆ ಆದ್ಯತೆ ನೀಡಿ. ಇದರರ್ಥ ಶೀತ-ಕೆಮ್ಮಿನಲ್ಲಿ ಅವರು ಆಸೆಪಟ್ಟರೆಂದು ಐಸ್‌ಕ್ರೀಮ್ ತಿನ್ನಿಸುವುದಲ್ಲ. ಬದಲಿಗೆ, ಆರೋಗ್ಯಕರ ಸ್ಮೂದಿಗಳನ್ನು ನೀಡಿದರೆ ಹಸಿವೆಯೂ ಇಂಗುತ್ತದೆ, ಬಾಯಿಯ ರುಚಿಯೂ ತಣಿಯಬಹುದು. ಸಿಹಿ ಯನ್ನು ಇಷ್ಟಪಡುವ ಮಕ್ಕಳಿಗೆ ಚಾಕಲೇಟ್‌ನಂಥ ಜಂಕ್‌ಗಳ ಬದಲು ಖರ್ಜೂರ, ಅಂಜೂರ, ಒಣದ್ರಾಕ್ಷಿಗಳಂಥ ಪೌಷ್ಟಿಕ ಆಹಾರಗಳು, ಅಕ್ಕಿ ಅಥವಾ ಗೋದಿ ನುಚ್ಚಿನ ಪಾಯಸದಂಥವು ಇಷ್ಟವಾಗಬಹುದು. ಉಪ್ಪು-ಖಾರ ಇಷ್ಟಪಡುವ ಮಕ್ಕಳಿಗೆ ಮಸಾಲ ಆಮ್ಲೆಟ್, ಸೋಯಾ ಚಂಕ್ ಭುರ್ಜಿ, ಹುರಿದ ಬೀಜಗಳಂಥವು ಚೇತರಿಕೆಯನ್ನು ಸುಗಮವಾಗಿಸುತ್ತವೆ.
ಸತ್ವಗಳು: ನೆನಪಿಡಿ, ಅನಾರೋಗ್ಯದ ಚೇತರಿಕೆಯಲ್ಲಿ ಆಹಾರದ ಮೂಲಕ ದೇಹ ಸೇರುವ ಪೋಷಕಾಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಕಾರ್ಬ್-ಪ್ರೊಟೀನ್-ನಾರು-ನೀರು-ಖನಿಜಗಳ ಸೂತ್ರವನ್ನು ಎಂದಿಗೂ ತಪ್ಪಿಸಬೇಡಿ. ಇದರಿಂದ ಸುಸ್ತು, ಆಯಾಸ, ಮಾಂಸಖಂಡಗಳಲ್ಲಿನ ಜಡತೆ, ಕೀಲುಗಳ ನೋವು ಮುಂತಾದ ಕಿರಿಕಿರಿಗಳನ್ನು ಬೇಗನೇ ದಾಟಬಹುದು. ಬಾಲ್ಯ ಜೀವನದ ಲವಲವಿಕೆಯ ಲಯಕ್ಕೆ ಶೀಘ್ರ ಮರಳಬಹುದು.