Health Tips: ಚಳಿಗಾಲದಲ್ಲಿ ಕೀಲುಗಳ ಆರೈಕೆ ಹೇಗೆ?
Joint pain: ಎಷ್ಟೊ ಜನರಿಗೆ ಕೀಲುಗಳು ಬಿಗಿದು, ನೋವು ಪ್ರಾರಂಭವಾದಾಗಲೇ ಚಳಿಗಾಲ ಶುರು ಎಂಬುದು ಅರಿವಿಗೆ ಬರುತ್ತದೆ… ಅಷ್ಟು ಸೂಕ್ಷ್ಮ ಅವು.. ಹಾಗಾಗಿ ಚಳಿಗಾಲದಲ್ಲಿ ಕೀಲುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. ಅದರಲ್ಲೂ ಹಿರಿಯ ನಾಗರಿಕರು ಮತ್ತು ಆರ್ಥರೈಟಿಸ್ ಸಮಸ್ಯೆಯಿಂದ ಬಳಲು ವವರಿಗೆ ಚಳಿಗಾಲವನ್ನು ನೋವಿಲ್ಲದೆ ದಾಟುವುದೇ ಕಷ್ಟ. ಚಳಿಗಾಲದಲ್ಲಿ ಕೀಲುಗಳಿಗೆ ಏನೆಲ್ಲ ಆರೈಕೆ ಮಾಡಿದರೆ ನೋವು ಶಮನವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ನವದೆಹಲಿ: ಚಳಿಗಾಲದ ಮುನ್ಸೂಚನೆ ನೀಡುವುದಕ್ಕೆ ದೇಹದಲ್ಲಿ ಹಲವು ಅಂಗಗಳು ಸಿದ್ಧ ವಾಗಿರುತ್ತವೆ. ಅವುಗಳಲ್ಲಿ ಒಂದು ನಮ್ಮ ದೇಹದ ಕೀಲುಗಳು. ಎಷ್ಟೊ ಜನರಿಗೆ ಕೀಲುಗಳು ಬಿಗಿದು, ನೋವು ಪ್ರಾರಂಭವಾದಾಗಲೇ ಚಳಿಗಾಲ ಶುರು ಎಂಬುದು ಅರಿವಿಗೆ ಬರುತ್ತದೆ… ಅಷ್ಟು ಸೂಕ್ಷ್ಮ ಅವು. ಹಾಗಾಗಿ ಚಳಿ ಗಾಲದಲ್ಲಿ ಕೀಲುಗಳಿಗೆ (Joint Pain) ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. ಅದರಲ್ಲೂ ಹಿರಿಯ ನಾಗರಿಕರು ಮತ್ತು ಆರ್ಥರೈಟಿಸ್ ಸಮಸ್ಯೆಯಿಂದ ಬಳಲುವವರಿಗೆ ಚಳಿ ಗಾಲವನ್ನು ನೋವಿಲ್ಲದೆ ದಾಟುವುದೇ ಕಷ್ಟ. ಚಳಿಗಾಲದಲ್ಲಿ ಕೀಲುಗಳಿಗೆ ಏನೆಲ್ಲ ಆರೈಕೆ ಮಾಡಿದರೆ ನೋವು ಶಮನವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಕೆಲವೊಮ್ಮೆ ಮಾಂಸಖಂಡಗಳ ಸೆಡವು, ಬಿಗಿತ ಎಲ್ಲ ವಯೋಮಾನದವರನ್ನೂ ಚಳಿಗಾಲದಲ್ಲಿ ಕಾಡಬಲ್ಲದು. ಅದಕ್ಕೆ ವಯಸ್ಸಾಗಿರಬೇಕು, ಅರ್ಥರೈಟಿಸ್ ಇರಬೇಕೆಂದೇನೂ ಇಲ್ಲ. ಆದರೆ ಇದರ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ ತೆರನಾಗಿ ಇರುತ್ತದೆ. ಕೀಲುಗಳಲ್ಲಿ ನೋವು, ಬಿಗಿತ, ನಿತ್ಯದ ಚಟುವಟಿಕೆಗಳಿಗೆ ತೊಂದರೆ, ಸುಸ್ತು ಇತ್ಯಾದಿಗಳು ಹೈರಾಣಾಗಿಸುತ್ತವೆ.
ಇದಕ್ಕೆ ವಿಟಮಿನ್ ಡಿ ಕೊರತೆಯೂ ಸಹ ಕಾರಣವಾಗಬಲ್ಲದು. ಚಳಿಗಾಲದಲ್ಲಿ ಹೆಚ್ಚಾಗಿ ಬಿಸಿಲಿಗೆ ಬೀಳದೆ ಇರುವುದು ಮತ್ತು ವಿಟಮಿನ್ ಡಿ ಯುಕ್ತ ಆಹಾರಗಳನ್ನು ಸೇವಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಸೂರ್ಯನ ಬೆಳಕು ಹೆಚ್ಚಿಲ್ಲದಂಥ ಸ್ಥಳಗಳಲ್ಲಿ ವಿಟಮಿನ್ ಡಿ ಕೊರತೆಯೂ ಹೆಚ್ಚಾಗಿ ನೋವುಗಳ ತೊಂದರೆಯೂ ಹೆಚ್ಚುತ್ತದೆ. ಜೊತೆಗೆ ಚಳಿ ಹೆಚ್ಚಾದಾಗ, ಅದರಲ್ಲೂ ದೀರ್ಘ ಅಚಲ ಸ್ಥಿತಿಯಿಂದ ಎದ್ದಾಗ, ರಕ್ತ ಸಂಚಾರ ಸುಗಮವಾಗಿ ಇರದೆ, ಕೀಲುಗಳಲ್ಲಿನ ದ್ರವದ ಚಲನೆಯೂ ಸರಾಗವಾಗದೆ… ನೋಡಿ, ನೋವಿಗೆ ಕಾರಣಗಳು ಎಷ್ಟೊಂದು ರೀತಿಯಲ್ಲಿ ಇರ ಬಹುದು.
Health Tips: ಯಾವ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಸೂಕ್ತ?
ವ್ಯಾಯಾಮವನ್ನು ತಪ್ಪಿಸಬೇಡಿ: ಚಳಿಗಾಲದಲ್ಲಿ ನೋವು ಅನುಭವಿಸುವವರಿಗೆ ಇದು ಮುಖ್ಯವಾದ ವಿಷಯ. ಇದರರ್ಥ ಬಕೆಟ್‌ಗಟ್ಟಲೆ ಬೆವರು ಹರಿಸಿ ಎಂದಲ್ಲ. ನಿಮ್ಮ ಕೀಲುಗಳ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮಗಳನ್ನು ವೈದ್ಯರು ಅಥವಾ ಫಿಸಿಯೊ ಮಾರ್ಗದರ್ಶನದಲ್ಲಿ ರೂಢಿಸಿಕೊಂಡರೆ ಮಂಡಿ, ಕುತ್ತಿಗೆ, ಬೆನ್ನು ಮುಂತಾದ ನೋವುಗಳನ್ನು ಹತೋಟಿಯಲ್ಲಿ ಇರಿಸ ಬಹುದು. ಬೆಳಗ್ಗೆ ಏಳುತ್ತಿದ್ದಂತೆ ಕೆಲಸ ಮಾಡುವುದಕ್ಕೆ ಕೀಲುಗಳು ಮುಷ್ಕರ ಹೂಡುವುದು ಸಹ ಕಡಿಮೆಯಾಗುತ್ತದೆ. ವಾರಕ್ಕೆ ಐದು ದಿನಗಳಾದರೂ ವ್ಯಾಯಾಮ ಬೇಕು. ಮನೆಯಲ್ಲೆ ನಿಮ್ಮ ಆರೋಗ್ಯಕ್ಕೆ ಹೊಂದುವಂಥ ಸ್ಟ್ರೆಚ್‌ಗಳನ್ನು ದಿನವೂ ಮಾಡಬೇಕು. ಯೋಗ, ನಡಿಗೆ ಮುಂತಾದ ಯಾವುದೂ ಆಗಬಹುದು.
ಬೆಚ್ಚಗಿರಿ: ಚಳಿಯಲ್ಲಿ ಬೆಚ್ಚಗಿರುವುದು ನೋವು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಾಂಸಖಂಡಗಳಲ್ಲಿನ ಬಿಗಿತ, ಸೆಡವುಗಳು ಚಳಿ ಸೋಕಿದಷ್ಟೂ ಹೆಚ್ಚುತ್ತವೆ. ಹಾಗಾಗಿ ಬೆಚ್ಚಗಿರಿ. ಪದರಗಳಲ್ಲಿ ವಸ್ತ್ರಗಳನ್ನು ಧರಿಸಿ. ಇದರಿಂದ ಹೊರಗಿನ ವಾತಾವರಣಕ್ಕೆ ಸರಿ ಹೊಂದುವಂತೆ ದೇಹದ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಸುಲಭವಾಗುತ್ತದೆ.
ಆಹಾರ: ಇದು ಇನ್ನೊಂದು ಮುಖ್ಯವಾದ ಅಂಶ. ಆಹಾರದಲ್ಲಿ ಹೆಚ್ಚಾಗಿ ಒಮೇಗಾ 3 ಕೊಬ್ಬಿನಾಮ್ಲವಿರಲಿ. ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ, ದೇಹದಲ್ಲಿನ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು, ವಾಲ್‌ನಟ್, ಅಗಸೆ ಬೀಜಗಳು, ಬೆಣ್ಣೆಹಣ್ಣು ಮುಂತಾದವು ದಿನವೂ ಬೇಕು. ಜೊತೆಗೆ ಲೀನ್ ಪ್ರೊಟೀನ್‌ಗಳು, ನಾರು, ಸಂಕೀರ್ಣ ಪಿಷ್ಟಗಳು ಆಹಾರದಲ್ಲಿ ಅಗತ್ಯವಾಗಿ ಇರಲಿ. ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಮರೆಯದೆ ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳು ಸಹ ಕೊರತೆಯಾಗುವುದಿಲ್ಲ. ಆಹಾರ ಸತ್ವಪೂರ್ಣವಾದಷ್ಟೂ ದೇಹ ಶಕ್ತಿಯುತವಾಗುತ್ತದೆ.
ಮಸಾಜ್: ಅಭ್ಯಂಗ, ಎಣ್ಣೆ ಸ್ನಾನದಂಥವು ಕೀಲುಗಳಿಗೆ ಮತ್ತು ಮಾಂಸಪೇಶಿಗಳಿಗೆ ಆರಾಮ ಒದಗಿಸುತ್ತವೆ. ಆದರೆ ನೋವಿರುವ ಕೀಲು ಮತ್ತು ಮಾಂಸಖಂಡಗಳಿಗೆ ಎಣ್ಣೆ ನೀವುದಕ್ಕಿಂತ ಮೊದಲು ವೈದ್ಯರಲ್ಲಿ ಸಲಹೆ ಪಡೆಯಿರಿ. ಕಾರಣ, ಇರುವಂಥ ನೋವು ಯಾವುದರಿಂದ ಬಂದಿದೆ ಮತ್ತು ಯಾಕಾಗಿ ಬಂದಿದೆ ಎಂಬುದನ್ನು ಪರಿಶೀಲಿಸಿದ ನಂತರ, ಆ ಸ್ಥಿತಿಯಲ್ಲಿ ಮಸಾಜ್ ಸೂಕ್ತವೇ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗುತ್ತದೆ. ನೋವಿಲ್ಲದಿದ್ದಾಗ ಸುಮ್ಮನೆ ಅಭ್ಯಂಗವನ್ನು ಎಲ್ಲರೂ ಮಾಡಬಹುದು.
ನೀರು: ಬೇಸಿಗೆಯಲ್ಲಿ ನಾವೇ ಮರೆತರೂ ದೇಹ ನೀರು ಕೇಳುತ್ತದೆ. ಆದರೆ ಚಳಿಗಾಲದಲ್ಲಿ ದಾಹ ಕಡಿಮೆ. ಹಾಗೆಂದು ನೀರು ಕಡಿಮೆ ಕುಡಿದರೆ ಸಮಸ್ಯೆಗಳು ಅಮರಿಕೊಳ್ಳುತ್ತವೆ. ದೇಹದ ಕೋಶ ಗಳಲ್ಲಿ ನೀರು ಕಡಿಮೆಯಾದಷ್ಟೂ ಬಿಗಿತ ಹೆಚ್ಚುತ್ತದೆ, ನೋವು ಉಲ್ಭಣಿಸುತ್ತದೆ. ಹಾಗಾಗಿ ದಿನಕ್ಕೆ 10 ಗ್ಲಾಸ್ ನೀರು ಕುಡಿಯುವ ಗುರಿ ಇರಿಸಿಕೊಳ್ಳಿ.