Irritable Bowel Syndrome: ಬೇಸಿಗೆಯಲ್ಲಿ ಐಬಿಎಸ್ ಸಮಸ್ಯೆ ಬಗ್ಗೆ ಇರಲಿ ಎಚ್ಚರ!
ಐಬಿಎಸ್ ಅಥವಾ ಇರಿಟೇಬಲ್ ಬವಲ್ ಸಿಂಡ್ರೋಮ್ ಎಂಬುದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ . ಬೇಸಿಗೆ ಕಾಲದಲ್ಲಿ ಬೆವರು, ಧಗೆಯ ಕಾರಣಕ್ಕೆ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಹೊರಹೋಗುತ್ತದೆ. ಸೂಕ್ತ ಪ್ರಮಾಣದ ನೀರಿನಾಂಶ ದೇಹಕ್ಕೆ ಸಿಗದಿದ್ದಾಗ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗಿ ಮಲಬದ್ಧತೆ ಅಥವಾ ಅತಿಸಾರಕ್ಕೆ ಕಾರಣ ವಾಗುತ್ತದೆ. ಈ ಸಮಸ್ಯೆಗೆ ಬಾಹ್ಯ ಹಾಗೂ ಆಂತರಿಕ ಅಂಶಗಳೂ ಕಾರಣವಾಗುತ್ತವೆ. ಹೀಗಾಗಿ ಈ ಬೇಸಿಗೆಯಲ್ಲಿ ಈ ಐಬಿಎಸ್ ಸಮಸ್ಯೆ ಬಗ್ಗೆ ಅರಿತು ಎಚ್ಚರದಿಂದ ಇರುವುದು ಒಳಿತು.


ನವದೆಹಲಿ: ಐಬಿಎಸ್ ಅಥವಾ ಇರಿಟೇಬಲ್ ಬವಲ್ ಸಿಂಡ್ರೋಮ್ (Irritable Bowel Syndrome) ಎಂಬುದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ. ಇದು ಜಠರ ಕರುಳಿನ ಸಮಸ್ಯೆಯಾಗಿದ್ದು ಹೊಟ್ಟೆ ನೋವಿನ ಜೊತೆಗೆ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗಿ ಮಲಬದ್ಧತೆ ಅಥವಾ ಅತಿಸಾರಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಬಾಹ್ಯ ಹಾಗೂ ಆಂತರಿಕ ಅಂಶಗಳೂ ಕಾರಣವಾಗುತ್ತವೆ. ಸೂಕ್ತ ಪ್ರಮಾಣದ ನೀರಿನಾಂಶ ದೇಹಕ್ಕೆ ಸಿಗದಿದ್ದಾಗ ನಿರ್ಜಲೀಕರಣ ಸಮಸ್ಯೆ ಉಂಟಾಗಿಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬೇಸಿಗೆಯಲ್ಲಿ ಈ ಐಬಿಎಸ್ ಸಮಸ್ಯೆ ಬಗ್ಗೆ ಅರಿತು ಎಚ್ಚರದಿಂದ ಇರುವುದು ಒಳಿತು.
ಬೇಸಿಗೆಯಲ್ಲಿಯೇ ಏಕೆ ಈ ಸಮಸ್ಯೆ ಹೆಚ್ಚು?
ಬೇಸಿಗೆ ಕಾಲದಲ್ಲಿ ಬೆವರು, ಧಗೆಯ ಕಾರಣಕ್ಕೆ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಹೊರಹೋಗುತ್ತದೆ. ಸರಿಯಾದ ಪ್ರಮಾಣದ ನೀರಿನಾಂಶ ದೇಹಕ್ಕೆ ಸಿಗದಿದ್ದಾಗ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮಲದಲ್ಲಿ ನೀರಿನಾಂಶ ಕಡಿಮೆಯಾಗುವ ಕಾರಣ ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರ ಜೊತೆಗೆ ಬೇಸಿಗೆ ಕಾರಣಕ್ಕೆ ದೈಹಿಕ ಚಟುವಟಿಕೆ ಕಡಿಮೆಯಾದರೆ ಕರುಳಿನ ಚಲನೆ ಕಡಿಮೆಯಾಗಿ ಮಲಬದ್ಧತೆಗೆ ದೂಡುತ್ತದೆ.
ಇನ್ನು ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್ಗಳು (ಎಫ್ಒಡಿಎಮ್ಎಪಿಎಸ್) ಸಮೃದ್ಧವಾಗಿರುವ ಕೆಲ ಆಹಾರ ಪದಾರ್ಥಗಳು ಕೂಡ ಈ ಐಬಿಎಸ್ ನಲ್ಲಿ ಕಂಡುಬರುವ ನೋವು , ಅತಿಸಾರ, ಮಲಬದ್ದತೆ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ಕಲ್ಲಂಗಡಿ, ಮಾವು , ಕೆಲ ಹಣ್ಣುಗಳ ಅತಿಯಾದ ಸೇವನೆಯೂ ಕೂಡ ಸೇರಿಕೊಂಡಿವೆ. ಇನ್ನು ಅತಿಸಾರಕ್ಕೆ ಕೆಲ ಕೂಲ್ ಡ್ರಿಂಕ್ , ಫ್ರೂಟ್ ಜ್ಯೂಸ್ ಸೇವನೆಯೂ ಕಾರಣ ವಾಗುತ್ತವೆ. ಬೇಸಿಗೆಯ ಅತಿಯಾದ ಶಾಖವೂ ದೇಹಕ್ಕೆ ಒತ್ತಡವನ್ನು ಬೀರುತ್ತವೆ. ಈ ಒತ್ತಡವು ಐಬಿಎಸ್ ಲಕ್ಷಣವಾದ ಹೊಟ್ಟೆಯ ನೋವನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಕರುಳಿನ ಸೋಂಕು ಕೂಡ ಕಾರಣ:
ಬೇಸಿಗೆಯಲ್ಲಿ ಕರುಳಿನ ಸೋಂಕು ಸಾಮಾನ್ಯವಾದ ಸಮಸ್ಯೆ. ಆದರೆ ಇದು ಅತಿಸಾರವನ್ನು ಹೆಚ್ಚಿಸಿ ಐಬಿಎಸ್ ಸಮಸ್ಯೆ ಉಳ್ಳವರಿಗೆ ಮತ್ತಷ್ಟು ತೊಂದರೆ ಉಂಟುಮಾಡುತ್ತದೆ. ಈ ಸೋಂಕು ಕರುಳಿನ ಸೂಕ್ಷ್ಮಜೀವಿಯನ್ನು ಬದಲಾಯಿಸುವ ಸಾಧ್ಯತೆ ಇರುವುದರಿಂದ ಇದು ಹೊಸದಾಗಿ ಐಬಿಎಸ್ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆಯೂ ಇರುತ್ತದೆ.
ಯಾವ ರೀತಿಯ ಚಿಕಿತ್ಸೆ?
ಐಬಿಎಸ್ ಸಮಸ್ಯೆಗೆ ಸ್ವತಃ ಚಿಕಿತ್ಸೆ ಹಾಗೂ ವೈದ್ಯರ ಸಲಹೆ ಎರಡೂ ಮುಖ್ಯ. ನಾವು ತೆಗೆದುಕೊಳ್ಳುವ ಆಹಾರ, ಜೀವನ ಶೈಲಿ, ಒತ್ತಡ ಎಲ್ಲವೂ ಈ ಸಮಸ್ಯೆಗೆ ಕಾರಣವಾಗುವ ಹಿನ್ನಲೆ, ಕೆಲ ಸಂದರ್ಭಗಳಲ್ಲಿ ಸೇವಿಸುವ ಆಹಾರದಲ್ಲಿ ಬದಲಾವಣೆ , ಸಮತೋಲಿತ ಆಹಾರ ಸೇವನೆ, ದೈಹಿಕ ಚಟುವಟಿಕೆ ಮೂಲಕ ಐಬಿಎಸ್ ಸಮಸ್ಯೆಗೆ ಸ್ವ ಚಿಕಿತ್ಸೆ ಪಡೆಯಬಹುದು. ನಿತ್ಯದ ಆಹಾರದಲ್ಲಿ ನಿಮ್ಮ ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡುತ್ತಿರುವ ಆಹಾರವನ್ನು ಪತ್ತೆಹಚ್ಚಿ, ಅಂತಹ ಆಹಾರ ಸೇವನೆ ನಿಲ್ಲಿಸಿ. ಹಲವರಲ್ಲಿ ಐಬಿಎಸ್ ಸಮಸ್ಯೆಗೆ ತೀರಾ ಮಸಾಲೆ ಬಳಸಿದ ತಿನಿಸುಗಳೂ ಕಾರಣವಾಗುತ್ತವೆ.ಉತ್ತಮ ಪ್ರಮಾಣದ ನೀರಿನಾಂಶ, ಫೈಬರ್ ಸಮೃದ್ಧ ಆಹಾರ ಸೇವನೆ, ಸೂಕ್ತ ದೈಹಿಕ ಚಟುವಟಿಕೆ ಜೀರ್ಣಕ್ರಿಯೆಯನ್ನು ಆರೋಗ್ಯವಾಗಿಡಲು ಅತ್ಯಗತ್ಯ.
ಇದನ್ನು ಓದಿ: Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!
ಯಾವಾಗ ವೈದ್ಯರನ್ನು ಕಾಣಬೇಕು?
ಜೀವನಶೈಲಿಯಲ್ಲಿ ಬದಲಾವಣೆ ಬಳಿಕವೂ ಕಿಬ್ಬೊಟ್ಟೆಯಲ್ಲಿ ನೋವು, ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆ ಕಡಿಮೆಯಾಗದೇ ಇದ್ದಲ್ಲಿ,ಗ್ಯಾಸ್ ಅಥವಾ ಮಲವಿಸರ್ಜನೆ ಬಳಿಕವೂ ನೋವು ಕಡಿಮೆಯಾಗದೇ ಇದ್ದಲ್ಲಿ ಈ ಹಂತದಲ್ಲಿ ವೈದ್ಯರ ಸಲಹೆ ಅತ್ಯಗತ್ಯ.
ಐಬಿಎಸ್ ಸಮಸ್ಯೆ ಜೊತೆಗೆ ಸಡನ್ ತೂಕದಲ್ಲಿ ಇಳಿಕೆ, ಜ್ವರ, ಗುದದ್ವಾರದಲ್ಲಿ ರಕ್ತಸ್ರಾವ, ಅನೇಮಿಯಾ ಸಮಸ್ಯೆ ಕಂಡು ಬಂದಲ್ಲಿ ವೈದ್ಯರನ್ನು ಭೇಟಿಯಾಗಿ. ಮೂರು ತಿಂಗಳಿಗೂ ಅಧಿಕ ಕಾಲ ಐಬಿಎಸ್ ಸಮಸ್ಯೆ ಎದುರಿಸುವುದು ದೀರ್ಘಕಾಲದ ಸಮಸ್ಯೆಗೆ ಕಾರಣವಾಗಬಹುದು.
ಇನ್ನು ಆಹಾರ ತಜ್ಞರಿಂದ ದೇಹದ ಪ್ರಕೃತಿಗೆ ಅನುಗುಣವಾಗಿ, ಐಬಿಎಸ್ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಸಮತೋಲಿತ ಆಹೃಆ ಪದ್ದತಿಯ ಸಲಹೆಯನ್ನು ಪಡೆಯುವುದು ಉತ್ತಮ. ಜೊತೆಗೆ ವ್ಯಾಯಾಮ , ಒತ್ತಡ ತಗ್ಗಿಸುವ ಧ್ಯಾನದಂತಹ ಅಭ್ಯಾಸವೂ ಐಬಿಎಸ್ ಸಮಸ್ಯೆಯಿಂದ ಗುಣವಾಗಲು ನೆರವಾಗುತ್ತವೆ.
ಡಾ.ಅನುರಾಗ್ ಶೆಟ್ಟಿ,
ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿಸ್ಟ್, ಕೆಎಂಸಿ ಆಸ್ಪತ್ರೆ,
ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ಮಂಗಳೂರು