Heart Attack: ಒತ್ತಡದ ಜೀವನ ಶೈಲಿಯಿಂದ ಮಹಿಳೆಯರಲ್ಲಿ ಹೆಚ್ಚುತ್ತಿದೆ ಹೃದಯಾಘಾತ
Health Tips: ಜೀವನಶೈಲಿ ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಪುರುಷರಿಗಿಂತ ಮಹಿಳೆಯರಲ್ಲಿ ಹೃದಯರಕ್ತನಾಳದ ಅಪಾಯ ಹೆಚ್ಚುತ್ತಿದೆ ಎಂದು ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಶೋಧನೆ ತಿಳಿಸಿದೆ. ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ಅಸಮರ್ಪಕ ಆಹಾರಕ್ರಮ, ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳೂ ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ.

heart problem

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ (Heart attack) ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ಬಹಳಷ್ಟು ಹೆಚ್ಚುತ್ತಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಸಂಶೋಧನಾ ಪ್ರಕಾರ ಅನಾರೋಗ್ಯಕರ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಂತಹ ಒತ್ತಡಗಳು ಮಹಿಳೆಯರ ಹೃದಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಹೆಚ್ಚಿನ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿ ಮನೆ, ಕುಟುಂಬ,ಕೆಲಸ ಅಂತ ಬಿಡುವಿಲ್ಲದ ಸಮಯದಿಂದಾಗಿ ಆರೋಗ್ಯವನ್ನು ಕಡೆಗಣಿಸುತ್ತಾರೆ (Health Tips). ಹಾಗಾಗಿ ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಇರಬಹುದು.
ಜೀವನಶೈಲಿ ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಪುರುಷರಿಗಿಂತ ಮಹಿಳೆಯರಲ್ಲಿ ಹೃದಯರಕ್ತನಾಳದ ಅಪಾಯ ಹೆಚ್ಚುತ್ತಿದೆ ಎಂದು ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಶೋಧನೆ ತಿಳಿಸಿದೆ. ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ಅಸಮರ್ಪಕ ಆಹಾರ ಕ್ರಮ, ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳೂ ಮಹಿಳೆಯರಿಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗಲು ಕಾರಣ ಎನ್ನಲಾಗಿದೆ. ಪುರುಷರು ಮತ್ತು ಮಹಿಳೆಯರ ನಡುವಿನ ಹೃದ್ರೋಗ ಸಮಸ್ಯೆಗೆ ಹಲವು ಕಾರಣಗಳಿವೆ. ಅದರಲ್ಲೂ ಅಧಿಕ ರಕ್ತದೊತ್ತಡ ಹಾಗೂ ಋತುಬಂಧವಾದ ನಂತರದಲ್ಲಿ ಮಹಿಳೆಯರಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚುತ್ತಿದೆ ಎಂಬ ಅಂಶ ಸಂಶೋಧನಾ ವರದಿಯಲ್ಲಿ ತಿಳಿದು ಬಂದಿದೆ.
ಯಾವೆಲ್ಲ ಕಾರಣಗಳು?
ರಕ್ತದೊತ್ತಡ, ಪಿಸಿಒಎಸ್ ಮತ್ತು ಗರ್ಭಾವಸ್ಥೆ, ಮಧುಮೇಹ, ಪ್ರಸವಪೂರ್ವ ಹೆರಿಗೆ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ಹೃದಯಾಘಾತ ಸಮಸ್ಯೆ ಕಂಡುಬರುತ್ತಿದೆ. ಅಸಮರ್ಪಕ ಆಹಾರ, ನಿದ್ರಾಹೀನತೆ, ಕೊಲೆಸ್ಟ್ರಾಲ್, ಒತ್ತಡಯುಕ್ತ ಜೀವನ ಶೈಲಿಗಳು ಕೂಡ ಹೃದ್ರೋಗ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ಜೀವನ ಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆ ಮಾಡಿಕೊಂಡರೆ ಅಪಾಯದಿಂದ ಪಾರಾಗಬಹುದು.
ನಿದ್ರಾಹೀನತೆ: ಅನೇಕ ಮಹಿಳೆಯರು ಮನೆ, ಆಫೀಸ್ ಎಂದು ಕೆಲಸದ ನಡುವೆ ಬಿಡುವಿಲ್ಲದ ಜೀವನ ಸಾಗಿಸುತ್ತಿರುತ್ತಾರೆ. ಹಾಗಾಗಿ ನಿದ್ದೆಯ ಕೊರತೆ ಕಾಡಿ ಹೃದ್ರೋಗ ಸಮಸ್ಯೆ ಹೆಚ್ಚುತ್ತಿದೆ. ನಿಮ್ಮ ಆರೋಗ್ಯ ಉತ್ತಮವಾಗಿ ಇರಬೇಕು ಮತ್ತು ಹೃದ್ರೋಗ ಸಮಸ್ಯೆ ಬರಬಾರದು ಎಂದು ಬಯಸುವ ಮಹಿಳೆಯರು ಸರಿಯಾದ ನಿದ್ರಾ ಕ್ರಮ ಅನುಸರಿಸಬೇಕು.
ಹಾರ್ಮೋನುಗಳ ಅಸಮತೋಲನ: 40ರಿಂದ 45 ವರ್ಷದ ಅವಧಿಯಲ್ಲಿ ಮಹಿಳೆಯರ ಮುಟ್ಟು ನಿಲ್ಲುವ ಸಂದರ್ಭ ಹಾರ್ಮೋನುಗಳ ಅಸಮತೋಲನಿಂದಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ. ಗರ್ಭನಿರೋಧಕ ಮಾತ್ರೆ ಕೂಡ ಹೃದಯಘಾತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಇತ್ತೀಚಿನ ಅಧ್ಯಯನದ ಪ್ರಕಾರ, ಹೃದಯಾಘಾತದಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಾರೆ.
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡವು ಮತ್ತೊಂದು ಪ್ರಮುಖ ಅಪಾಯಕಾರಿ ಅಂಶ ವಾಗಿದ್ದು ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ, ಇದು ಅಪಧಮನಿಗಳನ್ನು ಹಾನಿಗೊಳಿಸಲಿದೆ. ಹಾಗಾಗಿ ಇದು ಹೃದಯಾಘಾತ, ಪಾರ್ಶ್ವ ವಾಯು ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನು ಓದಿ: Health Tips: ಮಕ್ಕಳಲ್ಲಿನ ದೃಷ್ಟಿದೋಷ ತಿಳಿಯುವುದು ಹೇಗೆ?
ಈ ಕ್ರಮ ಅನುಸರಿಸಿ
ವ್ಯಾಯಾಮ: ನಿತ್ಯ ಜೀವನದಲ್ಲಿ ಒಂದಿಷ್ಟು ವ್ಯಾಯಾಮ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ ಆಗಲಿದೆ. ನಿತ್ಯ ವ್ಯಾಯಾಮ ಮಾಡಿದಾಗ ಕೊಲೆಸ್ಟ್ರಾಲ್ ಸಮಸ್ಯೆ ಬಾರದೆ ದೇಹವು ಕೂಡ ಬಹಳ ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಹಾಗಾಗಿ ಸರಿಯಾದ ವ್ಯಾಯಾಮದಿಂದ ರಕ್ತದ ಸಕ್ಕರೆ ಮಟ್ಟ ಕಡಿಮೆ ಆಗುವ ಜತೆಗೆ ಹೃದಯಾಘಾತ, ಇತರ ಹೃದ್ರೋಗ ಸಮಸ್ಯೆ ಬರದಂತೆ ತಡೆಹಿಡಿಯಬಹುದು.
ಪೋಷಕಾಂಶ ಇರುವ ಆಹಾರ ಸೇವನೆ: ನಾರಿನಾಂಶ ಇರುವ ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಧಾನ್ಯಗಳು ಹಾಗೂ ಟ್ರಾನ್ಸ್ ಆಹಾರಗಳ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹದು. ಪ್ರಸ್ತುತ ಸಂಶೋಧನೆಯ ಪ್ರಕಾರ ಸಮತೋಲಿತ ಆಹಾರ ಸೇವನೆಯಿಂದ ಭಾರತೀಯ ಮಹಿಳೆಯರಲ್ಲಿ ಹೃದಯರಕ್ತನಾಳದ ಕಾಯಿಲೆಯನ್ನು ನಿಯಂತ್ರಿಸಬಹುದು. ಮಹಿಳೆಯರು ಆಹಾರ ಸೇವನೆಯ ಬಗ್ಗೆಯು ಸರಿಯಾದ ಕಾಳಜಿ ಹೊಂದಿರಬೇಕು ಎನ್ನುತ್ತಾರೆ ತಜ್ಞರು.