ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Weight Loss: ದೇಹದ ಒಳಗೆ ಅಡಗಿರುವ ಕೊಬ್ಬು ಕರಗಿಸುವುದು ಹೇಗೆ?

ಅಂಗಗಳ ಒಳಭಾಗದಲ್ಲಿ ತುಂಬುದ ಕೊಬ್ಬು ಅಥವಾ ವಿಸೆರಲ್‌ ಫ್ಯಾಟ್‌ ನಿಜಕ್ಕೂ ಅನಾರೋಗ್ಯಕಾರಿ. ದೇಹದ ಕಿಬ್ಬೊಟ್ಟೆಯ ಭಾಗದಲ್ಲಿ, ಸೊಂಟದ ಸುತ್ತಮುತ್ತಲೆಲ್ಲ ಬಲುಬೇಗನೇ ವಕ್ಕರಿಸಿಕೊಳ್ಳುವ ಈ ಕೊಬ್ಬು ಕರಗುವುದಕ್ಕೆ ಸಿಕ್ಕಾಪಟ್ಟೆ ಜಿಗುಟೂ ಹೌದು; ಸಾಕಷ್ಟು ಬೆವರಿಳಿಸುವಂತೆ ಮಾಡುವುದೂ ನಿಜ. ಆದರೆ ಈ ಬಗ್ಗೆ ಹೆಚ್ಚಿನ ಶಿಸ್ತು ಮತ್ತು ಬದ್ಧತೆಯನ್ನು ತಂದುಕೊಳ್ಳುವುದು ಅಗತ್ಯ. ಹಾಗಾದರೆ ಏನು ಮಾಡಬಹುದು?

ಕೊಬ್ಬು ಕರಗಿಸಲು ಇಲ್ಲಿದೆ ಟಿಪ್ಸ್!

fat loss

Profile Pushpa Kumari Jul 5, 2025 6:00 AM

ನವದೆಹಲಿ: ತೂಕ ಇಳಿಸುವಾಗ (Weight Loss) ಬರುವ ದೊಡ್ಡ ಸಮಸ್ಯೆ ಎಂದರೆ ಹೊಟ್ಟೆ ಕಡಿಮೆ ಮಾಡುವುದು ಹೇಗೆ ಎಂಬುದು. ಮಜ್ಜಿಗೆ ಮೇಲಿನ ಬೆಣ್ಣೆಯಂತೆ ಸದಾ ನಮ್ಮ ಶರೀರದ ಮೇಲೆಯೇ ತೇಲುತ್ತಿರುವ ಹೊಟ್ಟೆಗಾಗಿ ನಾವು ಎಷ್ಟೆಲ್ಲಾ ದೊಂಬರಾಟ ಮಾಡಬೇಕಾಗುತ್ತದಲ್ಲ. ಹೋದ ಮಾನ ಬರುವುದಿಲ್ಲ, ಬಂದ ಹೊಟ್ಟೆ ಹೋಗುವುದಿಲ್ಲ ಎಂಬಂಥ ಅಸಂಖ್ಯ ನಗೆಚಾಟಿಕೆಗಳು ಸಾಮಾಜಿಕ ತಾಣ ಗಳಲ್ಲಿ ತೇಲಾಡುತ್ತಿರುತ್ತವೆ. ಆದರೆ ನಕ್ಕು ಸುಮ್ಮನಾಗುವ ವಿಷಯವಲ್ಲ ಇದು! ಅದರಲ್ಲೂ ಅಂಗಗಳ ಒಳಭಾಗದಲ್ಲಿ ಕೊಬ್ಬು(Fat) ಅಥವಾ ವಿಸೆರಲ್‌ ಫ್ಯಾಟ್‌ ನಿಜಕ್ಕೂ ಅನಾರೋಗ್ಯಕಾರಿ. ದೇಹದ ಕಿಬ್ಬೊಟ್ಟೆಯ ಭಾಗದಲ್ಲಿ, ಸೊಂಟದ ಸುತ್ತಮುತ್ತಲೆಲ್ಲ ಬಲುಬೇಗನೇ ವಕ್ಕರಿಸಿಕೊಳ್ಳುವ ಈ ಕೊಬ್ಬು ಕರಗುವುದಕ್ಕೆ ಸಿಕ್ಕಾಪಟ್ಟೆ ಜಿಗುಟೂ ಹೌದು; ಸಾಕಷ್ಟು ಬೆವರಿಳಿಸುವಂತೆ ಮಾಡುವುದೂ ನಿಜ.

ಕೊಬ್ಬನ್ನು ಹೊತ್ತ ಈ ಜೀವಕೋಶಗಳು, ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುವುದು, ಹಾರ್ಮೋನುಗಳ ಏರುಪೇರು, ಟೈಪ್‌-2 ಮಧುಮೇಹವನ್ನು ತರುವಂಥ ನಾನಾ ರೀತಿಯ ತೊಂದರೆ ಗಳನ್ನು ಉಂಟುಮಾಡುತ್ತವೆ. ಹಾಗೆಂದು ಸುಲಭದಲ್ಲಿ ಕರಗದ ಈ ಕೊಬ್ಬನ್ನು ಹೊತ್ತುಕೊಂಡೇ ಬದುಕಿ ಆಪತ್ತು ತಂದುಕೊಳ್ಳಬೇಕೆಂದಿಲ್ಲ. ಅದನ್ನು ಕರಗಿಸಲು ಉಪಾಯಗಳಿವೆ. ಸರಿಯಾದ ಆಹಾರ ಮತ್ತು ಸೂಕ್ತ ವ್ಯಾಯಾಮದ ಮೂಲಕ ಇವನ್ನೆಲ್ಲ ಕರಗಿಸಬಹುದು. ಆದರೆ ಈ ಬಗ್ಗೆ ಹೆಚ್ಚಿನ ಶಿಸ್ತು ಮತ್ತು ಬದ್ಧತೆಯನ್ನು ತಂದುಕೊಳ್ಳುವುದು ಅಗತ್ಯ. ಹಾಗಾದರೆ ಏನು ಮಾಡ ಬಹುದು?

ಪಿಷ್ಟಕ್ಕೆ ಕತ್ತರಿ: ಕಡಿಮೆ ಕೊಬ್ಬಿನ ಆಹಾರಕ್ಕಿಂತ ಕಡಿಮೆ ಕಾರ್ಬ್‌ ಇರುವ ಆಹಾರಗಳು ಈ ನಿಟ್ಟಿ ನಲ್ಲಿ ಹೆಚ್ಚಿನ ಪರಿಣಾಮ ಬೀರಬಲ್ಲವು. ಈ ನಿಟ್ಟಿನಲ್ಲಿ ತಜ್ಞರು ನಡೆಸಿದ ಪ್ರಯೋಗಗಳ ಪ್ರಕಾರ, ಆಹಾರದಲ್ಲಿ ಇದೊಂದು ಮಾರ್ಪಾಡು ಮಾಡುವಷ್ಟರಲ್ಲೇ ಶೇ. 10ಕ್ಕಿಂತ ಹೆಚ್ಚಿನ ಒಳಾಂಗದ ಕೊಬ್ಬು ಕರಗುತ್ತದೆ. ತೂಕಕ್ಕಿಂತ ಪ್ರಧಾನವಾಗಿ ಹೊಟ್ಟೆ ಕರಗಿಸಬೇಕು ಎಂದಿದ್ದರೆ, ಇದರೊಂದಿಗೆ ಕಾರ್ಡಿಯೊ ಮಾಡುವುದನ್ನೂ ಪರಿಶೀಲಿಸಬಹುದು. ಇದರಿಂದ ತೂಕ ಕರಗುವುದರ ಜೊತೆಗೆ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಕಠಿಣ ಕಾರ್ಡಿಯೊಗಳೇ ಬೇಕೆಂದಿಲ್ಲ, ಏರೋಬಿಕ್ಸ್‌ ಮಾದರಿಯ ಲಘು ವ್ಯಾಯಾಮಗಳೇ ಸಾಕು.

ನಾರಿನಂಶ ಹೆಚ್ಚಿಸಿ: ಪಿಷ್ಟ ಮತ್ತು ಕೊಬ್ಬುರಹಿತವಾದ ಆಹಾರವೆಂದರೆ ನಾರು. ಇದನ್ನು ಊಟದಲ್ಲಿ ಹೆಚ್ಚಿಸುವುದು ಅಗತ್ಯ. ಇದರಿಂದ ಕುರುಕಲು ತಿನ್ನುವ ಬಾಯಿಯ ಚಪಲಕ್ಕೆ ಬ್ರೇಕ್‌ ಹಾಕಲು ಅನುಕೂಲ. ಮಾತ್ರವಲ್ಲ, ಮುಖ್ಯವಾಗಿ ಹೊಟ್ಟೆಯ ಕೊಬ್ಬು ಕರಗಿಸಲು ಸಮರ್ಥ ಮಾರ್ಗವೂ ಹೌದು. ಇದರ ಜೊತೆಗೆ, ಆಹಾರದಲ್ಲಿ ನಾರು ಸೇರಿಸಿಕೊಳ್ಳುವುದರಿಂದ ಹಲವು ಲಾಭಗಳಿವೆ. ಕರಗಬಲ್ಲ ನಾರು ದೇಹದೊಳಗೆ ಜಮೆಯಾಗುವ ಕೊಲೆಸ್ಟ್ರಾಲ್‌ನಂಥ ಕೆಟ್ಟ ಕೊಬ್ಬನ್ನು ಕರಗಿಸಬಲ್ಲದು. ಕರಗದಿರುವ ನಾರು ಕರುಳಿನ ಆರೋಗ್ಯ ಸುಧಾರಿಸಿ, ಮಲ ಬದ್ಧತೆಯನ್ನು ನಿವಾರಿಸಬಲ್ಲದು. ದೇಹದಲ್ಲಿನ ಕೊಬ್ಬು ಕರಗಿಸುವಲ್ಲಿ ಇವೆರಡೂ ಅಂಶಗಳು ಮುಖ್ಯವಾದವು.

ಇದನ್ನು ಓದಿ:Health Tips: ವಿಟಮಿನ್‌ ಡಿ: ನಮಗೇಕೆ ಬೇಕು?

ಪ್ರೊಟೀನ್:‌ ಇದನ್ನಂತೂ ಕಡ್ಡಾಯವಾಗಿ ಹೆಚ್ಚಿಸಬೇಕು. ಕಾರ್ಬ್‌ ಕಡಿತದಿಂದ ಉಂಟಾಗುವ ಹಸಿವನ್ನು ಇಂಗಿಸಲು ಇದುವೇ ಮುಖ್ಯ ಮಾರ್ಗ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಕೊಡುವ ಪ್ರೊಟೀನ್‌ಗಳು, ದೇಹವನ್ನು ಸದೃಢವಾಗಿಸಲೂ ನೆರವಾಗುತ್ತದೆ. ಇನ್ನೊಂದು ಕುತೂ ಹಲದ ಅಂಶವೆಂದರೆ, ಪ್ರೊಟೀನ್‌ ಜೀರ್ಣ ಮಾಡುವುದಕ್ಕೂ ಕ್ಯಾಲರಿ ಖರ್ಚಾಗುತ್ತದೆ. ಒಟ್ಟಿನಲ್ಲಿ ಕೊಬ್ಬು ಕರಗಿಸುವ ಒಳ್ಳೆಯ ಮಾರ್ಗವಿದು

ಸಕ್ಕರೆ ಮೇಲೆ ಅಕ್ಕರೆ ಬೇಡ: ಮೇಲಿಂದ ತಿನ್ನುವ ಸಕ್ಕರೆಯ ಪ್ರಮಾಣವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ. ಸಿಹಿ ತಿಂಡಿಗಳು ಮಾತ್ರವಲ್ಲ, ಸೋಡಾ, ಫೂಟ್‌ ಜ್ಯೂಸ್‌ ಮತ್ತು ಯಾವುದೇ ಸಂಸ್ಕರಿತ ಆಹಾರಗಳನ್ನು ಹತ್ತಿರ ಸೇರಿಸಬೇಡಿ. ಯಾವುದೇ ವಿಟಮಿನ್‌, ಖನಿಜಗಳನ್ನು ದೇಹಕ್ಕೆ ನೀಡದ ಇಂಥ ಒಣ ಕ್ಯಾಲರಿಗಳು ತೂಕವನ್ನಂತೂ ಯಶಸ್ವಿಯಾಗಿ ಏರಿಸುತ್ತವೆ. ಹೊಟ್ಟೆಯ ಭಾಗದ ಕೊಬ್ಬು ಶೇಖರಣೆಗೆ ರಹದಾರಿ ಮಾಡಿಕೊಡುತ್ತವೆ. ಇವೆಲ್ಲವುಗಳ ಜೊತೆಗೆ ಕಡ್ಡಾಯವಾಗಿ ಬೇಕಿರುವುದು ವ್ಯಾಯಾಮ. ಚಟುವಟಿಕೆಯಿಂದ ಬೆವರಿದಷ್ಟೂ ಕೊಬ್ಬು ಕರಗುತ್ತದೆ.