Eye Care: ರಾತ್ರಿ ವಾಹನ ಚಾಲನೆ ಮಾಡುವಾಗ ಕಣ್ಣಿನ ಆರೈಕೆಗಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು!
ಹಗಲಿನ ಹೊತ್ತು ಗಾಡಿ ಚಲಾಯಿಸುವಾಗ ನಮ್ಮ ದೃಷ್ಟಿಯ ನಿಖರತೆಗೂ ರಾತ್ರಿಯ ಹೊತ್ತಿನ ಈ ಸಾಮರ್ಥ್ಯಕ್ಕೂ ಅತೀವ ವ್ಯತ್ಯಾಸವಿರುತ್ತದೆ. ಇದೇ ಕಾರಣಕ್ಕಾಗಿ ರಾತ್ರಿಯ ಡ್ರೈವಿಂಗ್ ಸಮಯವು ಹೆಚ್ಚಿನ ದಕ್ಷತೆಯನ್ನೂ, ಏಕಾಗ್ರತೆಯನ್ನೂ, ಜಾಗರೂಕತೆಯನ್ನೂ ಬೇಡುತ್ತದೆ. ಹಾಗಾದರೆ ರಾತ್ರಿಯ ಸಮಯದಲ್ಲಿ ಗಾಡಿ ಚಲಾಯಿಸುವಾಗ ದೃಷ್ಟಿಯ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?
![ರಾತ್ರಿ ವಾಹನ ಚಾಲನೆ! ಕಣ್ಣಿನ ದೃಷ್ಟಿಯನ್ನು ಕಾಪಾಡುವುದು ಹೇಗೆ?](https://cdn-vishwavani-prod.hindverse.com/media/original_images/Driving_At_Night.jpg)
Health tips
![Profile](https://vishwavani.news/static/img/user.png)
ನವದೆಹಲಿ: ಸೂರ್ಯನ ಬೆಳಕಿನಲ್ಲಿ ಕೆಲಸಗಳನ್ನು ಮಾಡುವಾಗ ಇರುವ ನಿಖರತೆಗೂ, ಕೃತಕ ಬೆಳಕಿನಲ್ಲಿ ಇದೇ ಕೆಲಸವನ್ನು ಮಾಡುವಾಗ ಇರುವ ನಿಖರತೆಗೂ ವ್ಯತ್ಯಾಸವಿರುವುದು ಸಹಜ. ಇದು ನಮ್ಮ ದೃಷ್ಟಿಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಲ್ಲದು. ಉದಾ, ಹಗಲಿನ ಹೊತ್ತು ಗಾಡಿ ಚಲಾಯಿಸುವಾಗ ನಮ್ಮ ದೃಷ್ಟಿಯ ನಿಖರತೆಗೂ ರಾತ್ರಿಯ ಹೊತ್ತಿನ ಈ ಸಾಮರ್ಥ್ಯಕ್ಕೂ ಅತೀವ ವ್ಯತ್ಯಾಸವಿರುತ್ತದೆ. ಇದೇ ಕಾರಣಕ್ಕಾಗಿ ರಾತ್ರಿಯ ಡ್ರೈವಿಂಗ್ ಸಮಯವು ಹೆಚ್ಚಿನ ದಕ್ಷತೆಯನ್ನೂ, ಏಕಾಗ್ರತೆ ಯನ್ನೂ, ಜಾಗರೂಕತೆಯನ್ನೂ ಬೇಡುತ್ತದೆ. ಹಾಗಾದರೆ ರಾತ್ರಿಯ ಸಮಯದಲ್ಲಿ ಗಾಡಿ ಚಲಾಯಿಸುವಾಗ ದೃಷ್ಟಿಯ ಸುರಕ್ಷತೆಗೆ(Eye Care) ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?
ಎಚ್ಚರ: ರಾತ್ರಿಯ ಸಮಯದಲ್ಲಿ ಮೊದಲಾಗಿ ಕಾಡುವುದು ನಿದ್ದೆ. ಇದು ನಮ್ಮ ದೃಷ್ಟಿಯ ಸಾಮರ್ಥ್ಯದ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ದೆ ಕಾಡುತ್ತಿರುವ ಹೊತ್ತಿನಲ್ಲಿ ಗಾಡಿ ಚಲಾಯಿಸುವ ದುಸ್ಸಾಹಸ ಮಾಡಬೇಡಿ. ಅಂಥ ಅನಿವಾರ್ಯ ತೆಯಿದ್ದರೆ, ಸಣ್ಣದೊಂದು ನಿದ್ದೆ ತೆಗೆದು ನಂತರ, ದೇಹ-ಮನಸ್ಸುಗಳು ಜಾಗೃತಗೊಂಡ ಮೇಲೆ ಗಾಡಿ ಓಡಿಸಿ.
ತೇವಾಂಶ: ಪ್ರಯಾಣಿಸುವ ದಿನ ಹೆಚ್ಚಿನ ನೀರು ಕುಡಿಯಿರಿ. ಇದರಿಂದ ಕಣ್ಣುಗಳ ತೇವಾಂಶ ಕಾಪಾಡಿಕೊಳ್ಳಬಹುದು. ಇದರಿಂದ ರಸ್ತೆಯ ಮೇಲೆ ದೀರ್ಘ ಕಾಲ ಕಣ್ಣು ಕೀಲಿಸುವುದರಿಂದ ಕಾಣಿಸಿಕೊಳ್ಳುವ ದೃಷ್ಟಿಯ ಆಯಾಸ, ಕಣ್ಣುರಿ, ತುರಿಕೆಯಂಥವು ಕಾಡುವುದಿಲ್ಲ. ಕಣ್ಣು ಮಿಟುಕಿಸುವುದು ಸಹ ಇದಕ್ಕೊಂದು ಸರಳ ಪರಿಹಾರವಾಗಬಲ್ಲದು.
ನೋಡಬೇಡಿ: ಎದುರಿನಿಂದ ಬರುವ ವಾಹನಗಳ ದೀಪಗಳನ್ನು ನೇರವಾಗಿ ದಿಟ್ಟಿಸಬೇಡಿ. ಇದರಿಂದ ತಾತ್ಕಾಲಿಕವಾಗಿ ಕಣ್ಣು ಕಾಣದಂತಾಗುತ್ತದೆ. ನೀರು ತುಂಬಿಕೊಂಡು ದೃಷ್ಟಿ ಮಂಜಾಗುವುದು ಸಹ ಸಾಮಾನ್ಯ. ಇದು ಅಪಾಯಕ್ಕೆ ಕಾರಣವಾಗಬಲ್ಲದು. ಜೊತೆಗೆ, ರಾತ್ರಿಯಲ್ಲಿ ವಾಹನ ಚಾಲನೆ ಮಾಡುವಾಗ ಅನುಕೂಲಕರವಾದ ಕೆಲವು ಕನ್ನಡಕಗಳು ಲಭ್ಯವಿವೆ. ಇವು ಎದುರಿನ ಹೆಡ್‌ಲೈಟ್‌ಗಳ ತೀಕ್ಷ್ಣ ಬೆಳಕನ್ನು ಮಂದ ಮಾಡುತ್ತವೆ. ಇಂಥವು ನಿಮ್ಮ ದೃಷ್ಟಿಗೆ ಪೂರಕವೇ ಎಂಬುದನ್ನೂ ಪರೀಕ್ಷಿಸಿಕೊಳ್ಳಿ.
ಸ್ವಚ್ಛ ಇರಿಸಿ: ಕಾರು ಅಥವಾ ಇನ್ನಾವುದೇ ನಾಲ್ಕು ಚಕ್ರದ ವಾಹನಗಳನ್ನು ಓಡಿಸುವಾಗ ಅದರ ವಿಂಡ್‌ಶೀಲ್ಡ್ ಮತ್ತು ಕನ್ನಡಿಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಇವುಗಳ ಮೇಲೆ ಕೊಳೆ, ದೂಳು, ಕಸಗಳೆಲ್ಲ ಕುಳಿತಿದ್ದರೆ ಮುಂದಿನ ದಾರಿ ಸಹಜವಾಗಿ ತೋರುವುದಿಲ್ಲ. ಜೊತೆಗೆ, ಎದುರಿನಿಂದ ಬರುವ ವಾಹನಗಳ ದೀಪಗಳು ಈ ಕೊಳೆಯ ಮೂಲಕ ಹಾದು ಹೋದಾಗ ದೃಗ್ಗೋಚರ ಆಗದಂತೆ ಮಾಡುತ್ತವೆ.
ಹೆಡ್‌ಲೈಟ್: ಪ್ರಖರವಾದ ಹೆಡ್‌ಲೈಟ್‌ಗಳು ಎದುರಿನ ವಾಹನ ಸವಾರರ ಕಣ್ಣು ಕುಕ್ಕಿ ಅಪಘಾತಗಳಾಗುವ ಸಂಭವಗಳು ಅತ್ಯಧಿಕ. ಹಾಗಾಗಿ ನಂನಮ್ಮ ಹೆಡ್‌ಲೈಟ್‌ಗಳನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಿರ್ವಹಿಸುವುದು ಎಲ್ಲರ ಹೊಣೆ. ವಾಹನಗಳಿಗೆ ಫಾಗ್ ಲೈಟ್‌ಗಳಿದ್ದರೆ ಮಳೆ, ಮಂಜು ಸುರಿಯುವ ದಿನಗಳಲ್ಲಿ ತಪ್ಪದೆ ಬಳಸಿ. ಇದು ದೃಷ್ಟಿಗೆ ಬೇಗನೇ ಗೋಚರವಾಗುತ್ತದೆ.
ಡ್ಯಾಶ್‌ಬೋರ್ಡ್: ರಾತ್ರಿಯ ವೇಳೆಗೆ ಸೂಕ್ತವಾಗುವಂತೆ ಹೆಚ್ಚಿನ ಡ್ಯಾಶ್‌ಬೋರ್ಡ್ ಡಿಸ್‌ಪ್ಲೇಗಳನ್ನು ಹೊಂದಿಸಿಯೇ ಇರಿಸಲಾಗುತ್ತದೆ. ಆದರೂ ಈ ಬಗ್ಗೆ ಗಮನ ನೀಡಿ. ಮೊಬೈಲ್ ಸ್ಕ್ರೀನ್‌ಗಳು ರಾತ್ರಿಯ ವೇಳೆಯಲ್ಲಿ ವಾಹನ ಚಾಲಕರ ಏಕಾಗ್ರತೆಗೆ ಭಂಗ ಬಾರದಂತಿರಲಿ. ರಸ್ತೆ ಮೇಲೆಯೇ ಗಮನ ಕೀಲಿಸಲು ಅನುಕೂಲ ಆಗುವಂಥ ಸೆಟ್ಟಿಂಗ್‌ಗಳನ್ನು ಈ ಡಿಸ್‌ಪ್ಲೇಗಳಿಗೆ ಇರಿಸಿಕೊಳ್ಳಿ.
ವಿರಾಮ ನೀಡಿ: ರಾತ್ರಿಯ ಹೊತ್ತು ದೀರ್ಘ ಕಾಲ ವಾಹನ ಚಾಲನೆ ಮಾಡುವುದು ಅಗತ್ಯ ಎಂದಾದರೆ ನಡುವೆ ವಿರಾಮ ನೀಡಿ, ಕೈಕಾಲಾಡಿಸಿ. ಸಾಧ್ಯವಾದರೆ ಬಿಸಿಯಾದ ಚಹಾ ಅಥವಾ ಕಾಫಿ ಹೀರಿ. ಇದರ ಕೆಫೇನ್ ಅಂಶಗಳು ಮೆದುಳನ್ನು ಜಾಗೃತಗೊಳಿಸುತ್ತವೆ. ಕಣ್ಣಿನ ಮೇಲೆ ಅಧಿಕ ಒತ್ತಡ ಬೀಳುವುದನ್ನು ತಪ್ಪಿಸಲು ಇವೆಲ್ಲವೂ ಪೂರಕವಾದ ಉಪಾಯಗಳು.
ಇದನ್ನು ಓದಿ: Health Tips: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲ ಆರೋಗ್ಯ ಭಾಗ್ಯ
ತಪಾಸಣೆ: ಕಾಲಕಾಲಕ್ಕೆ ದೃಷ್ಟಿಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ. ಇದರಿಂದ ದೃಷ್ಟಿ ದೋಷಗಳಿದ್ದರೆ ಅದಕ್ಕೆ ಮದ್ದರೆಯಬಹುದು. ನೀವು ಕನ್ನಡಕ ಉಪಯೋಗಿಸುವವರಾಗಿದ್ದರೆ, ಅದರ ಪವರ್ ಸರಿಯಾಗಿರುವುದು ರಾತ್ರಿಯ ವಾಹನ ಚಾಲನೆಯಲ್ಲಿ ಮಹತ್ವದ್ದೆನಿಸುತ್ತದೆ. ಈ ಎಲ್ಲ ಕ್ರಮಗಳನ್ನು ಅಳವಡಿಸಿಕೊಂಡರೆ ರಾತ್ರಿಯ ಹೊತ್ತಿನ ವಾಹನ ಚಾಲನೆಯಲ್ಲಿ ಕಣ್ಣುಗಳ ಮೇಲೆ ಒತ್ತಡ ಬೀಳುವುದನ್ನು ಬಹುಪಾಲು ಕಡಿಮೆ ಮಾಡಬಹುದು.