ಥೈರಾಯ್ಡ್‌ನ ಮೌನ ಅಸ್ವಸ್ಥತೆಗಳು ಭಾರತೀಯ ಮಹಿಳೆಯರಲ್ಲಿ ಫಲವಂತಿಕೆಯ ಹಾದಿ ತಪ್ಪಿಸುತ್ತಿವೆ, ವೈದ್ಯರ ಎಚ್ಚರಿಕೆ
ಅಂಡೋತ್ಪತ್ತಿ, ಋತು ಚಕ್ರಗಳು, ಚಯಾಪಚಯ ಮತ್ತು ಭ್ರೂಣದ ಆರಂಭಿಕ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೂ, ಮಹಿಳೆ ಯರು ಗರ್ಭ ಧರಿಸಲು ಕಷ್ಟ ಅನುಭವಿಸುವ ತನಕ ಮತ್ತು ಆಗಾಗ ಗರ್ಭಪಾತಗಳಾಗುವ ತನಕ ಥೈರಾಯ್ಡ್‌ನ ಸೂಕ್ಷ್ಮ ಅಸಮತೋಲನಗಳು ಬಹುತೇಕ ಪತ್ತೆಯೇ ಆಗುವುದಿಲ್ಲ
-
ಬೆಂಗಳೂರು: ಒತ್ತಡ ಅಥವಾ “ಹಾರ್ಮೋನುಗಳ ಸಾಮಾನ್ಯ ಬದಲಾವಣೆಗಳು” ಎಂದು ಥೈರಾಯ್ಡ್ ಅಸ್ವಸ್ಥತೆಗಳನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ, ಇದೇ ಭಾರತೀಯ ಮಹಿಳೆಯರಲ್ಲಿ, ವಿಶೇಷವಾಗಿ ಅವರ ಸಂತಾನೋತ್ಪತ್ತಿ ವರ್ಷಗಳಲ್ಲಿ ಬಂಜೆತನ ಮತ್ತು ಗರ್ಭ ಧಾರಣೆಯ ತೊಡಕುಗಳಿಗೆ ಪ್ರಮುಖ ಕಾರಣವಾಗಿ ಹೊರಹೊಮ್ಮುತ್ತಿದೆ.
ದುರದೃಷ್ಟವಶಾತ್ ಇದನ್ನು ಯಾರೂ ಗುರುತಿಸುವುದೇ ಇಲ್ಲ ಎಂದು ಬೆಂಗಳೂರಿನ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಮತ್ತು ಫಲವಂತಿಕೆ ತಜ್ಞೆ ಡಾ. ವಿದ್ಯಾ ವಿ.ಭಟ್ ಅವರು ಕಳವಳ ವ್ಯಕ್ತಪಡಿಸಿ ದ್ದಾರೆ. ಥೈರಾಯ್ಡ್ ಜಾಗೃತಿ ಮಾಸಾಚರಣೆ ಸಂದರ್ಭದಲ್ಲಿ ಅವರು ಈ ಕುರಿತು ತಮ್ಮ ಒಳನೋಟ ಗಳನ್ನು ಹಂಚಿಕೊಂಡಿದ್ದಾರೆ.
ಅಂಡೋತ್ಪತ್ತಿ, ಋತು ಚಕ್ರಗಳು, ಚಯಾಪಚಯ ಮತ್ತು ಭ್ರೂಣದ ಆರಂಭಿಕ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೂ, ಮಹಿಳೆಯರು ಗರ್ಭ ಧರಿಸಲು ಕಷ್ಟ ಅನುಭವಿಸುವ ತನಕ ಮತ್ತು ಆಗಾಗ ಗರ್ಭಪಾತಗಳಾಗುವ ತನಕ ಥೈರಾಯ್ಡ್‌ನ ಸೂಕ್ಷ್ಮ ಅಸಮತೋಲನಗಳು ಬಹುತೇಕ ಪತ್ತೆಯೇ ಆಗುವುದಿಲ್ಲ ಎಂದು ವೈದ್ಯರು ಗಮನಿಸಿದ್ದಾರೆ.
ಇದನ್ನೂ ಓದಿ: Health Tips: ನಾವು ತಿನ್ನುವ ಹಣ್ಣುಗಳಿಂದ ಕ್ಯಾನ್ಸರ್ ಅಪಾಯ ತಡೆಯಬಹುದೇ? ವೈದ್ಯರು ಹೇಳಿದ್ದೇನು?
ಬೆಂಗಳೂರಿನ ರಾಧಾಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ವಿದ್ಯಾ ವಿ ಭಟ್ ಅವರು ಇದನ್ನು ಹೀಗೆ ವಿವರಿಸುತ್ತಾರೆ: “ಥೈರಾಯ್ಡ್ ಕಾಯಿಲೆಗಳು ಬಂಜೆತನಕ್ಕೆ ಕಾರಣವಾಗುತ್ತ ವಾದರೂ ಅವುಗಳನ್ನು ತಪ್ಪಿಸಬಹುದು ಮತ್ತು ಸುಲಭವಾಗಿ ಚಿಕಿತ್ಸೆ ನೀಡಬಹುದು. ಅನಿಯಮಿತ ಋತುಚಕ್ರ, ಆಗಾಗ ಗರ್ಭಪಾತವಾಗುವುದು ಅಥವಾ ಗರ್ಭಧರಿಸಲು ತೊಂದರೆ ಇರುವ ಮಹಿಳೆಯ ರಲ್ಲಿ ಥೈರಾಯ್ಡ್ ಅಸಮತೋಲನವು ಇದಕ್ಕೆ ಪ್ರಮುಖ ಕಾರಣವಾಗಿರುವುದನ್ನು ನಾವು ಹೆಚ್ಚಾಗಿ ಗಮನಿಸುತ್ತೇವೆ.
ಹಲವರಿಗೆ ಕೆಲವು ವರ್ಷಗಳವರೆಗೆ ಈ ಲಕ್ಷಣಗಳು ಇದ್ದವು, ಆದರೆ ಇವು ಒತ್ತಡ, ಜೀವನಶೈಲಿ ಸಮಸ್ಯೆಗಳು ಅಥವಾ ವಯೋ ಸಂಬಂಧಿತ ಬದಲಾವಣೆಗಳಾಗಿ ಅವುಗಳನ್ನು ಪರಿಭಾವಿಸ ಲಾಯಿತು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮನ್ನು ಕಾಡುವ ನಿರಂತರ ಆಯಾಸ, ವಿವರಣೆಗೆ ನಿಲುಕದ ತೂಕ ಹೆಚ್ಚಳ, ಕೂದಲು ಉದುರುವಿಕೆ ಮತ್ತು ಮನಃಸ್ಥಿತಿ ಬದಲಾವಣೆಗಳು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸುವುದೇ ಹೆಚ್ಚು. ಇದು ಸಕಾಲದಲ್ಲಿ ರೋಗ ನಿರ್ಣಯ ಮಾಡಿ, ಚಿಕಿತ್ಸೆ ನೀಡುವುದನ್ನು ವಿಳಂಬಗೊಳಿಸುತ್ತದೆ.”
ಜಾಗತಿಕವಾಗಿ ಥೈರಾಯ್ಡ್ ಕಾಯಿಲೆಗಳ ಹೆಚ್ಚಿನ ಹೊರೆಯನ್ನು ಹೊತ್ತಿರುವುದು ಭಾರತವೇ. ಅಧ್ಯಯನಗಳ ಅಂದಾಜಿನ ಪ್ರಕಾರ, ಭಾರತೀಯ ವಯಸ್ಕರಲ್ಲಿ 10–12% ರಷ್ಟು ಜನರು ಥೈರಾಯ್ಡ್ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ, ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಐದರಿಂದ ಎಂಟು ಪಟ್ಟು ಅಧಿಕ ಪರಿಣಾಮ ಬೀರುತ್ತದೆ.
ಮುಟ್ಟಿನ ಚಕ್ರಗಳು ಅನಿಯಮಿತವಾಗಿರುವುದು (20–30% ರಷ್ಟು ಜನರಲ್ಲಿ ಥೈರಾಯ್ಡ್ ಅಸಹಜತೆ ಗಳಿರುತ್ತವೆ), PCOS (4ರಲ್ಲಿ 1 ಮಹಿಳೆಯರು ಇದರೊಂದಿಗೆ ಹೈಪೋಥೈರಾಯ್ಡಿಸಮ್ ಅನ್ನೂ ಹೊಂದಿರಬಹುದು) ಮತ್ತು ವಿವರಿಸಲಾಗದ ಬಂಜೆತನ (15–20% ಪ್ರಕರಣಗಳಲ್ಲಿ ಥೈರಾಯ್ಡ್ ಅಸ್ವಸ್ಥತೆಗಳು ಪತ್ತೆಯಾಗುತ್ತವೆ) ಮುಂತಾದ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿರುವ ಮಹಿಳೆಯರಲ್ಲಿ ಇದು ಗಮನಾರ್ಹವಾಗಿ ವಿಸ್ತರಿಸಿರುತ್ತದೆ. ಗರ್ಭಧಾರಣೆ ವಿಳಂಬವಾಗಿರುವುದು, ಜಡ ಜೀವನಶೈಲಿ, ದೀರ್ಘಕಾಲದ ಒತ್ತಡ ಮತ್ತು ಸ್ವಯಂ ನಿರೋಧಕ ಥೈರಾಯ್ಡ್ ಕಾಯಿಲೆ ಯಿಂದಾಗಿ ಬೆಂಗಳೂರಿನಂತಹ ನಗರ ಕೇಂದ್ರಗಳಲ್ಲಿ ಹೆಚ್ಚಿನ ಪತ್ತೆದರಗಳು ವರದಿಯಾಗುತ್ತವೆ.
“ಥೈರಾಯ್ಡ್ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡದಿದ್ದರೆ ಅವು ಸಂತಾನೋತ್ಪತ್ತಿ ಆರೋಗ್ಯಕ್ಕೆ ಗಮನಾರ್ಹ ವಾದ ಅಡ್ಡಿಗಳಾಗಬಹುದು. ಹೈಪೋಥೈರಾಯ್ಡಿಸಮ್ ಅಂಡೋತ್ಪತ್ತಿಯನ್ನು ತಡೆಯಬಹುದು, ಭಾರೀ ಪ್ರಮಾಣದ ಅಥವಾ ಅನಿಯಮಿತವಾದ ಋತುಸ್ರಾವವನ್ನು ಉಂಟುಮಾಡಬಹುದು ಮತ್ತು ಪ್ರೊಲ್ಯಾಕ್ಟಿನ್ ಮಟ್ಟವನ್ನು ಹೆಚ್ಚಿಸಬಹುದು. ಈ ಎಲ್ಲ ಕಾರಣಗಳಿಂದ ನೈಸರ್ಗಿಕ ಗರ್ಭಧಾರಣೆ ಯು ಕಷ್ಟಕರವಾಗುತ್ತದೆ.
ಇದು ಅನಿಯಮಿತ ಋತುಚಕ್ರಗಳು, ಅಂಡದ ಗುಣಮಟ್ಟದಲ್ಲಿ ಕೊರತೆ ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಥೈರಾಯ್ಡ್ ಕಾಯಿಲೆಯನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಆರಂಭಿಕ ಹಂತದಲ್ಲಿಯೇ ಗರ್ಭಪಾತ, ಅಕಾಲಿಕ ಜನನ, ಕಡಿಮೆ ತೂಕದ ಮಕ್ಕಳ ಜನನ ಮತ್ತು ನರಗಳ ಬೆಳವಣಿಗೆಯಲ್ಲಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭ ಧರಿಸಲು ಪ್ರಯತ್ನಿ ಸುವ ಮೊದಲು ಥೈರಾಯ್ಡ್ ಮಟ್ಟವನ್ನು ಅತ್ಯುತ್ತಮವಾಗಿಸುವುದು ನಿರ್ಣಾಯಕವಾಗಿದೆ. ಗರ್ಭಧಾರಣೆಯ ಪರೀಕ್ಷೆಯು ಸಕಾರಾತ್ಮಕ ಫಲಿತಾಂಶ ಬರುವವರೆಗೆ ಕಾಯುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ತಡೆಗಟ್ಟಬಹುದಾದ ಅಪಾಯಗಳು ಹೆಚ್ಚಾಗಬಹುದು” ಎಂದು ಡಾ. ವಿದ್ಯಾ ವಿ. ಭಟ್ ಹೇಳಿದರು.
ಫಲವಂತಿಕೆ ಚಿಕಿತ್ಸೆ ಪಡೆಯಲು ಬಯಸುವ ಐವದು ಮಹಿಳೆಯರಲ್ಲಿ ಒಬ್ಬರಿಗೆ ಪತ್ತೆಯಾಗದ ಥೈರಾಯ್ಡ್ ಅಸ್ವಸ್ಥತೆ ಇರುವುದು ಕಂಡುಬಂದಿದೆ. ಅನೇಕ ಮಹಿಳೆಯರಿಗೆ, ವಿಶೇಷವಾಗಿ ವೃತ್ತಿ ಜೀವನದ ಆದ್ಯತೆಗಳಿಂದಾಗಿ ಗರ್ಭಧಾರಣೆಯನ್ನು ವಿಳಂಬಗೊಳಿಸಿದ ಮತ್ತು 30 ರಿಂದ 35 ವಯೋ ಮಾನದವರಿಗೆ, ಹಲವು ವರ್ಷಗಳ ಕಾಲ ರೋಗಲಕ್ಷಣಗಳನ್ನು ಅನುಭವಿಸಿದ ಮೇಲೂ ಸರಳವಾದ ಥೈರಾಯ್ಡ್ ಪರೀಕ್ಷೆಯನ್ನು ಕೂಡ ಶಿಫಾರಸು ಮಾಡಿರಲಿಲ್ಲ ಎಂಬುದನ್ನು ವೈದ್ಯರು ತಮ್ಮ ಹಲವು ವರ್ಷಗಳ ಅನುಭವದಲ್ಲಿ ಪ್ರಮುಖವಾಗಿ ಗಮನಿಸಿದ್ದಾರೆ.
"ಥೈರಾಯ್ಡ್ ಪರೀಕ್ಷೆ ಸರಳವಾಗಿದೆ, ದುಬಾರಿಯಲ್ಲ ಮತ್ತು ವ್ಯಾಪಕವಾಗಿ ಲಭ್ಯವಿದೆ. ಆದರೆ ಗರ್ಭಧಾರಣೆಯ ಪೂರ್ವ ಮತ್ತು ಫಲವಂತಿಕೆಯ ಮೌಲ್ಯಮಾಪನಗಳಲ್ಲಿ ಅದನ್ನು ಈಗಲೂ ಬಳಸುತ್ತಿಲ್ಲ. ಆರಂಭಿಕ ಥೈರಾಯ್ಡ್ ಸ್ಕ್ರೀನಿಂಗ್ ಫಲವಂತಿಕೆಯ ಫಲಿತಾಂಶಗಳನ್ನು ಗಣನೀಯ ವಾಗಿ ಸುಧಾರಿಸುತ್ತದೆ.
ಫಲವಂತಿಕೆಗಳಿಗಾಗಿ ಅನಗತ್ಯವಾಗಿ ಪಡೆಯಬೇಕಾದ ಚಿಕಿತ್ಸೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ನೈಸರ್ಗಿಕ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಥೈರಾಯ್ಡ್ ಸಂಬಂಧಿತ ಬಂಜೆತನವನ್ನು ಮೊದಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದಾಗ ಅದನ್ನು ನಿವಾರಿಸಬಹು ದಾಗಿದೆ. ಕೊನೆಗೆ ಚಿಂತಿಸುವುದೇಕೆ? ಥೈರಾಯ್ಡ್ ಪರೀಕ್ಷೆಯನ್ನು ಫಲವಂತಿಕೆ ಮತ್ತು ಗರ್ಭಧಾರಣೆ ಯ ಪೂರ್ವ ಆರೈಕೆಯ ಅತ್ಯಗತ್ಯ ಅಂಶವಾಗಿ ಮಾಡಿಕೊಳ್ಳಿ" ಎಂದು ಡಾ. ವಿದ್ಯಾ ವಿ. ಭಟ್ ಸಲಹೆ ನೀಡಿದ್ದಾರೆ.