ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಊಟದ ಬಳಿಕ ವಾಕಿಂಗ್ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು

Health Tips: ಮಧ್ಯಾಹ್ನ ಇಲ್ಲವೇ ರಾತ್ರಿ ಊಟದ ಬಳಿಕ ನಡೆಯುವುದರಿಂದ ದೇಹದ ಆರೋಗ್ಯ ದೃಷ್ಟಿಯುಂದ ಸಾಕಷ್ಟು ಪ್ರಯೋಜನೆ ಸಿಗಲಿದೆ. ನೀವು ಊಟ ಸೇವಿಸಿದ ಬಳಿಕ 10-15 ನಿಮಿಷಗಳು ವಾಕಿಂಗ್‌ಗೆ ಮೀಸಲಿಡಿ. ಇದನ್ನು ವಯೋವೃದ್ಧರಿಂದ ಮಕ್ಕಳವರೆಗೂ ಎಲ್ಲರೂ ಮಾಡಬಹುದು.

ಊಟದ ಬಳಿಕ ವಾಕಿಂಗ್ ಮಾಡಿ ಈ ಸಮಸ್ಯೆಯಿಂದ ಮುಕ್ತರಾಗಿ

ಸಾಂದರ್ಭಿಕ ಚಿತ್ರ.

Profile Pushpa Kumari Mar 11, 2025 6:00 AM

ನವದೆಹಲಿ: ನಮ್ಮ ದೇಹ ಸದಾ ಕ್ರಿಯಾಶೀಲವಾಗಿ ಇರಬೇಕು ಎಂದರೆ ಅದಕ್ಕೆ ಸ್ವಲ್ಪ ಮಟ್ಟಿಗಾದರೂ ವ್ಯಾಯಾಮ ಮಾಡುವುದು ಮುಖ್ಯ. ಬೆಳಗ್ಗೆ ಬೇಗನೆ‌ ಎದ್ದು ವಾಕಿಂಗ್ ಮಾಡಿದರೆ ಬೊಜ್ಜಿನ ಸಮಸ್ಯೆ, ಮೈ ಕೈ ನೋವಿನ ಸಮಸ್ಯೆ ಪರಿಹಾರ ಆಗುವ ಜತೆಗೆ ಇತರ ಆರೋಗ್ಯ ಪ್ರಯೋಜನ ಕೂಡ ಸಿಗುತ್ತದೆ. ಅದೇ ರೀತಿ ಊಟದ ನಂತರ ನಡೆಯುವುದನ್ನು ಕೂಡ ಕೆಲವರು ಹವ್ಯಾಸವಾಗಿ ಅಳವಡಿಸಿಕೊಳ್ಳುತ್ತಾರೆ. ಊಟದ ನಂತರ ನಡಿಗೆ ಒಳ್ಳೆಯದು ಎಂಬುದು ಒಂದು ವಾದವಾದರೆ ಊಟವಾದ ಕೂಡಲೇ ನಡೆಯಬಾರದು. ವಿಶ್ರಾಂತಿ ಪಡೆದು ಮತ್ತೆ ವಾಕಿಂಗ್ ಮಾಡಬಹುದು ಎಂದು ಕೆಲವರು ಹೇಳುತ್ತಾರೆ. ಹಾಗಿದ್ದರೂ ಊಟದ ನಂತರ ನಡಿಗೆ ಎನ್ನುವುದು ದೇಹದ ಆರೋಗ್ಯ ದೃಷ್ಟಿಯಿಂದ ಬಹಳ ಉತ್ತಮ ಹವ್ಯಾಸ ಎಂಬುದು ಸಾಬೀತಾಗಿದೆ (Health Tips). ಹಾಗಾದರೆ ಎಷ್ಟು ನಿಮಿಷ ನಡೆಯಬಹುದು? ಊಟದ ನಂತರದ ನಡಿಗೆಯಿಂದ ಯಾವೆಲ್ಲ ಆರೋಗ್ಯ ಪ್ರಯೋಜನ ಲಬಿಸುತ್ತದೆ? ಇಲ್ಲಿದೆ ಮಾಹಿತಿ.

ಎಷ್ಟು ನಿಮಿಷ ನಡಿಗೆ ಉತ್ತಮ?

ಮಧ್ಯಾಹ್ನ ಇಲ್ಲವೇ ರಾತ್ರಿ ಊಟದ ಬಳಿಕ ನಡೆಯುವುದು ದೇಹದ ಆರೋಗ್ಯ ದೃಷ್ಟಿಯಿಂದ ಸಾಕಷ್ಟು ಪ್ರಯೋಜನೆ ಸಿಗಲಿದೆ. ನೀವು ಊಟ ಸೇವಿಸಿದ ಬಳಿಕ 10-15 ನಿಮಿಷ ವಾಕಿಂಗ್ ಮಾಡಬೇಕು ಎನ್ನುತ್ತಾರೆ ತಜ್ಞರು. ವಯೋವೃದ್ಧರಿಂದ ಮಕ್ಕಳವರೆಗೂ ಊಟದ ನಂತರ ವಾಕಿಂಗ್ ಮಾಡಬಹುದು. ಗಾರ್ಡನ್, ಅಂಗಳ, ಮನೆ ಒಳಗೆ, ಕೆಲಸದ ಸ್ಥಳದಲ್ಲಿ ವಾಕಿಂಗ್ ಮಾಡಬಹುದು. ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಕುಳಿತು ವಿಶ್ರಮಿಸುವುದಕ್ಕಿಂತಲೂ ನಡಿಗೆ ಬಹಳ ಉತ್ತಮ ಹವ್ಯಾಸ ಎಂಬುದು ತಜ್ಞರ ಶಿಫಾರಸ್ಸು.

ತೂಕದ ಸಮಸ್ಯೆ

ಹೆಚ್ಚು ಆಹಾರ ಸೇವನೆ ದೇಹದ ತೂಕ ಏರಿಕೆ ಕಾರಣವಾಗುತ್ತದೆ ಎಂಬುದು ಅನೇಕರ ಅಳಲು. ಆದರೆ ನಾವು ಸೇವಿಸುವ ಆಹಾರದಷ್ಟೇ ದೇಹಕ್ಕೆ ನಿಯಮಿತ ವ್ಯಾಯಾಮ ನೀಡುತ್ತಿದ್ದೇವೆಯಾ ಎಂದು ಪ್ರಶ್ನಿಸಿದರೆ ಬಹುತೇಕರ ಉತ್ತರ ಇಲ್ಲ ಎಂದಾಗಿರುತ್ತದೆ. ತೂಕದ ಸಮಸ್ಯೆ ನಿವಾರಿಸಲು ಊಟದ ಬಳಿಕ ರೆಸ್ಟ್ ಮಾಡುವ ಬದಲು ವೇಗದ ವಾಕಿಂಗ್ ಮಾಡಿದರೆ ಬಹಳ ಉತ್ತಮ. ದೇಹದ ಬೇಡದ ಕೊಲೆಸ್ಟ್ರಾಲ್ ಅನ್ನು ಶಮನ ಮಾಡಲು ಊಟದ ಬಳಿಕ 15 ನಿಮಿಷವಾದರೂ ವಾಕಿಂಗ್ ಮಾಡಬೇಕು.

ಹೃದಯದ ಆರೋಗ್ಯ ವೃದ್ಧಿ

ಊಟದ ನಂತರ ನಡೆಯುವುದರಿಂದ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ನೀವು ಮುಕ್ತರಾಗಬಹುದು. ಎದೆ ಉರಿ, ಪಾರ್ಶ್ವವಾಯು, ಹೃದಯಾಘಾತದ ಸಮಸ್ಯೆ ಬರದಂತೆ ತಡೆ ಹಿಡಿಯಲು ಇದು ಸಹಾಯಕ. ದಿನಕ್ಕೆ 10 ನಿಮಿಷಗಳ ಕಾಲ ಊಟದ ಬಳಿಕ ವಾಕಿಂಗ್ ಮಾಡಿದರೆ ಹೃದಯದ ಆರೋಗ್ಯ ವೃದ್ಧಿಯಾಗಲಿದೆ.

ಒತ್ತಡ ನಿವಾರಣೆ

ಹೆಚ್ಚಾಗಿ ದೈಹಿಕ ಮತ್ತು ಮಾನಸಿಕ ಸಮಸ್ಯೆ ಇದ್ದವರು ನಿಯಮಿತ ವಾಕಿಂಗ್ ಮೊರೆ ಹೋಗುತ್ತಾರೆ. ವಾಕಿಂಗ್ ನಿಮ್ಮ ನಿತ್ಯ ಹವ್ಯಾಸದ ಭಾಗದಲ್ಲಿ ಒಂದಾಗಿಸಿದರೆ ಮಾನಸಿಕ ಒತ್ತಡ ಇದ್ದ ಸಂದರ್ಭದಲ್ಲಿ ಅದನ್ನು ಪರಿಹರಿಸಬಹುದು. ಇದು ದೇಹಕ್ಕೆ ಚೈತನ್ಯ ತುಂಬುವ ಜತೆಗೆ ಬೇಡದ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಕೆಡದಂತೆ ಮಾಡುತ್ತದೆ.

ಜೀರ್ಣಕ್ರಿಯೆ ವೃದ್ಧಿ

ಅಜೀರ್ಣ, ಹೊಟ್ಟೆ ಉಬ್ಬರ, ಅಸಿಡಿಟಿ ಇತ್ಯಾದಿ ಸಮಸ್ಯೆಗೆ ಊಟದ ನಂತರ ತುಸು ಹೊತ್ತು ನಡೆಯುವುದು ಪ್ರಿಹಾರವಾಗಲಿದೆ. ಚಯಾಪಚಯ ಕ್ರಿಯೆ ಉತ್ತಮವಾಗುವ ಜತೆಗೆ ಹೊಟ್ಟೆ ನೋವು, ಅಜೀರ್ಣ ಇತ್ಯಾದಿ ಸಮಸ್ಯೆಗೆ ಹೊರಗೆ ಶುದ್ಧ ಗಾಳಿಯಲ್ಲಿ ಸ್ವಲ್ಪ ಹೊತ್ತು ನಡೆಯುವುದು ಉತ್ತಮ.

ನಿದ್ರಾ ಹೀನತೆಗೆ ಪರಿಹಾರ

ತಡವಾಗಿ ಮಲಗೋದು ಮತ್ತು ತಡವಾಗಿ ಏಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನು ಎನ್ನುವಂತಾಗಿದೆ. ಆದರೆ ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ಕ್ರಮವಲ್ಲ. ನಿದ್ದೆ ಬರುತ್ತಿಲ್ಲ ಎಂದು ಗಂಟೆಗಟ್ಟಲೆ ಮೊಬೈಲ್, ಲ್ಯಾಪ್ ಟಾಪ್, ಟಿವಿ ಎಂದು ತಾಂತ್ರಿಕ ಜೀವನದ ದಾಸರಾಗುವ ಬದಲು ಊಟದ ಬಳಿಕ 10-15 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ದೇಹಕ್ಕೆ ಆಯಾಸವಾಗಿ ಉತ್ತಮ ನಿದ್ರೆ ಪ್ರಾಪ್ತಿ ಆಗುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಣ

ಮಧುಮೇಹ ಕಾಯಿಲೆ ಬರದಂತೆ ತಡೆಗಟ್ಟುವಲ್ಲಿ ನಿಯಮಿತ ವಾಕಿಂಗ್ ಪ್ರಧಾನ ಪಾತ್ರವಹಿಸುತ್ತದೆ. ಊಟದ ಬಳಿಕ ವಾಕಿಂಗ್ ಮಾಡುವುದರಿಂದ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ದಿನಕ್ಕೆ 20-30 ನಿಮಿಷಗಳ ಕಾಲ ಊಟವಾದ ನಂತರ ನಡೆದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರಿಸಬಹುದು ಎನ್ನುತ್ತಾರೆ ವೈದ್ಯರು.

ಇದನ್ನು ಓದಿ: Health Tips: ದೇಹದ ಶಕ್ತಿ ಹೆಚ್ಚಿಸಲು ದಿನನಿತ್ಯ ಈ ಆಹಾರ ಸೇವಿಸಿ

ಹೀಗಾಗದಂತೆ ಎಚ್ಚರ ವಹಿಸಿ

ಊಟದ ಬಳಿಕ ನಡೆಯುವುದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಒಂದೇ ಸಮನೆ ವೇಗದಲ್ಲಿ ನಡೆಯುತ್ತಿದ್ದರೆ ಕೆಲವೊಮ್ಮೆ ಹೊಟ್ಟೆ ನೋವು ಎದೆ ಉರಿ ಬರುವ ಸಾಧ್ಯತೆ ಇದೆ. ಅದರ ಬದಲು ನೀವು ಸ್ವಲ್ಪ ನಿಧಾನಕ್ಕೆ ವಾಕ್ ಮಾಡಿ. ಜೀರ್ಣಕ್ರಿಯೆ, ಹೊಟ್ಟೆ ನೋವು ಯಾವ ಸಮಸ್ಯೆ ಇಲ್ಲದಿದ್ದರೆ ವೇಗದ ನಡಿಗೆ ಮಾಡಬಹುದು. ಒಂದು ವೇಳೆ ನಡಿಗೆ ಮಧ್ಯದಲ್ಲಿ ಸಮಸ್ಯೆ ಕಂಡು ಬಂದರೆ ಸ್ವಲ್ಪ ಹೊತ್ತು ರೆಸ್ಟ್ ಮಾಡಿರಿ. ನಿಮಗೆ ಇತರ ಆರೋಗ್ಯ ಸಮಸ್ಯೆ ಇದ್ದ ಪಕ್ಷದಲ್ಲಿ ಈ ಹವ್ಯಾಸ ರೂಢಿ ಮಾಡಿಕೊಳ್ಳುವ ಮುನ್ನ ವೈದ್ಯಕೀಯ ಸಲಹೆ ಪಡೆಯುವುದನ್ನು ಮರೆಯದಿರಿ.