Tatto Awareness: ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸುವವರೇ ಎಚ್ಚರ
ರಸ್ತೆ ಬದಿಯಲ್ಲಿ, ಜಾತ್ರೆಗಳಲ್ಲಿ, ಕಂಡಕಂಡ ಕಡೆಯಲ್ಲಿ ಟ್ಯಾಟೂ ಹಾಕಿಸಕೂಡದು. ಇದರಿಂದ ನಾನಾ ಬಗೆಯ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಟ್ಯಾಟೂ ಎಕ್ಸ್‌ಪರ್ಟ್ಸ್. ಹಾಗಾಗಿ ಟ್ಯಾಟೂ ಹಾಕಿಸುವಾಗ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಜತೆಗೆ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಟ್ಯಾಟೂ ಎಕ್ಸ್‌ಪರ್ಟ್ಸ್ ಹಾಗೂ ಚರ್ಮ ವೈದ್ಯರು.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ಯಾಟೂ ಪ್ರಿಯರನ್ನು (Tatto Awareness) ಬೆಚ್ಚಿ ಬೀಳಿಸುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಹೌದು, ವಿದೇಶಿ ಸಂಸ್ಥೆಯೊಂದು ನಡೆಸಿದ ಸಮೀಕ್ಷಾ ವರದಿಯೊಂದು ಜಾಗತಿಕ ಮಟ್ಟದಲ್ಲಿ ಟ್ಯಾಟೂ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಶಿಕಾಗೋದ ಅಮೆರಿಕನ್ ಕೆಮಿಕಲ್ ಸೊಸೈಟಿ ಸಭೆಯಲ್ಲಿ, ಸಂಶೋಧಕರ ತಂಡವೊಂದು ನಡೆಸಿದ ಸಂಶೋಧನಾ ವರದಿಯಲ್ಲಿ, ಟ್ಯಾಟೂ ಹಾಕಿಸುವವರು ಎಚ್‌ಐವಿ ಹಾಗೂ ಹೆಪಟೈಟೀಸ್ ಬಿ, ಸಿಯಂತಹ ಸೋಂಕಿಗೆ ತುತ್ತಾಗುವ ಹಾಗೂ ಸ್ಕಿನ್ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬ ಆತಂಕಕಾರಿ ವಿಷಯ ಕಂಡು ಬಂದಿದೆ. ಪರಿಣಾಮ ಈ ವರದಿಯು ಟ್ಯಾಟೂ ಪ್ರಿಯರನ್ನು ಆತಂಕಕ್ಕಿಡು ಮಾಡಿದೆ ಎನ್ನುತ್ತಾರೆ ಟ್ಯಾಟು ಎಕ್ಸ್‌ಪರ್ಟ್ ರೀಚಾ. ಹಾಗೆಂದು ಪದೇ ಪದೆ ಟ್ಯಾಟೂ ಹಾಕಿಸುವವರು ಈ ವರದಿಯಿಂದ ಹೆದರಬೇಕಾಗಿಲ್ಲ! ಹಾಕಿಸುವ ಮುನ್ನ ಒಂದಿಷ್ಟು ವಿಷಯಗಳನ್ನು ಅರಿತುಕೊಂಡು, ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರಾಯಿತು ಎನ್ನುತ್ತಾರೆ.

ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ!
ದೇವಸ್ಥಾನಗಳ ಅಕ್ಕ-ಪಕ್ಕ, ಬಸ್ ಸ್ಟ್ಯಾಂಡ್ ಸುತ್ತಮುತ್ತಾ, ಜಾತ್ರೆಗಳಲ್ಲಿ, ರಸ್ತೆ ಬದಿಗಳಲ್ಲಿ, ಕಡಿಮೆ ಬೆಲೆಗೆ ಹಾಕುವ ಟ್ಯಾಟೂಗಳು, ಒಬ್ಬರಿಂದ ಒಬ್ಬರಿಗೆ ಹರಡುವ ನಾನಾ ರೀತಿಯ ಸೋಂಕಿನ ಕಾಯಿಲೆಗಳನ್ನು ಹರಡಿಸಬಹುದು. ಇದಕ್ಕೆ ಪ್ರಮುಖ ಕಾರಣ, ಒಬ್ಬರಿಗೆ ಟ್ಯಾಟೂ ಹಾಕಲು ಬಳಸಿದ ನೀಡಲ್ ಹಾಗೂ ಪದೇ ಪದೇ ಬಳಸುವ, ಎಲ್ಲರಿಗೂ ಟ್ಯಾಟೂ ಹಾಕಲು ಬಳಸುವ ಅದ್ದಿ ತೆಗೆಯುವ ಒಂದೇ ಇಂಕ್. ಹೀಗೆ ಒಬ್ಬರದ್ದನ್ನು ಮತ್ತೊಬ್ಬರಿಗೆ ಬಳಸುವುದು ಕಾಯಿಲೆ ಹರಡಲು ಪ್ರಮುಖ ಕಾರಣವಾಗುತ್ತದೆ ಎನ್ನುತ್ತಾರೆ ಚರ್ಮ ವೈದ್ಯರು. ವಿಪರ್ಯಾಸವೆಂದರೆ ಸಾಕಷ್ಟು ಮಂದಿ ಈ ವಿಷಯ ಗೊತ್ತಿಲ್ಲದೇ, ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆರಂಭದಲ್ಲಿ ವ್ಯತಿರಿಕ್ತ ಪರಿಣಾಮ ಕಾಣಿಸದಿದ್ದರೂ, ಮುಂದೊಮ್ಮೆ ಕಾಯಿಲೆಗಳು ಬಂದಾಗ ಪಶ್ಚಾತ್ತಾಪ ಪಡುವ ಸಂದರ್ಭ ಎದುರಾಗುತ್ತದೆ. ಹಾಗಾಗಿ ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಕೂಡದು ಎಂದು ಎಚ್ಚರಿಸುತ್ತಾರೆ ಚರ್ಮ ವೈದ್ಯೆ ಜಯಶ್ರೀ. ಸೋ ಟ್ಯಾಟೂ ಹಾಕಿಸುವವರು ಸದಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎನ್ನುತ್ತಾರೆ ಅವರು.

ಟ್ಯಾಟೂ ಪ್ರಿಯರು ಗಮನದಲ್ಲಿಡಬೇಕಾದ ಅಂಶಗಳು
ಟ್ಯಾಟೂ ಹಾಕಿಸಿದ ನಂತರ ಅದನ್ನು ಹೇಗೆ ಮೇಂಟೆನ್ ಮಾಡಬೇಕು ಎಂಬ ವಿಷಯವನ್ನು ಮಾತ್ರ ಗಮನದಲ್ಲಿಡುವುದಲ್ಲ! ಬದಲಿಗೆ ನೀವು ಎಲ್ಲಿ ಟ್ಯಾಟೂ ಹಾಕಿಸುತ್ತಿದ್ದೀರಾ? ಎಂಬ ಅಂಶವು ಮುಖ್ಯವಾಗುತ್ತದೆ. ಯಾವ ಸ್ಥಳದಲ್ಲಿ ಹಾಕಿಸುತ್ತಿದ್ದೀರಾ? ಇದಕ್ಕಾಗಿ ಅವರು ಯಾವ ಬಗೆಯ ಇಂಕ್ ಬಳಸುತ್ತಿದ್ದಾರೆ? ಸ್ವಚ್ಛತೆ ಹೇಗೆ ಕಾಪಾಡಿಕೊಂಡಿದ್ದಾರೆ? ಪ್ರತಿಯೊಬ್ಬರಿಗೂ ಒಂದೇ ನೀಡಲ್ ಬಳಸುತ್ತಿದ್ದಾರಾ? ಇಲ್ಲವಾ? ಎಂಬಿತ್ಯಾದಿ ಅಂಶಗಳನ್ನು ಮೊದಲಿಗೆ ಗಮನಿಸಬೇಕು. ಇನ್ನು ಜನ ಸಂದಣಿ ಇರುವಂತಹ ಜಾಗದಲ್ಲಿ, ರಸ್ತೆ ಬದಿಗಳಲ್ಲಿ ಹಾಗೂ ಜಾತ್ರೆ ನಡೆಯುವಂತಹ ಸ್ಥಳಗಳಲ್ಲಿ ಟ್ಯಾಟೂ ಹಾಕಿಸಲೇಕೂಡದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಸುರಕ್ಷತಾ ಕ್ರಮಗಳಿಗಾಗಿ ಹೀಗೆ ಮಾಡಿ
* ಆದಷ್ಟೂ ಗುಣಮಟ್ಟದ ಪರಿಕರಗಳನ್ನು ಬಳಸುವ ಟ್ಯಾಟೂ ಸ್ಟುಡಿಯೋ ಹಾಗೂ ಸೆಂಟರ್‌ಗಳಲ್ಲಿ ಹಾಕಿಸಿಕೊಳ್ಳಿ.
* ಯಾವುದೇ ಕಾಯಿಲೆ ಇದ್ದಲ್ಲಿ ಟ್ಯಾಟೂ ಹಾಕಿಸುವವರಿಗೆ ಮೊದಲೇ ತಿಳಿಸಿ. ಪ್ರತ್ಯೇಕ ನೀಡಲ್ ಬಳಸಲು ತಿಳಿಸಿ.
* ಗುಣಮಟ್ಟದ ಇಂಕ್ ಬಳಸಲು ಟ್ಯಾಟೂ ಆರ್ಟಿಸ್ಟ್‌ಗಳಿಗೆ ಸೂಚಿಸಿ.
* ಸ್ಕಿನ್ ಅಲರ್ಜಿ ಇದ್ದಲ್ಲಿ ಟ್ಯಾಟೂ ಬದಲು ಕೃತಕ ಟ್ಯಾಟೂ ಸ್ಟಿಕ್ಕರ್ ಬಳಸಿ, ಆಸೆ ಪೂರೈಸಿಕೊಳ್ಳಿ.
* ಟ್ಯಾಟೂ ಹಾಕಿಸಿದ ನಂತರ ಚರ್ಮದಲ್ಲಿ ತುರಿಕೆ ಉಂಟಾದಲ್ಲಿ ವೈದ್ಯರನ್ನು ಕಾಣಿರಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | RRB Recruitment 2025: ರೈಲ್ವೇ ಇಲಾಖೆಯಲ್ಲಿ 32,438 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ