ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ದೇಹದ ಮೇಲಾಗುವ ಪರಿಣಾಮವೇನು?

ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ ಗಳನ್ನು ತೆಗೆದು ಬಾಣಲೆಗೆ ಹಾಕಿ, ಮಸಾಲೆ ಸುರಿದರಾಯ್ತು, ನಿಮಿಷಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಮ್ಮೆ ಇಂಥವನ್ನು ತಿಂದಾಗ ಆರೋಗ್ಯಕ್ಕೇನೂ ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ ಸಮಸ್ಯೆ ಕಾಡಲಿದೆ..

ಇನ್‌ಸ್ಟಂಟ್ ನೂಡಲ್ಸ್ ತಿಂದರೆ ಈ ಆರೋಗ್ಯ ಸಮಸ್ಯೆ ಕಾಡಲಿದೆ

Profile Pushpa Kumari May 15, 2025 5:00 AM

ನವದೆಹಲಿ: ಸಮಯದ ಅಭಾವ ಇರುವಾಗ ಹೊಟ್ಟೆಯ ಗಲಾಟೆಯನ್ನು ತಣಿಸುವುದು ಕಷ್ಟದ ಕೆಲಸ ಎನಿಸುತ್ತದೆ. ಅದರಲ್ಲೂ ಹೊರಗಿನ ಆಹಾರ ಬೇಡ, ಮನೆಯದ್ದೇ ಇರಲಿ ಎನ್ನುವವರಿಗೆ ಹೊಟ್ಟೆ ತಾಳ ಹಾಕುವಾಗ ಬೇಯಿಸಿ ಕೊಳ್ಳುವುದಕ್ಕೆ ಸಮಯ ಇಲ್ಲದಿದ್ದರೆ ಅವಸ್ಥೆಯೇ ಸರಿ. ಇಂಥ ಹೊತ್ತಿಗೆಂದೇ ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ಗಳನ್ನು ತೆಗೆದು ಬಾಣಲೆಗೆ ಹಾಕಿ, ಮಸಾಲೆ ಸುರಿದರಾಯ್ತು, ನಿಮಿಷ ಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಮ್ಮೆ ಇಂಥವನ್ನು ತಿಂದಾಗ ಆರೋಗ್ಯಕ್ಕೇನೂ (Health Tips) ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ ಲೇಖನ ನಿಮಗಾಗಿ!

ವ್ಯಸ್ತ ಬದುಕು ಎನ್ನುವ ಕಾರಣಕ್ಕೆ ಇದನ್ನು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ರೋಲ್‌ ಮಾಡಿದ ಓಟ್‌ಮೀಲ್‌ ಕುಕ್ಕರ್‌ಗೆ ಹಾಕಿದರೆ, ತನ್ನಷ್ಟಕ್ಕೆ ಬೆಂದುಕೊಳ್ಳುತ್ತದೆ. ಅದನ್ನು ತೆಗೆದು ಬೇಕಾದಂತೆ ಹಾಲು, ಹಣ್ಣು, ಜೇನುತುಪ್ಪ ಮುಂತಾದವನ್ನು ಸೇರಿಸಿ ಸೇವಿ ಸಿದರಾಯ್ತು. ರಾಗಿ ದೋಸೆ, ಜೋಳದ ಮುದ್ದೆಯಂಥ ಸರಳ ಮತ್ತು ಆರೋಗ್ಯಕರ ಆಯ್ಕೆಗಳು ನಮ್ಮ ಸುತ್ತ ಬಹಳಷ್ಟಿವೆ; ನಾವು ಗಮನಹರಿಸಬೇಕಷ್ಟೆ. ಇದಕ್ಕಾಗಿ ಇನ್‌ಸ್ಟಂಟ್‌ ಆಹಾರಗಳಿಗೇ ಮೊರೆ ಹೋಗಬೇಕೆಂದಿಲ್ಲ. ಇಂಥ ಸಂಸ್ಕರಿತ ಆಹಾರಗಳು ಆರೋಗ್ಯಕರವಲ್ಲ ಎಂದು ಹೇಳುವುದಕ್ಕೆ ಕಾರಣಗಳು ಒಂದೆರಡಲ್ಲ. ಏನವು?

ಸೋಡಿಯಂ ಅಧಿಕ: ಇನ್‌ಸ್ಟಂಟ್‌ ನೂಡಲ್‌ಗಳು ತಮ್ಮಲ್ಲಿರುವ ಸೋಡಿಯಂ ಪ್ರಮಾಣಕ್ಕಾಗಿ ಕುಖ್ಯಾತವಾಗಿವೆ. ಕೆಲವು ನೂಡಲ್‌ಗಳಂತೂ ಒಂದು ಸರ್ವಿಂಗ್‌ನಲ್ಲಿ ಇಡೀ ದಿನಕ್ಕೆ ನಾವು ತಿನ್ನಬಹುದಾದ ಸೋಡಿಯಂನ ಅರ್ಧ ಭಾಗದಷ್ಟನ್ನು ದೇಹಕ್ಕೆ ಸೇರಿಸಿಬಿಡುತ್ತವೆ. ಹೀಗೆ ಅತಿಯಾಗಿ ಸೋಡಿಯಂ ಅಥವಾ ಉಪ್ಪಿನಂಶವನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯ ರೋಗಗಳು ಅಮರಿಕೊಳ್ಳುತ್ತವೆ, ಪಾರ್ಶ್ವವಾಯು ದಾಳಿ ಮಾಡುತ್ತದೆ. ಹಾಗಾಗಿ ಇನ್‌ಸ್ಟಂಟ್‌ ನೂಡಲ್‌ ಗಳನ್ನು ಹೊಟ್ಟೆಗಿಳಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಇರಲಿ.

ಸತ್ವಹೀನ: ಹೊಟ್ಟೆ ಹಸಿದಾಗ ಏನು ಸಿಕ್ಕರೂ ತಿನ್ನುವಂತೆನಿಸುವುದು ಸಹಜ. ಆ ಹೊತ್ತಿಗೆ ಇಂಥ ಗುಜರಿ ತಿಂಡಿಗಳು ಸಿಕ್ಕಿಬಿಟ್ಟರೆ ಕೆಲಸ ಕೆಟ್ಟಂತೆ. ಕಾರಣ, ಇನ್‌ಸ್ಟಂಟ್‌ ನೂಡಲ್‌ಗಳು ಕ್ಯಾಲರಿಯನ್ನೇನೋ ನೀಡುತ್ತವೆ; ಆದರೆ ಅದರಲ್ಲಿ ಸತ್ವಗಳು ಇರುವುದಿಲ್ಲ. ಅಂದರೆ ಶರೀರಕ್ಕೆ ಬೇಕಾದಂಥ ಪ್ರೊಟೀನ್‌, ನಾರು, ಖನಿಜಗಳಂಥ ಒಳ್ಳೆಯ ಅಂಶಗಳೇನೂ ಇರುವುದಿಲ್ಲ ಇದರಲ್ಲಿ. ಬದಲಿಗೆ ಕೆಟ್ಟ ಕೊಬ್ಬುಗಳು ಮತ್ತು ಸಂಸ್ಕರಿತ ಪಿಷ್ಟ ಹೊಟ್ಟೆ ಸೇರಿತ್ತದೆ. ಸಾಲದೆಂಬಂತೆ ಕೃತಕ ಬಣ್ಣ, ರುಚಿಗಳೂ ಇದರಲ್ಲಿ ಸೇರಿರುತ್ತವೆ. ಹಾಗಾಗಿ ಇದನ್ನು ಸದಾ ತಿಂದರೆ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾಗುವುದು ನಿಶ್ಚಿತ.

ಅನಾರೋಗ್ಯಕರ ಕೊಬ್ಬು: ಟ್ರಾನ್ಸ್‌ ಫ್ಯಾಟ್‌ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ನಂಥ ಅನಾರೋಗ್ಯಕರ ಕೊಬ್ಬುಗಳು ಇದರಲ್ಲಿ ಭರಪೂರ ಇರಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಜಮೆಯಾಗುವುದು ಸಹ ಅಧಿಕವಾಗುತ್ತದೆ. ಮೊದಲಿಗೆ ಈ ನೂಡಲ್‌ಗಳನ್ನು ಕರಿಯುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಎಣ್ಣೆಯನ್ನು ಇವು ಹೀರಿಕೊಂಡಿರುತ್ತವೆ. ನಂತರ ನಮ್ಮ ಅಡುಗೆ ಮನೆಗಳಲ್ಲಿ ನಿಮಿಷಗಳಲ್ಲಿ ಸಿದ್ಧ ಆಗುವಾಗ, ಆ ಕೊಬ್ಬಿನಂಶವೆಲ್ಲ ಸೇರುವುದು ನಮ್ಮ ಹೊಟ್ಟೆಯನ್ನೇ.

ಸಂರಕ್ಷಕಗಳು: ತಯಾರಿಕೆಯ ಹಂತದಲ್ಲೇ ಒಂದಿಷ್ಟು ಕೃತಕ ವಸ್ತುಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ಕೃತಕವಾದ ಬಣ್ಣ, ರುಚಿ, ಘಮಗಳೆಲ್ಲ ಇದರಲ್ಲಿ ಸೇರಿವೆ. ಮಾತ್ರವಲ್ಲದೆ ಸಂರಕ್ಷಕಗಳೂ ಇದಕ್ಕೆ ಜೊತೆಯಾಗಿರುತ್ತವೆ. ಮಾನೊಸೋಡಿಯಂ ಗ್ಲೂಟಮೇಟ್‌ನಂಥ (ಎಂಎಸ್‌ಜಿ) ರಾಸಾಯನಿಕಗಳನ್ನು ಹೆಚ್ಚಿನ ನೂಡಲ್‌ಗಳಲ್ಲಿ ಸೇರಿಸಲಾಗುತ್ತದೆ. ಇಂಥ ಅಂಶಗಳು ದೇಹದಲ್ಲಿ ಸೇರಿದರೆ ತಲೆನೋವು, ಅಲರ್ಜಿಗಳು, ಜೀರ್ಣಾಂಗಗಳ ತೊಂದರೆಗಳು ಕಟ್ಟಿಟ್ಟಿದ್ದು.

ಜೀವನಶೈಲಿಯ ಕಾಯಿಲೆಗಳು: ಸಂಸ್ಕರಿತ ಪಿಷ್ಟ, ಕೆಟ್ಟ ಕೊಬ್ಬು, ಅಧಿಕ ಸೋಡಿಯಂನಂಥ ಅಂಶಗಳು ದೇಹಕ್ಕೆ ಸೇರಿದರೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನಂಥ ಜೀವನಶೈಲಿಯ ಖಾಯಿಲೆಗಳು ಬೆನ್ನು ಬೀಳುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ದೇಹದ ಚಯಾಪಚಯವನ್ನೇ ಬುಡಮೇಲು ಮಾಡಿ, ಶರೀರವನ್ನು ರೋಗಗಳ ಗೂಡಾಗಿಸುತ್ತದೆ. ಹಾಗಾಗಿ ಬಾಯಿಗೆ ರುಚಿ ಎನಿಸುವ ಇನ್‌ಸ್ಟಂಟ್‌ ನೂಡಲ್‌ಗಳ ಬಗ್ಗೆ ಈ ಅರಿವು ಹೊಂದುವುದು ಅಗತ್ಯ.

ಜೀರ್ಣಾಂಗಗಳ ಸಮಸ್ಯೆ: ನಾರು ಇಲ್ಲದಂಥ ಆಹಾರಗಳು ಜೀರ್ಣಾಂಗಗಳ ಸಂಕಷ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅತಿಯಾಗಿ ಸಂಸ್ಕರಿಸಿದ ತಿನಿಸುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನೂ ಕೊಲ್ಲುತ್ತವೆ. ಇವೆಲ್ಲವುಗಳ ಫಲವಾಗಿ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕಿರಿಕಿರಿಗಳು ಹೆಚ್ಚುತ್ತವೆ. ಮಲಬದ್ಧತೆಯೂ ಕಾಡಬಹುದು. ಇವೆಲ್ಲವುಗಳಿಂದ ಜೀರ್ಣಾಂಗಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಇದರ ಬದಲಿಗೆ, ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಪ್ರೊಬಯಾಟಿಕ್‌ಗಳು ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತವೆ.

ಇದನ್ನು ಓದಿ: Health Tips: ಸದಾ ಕಾಡುವ ತಲೆನೋವಿನಿಂದ ಪಾರಾಗಲು ಇಲ್ಲಿದೆ ತಜ್ಞರ ಟಿಪ್ಸ್

ಬೊಜ್ಜು: ಸತ್ವಗಳಿಲ್ಲದ ಖಾಲಿ ಕ್ಯಾಲರಿಗಳು ದೇಹವನ್ನು ನಿತ್ರಾಣದತ್ತ ದೂಡುತ್ತವೆ. ಹಾಗೆಂದು ಆ ವ್ಯಕ್ತಿ ಸಪೂರ ಕಡ್ಡಿ ಯಂತೇನೂ ಇರುವುದಿಲ್ಲ. ಸ್ಥೂಲಕಾಯವೇ ಇದ್ದರೂ, ನಿತ್ಯದ ಚಟುವಟಿಕೆಗೆ ಬೇಕಾದ ಚೈತನ್ಯ ಇರುವುದಿಲ್ಲ. ಇವೆಲ್ಲ ಕೆಟ್ಟ ಆಹಾರಕ್ರಮದ ಪರಿಣಾಮಗಳು. ಇನ್‌ಸ್ಟಂಟ್‌ ನೂಡಲ್‌ಗಳ ನಿಯಮಿತ ಸೇವನೆಯು ದೇಹದ ತೂಕವನ್ನು ಹೆಚ್ಚಿಸಿ, ದೇಹದಲ್ಲಿ ಬೊಜ್ಜು ತುಂಬಿಸುತ್ತದೆ. ಖಾಲಿ ಕ್ಯಾಲರಿಗಳು ಹಸಿವು ಹೆಚ್ಚಿಸುತ್ತವೆ. ಮತ್ತೆ ಇದನ್ನೇ ತಿನ್ನುತ್ತೀರಿ, ಹಸಿವು ತಣಿಯುವುದೇ ಇಲ್ಲ. ತೂಕ ಏರುತ್ತಲೇ ಹೋಗುತ್ತದೆ.