ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Retro Walking: ರೆಟ್ರೋ ವಾಕಿಂಗ್:‌ ಏನಿದರ ಪ್ರಯೋಜನಗಳು?

ನಾವೆಲ್ಲರೂ ಸದಾ ನಡೆಯುವುದು ಮುಮ್ಮುಖವಾಗಿಯೇ. ನಮ್ಮ ಶರೀರಗಳು ರೂಪುಗೊಂಡಿರುವುದೂ ಅದೇ ಚಲನೆಗೆ ಅನುಗುಣವಾಗಿ. ಹೀಗೆ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ನಡೆಯುವುದರಿಂದ ಆಗುವಂಥ ಲಾಭಗಳೇನು? ಇದರಿಂದ ತೊಂದರೆ ಯಾಗುವುದಿಲ್ಲವೇ? ಇಲ್ಲ ಎನ್ನುತ್ತದೆ ವಿಜ್ಞಾನ. ಹಾಗಾದರೆ ಏನು ಪ್ರಯೋಜನ ಇದರಿಂದ? ಇಲ್ಲಿದೆ ವಿವರ.

Health Tips: ರೆಟ್ರೋ ವಾಕಿಂಗ್‌ನಿಂದ ದೇಹಕ್ಕೆ ಸಿಗುತ್ತೆ ಅದ್ಬುತ ಪ್ರಯೋಜನ

Retro Walking

Profile Pushpa Kumari Apr 18, 2025 6:00 AM

ನವದೆಹಲಿ: ಕಾಲವೆಂದೂ ಹಿಂದಕ್ಕೆ ಚಲಿಸುವುದಿಲ್ಲ ಎನ್ನುವ ಮಾತಿದೆ. ಕಾಲ ಹಿಂದೆ ಹೋಗದಿದ್ದರೂ ನಮ್ಮ ಕಾಲು ಹಿಂದೆ ಚಲಿಸಬಹುದಲ್ಲ. ಯಾವುದೋ ಪಾರ್ಕ್‌ನಲ್ಲಿ ಹಿಂದಕ್ಕೆ ನಡೆಯುವವರನ್ನು ಕಂಡು ಹುಬ್ಬೇರಿಸಿರಬಹುದು; ಕುತೂಹಲದಿಂದ ʻಹೀಗೇಕೆ ನಡೆಯುತ್ತೀರಿ?ʼ ಎಂದು ಕೇಳಿರಲೂಬಹುದು. ಅಂದರೆ ವೀಡಿಯೊಗಳಲ್ಲಿ ರೀವೈಂಡ್‌ ಮಾಡಿದಾಗ ಎಲ್ಲವೂ ಹಿಂದಕ್ಕೆ ಹೋಗಿದ್ದನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ ನಮಗೆ, ಈ ಹಿಂದಕ್ಕೆ ನಡೆಯುವುದು ಸಹ ನಗು ತರಿಸಿದರೆ ಅಚ್ಚರಿಯಿಲ್ಲ. ರೆಟ್ರೋ ವಾಕಿಂಗ್ (Retro Walking) ಎಂದೇ ಕರೆಯಲಾಗುವ ಈ ಹಿಮ್ಮುಖ ನಡಿಗೆಯ ಪರಿಣಾಮ ಮತ್ತು ಪ್ರಯೋಜನಗಳ ಬಗ್ಗೆ ಬಹಳಷ್ಟು ಮಾತುಗಳು ಚರ್ಚೆಯಲ್ಲಿವೆ. ಏನು ಹಾಗೆಂದರೆ? ಏನು ಪ್ರಯೋಜನ ಇದರಿಂದ?

ನಾವೆಲ್ಲರೂ ಸದಾ ನಡೆಯುವುದು ಮುಮ್ಮುಖವಾಗಿಯೇ. ನಮ್ಮ ಶರೀರಗಳು ರೂಪುಗೊಂಡಿರುವುದೂ ಅದೇ ಚಲನೆಗೆ ಅನುಗುಣವಾಗಿ. ಹೀಗೆ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ನಡೆಯುವುದರಿಂದ ಆಗುವಂಥ ಲಾಭಗಳೇನು? ಇದರಿಂದ ತೊಂದರೆ ಯಾಗುವುದಿಲ್ಲವೇ? ಇಲ್ಲ ಎನ್ನುತ್ತದೆ ವಿಜ್ಞಾನ. ಫಿಸಿಯೊಥೆರಪಿ ತಜ್ಞರು ಸಹ ಹಿಮ್ಮುಖ ನಡೆಯುವ ಲಾಭಗಳನ್ನು ಒಪ್ಪಿ ಕೊಳ್ಳುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ಚಲನೆಯ ಕ್ರಮವನ್ನು ಅನುಸರಿಸಬಹುದು ಮತ್ತು ಅದರಿಂದ ಪ್ರಯೋಜನಗಳಿವೆ ಎನ್ನಲಾಗುತ್ತಿದೆ.

ಮುಂದೆ ನಡೆಯುವುದಕ್ಕಿಂತ ಹಿಂದೆ ನಡೆಯುವುದಕ್ಕೆ ಬೇಕಾಗುವ ಸ್ನಾಯುಗಳ ಬಲ ಭಿನ್ನವಾದದ್ದು. ಕಾಲುಗಳ ಬೇರೆ ಬೇರೆ ಭಾಗದ ಸ್ನಾಯುಗಳು ಇದರಿಂದ ಪ್ರಚೋದನೆಗೊಳ್ಳುತ್ತವೆ. ಮಂಡಿ, ತೊಡೆ, ಮೀನಖಂಡ, ಪೃಷ್ಠ ಮುಂತಾದ ಭಾಗಗಳಲ್ಲಿ ಜಡವಾಗಿದ್ದ ಮಾಂಸಪೇಶಿಗಳನ್ನು ಉದ್ದೀಪಿಸುವ ಸಾಮರ್ಥ್ಯ ರೆಟ್ರೋ ವಾಕಿಂಗ್‌ಗೆ ಇದೆ. ನಮ್ಮ ಸಾಮಾನ್ಯ ನಡಿಗೆಯಿಂದ ಕೆಲವು ಸ್ನಾಯುಗಳು ಅಷ್ಟಾಗಿ ಉಪಯೋಗವಾಗುವುದಿಲ್ಲ. ಅಂಥವು ಹಿಮ್ಮುಖ ನಡಿಗೆಯಿಂದ ಎಚ್ಚರಗೊಳ್ಳುತ್ತವೆ. ಅದರಲ್ಲೂ ಪೃಷ್ಠ ಮತ್ತು ಮಂಡಿಯ ಕೆಲವು ಸ್ನಾಯುಗಳಿಗೆ ಅತಿ ಹೆಚ್ಚಿನ ಪ್ರಯೋಜನವಿದೆ.

ಮೆದುಳಿಗೆ ಕಸರತ್ತು: ಕೇವಲ ದೇಹಕ್ಕಷ್ಟೇ ಅಲ್ಲ, ಹಿಮ್ಮುಖ ನಡೆಯುವುದೆಂದರೆ ಮೆದುಳಿಗೂ ಕಸರತ್ತು ಮಾಡಿಸುವ ತಂತ್ರ ವಿದು. ಸದಾ ಒಂದೇ ಬಗೆಯ ಚಲನೆಯಲ್ಲಿರುವ ದೇಹವನ್ನು ವಿರುದ್ಧವಾಗಿ ಚಲಿಸುವಂತೆ ಮಾಡುವುದು ಎಂದರೆ ಮೆದುಳಿಗೂ ಸವಾಲು. ಇದರಿಂದ ದೇಹ-ಮನಸ್ಸುಗಳ ಸಮತೋಲನ ಸುಧಾರಿಸುತ್ತದೆ, ಹೊಂದಾಣಿಕೆ ಹೆಚ್ಚುತ್ತದೆ. ಇದಕ್ಕಾಗಿ ಮೆದುಳಿನ ಚುರುಕುತನವೂ ಅಧಿಕವಾಗುತ್ತದೆ. ಕಣ್ಣಿಗೆ ಕಾಣುವ ಸ್ಥಳದಲ್ಲಿ ನಡೆಯುವಾಗಲೇ ಎಡವುವ ನಾವು, ಬೆನ್ಮುಖವಾಗಿ ನಡೆಯ ಬೇಕೆಂದರೆ ಬೆನ್ನಿಗೆ ಕಣ್ಣಿಲ್ಲವಲ್ಲ. ನಡೆಯುವ ಹಾದಿ ಕಾಣದಿರುವಾಗ ಮೆದುಳಿನ ನಿರ್ಣಯಿಸುವ, ಅಳೆಯುವ ಸಾಮರ್ಥ್ಯ, ಏಕಾಗ್ರತೆ, ಪ್ರತ್ತ್ಯುತ್ಪನ್ನ ಚಲನೆಗಳೆಲ್ಲವೂ ಚುರುಕಾಗಬೇಕಲ್ಲ. ಹಾಗಾಗಿಯೇ ಇದನ್ನು ದೇಹ-ಮನಸ್ಸುಗಳ ಕಸರತ್ತು ಎಂದು ಕರೆಯುವುದು.

ಮಂಡಿ ನೋವೇ?: ಇದು ರೆಟ್ರೋ ವಾಕಿಂಗ್‌ನಿಂದ ಗುಣವಾಗುತ್ತದೆ ಎಂದು ಹೇಳುತ್ತಿಲ್ಲ! ಸಾಮಾನ್ಯವಾದ ಮುಮ್ಮುಖ ನಡಿಗೆಯಲ್ಲಿ ಮಂಡಿಯ ಮುಂಭಾಗದಲ್ಲಿ ಹೆಚ್ಚಿನ ಒತ್ತಡ ಬೀಳುವ ಸಂಭವ ಅಧಿಕ. ಆದರೆ ಹಿಂದೆ ನಡೆಯುವುದರಿಂದ ಮಂಡಿಯ ಮುಂಭಾಗದ ಸ್ನಾಯುಗಳ ಬಲವೃದ್ಧಿಸಲು ಸಾಧ್ಯವಾಗುತ್ತದೆ. ಇದರ ಪರಿಣಾಮ ಸಣ್ಣದು, ನಿಧಾನವಾದ್ದು, ಆದರೆ ಈ ಮೂಲಕ ದೀರ್ಘಕಾಲೀನ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಇದನ್ನು ಪಾರ್ಕ್‌ನಲ್ಲೇ ಮಾಡ ಬೇಕೆಂದಿಲ್ಲ; ವೃದ್ಧರು ಮನೆಯೊಳಗೆ ಸಹ ಸುರಕ್ಷಿತವಾಗಿ ಅಭ್ಯಾಸ ಮಾಡಿಕೊಳ್ಳಬಹುದು.

ಕ್ಯಾಲರಿ ಕರಗಿಸಲು: ಫಿಟ್‌ನೆಸ್‌ ಉತ್ಸಾಹಿಗಳು, ಸಣ್ಣ ಪ್ರಾಯದವರು ಇದನ್ನು ಪಾರ್ಕ್‌ ಅಥವಾ ಯಾವುದಾದರೂ ಸುರಕ್ಷಿತ ಸ್ಥಳದಲ್ಲಿ ಅಭ್ಯಾಸ ಮಾಡಿ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲರಿ ಕರಗಿಸುವುದಕ್ಕೆ ಸಾಧ್ಯವಿದೆ. ವಿರುದ್ಧ ದಿಕ್ಕಿನಲ್ಲಿ ನಡೆಯುವಾಗ ಶರೀರದ ಸಮತೋಲನ ಮತ್ತು ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಶಕ್ತಿ ಖರ್ಚಾಗುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಯುಕ್ತ.

ಇದನ್ನು ಓದಿ: Walking Tips: ತೂಕ ಇಳಿಸಿಕೊಳ್ಳಲು ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷ ವಾಕಿಂಗ್ ಮಾಡಬೇಕು?

ಜಾಗ್ರತೆ ಮಾಡಿ: ಇದನ್ನು ಸುರಕ್ಷಿತ ಸ್ಥಳದಲ್ಲಿ ಕ್ರಮೇಣ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಮನೆಯ ಪರಿಸರ ಪರಿಚಿತ ಇರುವುದರಿಂದ ಮೊದಲಿಗೆ ಮನೆಯೊಳಗೆ ಪ್ರಾರಂಭಿಸಿ. ಮನೆಯ ಹೊರಗಾದರೆ ಗೋಡೆಯ ಪಕ್ಕ, ರೇಲಿಂಗ್‌ ಇರುವಲ್ಲಿ ಪ್ರಯತ್ನ ಮಾಡಿ. ಆಗ ಸಮತೋಲನ ವ್ಯತ್ಯಾಸವಾದರೆ ತಕ್ಷಣವೇ ಗೋಡೆ ಅಥವಾ ರೇಲಿಂಗ್‌ ಹಿಡಿದು ಸುಧಾರಿಸಿಕೊಳ್ಳಬಹುದು. ಸಣ್ಣ ಹೆಜ್ಜೆಗಳನ್ನು ಇರಿಸಿ, ಕೈಗಳನ್ನು ದೊಡ್ಡದಾಗಿ ಬೀಸಲು ಯತ್ನಿಸಿ. ಇದರಿಂದ ಸಮತೋಲನ ಸಾಧಿ ಸುವುದು ಸುಲಭವಾಗುತ್ತದೆ. ಪಾರ್ಕ್‌ ಅಥವಾ ವಾಕಿಂಗ್‌ ಟ್ರಾಕ್‌ಗಳಲ್ಲಿ ಪ್ರಯತ್ನಿಸುವಾಗ ಸುತ್ತಲಿನ ಪರಿಸರವನ್ನು ಸತತವಾಗಿ ಗಮನಿಸುತ್ತಲೇ ಇರು. ಮೊದಲಿಗೆ ಒಂದೆರಡು ನಿಮಿಷಗಳಿಂದ ಪ್ರಾರಂಭಿಸಿ, ಕ್ರಮೇಣ ಹೆಚ್ಚಿಸಿ. ಜನನಿಬಿಡ ಜಾಗಗಳಲ್ಲಿ ಎಂದಿಗೂ ಮಾಡಬೇಡಿ.