ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರವೇನು?

ಮಲಬದ್ಧತೆಯಂಥ ತೊಂದರೆಗಳು ಯಾರನ್ನೂ, ಯಾವಾಗಲೂ ಸತಾಯಿಸಬಲ್ಲವು. ಅದರಲ್ಲೂ ಬೇಸಿಗೆಯಲ್ಲಿ ನೀರು ಮತ್ತು ನಾರು ದೇಹಕ್ಕೆ ಸಾಕಾಗದಿದ್ದರೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಬಲ್ಲದು. ಆದರೆ ಈ ಸಮಸ್ಯೆಗೆ ಪರಿಹಾರವಿದೆ ಎಂಬುದು ಖುಷಿಯ ವಿಷಯ. ಈ ಪರಿಹಾರವು ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವು ಸರಳ ಮಾರ್ಪಾಡುಗಳನ್ನು ಮಾಡಿ ಕೊಂಡಲ್ಲಿ, ಮಲಬದ್ಧತೆಯ ಕಿರಿಕಿರಿ, ನೋವುಗಳಿಲ್ಲದೆ ಆರಾಮದಲ್ಲಿ ಬದುಕಬಹುದು.

ಕಾಡುವ ಮಲಬದ್ಧತೆಗೆ ಸುಲಭದ ಪರಿಹಾರ ಮಾರ್ಗ

ಸಾಂದರ್ಭಿಕ ಚಿತ್ರ.

Profile Pushpa Kumari Apr 10, 2025 7:00 AM

ನವದೆಹಲಿ: ಕೆಲವು ಆರೋಗ್ಯ ಸಮಸ್ಯೆಗಳು ವರ್ಷವಿಡೀ ಕಾಡಬಲ್ಲವು. ಇನ್ನು ಕೆಲವು ಸಮಸ್ಯೆಗಳು ಒಂದೊಂದು ಋತುಮಾನಗಳಲ್ಲಿ ಮಾತ್ರ ಕಾಡುವಂಥವು. ಆದರೆ ಮಲಬದ್ಧತೆಯಂಥ ತೊಂದರೆಗಳು ಯಾವುದೇ ತಾರತಮ್ಯವಿಲ್ಲದೆ ಯಾರನ್ನೂ, ಯಾವಾಗಲೂ ಸತಾಯಿಸಬಲ್ಲವು. ಅದರಲ್ಲೂ ಬೇಸಿಗೆಯಲ್ಲಿ ನೀರು ಮತ್ತು ನಾರು ದೇಹಕ್ಕೆ ಸಾಕಾಗದಿದ್ದರೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಬಲ್ಲದು. ಆದರೆ ಈ ಸಮಸ್ಯೆಗೆ ಪರಿಹಾರವಿದೆ (Health Tips) ಎಂಬುದು ಖುಷಿಯ ವಿಷಯ. ಈ ಪರಿಹಾರವು ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವು ಸರಳ ಮಾರ್ಪಾಡುಗಳನ್ನು ಮಾಡಿಕೊಂಡಲ್ಲಿ, ಮಲಬದ್ಧತೆಯ ಕಿರಿಕಿರಿ, ನೋವುಗಳಿಲ್ಲದೆ ಆರಾಮದಲ್ಲಿ ಬದುಕಬಹುದು. ಹಾಗಾದರೆ ಏನೆಲ್ಲಾ ಕಾರಣಗಳಿಗೆ ಮಲಬದ್ಧತೆ ಕಾಡಬಹುದು?

ಕಾರಣಗಳೇನು?

ಮಲಬದ್ಧತೆ ಗಂಟು ಬೀಳುವುದಕ್ಕೆ, ಅದರಲ್ಲೂ ಬೇಸಿಗೆಯಲ್ಲಿ ಜೊತೆಯಾಗುವುದಕ್ಕೆ, ಸಾಕಷ್ಟು ಕಾರಣಗಳಿವೆ. ದೇಹಕ್ಕೆ ಬೇಕಾದ ಪ್ರಮಾಣದಲ್ಲಿ ನೀರು ದೊರೆಯದಿರುವುದು, ನಾರಿನಂಶ ಆಹಾರದಲ್ಲಿ ಸಾಕಷ್ಟು ಇಲ್ಲದಿರುವುದು, ನಿದ್ದೆ- ಆಹಾರಗಳಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಮಾಡುವುದು, ಕೊಬ್ಬಿನಂಶ ಅತೀ ಕಡಿಮೆ ಸೇವಿಸುವುದು, ಕಬ್ಬಿಣ, ಪ್ರೊಟೀನ್‌, ಕ್ಯಾಲ್ಶಿಯಂ ಮುಂತಾದ ಪೂರಕಗಳ ಕೊರತೆ, ನಿಸರ್ಗದ ಕರೆ ಬಂದಾಗ ಹೋಗದಿರುವುದು, ವ್ಯಾಯಾಮವಿಲ್ಲದ ಜಡ ಜೀವನ ಹೀಗೆ ಬಹಳಷ್ಟು ಕಾರಣಗಳಿಂದಾಗಿ ಮಲಬದ್ಧತೆ ಬೆನ್ನು ಬೀಳಬಹುದು. ಹಾಗೆಂದು ಒಮ್ಮೆ ಆರಂಭವಾದ ಈ ಸಮಸ್ಯೆಯಿಂದ ಜೀವನವಿಡೀ ನರಳಬೇಕೆಂದಿಲ್ಲ. ಕೆಲವು ಕಟ್ಟುನಿಟ್ಟಾದ ಕ್ರಮಗಳಿಂದ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಖಂಡಿತಾ ಅಸಾಧ್ಯವಲ್ಲ.

ನೀರು

ಇದು ಅತ್ಯಂತ ಸರಳ ಪರಿಹಾರಗಳಲ್ಲಿ ಒಂದು. ದೇಹಕ್ಕೆ ನೀರು ಕಡಿಮೆಯಾದರೆ ಉಂಟಾಗುವ ಹಲವು ಅಡ್ಡ ಪರಿಣಾಮಗಳ ಪೈಕಿ ಮಲಬದ್ಧತೆ ಪ್ರಮುಖವಾದುದು. ದಿನಕ್ಕೆ ಎಂಟು ಗ್ಲಾಸ್‌ ನೀರು ಕಡ್ಡಾಯವಾಗಿ ಕುಡಿಯಿರಿ. ಈ ಎಂಟು ಗ್ಲಾಸ್‌ ಆದ ಮೇಲೆ ಬೇಕಿದ್ದರೆ ಬೇರೆ ಆರೋಗ್ಯಕರ ಪೇಯಗಳೂ ಹೊಟ್ಟೆಸೇರಲಿ. ಇದರಿಂದ ಮಲಬದ್ಧತೆ ಮಾತ್ರವಲ್ಲ, ಇನ್ನೂ ಹಲವು ಸಮಸ್ಯೆಗಳು ಪರಿಹಾರವಾದರೆ ಅಚ್ಚರಿಯಿಲ್ಲ. ಇದರ ಜತೆಗೆ ಇನ್ನಷ್ಟು ಕ್ರಮಗಳೂ ಮಲಬದ್ಧತೆ ನಿವಾರಣೆಗೆ ಬೇಕಾಗಬಹುದು.

ನೆನೆಸಿದ ಅಂಜೂರ

ರಾತ್ರಿ ಮಲಗುವ ಮುನ್ನ 2 ಅಥವಾ 3 ಅಂಜೂರಗಳನ್ನು ಕುಡಿಯುವ ನೀರಿಗೆ ಹಾಕಿಡಿ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಆ ನೀರಿನ ಸಮೇತ ಅಂಜೂರವನ್ನು ಸೇವಿಸಿ. ಇದರಲ್ಲಿರುವ ಸಾರ್ಬಿಟಾಲ್‌ ಅಂಶವು ನೈಸರ್ಗಿಕ ವಿರೇಚಕದಂತೆ ಕೆಲಸ ಮಾಡುತ್ತದೆ.

ನೆನೆಸಿದ ಪ್ರೂನ್‌

ಪ್ಲಮ್‌ ಹಣ್ಣುಗಳನ್ನು ಒಣಗಿಸಿ ಪ್ರೂನ್‌ ಮಾಡಲಾಗುತ್ತದೆ. ಇವೂ ಸಹ ಉತ್ತಮ ವಿರೇಚಕಗಳಂತೆ ಕೆಲಸ ಮಾಡಿ, ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತವೆ. ಪ್ರೂನ್‌ ಜ್ಯೂಸ್‌ ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆದಷ್ಟು ರಾಸಾಯನಿಕ ಮುಕ್ತವಾದ ಪ್ರೂನ್‌ ಖರೀದಿಸಿ, ಬಳಸಿ.

ಒಣ ದ್ರಾಕ್ಷಿ

ರಾತ್ರಿ ಇಡೀ ನೆನೆಸಿದ ಕಪ್ಪು ದ್ರಾಕ್ಷಿಗಳು ದೇಹಕ್ಕೆ ಹೆಚ್ಚಿನ ಪ್ರಮಾಣದ ನಾರಿನಂಶವನ್ನು ನೀರಬಲ್ಲವು. ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ಶಮನವಾಗುತ್ತದೆ.

ಇದನ್ನು ಓದಿ: Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?

ಸೋಂಪು ನೀರು

ಸೋಂಪು, ಪೆಪ್ಪರ್‌ಮಿಂಟ್‌, ಬೆಸಿಲ್‌ ಮುಂತಾದವುಗಳನ್ನು ಪ್ರತ್ಯೇಕವಾಗಿ ಅಥವಾ ಸೇರಿಸಿಯಾದರೂ ನೀರಿನಲ್ಲಿ ನೆನೆಸಿಡಿ. ಆ ನೀರನ್ನು ದಿನದಲ್ಲಿ ಪದೇ ಪದೆ ಕುಡಿಯುತ್ತಿರಿ. ಇದರಿಂದ ಜೀರ್ಣಾಂಗದ ಊತ ಶಮನವಾಗಿ, ದೇಹಕ್ಕೆ ಅಗತ್ಯ ನೀರು ಸಹ ಪೂರೈಕೆಯಾಗಿ, ಮಲಬದ್ಧತೆ ನಿವಾರಣೆ ಆಗುತ್ತದೆ.

ವ್ಯಾಯಾಮ

ಇದು ಸಹ ಜೀರ್ಣಾಂಗಗಳ ಆರೋಗ್ಯ ಸುಧಾರಿಸುವಲ್ಲಿ ಅಗತ್ಯವಾದ ಅಂಶ. ಜಿಮ್‌, ಯೋಗ, ಈಜು, ಸೈಕಲ್-‌ ಯಾವುದೂ ಆದೀತು. ಇವೆಲ್ಲ ಸಾಧ್ಯವಿಲ್ಲ ಎಂದರೆ ದಿನಕ್ಕೊಂದು ತಾಸು ನಡಿಗೆಯೂ ಸೈ, ಅಂತೂ ವ್ಯಾಯಾಮ ಬೇಕು.

ಇವು ಬೇಡ

ಕರಿದ, ಸಂಸ್ಕರಿತ ತಿಂಡಿಗಳು, ಕಾಫಿ, ಅಲ್ಕೋಹಾಲ್‌, ಮೈದಾ ಆಹಾರಗಳು ಹೊಟ್ಟೆಯನ್ನು ದಿಕ್ಕೆಡಿಸಬಲ್ಲವು. ಇವುಗಳ ಬದಲಿದೆ, ಇಡೀ ಧಾನ್ಯಗಳು, ಬಹಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಊಟದಲ್ಲಿ ಸೇರಿಸಿಕೊಳ್ಳಿ. ಸಾಕಷ್ಟು ಸೊಪ್ಪಿನ ಆಹಾರ ತಿನ್ನಿ. ನೆನಪಿಡಿ, ಮಲಬದ್ಧತೆ ನಿವಾರಿಸುವಲ್ಲಿ ನೀರು-ನಾರು ಪ್ರಧಾನ ಪಾತ್ರ ವಹಿಸುತ್ತವೆ.