World Kidney Day: ಮಾ. 13 ವಿಶ್ವ ಮೂತ್ರಪಿಂಡ ದಿನ; ನಿಮ್ಮ ಕಿಡ್ನಿ ಕಾಪಾಡಿಕೊಳ್ಳಿ
World Kidney Day: ಜಾಗತಿಕವಾಗಿ ಲಕ್ಷಗಟ್ಟಲೆ ಜನ ಮೂತ್ರಪಿಂಡಗಳ ಸಮಸ್ಯೆಗಳಿಂದ ನರಳುತ್ತಿದ್ದರೂ ಈ ಬಗೆಗೆ ಹೆಚ್ಚಿನ ಅರಿವು ಮೂಡಬೇಕಿದೆ. ಇದಕ್ಕೆ ರಕ್ತದೊತ್ತಡ, ಮಧುಮೇಹ, ಕಿಡ್ನಿ ಕಲ್ಲು, ಆನುವಂಶಿಕ ತೊಂದರೆಗಳು ಮುಂತಾದ ಯಾವುದೇ ರೀತಿಯ ಕಾರಣಗಳು ಇರಬಹುದು.

kidney day

ನವದೆಹಲಿ: ಸದ್ದಿಲ್ಲದೆ ಅಮರಿಕೊಳ್ಳುವ ಆರೋಗ್ಯ ಸಮಸ್ಯೆಗಳ ಪೈಕಿ ಮೂತ್ರಪಿಂಡದ ತೊಂದರೆಗಳೂ ಸೇರಿವೆ. ಸುಮಾರು ಶೇ. 10ರಷ್ಟು ವಯಸ್ಕರು ತಮಗೇ ಗೊತ್ತಿಲ್ಲದಂತೆ ಒಂದಿಲ್ಲೊಂದು ಬಗೆಯ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದಾರೆ ಎನ್ನುತ್ತವೆ ಇತ್ತೀಚಿನ ಅಧ್ಯಯನಗಳು. ಆರಂಭದಲ್ಲೇ ಈ ತೊಂದರೆಗಳನ್ನು ಪತ್ತೆ ಹಚ್ಚಿದರೆ ಮೂತ್ರಪಿಂಡದ ವೈಫಲ್ಯದಂಥ ಗಂಭೀರ ಮತ್ತು ಪ್ರಾಣಾಂತಕ ತೊಂದರೆಗಳನ್ನು ದೂರ ಇರಿಸಬಹುದು. ಕಿಡ್ನಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ, ಮಾರ್ಚ್ ತಿಂಗಳ ಎರಡನೇ ಗುರುವಾರವನ್ನು (ಈ ಬಾರಿ 13ನೇ ತಾರೀಕು) ವಿಶ್ವ ಮೂತ್ರಪಿಂಡ ದಿನ (World Kidney Day)ವೆಂದು ಗುರುತಿಸಲಾಗಿದೆ.
ಜಾಗತಿಕವಾಗಿ ಲಕ್ಷಗಟ್ಟಲೆ ಜನ ಮೂತ್ರಪಿಂಡಗಳ ಸಮಸ್ಯೆಗಳಿಂದ ನರಳುತ್ತಿದ್ದರೂ ಈ ಬಗೆಗೆ ಹೆಚ್ಚಿನ ಅರಿವು ಮೂಡಬೇಕಿದೆ. ಇದಕ್ಕೆ ರಕ್ತದೊತ್ತಡ, ಮಧುಮೇಹ, ಕಿಡ್ನಿ ಕಲ್ಲು, ಆನುವಂಶಿಕ ತೊಂದರೆಗಳು ಮುಂತಾದ ಯಾವುದೇ ರೀತಿಯ ಕಾರಣಗಳು ಇರಬಹುದು. “ನಿಮ್ಮ ಕಿಡ್ನಿಗಳು ಸರಿಯಾಗಿವೆಯೇ? ಆರಂಭದಲ್ಲಿ ಪತ್ತೆ ಮಾಡಿ, ಕಿಡ್ನಿ ಕಾಪಾಡಿಕೊಳ್ಳಿ” ಎಂಬ ಈ ಸಾಲಿನ ಘೋಷವಾಕ್ಯವು ಮೂತ್ರಪಿಂಡಗಳ ತಪಾಸಣೆಯ ಮಹತ್ವವನ್ನು ಸಾರಿ ಹೇಳುತ್ತಿದೆ. ಅಂದಹಾಗೆ, ಈ ದಿನದ ಆಚರಣೆ ಆರಂಭವಾಗಿದ್ದು 2006ರಿಂದ.
ಯಾರಿಗೆಲ್ಲ ತಪಾಸಣೆ ಅಗತ್ಯ?: ಹಾಗೆ ನೋಡಿದರೆ, ನಿಯಮಿತವಾದ ತಪಾಸಣೆ ಎಲ್ಲರಿಗೂ ಒಳ್ಳೆಯದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಈ ತಪಾಸಣೆ ಇನ್ನೂ ಅಗತ್ಯವಾಗಿ ಬೇಕಾಗುತ್ತದೆ. ಯಾರು ಅವರೆಲ್ಲ ಎಂಬುದನ್ನು ತಿಳಿಯೋಣ.
ಬಿಪಿ, ಮಧುಮೇಹ: ಈ ಎರಡು ಕಾಯಿಲೆಗಳು ಇದ್ದವರು ತಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ರಕ್ತದ ಏರೊತ್ತಡವು ಕ್ರಮೇಣ ಮೂತ್ರಪಿಂಡಗಳಿಗೆ ತೊಂದರೆ ನೀಡಬಲ್ಲದು. ಮಧುಮೇಹವಂತೂ ಮೂತ್ರಪಿಂಡಗಳ ಮೇಲೆ ಕಾಲಾಂತರದಲ್ಲಿ ಕಾಟ ಕೊಡುವುದಕ್ಕೆಂದೇ ಪ್ರಸಿದ್ಧ.
ಕುಟುಂಬದಲ್ಲಿ ಇದ್ದರೆ: ರಕ್ತ ಸಂಬಂಧಿಗಳಲ್ಲಿ ಯಾರಿಗಾದರೂ ಮೂತ್ರಪಿಂಡದ ಕಾಯಿಲೆಗಳು ಇದ್ದರೆ ಈ ಬಗ್ಗೆ ಎಚ್ಚರ ವಹಿಸಿ. ಕೆಲವು ಸಮಸ್ಯೆಗಳು ಆನುವಂಶಿಕವಾಗಿ ಮುಂದುವರಿಯಬಲ್ಲವು. ಅವುಗಳಲ್ಲಿ ಕಿಡ್ನಿ ಸಮಸ್ಯೆಗಳೂ ಸೇರಿವೆ.
ಹೃದಯ ತೊಂದರೆ, ಪಾರ್ಶ್ವವಾಯು: ಈ ಸಮಸ್ಯೆಗಳು ಇದ್ದವರು ಕಾಲಕಾಲಕ್ಕೆ ಮೂತ್ರಪಿಡಂಗಳ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಲೇಬೇಕು. ಕಾರಣ, ಹೃದಯ ಮತ್ತು ಮೂತ್ರಪಿಂಡಗಳಲ್ಲಿ ಹತ್ತಿರದ ಸಂಬಂಧವಿದೆ. ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದರೆ, ಹೃದಯದ ಶಕ್ತಿ ಕಡಿಮೆಯಾದರೆ ಕಿಡ್ನಿಗೆ ರಕ್ತಸಂಚಾರ ಕುಂಠಿತವಾಗುತ್ತದೆ.
60 ವರ್ಷಗಳ ಮೇಲಿನವರು: ವಯಸ್ಸು ಹೆಚ್ಚಾಗುತ್ತಿದ್ದಂತೆ ದೇಹದ ಬಹಳಷ್ಟು ಅಂಗಗಳ ಸಾಮರ್ಥ್ಯ ಕಡಿಮೆಯಾಗುವುದು ಸಹಜ. ಹಾಗಾಗಿ ವಯಸ್ಸು 60 ದಾಟಿದ ಮೇಲೆ ಕಿಡ್ನಿಯೂ ಸೇರಿದಂತೆ ಎಲ್ಲ ಅಂಗಾಂಗಗಳನ್ನು ನಿಯಮಿತವಾಗಿ ತಪಾಸಣೆ ಮಾಡಿಸುವುದು ಕ್ಷೇಮ.
ಬೊಜ್ಜು ಇದ್ದವರು: ಅತಿ ತೂಕ ಅಥವಾ ಬೊಜ್ಜು ಇದ್ದವರ ಚಯಾಪಚಯ ಸುಗಮವಾಗಿ ಇರುವುದಿಲ್ಲ. ಅಂಥವರಿಗೆ ಅವರಿಗೆ ತಿಳಿಯದಂತೆಯೇ ಬಿಪಿ ಅಥವಾ ಮಧುಮೇಹ ಆರಂಭ ಆಗಿರಲೂಬಹುದು. ಹಾಗಾಗಿ ಅವರಿಗೂ ಕಿಡ್ನಿ ತಪಾಸಣೆ ಬೇಕಾಗಬಹುದು.
ಇದಲ್ಲದೆ ಆಗಾಗ ಮೂತ್ರಕೋಶ ಅಥವಾ ಮೂತ್ರನಾಳಗಳಲ್ಲಿ ಸೋಂಕಾಗುತ್ತಿದ್ದರೆ, ಕಿಡ್ನಿ ಕಲ್ಲಿನ ತೊಂದರೆಗಳು ಕಾಣುತ್ತಿದ್ದರೆ, ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವಂಥ ಔಷಧಿಗಳನ್ನು ತೆಗೆದು ಕೊಳ್ಳುತ್ತಿದ್ದರೆ- ಇಂಥ ಯಾವುದೇ ಸಂದರ್ಭಗಳಲ್ಲಿ ಮೂತ್ರಪಿಂಡಗಳ ಕ್ಷಮತೆ ಸರಿಯಾಗಿದೆಯೇ ಎಂಬುದನ್ನು ಗಮನಿಸುತ್ತಿರಿ.
ನಿರ್ವಹಣೆ ಹೇಗೆ?: ಕಿಡ್ನಿಗಳನ್ನು ಕಾಪಾಡಿಕೊಳ್ಳುವುದು ಎಂದರೇನು? ಅವುಗಳನ್ನು ಆರೋಗ್ಯಕರವಾಗಿ ನಿರ್ವಹಿಸುವುದು ಹೇಗೆ? ಪ್ರತಿ ದಿನ ಸಾಕಷ್ಟು ನೀರು ಕುಡಿಯಿರಿ. ಇದರಿಂದ ದೇಹದಲ್ಲಿನ ಮಾಲಿನ್ಯವೆಲ್ಲ ತೊಲಗಿ, ಎಲ್ಲ ಅಂಗಾಂಗಗಳು ಆರೋಗ್ಯಕರವಾಗಿ ಇರುತ್ತವೆ. ನೀರು ಕುಡಿಯುವುದು ಕಡಿಮೆಯಾದರೆ ಕಿಡ್ನಿ ಕಲ್ಲುಗಳು ಉಂಟಾಗಬಹುದು.
ಆಹಾರದಲ್ಲಿನ ಬದಲಾವಣೆ: ನಮ್ಮ ಆಹಾರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪ್ರೊಟೀನ್, ಖನಿಜಗಳೆಲ್ಲ ಇರಬೇಕೆಂಬುದು ನಿಜ. ಆದರೆ ಪ್ರಾಣಿಜನ್ಯ ಪ್ರೊಟೀನ್, ಸೋಡಿಯಂ ಮತ್ತು ಸಂಸ್ಕರಿತ ಸಕ್ಕರೆಯ ಪ್ರಮಾಣ ಹೆಚ್ಚಾಗಿದೆ ಇಂದಿನ ದಿನಗಳಲ್ಲಿ. ಅಧಿಕ ಪ್ರಮಾಣದ ಉಪ್ಪು ತಿನ್ನು ವುದರಿಂದ ಮೂತ್ರಪಿಂಡದಲ್ಲಿ ಹರಳುಗಟ್ಟುವ ಪ್ರಕ್ರಿಯೆ ಹೆಚ್ಚುತ್ತದೆ. ಇದರಿಂದ ಮೂತ್ರದಲ್ಲಿ ಸೋಡಿಯಂ ಮತ್ತು ಕ್ಯಾಲ್ಶಿಯಂ ವಿಸರ್ಜನೆ ಅಧಿಕವಾಗುತ್ತದೆ. ಮೂತ್ರದ ಪಿಎಚ್ ಹೆಚ್ಚಾಗಿ ಕಲ್ಲುಗಳು ಉಂಟಾಗುತ್ತವೆ. ಇದಲ್ಲದೆ, ಆಹಾರದಲ್ಲಿ ಉಪ್ಪಿನಂಶ ಅಧಿಕವಾದರೆ ಸಿಟ್ರೇಟ್ ಅಂಶ ದೇಹದಿಂದ ಹೊರಗೆ ಹೋಗುವುದು ಕಡಿಮೆಯಾಗುತ್ತದೆ. ಆದರೆ ಸಿಟ್ರೇಟ್ ಅಂಶ ಕಿಡ್ನಿ ಸೇರಬೇಕು, ಇದರಿಂದ ಕಿಡ್ನಿಯಲ್ಲಿ ಹರಳುಗಟ್ಟುವ ಪ್ರಕ್ರಿಯೆಯನ್ನು ತಡೆಯಬಹುದು.
ಇದನ್ನು ಓದಿ: Health Tips: ನಿಯಮಿತವಾಗಿ ತುಪ್ಪ ಸೇವಿಸಿ ಆರೋಗ್ಯದಲ್ಲಾಗುವ ಅದ್ಭುತ ಬದಲಾವಣೆ ಗಮನಿಸಿ
ಜೀವನಶೈಲಿ: ದೀರ್ಘ ಕಾಲ ಒಂದೇ ಕಡೆ ಕೂತಿರುವುದು, ವ್ಯಾಯಾಮ ಇಲ್ಲದಿರುವುದು, ಅತಿಯಾದ ಕೆಫೇನ್ ಸೇವನೆ, ಆಲ್ಕೋಹಾಲ್ ಸೇವನೆ ಇನ್ನಿತರ ಜೀವನಶೈಲಿಯ ದೋಷಗಳು ಕಿಡ್ನಿಗಳ ಆರೋಗ್ಯದ ಮೇಲೆ ಒತ್ತಡ ಹಾಕುತ್ತವೆ. ಮುಖ್ಯವಾಗಿ ದೇಹದ ಚಯಾಪಚಯ ಹಾಳಾದರೆ ಮತ್ತು ತೂಕ ಹೆಚ್ಚಿದರೆ, ಮೂತ್ರಪಿಂಡದ ಆರೋಗ್ಯ ಮಗುಚಿದಂತೆ. ಅತಿಯಾದ ಪ್ರಾಣಿಜನ್ಯ ಕೊಬ್ಬು ಮತ್ತು ಸಂಸ್ಕರಿತ ಆಹಾರಗಳ ಜೊತೆಗೆ ದೇಹಕ್ಕೆ ಚಟುವಟಿಕೆಯೂ ಇಲ್ಲದಿದ್ದರೆ, ಬೊಜ್ಜು ಬರಲೇಬೇಕಲ್ಲ. ಇದರ ಬೆನ್ನಿಗೆ ಆಗಮಿಸುವ ಮಧುಮೇಹ, ರಕ್ತದ ಏರೊತ್ತಡಗಳೆಲ್ಲ ಕಿಡ್ನಿಯ ಸಮಸ್ಯೆಯನ್ನು ಹೆಚ್ಚಿಸುತ್ತವೆ